ಚೆನ್ನೈ: ತಮಿಳುನಾಡಿನಾದ್ಯಂತ ಭಾರಿಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾನುವಾರ ಮನೆ ಕುಸಿದು ಐವರು ಅಸುನೀಗಿದ್ದಾರೆ.ಇನ್ನೂ ಎರಡು ದಿನ ತಮಿಳುನಾಡಿನಲ್ಲಿ ಬಾರಿ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪುದುಚೇರಿಯಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ತಂಜಾವೂರು ಜಿಲ್ಲೆಯ ಸೇಠಿ ಗ್ರಾಮದ ದುರೈಕನ್ನು (70), ತಿರುವರೂರ್ ಜಿಲ್ಲೆಯ ಪರವಕೊಟ್ಟೈನ ರವಿಚಂದ್ರನ್ (50), ಅರಿಯಾಲೂರಿನ ಅಂಗವಿಕಲನೊಬ್ಬ ಮನೆ ಕುಸಿದ ಪರಿಣಾಮ ಕೊನೆಯುಸಿರೆಳೆದರು.ಪುದುಕೊಟ್ಟೈನಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಕಂದಸ್ವಾಮಿ (50), ಭಾರಿ ಮಳೆಯಿಂದ ಕಾಲು ಜಾರಿ ಮೋರಿಗೆ ಬಿದ್ದ ಚೆನ್ನೈನ ಅಂಬತ್ತೂರಿನ ಶೇಕ್ ಅಲಿ (46) ಸಾವನ್ನಪ್ಪಿದ್ದಾರೆ.ಕಳೆದ 24 ಗಂಟೆಗಳಲ್ಲಿ ತುತುಕ್ಕುಡಿಯ ಸತಂಕುಲಂ ನಗರದಲ್ಲಿ 19 ಸೆ.ಮೀ, ಕದ್ದಲೋರ್ ಎಂಬಲ್ಲಿ 17 ಸೆ.ಮಿ., ತಿರುನೆಲ್ವೆಲಿ ಜಿಲ್ಲೆಯಲ್ಲಿ 16 ಸೆ.ಮೀ. ಮಳೆಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.