ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ಡಿಸೆಂಬರ್ ನಲ್ಲಿ ಮನೆ ಮನೆ ಸರ್ವೆ ನಡೆಸುವುದಾಗಿ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದಾಗ ಸರ್ಕಾರಿ ವಕೀಲರು ಈ ಹೇಳಿಕೆ ನೀಡಿದೆ.

ಡಿಸೆಂಬರ್ ನಲ್ಲಿ ಶಾಲೆಗೆ ನೋಂದಣಿಯಾಗದ, ನೋಂದಣಿಯಾದ ಕೆಲವೇ ದಿನಗಳಿಂದ ಶಾಲೆಯಿಂದ ಹೊರಗುಳಿದಿರುವ, ಶಿಕ್ಷಣವನ್ನು ಅರ್ಧದಲ್ಲಿ ಕೈಬಿಟ್ಟವರ ಪತ್ತೆಗೆ ಮನೆ ಮನೆ ಸರ್ವೆ ನಡೆಸಲಾಗುವುದು ಮತ್ತು ಆ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ವಿವರಿಸಿದರು.
ಮುಂದಿನ ಎರಡು ತಿಂಗಳಲ್ಲಿ 2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ವಲಸಿಗ ಕುಟುಂಬದ ವಿದ್ಯಾರ್ಥಿಗಳಿಗೆ ಹೊಸ ನೀತಿ ಜಾರಿಗೊಳಿಸಲಾಗುವುದು. 2020ರ ಫೆಬ್ರವರಿಯಲ್ಲಿ ಖಾಲಿ ಇರುವ ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.