ನವದೆಹಲಿ: ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಎಐಎಡಿಎಂಕೆ ಹಿರಿಯ ಮುಖಂಡ ಪಿ.ಎಚ್ ಪಾಂಡಿಯನ್(74) ನಿಧನರಾದರು.
ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಪಾಂಡಿಯನ್ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಿ.ಎಚ್ ಪಾಂಡಿಯನ್ ಎಐಎಡಿಎಂಕೆ ಪಕ್ಷದ ಸ್ಥಾಪಕ ಸದಸ್ಯರ ಪೈಕಿ ಒಬ್ಬರಾಗಿದ್ದರು. ಡಿಎಂಕೆ ತೊರೆದ ನಂತರದಲ್ಲಿ ನಟ ಎಂ.ಜಿ ರಾಮಚಂದ್ರನ್(ಎಂಜಿಆರ್) ಜತೆಗೂಡಿ ಎಐಎಡಿಎಂಕೆ ಸ್ಥಾಪಿಸಿದ್ದರು.
ಪಾಂಡಿಯನ್ ನಾಲ್ಕು ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಮ್ಮೆ ತಿರುನೆಲ್ವೇಲಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. ಎಂಜಿಆರ್(1985-89) ಮುಖ್ಯಮಂತ್ರಿಯಾಗಿದ್ದಾಗ ಪಾಂಡಿಯನ್ ವಿಧಾನಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.