ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುದೀರ್ಘ 105 ದಿನಗಳ ಕಾಲ ಜೈಲಿನಲ್ಲಿದ್ದ ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ರಾತ್ರಿ 8:15ರ ಸುಮಾರಿಗೆ ತಿಹಾರ್ ಜೈಲಿನಿಂದ ಬಿಡುಗಡೆಯಾದರು.
ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನು ನೀಡುವ ವೇಳೆ 20 ಲಕ್ಷ ರೂಪಾಯಿ ಮೊತ್ತದ ಬಾಂಡ್ ಶ್ಯೂರಿಟಿ ಪಡೆದು ಕೋರ್ಟ್ ಜಾಮೀನು ನೀಡಿತು. ವಿದೇಶದಲ್ಲಿ ತಲೆಮರೆಸಿಕೊಳ್ಳಬಾರದು ಹಾಗೂ ಸಾಕ್ಷ್ಯ ನಾಶಪಡಿಸದಂತೆ ಕೋರ್ಟ್ ಮಾಜಿ ಸಚಿವರಿಗೆ ಷರತ್ತು ವಿಧಿಸಿದೆ. ಅಲ್ಲದೆ ಪಾಸ್ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಸೂಚಿಸಿದೆ.