Saturday, January 23, 2021

ಗರ್ಭಿಣಿಯ ಥೈರಾಯಿಡ್ ವ್ಯತ್ಯಾಸದಿಂದ ಮಕ್ಕಳಲ್ಲಿ ಎಡಿಎಚ್’ಡಿ

ಎಡಿಎಚ್’ಡಿ ಮಕ್ಕಳಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಏಕಾಗ್ರತೆಯ ಕೊರತೆ ಈ ಮಕ್ಕಳಲ್ಲಿ ಸಾಮಾನ್ಯ. ಗರ್ಭಿಣಿಯರಲ್ಲಿ ಹೈಪೋಥೈರಾಯಿಡಿಸಂ ಉಂಟಾದಾಗ ಹುಟ್ಟುವ ಮಕ್ಕಳಲ್ಲಿ ಎಡಿಎಚ್’ಡಿ ಇರುವುದನ್ನು ಅಮೆರಿಕದ ತಜ್ಞರು ಗುರುತಿಸಿದ್ದಾರೆ.
♦ ಡಾ.ಸುಮನ್
newsics.com@gmail.com


 ನಿಯಮಿತ ಮುಟ್ಟು, ದೇಹದ ತೂಕದಲ್ಲಿ ಏರಿಳಿತ, ಮಾನಸಿಕ ಗೊಂದಲ ಇತ್ಯಾದಿ ಯಾವುದೇ ತೊಂದರೆಗೆಂದು ವೈದ್ಯರ ಬಳಿ ಹೋದರೂ ಅವರು ಸೂಚಿಸುವ ಮೊದಲ ಪರೀಕ್ಷೆ ಎಂದರೆ ಥೈರಾಯಿಡ್’ನದ್ದು. ಥೈರಾಯಿಡ್ ಗ್ರಂಥಿಯ ಕಾರ್ಯದಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ, ಯಾವುದೇ ರೀತಿಯ ಏರಿಳಿತವಾದರೂ ಅದು ನೇರವಾಗಿ ಶಾರೀರಿಕ ಮತ್ತು ಮಾನಸಿನ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ. ಥೈರಾಯಿಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದ ಮುಖ್ಯವಾದ ಭಾಗಗಳ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಹೀಗಾಗಿ, ಅದನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯವಾಗುತ್ತದೆ.
ಗರ್ಭಿಣಿಯರಲ್ಲೂ ಒಮ್ಮೊಮ್ಮೆ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಇದರಲ್ಲಿ ಎರಡು ವಿಧ. ದೇಹಕ್ಕೆ ಬೇಕಾಗುವಷ್ಟು ಥೈರಾಯಿಡ್ ಹಾರ್ಮೋನ್ ಸ್ರವಿಕೆಯಾಗದಿರುವುದನ್ನು ಹೈಪೋಥೈರಾಯಿಡಿಸಂ ಅಥವಾ ದೇಹದ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಸ್ರವಿಕೆಯಾಗುವುದನ್ನು ಹೈಪರ್ ಥೈರಾಯಿಡಿಸಂ ಎಂದು ಗುರುತಿಸಲಾಗಿದೆ.
ಥೈರಾಯಿಡ್ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಜೀವನಶೈಲಿ ಮತ್ತು ಮಾನಸಿಕ ಒತ್ತಡ. ವಿಶ್ವದಲ್ಲಿ ಶೇ.7.5ರಷ್ಟು ಸ್ತ್ರೀಯರು ಈ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಗುರುತಿಸಲಾಗಿದೆ.
ಹುಟ್ಟುವ ಮಕ್ಕಳಲ್ಲಿ ಎಡಿಎಚ್’ಡಿ
