newsics.com
ಒಂದು ಕಾಲದಲ್ಲಿ ವೈಭವದಿಂದ ತುಂಬಿದ್ದ, ವಿಜಯನಗರ ಸಾಮ್ರಾಜ್ಯ ಶ್ರೀ ಕೃಷ್ಣದೇವರಾಯರ ಆಡಳಿತದಲ್ಲಿ ಸಂಪನ್ನವಾಗಿದ್ದ ಹಂಪಿ, ತನ್ನ ಕಳೆಯನ್ನು ಹೇಗೆ ಕಳೆದುಕೊಂಡು ಬಿಟ್ಟಿತು? ಹಂಪಿ ಎಂಬ ಐತಿಹಾಸಿಕ ಸ್ಥಳ ಹಾಳಾಗಲು ಕಾರಣವಾದರೂ ಏನು? ಇದಕ್ಕೆ ನಮ್ಮ ಕೊಡುಗೆ ಎಷ್ಟು? ನಮ್ಮ ಐತಿಹಾಸಿಕ ಸ್ಥಳಗಳನ್ನು ನಾವು ಹೇಗೆ ಇಟ್ಟುಕೊಳ್ಳಬೇಕು? ನೋಡೋಣ.
ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (1336-1565) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯು ಮೊದಲು ‘ಪಂಪಾ’ ಎಂದು ಕರೆಯಲ್ಪಡುತ್ತಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ಹೀಗೆ ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ತನ್ನ ಪರಂಪರೆಯನ್ನು ಎತ್ತಿ ಹಿಡಿಯುವ ತಾಣವಾದ ಹಂಪೆಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
ವಿಜಯನಗರ ಸಾಮ್ರಾಜ್ಯ ಎಷ್ಟು ವೈಭವೋಪೇತದಿಂದ ತುಂಬಿತ್ತೆಂದರೆ, ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಮಹಾರಾಜ ಶ್ರೀ ಕೃಷ್ಣದೇವರಾಯನ ರಾಜ್ಯಭಾರದ ಅಂತ್ಯದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ತನ್ನ ಸಾಮರ್ಥ್ಯ ಹಾಗೂ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಮುಸ್ಲಿಮರ ಆಡಳಿತ ಸಾಮ್ರಾಜ್ಯ ತಾಳೀಕೋಟೆಯ ಆಕ್ರಮಣವನ್ನು ತಡೆಯದೆ ವಿಜಯನಗರ ಸಾಮ್ರಾಜ್ಯದ ಅಂತ್ಯವಾಯಿತು.
ಹಂಪಿಯಲ್ಲಿದ್ದ ನಿರ್ಮಿಸಲಾಗಿದ್ದ ದೇವಾಲಯದ ಸ್ಮಾರಕ, ಶಿಲ್ಪಕಲೆಗಳು ಹಾಗೂ ಅನೇಕ ಪರಂಪರಾಗತ ವಸ್ತುಗಳನ್ನು ಸುಮಾರು ಆರು ತಿಂಗಳುಗಳ ಕಾಲ ಮುಸಲ್ಮಾನ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ.
ಇಂದು ಅಳಿದುಳಿದಿರುವ ಎನ್ನಲಾದ ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ, ದೊಡ್ಡ ಗಾತ್ರದ ಬಂಡೆಕಲ್ಲುಗಳು ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
ಇಂತಹ ಹಂಪಿಯ ನಿರ್ನಾಮದ ಕಥೆಯನ್ನು ಕೇಳಿದರೆ ಎಂಥವನಿಗೂ ಕಣ್ಣಂಚಲ್ಲಿ ನೀರು ತುಂಬದೇ ಇರಲಾರದು. ಹಂಪಿ ನಗರವನ್ನು ‘ಕಳೆದು ಹೋದ ನಗರ’ ಅಥವಾ ‘a lost city’ ಎಂದೇ ಹೇಳಲಾಗುತ್ತದೆ.
ಹಂಪಿಯು ತನ್ನ ಸ್ವಚ್ಛತೆಯನ್ನು ಕಳೆದುಕೊಂಡಿರುವುದಕ್ಕೆ ನಮ್ಮ ಕೊಡುಗೆ ಏನು?
ಸುಂದರವಾದ ಹಂಪಿಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಾಡು ಮಾಡಿ, ಇದೀಗ ಪ್ರವಾಸಿಗರು ಹಂಪಿಯನ್ನು ನೋಡಲು ಅದರ ಅಂದ ಸವಿಯಲು, ಎಲ್ಲಾ ಕಡೆಗಳಿಂದ ಧಾವಿಸಿ ಬರುತ್ತಾರೆ. ಕೇವಲ ನಮ್ಮ ದೇಶ ಅಷ್ಟೇ ಅಲ್ಲದೇ ವಿದೇಶಿ ಪ್ರವಾಸಿಗರು ಸಹ ಈ ಸ್ಥಳವನ್ನು ನೋಡಲು ಬರುತ್ತಾರೆ. ಪ್ರವಾಸಿಗರಿಂದ ಎಸೆಯಲ್ಪಟ್ಟ ಕಸ ಗಲೀಜಿನಿಂದ ಹಂಪಿಯು ತನ್ನ ಅಂದ ಚಂದವನ್ನು ಕಳೆದುಕೊಳ್ಳುತ್ತಿದೆ.
ನಮ್ಮ ದೇಶದ, ರಾಜ ಮಹಾರಾಜರ ಆಡಳಿತದ ಇತಿಹಾಸವನ್ನು ಮೆರೆಸುವ ಐತಿಹಾಸಿಕ ತಾಣಗಳನ್ನು ಕಾಪಾಡುವಲ್ಲಿ ನಮ್ಮ ಜವಾಬ್ದಾರಿ ಬಹಳಷ್ಟಿದೆ. ಈ ಕ್ಷೇತ್ರಗಳನ್ನು ಆದಷ್ಟು ನಮ್ಮ ಸ್ವಂತದೆಂದು ತಿಳಿದು, ಆ ಸ್ಥಳವನ್ನು ಗಲೀಜು ಮಾಡದೆ ಪ್ರೀತಿಯಿಂದ ನೋಡುವುದು ಬಹಳ ಮುಖ್ಯ. ಹಾಗೂ ಅದು ನಮ್ಮ ಜವಾಬ್ದಾರಿಯೂ ಕೂಡ ಹೌದು. ನಮ್ಮ ಐತಿಹಾಸಿಕ ಹಂಪಿಯನ್ನು ಉಳಿಸಿಕೊಳ್ಳೋಣ.