Tuesday, March 28, 2023

‘ಮರೆವು’ ರೋಗ ಮರೆಯದಿರಿ…

Follow Us

60 ದಾಟಿದ ಬಳಿಕ ಕಾಡುವ ಸಾಮಾನ್ಯ ತೊಂದರೆ ಎಂದರೆ ಮರೆವಿನದ್ದು. ಆದರೆ, ಅದು ಅಲ್ಜೀಮರ್ಸ್ ಅಥವಾ ಮರೆವು ಕಾಯಿಲೆಯಾಗಿ ಬದಲಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಸಾಕಷ್ಟು ಕ್ರಿಯಾಶೀಲವಾಗಿರುವುದು, ಧ್ಯಾನ, ಪ್ರಾಣಾಯಾಮ, ಯೋಗಾಸನ, ಆರೋಗ್ಯಕರ ಜೀವನಶೈಲಿಯಿಂದ ಮರೆವು ರೋಗ ಬಾರದಂತೆ ತಡೆಯಬಹುದು.

     ಇಂದು ಅಲ್ಜೀಮರ್ಸ್ ದಿನ     


newsics.com Features Desk


 ದಿ ನವೂ ಪಾರ್ಕಿಗೆ ಬರುತ್ತಿದ್ದ ವೃದ್ಧರು ಅಂದು ಬಂದಿರಲಿಲ್ಲ. ಅವರ ಸ್ನೇಹಿತರೆಲ್ಲ ದೈನಂದಿನ ವಾಕ್ ಮುಗಿಸಿಕೊಂಡು ಮನೆಗೆ ಹೋದರು. ಆ ವೃದ್ಧರು ಮಾತ್ರ ಮನೆಯ ಪಕ್ಕದಲ್ಲೇ ಇರುವ ಪಾರ್ಕಿಗೆ ಹೋಗುವುದನ್ನು ಮರೆತು ಸಮೀಪದ ಕೆರೆಯ ಬಳಿಗೆ ಹೋಗಿ ನಿಂತಿದ್ದರು. ತುಂಬ ಹೊತ್ತಿನಿಂದ ಅಲ್ಲಿಯೇ ಇದ್ದ ಅವರನ್ನು ನೋಡಿ ಯಾರೋ ಮಾತನಾಡಿಸಿದರೆ ಅವರಿಗೆ ಏನೆಂದರೆ ಏನೂ ನೆನಪಿಲ್ಲ. ಅವರನ್ನು ಅಲ್ಲಿ ಹಾಗೆಯೇ ಬಿಟ್ಟು ಹೋಗಲು ಮನಸ್ಸಾಗದೆ ಸಮೀಪದ ಪೊಲೀಸ್ ಸ್ಟೇಷನ್ ಗೆ ಕರೆತಂದು ಬಿಟ್ಟರು ಆ ಪುಣ್ಯಾತ್ಮರು. ಕೊನೆಗೆ ತಿಳಿದುಬಂದಿದ್ದೇನೆಂದರೆ, ಆ ಹಿರಿಯರಿಗೆ ಮರೆವು ಕಾಯಿಲೆ. ಮನೆಯ ಪಕ್ಕದಲ್ಲೇ ಇರುವ ಪಾರ್ಕಿಗೆ ಹೋಗಿ ಬಂದು ಮಾಡುತ್ತಿದ್ದ ಅವರಿಗೆ ಅವತ್ತು ಅದೇನೋ ಎಲ್ಲವೂ ಮರೆತುಹೋಗಿತ್ತು.
