- ಅನುಷಾ
ಮದುವೆ ಅಂದ್ರೆ ರಂಗುರಂಗಿನ ಕನಸುಗಳ ದಿಬ್ಬಣ. ಮದುವೆ ದಿನ ಎಲ್ಲರ ಕಣ್ಣು ವಧುವಿನ ಮೇಲಿರುವ ಕಾರಣ ಅಂದು ತಾನು ಅಂದವಾಗಿ ಕಾಣಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಅದಕ್ಕಾಗಿ ಮದುವೆ ದಿನ ಯಾವ ಬಣ್ಣದ ಸೀರೆ ಉಡಬೇಕು, ಹೇರ್‍ಸ್ಟೈಲ್ ಹೇಗಿರಬೇಕು, ಮೇಕಪ್ ಎಷ್ಟು ಮಾಡಿಕೊಳ್ಳಬೇಕು ಎಂಬಲ್ಲಿಂದ ಹಿಡಿದು ಉಗುರುಗಳಿಗೆ ಹಚ್ಚುವ ನೇಲ್‍ಪಾಲಿಷ್ ಬಣ್ಣದ ತನಕ ಪ್ರತಿ ವಿಚಾರದ ಕುರಿತು ಹಸೆಮಣೆ ಏರಲು ಅಣಿಯಾಗಿರುವ ಹೆಣ್ಣು ಸಾಕಷ್ಟು ಯೋಚಿಸುತ್ತಾಳೆ,ಸಿದ್ಧತೆ ನಡೆಸುತ್ತಾಳೆ. ಹೀಗಿರುವಾಗ ಒಂದು ವೇಳೆ ಆಕೆ ಸ್ವಲ್ಪ ದಪ್ಪಗಿದ್ದಾಳೆ ಎಂದರೆ ಸುಮ್ಮನಿರುತ್ತಾಳಾ?ಖಂಡಿತಾ ಇಲ್ಲ, ತನ್ನ ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಾಳೆ. ಡಯಟ್ ಮೊರೆ ಹೋಗುತ್ತಾಳೆ. ನೀವು ಕೂಡ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದು, ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ನಿಮಗೊಂದಿಷ್ಟು ಉಪಯುಕ್ತ ಸಲಹೆಗಳು ಇಲ್ಲಿವೆ.
1.ನೀರು ಕುಡಿದಷ್ಟೂ ಅಂದಕ್ಕೆ ಮೆರುಗು:
ಸರ್ವರೋಗಕ್ಕೂ ನೀರು ಮದ್ದು. ನಾವೆಷ್ಟು ನೀರು ಕುಡಿಯುತ್ತೇವೆ ಎಂಬುದರಲ್ಲೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಹಾಗಾಗಿ ನೀರು ಕುಡಿಯುವ ವಿಚಾರದಲ್ಲಿ ಡಯಟ್ ಬೇಡ. ಎಷ್ಟು ಸಾಧ್ಯವೂ ಅಷ್ಟು ನೀರು ಕುಡಿಯಿರಿ. ನೀರು ಜೀರ್ಣಕ್ರಿಯೆಗೆ ವೇಗ ನೀಡುವ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಮೊಡವೆಯಿರುವವರು ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದಾಗುವ ಪ್ರಯೋಜನವು ಕೆಲವೇ ದಿನಗಳಲ್ಲಿ ನಿಮ್ಮ ಗಮನಕ್ಕೆ ಬರುತ್ತದೆ.
2. ಸಕ್ಕರೆಯೆಡೆಗೆ ಅಕ್ಕರೆ ಬೇಡ:
ಸಿಹಿ ಅಂದ್ರೆ ಯಾರ ಬಾಯಲ್ಲಿ ನೀರು ಬರೋದಿಲ್ಲ ಹೇಳಿ? ನಾಲಿಗೆಗೆ ರುಚಿ ನೀಡುವ ಸಕ್ಕರೆಯಿಂದ ದೇಹಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಕ್ಕರೆಯಲ್ಲಿ ಯಾವುದೇ ಕ್ಯಾಲೋರಿ ಇಲ್ಲ. ಸಿಹಿ ಪದಾರ್ಥಗಳು ದೇಹದ ತೂಕವನ್ನು ಹೆಚ್ಚಿಸಬಲ್ಲವು. ಆದಕಾರಣ ಮದುವೆ ತನಕ ಸಕ್ಕರೆ, ಸಿಹಿ ತಿನಿಸುಗಳೆಡೆಗೆ ಒಲವು ತೋರದಿರಿ.
