ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಟೀಕಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ಕೈಬಿಟ್ಟಿದೆ.

ಈ ಸಂಬಂಧ ರಾಹುಲ್ ಗಾಂಧಿ ಸಲ್ಲಿಸಿದ್ದ ಕ್ಷಮಾಪಣೆಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರವಹಿಸುವಂತೆ ಎಚ್ಚರಿಕೆ ನೀಡಿದೆ.
ಕಳೆದ ಏಪ್ರಿಲ್ 10ರಂದು ಅಂದಿನ
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಸಾರ್ವಜನಿಕ ಭಾಷಣವೊಂದರಲ್ಲಿ
ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ
2018ರ ಡಿಸೆಂಬರ್ ನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿ, ಚೌಕಿದಾರ್ ಚೋರ್ ಹೈ
ಎಂಬ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿಯ ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್ ಗೆ
ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ರಾಹುಲ್ ನ್ಯಾಯಾಲಯಕ್ಕೆ ಬೇಷರತ್
ಕ್ಷಮೆ ಯಾಚಿಸಿದ್ದರು. ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮೇ 10ರಂದು
ಕಾಯ್ದಿರಿಸಿತ್ತು.