ಮದ್ಯ ಸೇವನೆಯಿಂದ ಉಂಟಾಗುವ ಹ್ಯಾಂಗೋವರ್ ಅನ್ನು ಕಡಿಮೆ ಮಾಡಲೂ ಮಜ್ಜಿಗೆ ಉಪಕಾರಿ. ಮಜ್ಜಿಗೆಯೊಡನೆ ಮೆಂತ್ಯ ಕಾಳನ್ನು ಸೇವಿಸುವುದರಿಂದ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ. ಮನೆಯಲ್ಲಿಯೇ ತಯಾರಿಸಲಾದ ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್ ಎನ್ನುವ ಸೂಕ್ಷ್ಮಾಣು ಜೀವಿ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ.
• ಡಾ.ಅಸೀಮಾ
newsics.com@gmail.com
ಮಜ್ಜಿಗೆ ಅನ್ನುವ ದೇಸಿ ಪೇಯ ಹಲವಾರು ಗುಣಗಳನ್ನು ಹೊಂದಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬಿಸಿಲಿನಲ್ಲಿ ಅಲೆದಾಡಿ ಬಂದಾಗ ಮಜ್ಜಿಗೆ ಕುಡಿಯುತ್ತಾರೆ. ಅಲ್ಲದೆ ಮನೆಗೆ ಬಂದ ಅತಿಥಿಗಳ ಮುಂದಿಡುವ ಪಾನೀಯಗಳಲ್ಲಿ ಇದೂ ಒಂದು. ಅದರಲ್ಲಿಯೂ ಮುಖ್ಯವಾಗಿ ಬೇಸಿಗೆಯಲ್ಲಿ ಇದರ ಬಳಕೆ ಹೆಚ್ಚು. ಇದೊಂದು ಹಾಲು ಹಾಗೂ ಮೊಸರು ಆಧಾರಿತ ಪಾನೀಯ.
ಮಜ್ಜಿಗೆ ಸಾಮಾನ್ಯವಾಗಿ ಸಮೃದ್ಧತೆಯನ್ನು ಸೂಚಿಸುತ್ತದೆ. ಅದರಲ್ಲಿಯೂ ಮನೆಯಲ್ಲೇ ತಯಾರು ಮಾಡಿದ ಮಜ್ಜಿಗೆಗೆ ಬೇಡಿಕೆ ಹೆಚ್ಚು. ಹಳ್ಳಿಗಳಲ್ಲಿ ಹೆಚ್ಚಾಗಿ ಮನೆಯಲ್ಲಿಯೇ ಪಶು ಸಾಕಣೆ ಮಾಡುವ ಕಾರಣ ಹಾಲು, ಮಜ್ಜಿಗೆಗೆ ಕೊರತೆಯಿರುವುದಿಲ್ಲ. ಇಲ್ಲಿ ಹಾಲನ್ನು ಮಾರಾಟ ಮಾಡಿದರೂ ಮಜ್ಜಿಗೆಯನ್ನು ಹಣಕ್ಕೆ ಮಾರಾಟ ಮಾಡುವುದು ತುಂಬಾ ಕಡಿಮೆ.
ಆದರೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಹಾಲಿನಷ್ಟೆ ದರಕ್ಕೆ ಮಾರಾಟವಾಗುತ್ತದೆ. ಈ ಮಜ್ಜಿಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಸಿವು ನೀಗಿಸುವುದಕ್ಕೆ ಫೇಮಸ್.
ಮಜ್ಜಿಗೆಯಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್, ವಿಟಮಿನ್ ಡಿ ಸಮೃದ್ಧವಾಗಿದೆ. ಮುಟ್ಟಿನ ಹೊಟ್ಟೆ ನೋವಿನ ಸಂದರ್ಭದಲ್ಲಿ ಹುಳಿ ಮಜ್ಜಿಗೆ ಸೇವನೆಯು ಹೊಟ್ಟೆಯನ್ನು ತಂಪಾಗಿಸಿ, ನೋವಿನ ಭಾರವನ್ನು ಕಡಿಮೆ ಮಾಡುತ್ತದೆ. ಮದ್ಯ ಸೇವನೆಯಿಂದ ಉಂಟಾಗುವ ಹ್ಯಾಂಗೋವರ್ ಅನ್ನು ಕಡಿಮೆ ಮಾಡಲೂ ಮಜ್ಜಿಗೆ ಉಪಕಾರಿ. ಮಜ್ಜಿಗೆಯೊಡನೆ ಮೆಂತ್ಯ ಕಾಳನ್ನು ಸೇವಿಸುವುದರಿಂದ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ. ಮನೆಯಲ್ಲಿಯೇ ತಯಾರಿಸಲಾದ ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್ ಎನ್ನುವ ಸೂಕ್ಷ್ಮಾಣು ಜೀವಿ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಹೊಟ್ಟೆಯಲ್ಲಾಗುವ ಕಿರಿಕಿರಿ, ಜಠರ, ಕರುಳಿನ ಕಾಯಿಲೆಗಳು, ರಕ್ತಹೀನತೆ ಮೊದಲಾದ ಸಮಸ್ಯೆಗಳಿಗೂ ಇದು ಪರಿಹಾರವನ್ನು ಹೊಂದಿದೆ.
ಬೇಧಿಯಿಂದ ಬಳಲುತ್ತಿರುವವರು ಒಣ ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ನೆನೆಸಿ ಕುಡಿಯುವುದರಿಂದ ತಕ್ಷಣವೇ ಕಡಿಮೆಯಾಗುತ್ತದೆ. ಇನ್ನು ಊಟದ ಮೊದಲು ಮಜ್ಜಿಗೆ ಸೇವನೆಯು ತೂಕ ಇಳಿಸಲು ಸಹಕಾರಿ ಎಂದು ಹೇಳಲಾಗಿದೆ. ಮಜ್ಜಿಗೆ ಹಸಿವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
ಮಜ್ಜಿಗೆಯನ್ನು ಹಲವು ವಿಧದಲ್ಲಿ ಸೇವನೆ ಮಾಡಬಹುದು. ನೇರವಾಗಿ ಮಜ್ಜಿಗೆ ಸೇವಿಸಬಹುದು. ಕಲ್ಲು ಉಪ್ಪಿನೊಡನೆ, ಅಥವಾ ಒಗ್ಗರಣೆ ಮಜ್ಜಿಗೆ, ಮಸಾಲೆ ಮಜ್ಜಿಗೆ, ಲಸ್ಸಿ ಹೀಗೆ ಹಲವು ರೀತಿಯಲ್ಲಿ ಸೇವಿಸಬಹುದು. ಅದೇ ರೀತಿ ಮಜ್ಜಿಗೆ ತಂಬುಳಿ ಮಾಡಬಹುದು. ಮಜ್ಜಿಗೆ ಹುಳಿ ಅಥವಾ ಕಾಯಿ ಹುಳಿಯಲ್ಲಿಯು ಇದನ್ನು ಬಳಸಲಾಗುತ್ತದೆ.