3.ಸಿದ್ಧ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ:
ಪ್ಯಾಕೆಟ್‍ಗಳಲ್ಲಿ ಬರುವ ಆಹಾರಗಳ ರುಚಿ ಅವುಗಳನ್ನು ಮತ್ತೆ ಮತ್ತೆ ಸವಿಯುವಂತೆ ನಿಮ್ಮನ್ನು ಪ್ರೇರೇಪಿಸುತ್ತವೆ. ಆದರೆ, ಸಂಸ್ಕರಿಸಿದ, ಶೀತಲೀಕರಿಸಿದ ಆಹಾರಗಳು ನಿಮ್ಮ ತೂಕವನ್ನು ಇನ್ನಷ್ಟು ಹೆಚ್ಚಿಸಲಿವೆ ಎಂಬುದು ನೆನಪಿರಲಿ. ಈ ಆಹಾರಗಳು ಕೆಡದಂತೆ ರಾಸಾಯನಿಕಗಳನ್ನು ಬಳಸಲಾಗಿರುತ್ತದೆÉ. ಇವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದಕಾರಣ ಆರೋಗ್ಯಯುತ ದೇಹಕ್ಕೆ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ತ್ಯಜಿಸಿ.
4.ಆರೋಗ್ಯಕ್ಕೆ ಹಿತವಾದ ಆಹಾರ ಸೇವಿಸಿ:
ತಾಜಾ ಹಣ್ಣುಗಳು, ಹಸಿರು ತರಕಾರಿಗಳು ಹಾಗೂ ಪ್ರೋಟೀನ್‍ಯುಕ್ತ ಆಹಾರಗಳು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತವೆ. ಇವುಗಳ ಸೇವನೆಯಿಂದ ದೇಹದ ತೂಕ ಹೆಚ್ಚುವುದಿಲ್ಲ. ಚರ್ಮ ಕೂಡ ಕಾಂತಿಯುತವಾಗಿ ಕಾಣಿಸುತ್ತದೆ.
5. ಕೊಬ್ಬು (ಫ್ಯಾಟ್) ತ್ಯಜಿಸಿ ಅಥವಾ ತಗ್ಗಿಸಿ:
ಎಣ್ಣೆ, ಬೆಣ್ಣೆ, ಚೀಸ್ ಸೇರಿದಂತೆ ಹೆಚ್ಚಿನ ಕೊಬ್ಬಿನಾಂಶವಿರುವ ಆಹಾರವನ್ನು ತ್ಯಜಿಸಿ. ಇವು ತೂಕ ಹೆಚ್ಚಿಸುತ್ತವೆ. ಜತೆಗೆ ಮೊಡವೆಗಳು ಹೆಚ್ಚಲು ಕಾರಣವಾಗುತ್ತವೆ.
6. ಉಪ್ಪಿನ ಮೇಲೆ ಪ್ರೀತಿ ಬೇಡ:
ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತು ನಿಜವಾದರೂ ಲೆಕ್ಕಕ್ಕಿಂತ ಹೆಚ್ಚಿನ ಉಪ್ಪು ದೇಹಕ್ಕೆ ಹಾನಿಕಾರಕ. ತಜ್ಞರ ಪ್ರಕಾರ ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯಿಂದ ದೇಹದಿಂದ ಹೊರಹೋಗುವ ನೀರಿನ ಪ್ರಮಾಣ ತಗ್ಗುತ್ತದೆ. ಆದಕಾರಣ ಉಪ್ಪನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸೇವಿಸಿ. ಇದರಿಂದ ದೇಹದಲ್ಲಿನ ಕಶ್ಮಲಗಳನ್ನು ನೀರು ಹೊರಹಾಕುವ ಮೂಲಕ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.
7. ಅಂದ ಹೆಚ್ಚಿಸುವ ಪದಾರ್ಥಗಳಿಗೆ ಆದ್ಯತೆ ನೀಡಿ:
ಅರಿಶಿಣ, ಮೆಂತ್ಯೆ ಮುಂತಾದ ಪದಾರ್ಥಗಳು ನಿಮ್ಮ ಅಂದ ಹೆಚ್ಚಿಸಬಲ್ಲವು. ಆಹಾರದಲ್ಲಿ ಈ ಪದಾರ್ಥಗಳನ್ನು ಬಳಸಿ ನಿಮ್ಮ ಮುಖದ ಸೌಂದರ್ಯಕ್ಕೆ ಮೆರುಗು ನೀಡಿ.