ದೆಹಲಿ:
ತೀವ್ರ ಕುತೂಹಲ ಹಾಗೂ ಆತಂಕ ಹುಟ್ಟಿಸಿರುವ ಅಯೋಧ್ಯೆ ಭೂ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ (ಅ.9) ಬೆಳಗ್ಗೆ 10:30ಕ್ಕೆ ಪ್ರಕಟಿಸಲಿದೆ.
ನಾಳೆ ಶನಿವಾರವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸ್ವಲ್ಪಮಟ್ಟಿಗೆ ಸುಲಭವಾಗಲಿದೆ ಎಂಬ ಕಾರಣಕ್ಕೆ ನಾಳೆಯೇ ತೀರ್ಪು ಪ್ರಕಟಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತೀರ್ಮಾನಿಸಿದ್ದಾರೆಂದು ಸುಪ್ರೀಂ ಕೋರ್ಟ್ ಮೂಲಗಳು ತಿಳಿಸಿವೆ. ನ್ಯಾ.ಗೊಗೋಯ್ ಅವರು ಅಕ್ಟೋಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ.
ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದ ಒಂದು ವಾರದಿಂದಲೇ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಎಲ್ಲೆಡೆ ಕ್ರಿಮಿನಲ್ಸ್ ಗಳ ಮೇಲೆ ಎಚ್ಚರ ವಹಿಸಲಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಅಯೋಧ್ಯೆಯಲ್ಲಿ ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಿದೆ. ಅಗತ್ಯವಾದರೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಎರಡು ಹೆಲಿಕಾಪ್ಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.