ಗರ್ಭಿಣಿಯರಲ್ಲಿ ಈ ಎರಡೂ (ಹೈಪೋಥೈರಾಯಿಡಿಸಂ, ಹೈಪರ್ ಥೈರಾಯಿಡಿಸಂ) ರೀತಿಯ ಸಮಸ್ಯೆಗಳು ಕಂಡುಬರಬಹುದು. ಆದರೆ, ದೇಹದ ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಸ್ರವಿಕೆಯಾಗುವ ಅಂದರೆ ಹೈಪೋಥೈರಾಯಿಡ್ ಸಮಸ್ಯೆಯಿಂದ ಬಳಲುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳಲ್ಲಿ ಎಡಿಎಚ್’ಡಿ (ಅಟೆನ್ಷನ್ ಡೆಫಿಸಿಟ್ ಹೈಪರ್ಯಾಕ್ಟಿವಿಟಿ ಡಿಸಾರ್ಡರ್) ಸಮಸ್ಯೆ ಕಂಡುಬರುವ ಸಾಧ್ಯತೆ ಅಧಿಕ ಎಂದು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ.
ಹೈಪೋಥೈರಾಯಿಡಿಸಂನಲ್ಲಿ ಆಹಾರ ಸೇವನಾಕ್ರಮದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರದಿದ್ದರೂ ದೇಹದ ತೂಕ ಅಧಿಕವಾಗಿ ಹೆಚ್ಚುತ್ತದೆ. ಅಲ್ಲದೆ, ಮಾನಸಿಕ ಏರಿಳಿತ ಕೂಡ ಹೆಚ್ಚು. ಗರ್ಭಿಣಿಯರಲ್ಲಿ ದೇಹದ ತೂಕ ಏರಿಕೆಯಾಗುವುದು ಸಾಮಾನ್ಯ. ಜತೆಗೆ, ಮನಸ್ಸೂ ಸಹ ಅನೇಕ ಏರಿಳಿತಗಳಿಗೆ ಸಾಕ್ಷಿಯಾಗುತ್ತದೆ. ಇವೆಲ್ಲ ಗರ್ಭಿಣಿಯರಲ್ಲಿ ಅತ್ಯಂತ ಸಹಜ ಸಮಸ್ಯೆಗಳು. ಹೀಗಾಗಿ, ಥೈರಾಯಿಡ್ ಸಮಸ್ಯೆ ಗುರುತಿಸುವುದು ತಡವಾಗುತ್ತದೆ.
ಮೊದಲ ಮೂರು ತಿಂಗಳಲ್ಲಿ ಗರ್ಭಿಣಿಯರಲ್ಲಾಗುವ ಯಾವುದೇ ವ್ಯತ್ಯಾಸ ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಲ್ಲೂ ಅತಿ ಪ್ರಮುಖವಾದ ಥೈರಾಯಿಡ್ ಹಾರ್ಮೋನ್ ವ್ಯತ್ಯಾಸದಿಂದ ಮಗುವಿನ ಮಿದುಳಿನ ಬೆಳವಣಿಗೆಯ ಮೇಲೆ ಪರಿಣಾಮವುಂಟಾಗುವುದನ್ನು ಅಮೆರಿಕದ ಮಿದುಳು ತಜ್ಞರು ಗುರುತಿಸಿದ್ದಾರೆ.
ಮೊದಲ ಮೂರು ತಿಂಗಳಲ್ಲಿ ಹೈಪೋಥೈರಾಯಿಡಿಸಂನಿಂದ ಬಳಲಿದ ತಾಯಂದಿರಿಗೆ ಹುಟ್ಟುವ ಮಕ್ಕಳು ಎಡಿಎಚ್’ಡಿಗೆ ತುತ್ತಾಗುವ ಸಾಧ್ಯತೆ ಶೇ.24ರಷ್ಟು ಹೆಚ್ಚು. ಗಂಡುಮಕ್ಕಳಾದರೆ ಎಡಿಎಚ್’ಡಿಗೆ ಒಳಗಾಗುವ ಸಾಧ್ಯತೆ ನಾಲ್ಕು ಪಟ್ಟು ಅಧಿಕ ಎಂದಿದ್ದಾರೆ ಈ ತಜ್ಞರು. ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು.
“ಮಕ್ಕಳ ಮಿದುಳಿನ ಬೆಳವಣಿಗೆಯಲ್ಲಿ ಥೈರಾಯಿಡ್ ಹಾರ್ಮೋನ್ ಅಧಿಕ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ’ ಎಂದಿದ್ದಾರೆ ತಜ್ಞರಾದ ಮಾರ್ಗನ್ ಪೆಲಟಿಯರ್.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!