ಹೀಗೆ, ಕ್ಷಣಕ್ಷಣಕ್ಕೂ ಏನಾದರೊಂದನ್ನು ಮರೆಯುತ್ತ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನೂ ಪೂರೈಸಿಕೊಳ್ಳಲಾಗದ ಸ್ಥಿತಿಗೆ ಬರುವ ಹಿರಿಯರನ್ನು ನಾವು ಕಂಡಿದ್ದೇವೆ. ಇದು ಮರೆವು ಕಾಯಿಲೆ. ವಯಸ್ಸಾದಂತೆ ಮರೆವು ಸಹಜ, ಅದರಿಂದೇನು ಸಮಸ್ಯೆ ಎನ್ನಿಸಬಹುದು. ಆದರೆ, ಕೊನೆಕೊನೆಗೆ ಅವರು ಉಣ್ಣುವುದು, ತಿನ್ನುವುದು, ಸ್ನಾನ ಮಾಡುವುದು, ಅಷ್ಟೇ ಏಕೆ? ಮಕ್ಕಳನ್ನೂ, ಮನೆಯವರನ್ನೂ ಮರೆತುಬಿಡುತ್ತಾರೆ. 30-40 ವರ್ಷ ಹಿಂದಿನ ಸ್ನೇಹಿತರು ನೆನಪಿನಲ್ಲಿರಬಹುದು. ಆದರೆ, ಇಂದಿನ ವಾಸ್ತವವನ್ನು ಮರೆಯುತ್ತಾರೆ. ಹೀಗಾಗಿ, ಸರಿಯಾಗಿ ಆರೈಕೆ ಮಾಡಿ ನೋಡಿಕೊಳ್ಳುವವರು ಯಾರೂ ಇಲ್ಲದಿದ್ದರೆ ಅವರ ಬದುಕು ದುಸ್ತರವಾಗುತ್ತದೆ.
ಡೆಮೆನ್ಷಿಯಾದಿಂದ ಮರೆವು ರೋಗ
ಭಾರತದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಮರೆವು ರೋಗದಿಂದ ಬಳಲುತ್ತಿದ್ದಾರೆ. ಡೆಮೆನ್ಷಿಯಾ(ವಯಸ್ಸಾದಂತೆ ಕಾಣುವ ಬುದ್ಧಿಮಾಂದ್ಯತೆ) ಸಮಸ್ಯೆಯಿಂದ ಮರೆವು ರೋಗ ಬರುತ್ತದೆ. ಡೆಮೆನ್ಷಿಯಾ ಮತ್ತು ಮರೆವು ಕಾಯಿಲೆ ಒಂದೇ ಅಲ್ಲ. ವಯಸ್ಸಾದಂತೆ ಬುದ್ಧಿಯ ಸಾಮರ್ಥ್ಯ ಕುಗ್ಗುವುದಕ್ಕೆ ಡೆಮೆನ್ಷಿಯಾ ಎನ್ನುತ್ತಾರೆ. ಡೆಮೆನ್ಷಿಯಾ ರೋಗವಲ್ಲ, ಅತಿ ಸಹಜ ಕ್ರಿಯೆ. ಆದರೆ, ಅಲ್ಜೀಮರ್ಸ್ ಒಂದು ನಿರ್ದಿಷ್ಟ ಸಮಸ್ಯೆ. ಇತ್ತೀಚೆಗೆ ಮರೆವು ರೋಗ ಹೆಚ್ಚುತ್ತಿರುವುದಕ್ಕೆ ಮನುಷ್ಯನ ಜೀವಿತಾವಧಿ ಹೆಚ್ಚುತ್ತಿರುವುದೇ ಮುಖ್ಯ ಕಾರಣವಾಗಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಜತೆಗೆ, ಅತಿಯಾದ ಒತ್ತಡದ ಜೀವನಶೈಲಿ, ಮಾನಸಿಕ ಆಘಾತಗಳೂ ಕೊಡುಗೆ ನೀಡುತ್ತವೆ. ಕೆಲವು ರೀತಿಯ ಸೋಂಕು ಹಾಗೂ ವಿಷಪ್ರಾಶನದಿಂದಲೂ ಬದುಕಿನ ಯಾವುದೇ ಘಟ್ಟದಲ್ಲಿ ಕಾಣಿಸಿಕೊಳ್ಳಬಹುದು. ಆನುವಂಶೀಯವಾಗಿಯೂ ಬರುವ ಸಾಧ್ಯತೆಗಳಿರುತ್ತವೆ.
ಅರಿವಿಗಾಗಿ ಅಲ್ಜೀಮರ್ಸ್ ತಿಂಗಳು
ಸೆಪ್ಟೆಂಬರ್ ತಿಂಗಳನ್ನು ವಿಶ್ವ ಅಲ್ಜೀಮರ್ಸ್ ತಿಂಗಳನ್ನಾಗಿ ಆಚರಿಸಲಾಗುತ್ತದೆ. ಡೆಮೆನ್ಷಿಯಾ ಕುರಿತು ಅರಿವು ಮೂಡಿಸಲೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಸೆ.21ರಂದು ಅಲ್ಜೀಮರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಆಚರಣೆಯ ಉದ್ದೇಶ ಈ ಸಮಸ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಜೀವನಶೈಲಿಯ ಸುಧಾರಣೆಗೆ ಪ್ರೇರೇಪಿಸುವುದು.
ಮರೆವು ಸಹಜ
ನಾವು ನೀವೆಲ್ಲರೂ ಮರೆಗುಳಿಗಳೇ. ಮಾಡಬೇಕೆಂದುಕೊಂಡಿದ್ದ ಯಾವುದೋ ಕೆಲಸವನ್ನು ಮರೆಯುವುದು, ಇನ್ನೊಬ್ಬರಿಗೆ ತಿಳಿಸಬೇಕಿದ್ದ ಸಂದೇಶವನ್ನು ಮರೆಯುವುದು, ಪ್ರೀತಿಪಾತ್ರರ ಹುಟ್ಟುಹಬ್ಬ, ಸಮಾರಂಭಗಳ ದಿನವನ್ನೇ ಮರೆಯುವುದು, ಬಾಗಿಲು ಲಾಕ್ ಮಾಡಿ ಹೊರಗೆ ಬಂದಾಗ ನಲ್ಲಿಯನ್ನು ಬಂದ್ ಮಾಡಿರುವೆನಾ ಇಲ್ಲವಾ ಎಂದು ಅನುಮಾನ ಬರುವುದು, ಗ್ಯಾಸ್ ಆಫ್ ಮಾಡಿದ್ದೇನಾ ಇಲ್ಲವೋ ಎನ್ನುವ ಗೊಂದಲ…ಇಂಥ ಮರೆವುಗಳು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತವೆ. ಇವು ಒತ್ತಡದಿಂದ ಉಂಟಾಗುವ ಮರೆವು. ಆದರೆ, ನಿರ್ಲಕ್ಷಿಸಿದರೆ ಅದು ವಯಸ್ಸಾದಂತೆ ಮರೆವಿನ ರೋಗಕ್ಕೆ ಕಾರಣವಾಗಬಹುದು. ಇನ್ನು, ಖಿನ್ನತೆಯಿಂದಲೂ ಮರೆವಿನ ಸಮಸ್ಯೆ ಕಾಡುತ್ತದೆ.
ಮರೆವಿಗೆ ಪರಿಹಾರವೇನು?
“ನನಗೆ ಮರೆವು ಸಹಜ, ನಾನು ಮರೆಗುಳಿ’ ಎಂದು ತುಂಬ ಜನರು ತಮ್ಮಷ್ಟಕ್ಕೆ ತಾವು ಅಂದುಕೊಂಡುಬಿಟ್ಟಿರುತ್ತಾರೆ. ಆದರೆ, ಹಾಗೆ ಮರೆಯುವುದನ್ನು ಸಹಜ ಮಾಡಿಕೊಳ್ಳುವ ಬದಲು, ದಿನವೂ ಬೆಳಗ್ಗೆ ಏಳುವಾಗ, ರಾತ್ರಿ ಮಲಗುವಾಗ “ನನಗೆ ಎಲ್ಲವೂ ನೆನಪಿರುತ್ತದೆ, ನನ್ನ ಸ್ಮರಣಾಶಕ್ತಿ ದೃಢವಾಗಿದೆ’ ಎಂದು ಮಿದುಳಿಗೆ ಒಂದು ಸಂದೇಶ ನೀಡುವುದು ಉತ್ತಮ.
ಎಲ್ಲಕ್ಕಿಂತ ಮುಖ್ಯವಾಗಿ, ಧ್ಯಾನ, ಪ್ರಾಣಾಯಾಮ, ಯೋಗಾಸನ ಮಾಡುವವರಿಗೆ ಮರೆವಿನ ಸಮಸ್ಯೆ ಎಂದಿಗೂ ಕಾಡಲಾರದು. ಬದಲಿಗೆ, ವಯಸ್ಸಾದರೂ ನೆನಪಿನ ಶಕ್ತಿ ಚೆನ್ನಾಗಿಯೇ ಇರುತ್ತದೆ. ದಿನವೂ ಪ್ರಾಣಾಯಾಮ ಮಾಡುವ ಅದೆಷ್ಟೋ ಹಿರಿಯರು ಕಿರಿಯರಿಗಿಂತಲೂ ಚೆನ್ನಾಗಿ ನೆನಪಿನ ಶಕ್ತಿ ಹೊಂದಿರುತ್ತಾರೆ. ಉತ್ತಮ ಪುಸ್ತಕ ಓದುವುದು, ಕಿರಿಯರೊಂದಿಗೆ ಬೆರೆಯುವುದು, “ವಯಸ್ಸು’ಎನ್ನುವ ಗೋಡೆ ಕಟ್ಟಿಕೊಳ್ಳದೆ ಎಲ್ಲ ವಯಸ್ಕರೊಂದಿಗೆ ಬೆರೆಯುವುದು ಅತಿ ಮುಖ್ಯ. ಮಕ್ಕಳೊಂದಿಗೆ ಆಟವಾಡುವುದು, ಪಾಠ ಹೇಳಿಕೊಡುವುದರಲ್ಲಿ ಮಗ್ನವಾದರೆ ಮರೆವು ಕಾಣಿಸುವುದಿಲ್ಲ. ಜತೆಗೆ, ಮಿದುಳಿಗೆ ಕಸರತ್ತು ನೀಡುವ ಚಟುವಟಿಕೆ ಅಂದರೆ, ಪತ್ರಿಕೆಗಳಲ್ಲಿ ದಿನವೂ ನೀಡುವ ಪದಬಂಧ ತುಂಬುವುದು, ಸುಡೊಕು ಇತ್ಯಾದಿ ಚಟುವಟಿಕೆಗಳನ್ನು ಮಾಡುತ್ತಿರಬೇಕು.
ಇತ್ತೀಚಿನ ದಿನಗಳಲ್ಲಿ ಮರೆವು ರೋಗಕ್ಕೆ ಹಲವಾರು ಥೆರಪಿಗಳು ಬಂದಿವೆ. ತಜ್ಞರಿಂದ ಅವುಗಳ ಬಗ್ಗೆ ಅರಿತು ಅನುಸರಿಸಿದರೆ ಮರೆವನ್ನು ಮರೆತು ಆರಾಮಾಗಿರಬಹುದು. ಮುಖ್ಯವಾಗಿ, ಆರೋಗ್ಯಕರ ಜೀವನಶೈಲಿ ಅನುಸರಿಸಬೇಕು. ಚಿಂತೆ, ಒತ್ತಡವನ್ನು ದೂರವಿಡಬೇಕು. ಉತ್ತಮ ದೈಹಿಕ ಚಟುವಟಿಕೆ ಮಾಡಬೇಕು. ಮದ್ಯಪಾನದಿಂದ ದೂರವಿರಲೇಬೇಕು. ದಿನದ ಹೆಚ್ಚು ಕಾಲ ಟಿವಿ ವೀಕ್ಷಣೆ ಬೇಡ.
ಅಲ್ಜೀಮರ್ ಹೆಸರು ಹೇಗೆ ಬಂತು ಗೊತ್ತಾ?!
1906ರಲ್ಲಿ ಮಾನಸಿಕ ರೋಗ ಶಾಸ್ತ್ರಜ್ಞೆ ಹಾಗೂ ನರಅಂಗರಚನಾ ಶಾಸ್ತ್ರಜ್ಞೆಯಾಗಿದ್ದ ಡಾ.ಅಲಾಯಿಸ್ ಅಲ್ಜೀಮರ್ ಎನ್ನುವವರು ಮೊಟ್ಟಮೊದಲು ಮರೆವು ರೋಗವನ್ನು ಗುರುತಿಸಿದರು. ಈ ಕುರಿತು ಅವರು ಜರ್ಮನಿಯ ಟ್ಯೂಬಿನ್ಜೆನ್ ಎನ್ನುವಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದರು. ಆಗಸ್ಟೆ ಡಿ ಎನ್ನುವ ಮಹಿಳೆಯಲ್ಲಿ ಮನೆಯವರನ್ನೂ ಗುರುತಿಸದ ತೀವ್ರತೆರನಾದ ಮರೆವು ರೋಗ ಕಂಡುಬಂದಿತ್ತು. ಈ ಪ್ರಕರಣವನ್ನು ಡಾ.ಅಲಾಯಿಸ್ ಅಧ್ಯಯನ ಮಾಡಿದ್ದರು. ಹೀಗೆ ಮರೆವು ರೋಗವನ್ನು ಬೆಳಕಿಗೆ ತಂದ ಹಿನ್ನೆಲೆಯಲ್ಲಿ ಅಲಾಯಿಸ್ ಅಲ್ಜೀಮರ್ ಅವರ ಹೆಸರನ್ನೇ ಈ ರೋಗಕ್ಕೆ ಇಡಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!