Monday, March 1, 2021

ಕೊರೋನಾ: ಮಕ್ಕಳು ಖಿನ್ನತೆಯತ್ತ ಜಾರುತ್ತಿರುವರೇ?

ಕೊರೋನಾದಿಂದ ಬರೋಬ್ಬರಿ ಒಂದು ವರ್ಷದಿಂದ ಮನೆಯಲ್ಲೇ ಇರುವ ಮಕ್ಕಳ ಮಾನಸಿಕ ಸ್ಥಿತಿಗತಿ ಕುರಿತ ವರದಿಗಳು ಇತ್ತೀಚೆಗೆ ಒಂದೊಂದಾಗಿ ಹೊರಬರುತ್ತಿವೆ. ಮನೆಯಲ್ಲಿ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಸ್ನೇಹಿತರು, ಆಟೋಟ, ಶಾಲೆಯ ವಾತಾವರಣವಿಲ್ಲದೆ ಮಕ್ಕಳ ಬಸವಳಿದಿದ್ದಾರೆ. ಅಷ್ಟೇ ಅಲ್ಲ, ಅವರ ಮಾನಸಿಕ ತುಮುಲ ಮೇರೆ ಮೀರಿದೆ. ಮಕ್ಕಳು ನಿಧಾನವಾಗಿ ಖಿನ್ನತೆಯತ್ತ ಜಾರುತ್ತಿದ್ದಾರೆ ಎನ್ನುವುದು ನಿಜಕ್ಕೂ ಎಚ್ಚರಿಕೆಯ ಗಂಟೆ.

  ಆರೋಗ್ಯ  

♦ಸುಮನಸ
newsics.com@gmail.com


 ಕೊರೋನಾ ಸೋಂಕು ಒಂದೆರಡು ವರ್ಷದ ತಾತ್ಕಾಲಿಕ ಸಮಸ್ಯೆಗಳನ್ನು, ಜಗತ್ತಿಗೆ ಆರ್ಥಿಕ ಹಿಂಜರಿತವನ್ನಷ್ಟೇ ನೀಡಿಲ್ಲ. ಬದಲಿಗೆ, ದೀರ್ಘಕಾಲಿಕ ಸಮಸ್ಯೆಗಳನ್ನು ತಂದೊಡ್ಡಿದೆ. ಒಂದು ವರದಿ ಪ್ರಕಾರ, ವಿಶ್ವಾದ್ಯಂತ ಕಳೆದ ವರ್ಷದಿಂದೀಚೆಗೆ ಶೇ.10-20ರಷ್ಟು ಮಕ್ಕಳಲ್ಲಿ ಮಾನಸಿಕ ಖಿನ್ನತೆ ಕಂಡುಬಂದಿದೆ. ಇದಕ್ಕೆ ಕೊರೋನಾದಿಂದ ಉಂಟಾದ ಪರಿಸ್ಥಿತಿಯೇ ನೇರ ಕಾರಣವಾಗಿದೆ.
ಶಾಲೆ, ಸ್ನೇಹಿತರು, ಆಟೋಟ, ಓದು-ಬರಹ, ತಮ್ಮದೇ ಓಡಾಟಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮಕ್ಕಳಿಗೆ ಏಕಾಏಕಿ ಕರಾಳ ದುಃಸ್ವಪ್ನವಾಗಿ ಬಂದೆರಗಿದ್ದು ಕೊರೋನಾ ಸೋಂಕು. ಜಗತ್ತನ್ನು, ಆಳುವವರನ್ನು, ಬಡವರನ್ನು, ಕಾರ್ಮಿಕರನ್ನು ಬೇರೆಯದೇ ರೀತಿಯಲ್ಲಿ ಕಾಡಿಸಿದ್ದ ಕೊರೋನಾ ಮಕ್ಕಳಲ್ಲಿ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸಿದೆ.
ಲಾಕ್ ಡೌನ್ ನಂತರದ ಅವಧಿಯಲ್ಲಿ ಆನ್ ಲೈನ್ ಶಿಕ್ಷಣ ಆರಂಭವಾದರೂ ಅನೇಕ ಮಕ್ಕಳಿಗೆ ಅದು ಸಂತಸ ನೀಡಿಲ್ಲ. ಬಹಳಷ್ಟು ಮಕ್ಕಳು ಮನೆಯಲ್ಲೇ ಕುಳಿತು ಶಿಕ್ಷಣ ಪಡೆಯುವ ವ್ಯವಸ್ಥೆಗೆ ಹೊಂದಿಕೊಂಡರಾದರೂ ಅನೇಕ ಮಕ್ಕಳಿಗೆ ಅದು ಇಷ್ಟವಾಗಲಿಲ್ಲ. ಆಟೋಟಗಳಲ್ಲಿ, ಸ್ನೇಹಿತರ ಜತೆಗೆ ನೆಮ್ಮದಿ ಕಾಣುತ್ತಿದ್ದ ಮಕ್ಕಳಿಗೆ ಆ “ಆಸರೆ’ ಲಭಿಸದೇ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಹೇಳಲಾರದ ಸಂಕಟ
ಒಂದೆರಡು ತಿಂಗಳಲ್ಲ, ಮಕ್ಕಳು ಮನೆಯಿಂದ ಹೊರಬೀಳದೇ ಬರೋಬ್ಬರಿ ಒಂದು ವರ್ಷವೇ ಆಗಿ ಹೋಗಿದೆ. ಪರಿಣಾಮವಾಗಿ, ಮಕ್ಕಳಲ್ಲಿ ಉದ್ವೇಗ, ಕಿರಿಕಿರಿ, ಖಿನ್ನತೆ ಹೆಚ್ಚಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಒಂದು ರೀತಿಯ ಭಯ ಹಾಗೂ ಅನಿಶ್ಚಿತತೆಗಳು ಕಾಡಿದ್ದವು. ಅದಾದ ಬಳಿಕ, ಮಕ್ಕಳು ಅನಿವಾರ್ಯವಾಗಿ ಮನೆಯಲ್ಲೇ ಇರುವಂತಾದರು. ಅಂದಿನಿಂದಲೂ ಮಕ್ಕಳು ಕಿರಿಕಿರಿಗೆ ಒಳಗಾಗಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಮೊನ್ನೆಯಷ್ಟೇ ಚೆನ್ನೈನ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಆನ್ ಲೈನ್ ತರಗತಿ ಕಷ್ಟವಾಗುತ್ತಿದೆ ಎಂದು ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಖಂಡಿತವಾಗಿ ಇದು ಏಕಾಏಕಿ ನಡೆದಿರುವ ಘಟನೆಯಲ್ಲ. ಆತ ಬಹಳಷ್ಟು ದಿನಗಳಿಂದ ಕಿರಿಕಿರಿ, ಮಾನಸಿಕ ತುಮುಲ, ಯಾರ ಬಳಿಯೂ ಹೇಳಿಕೊಳ್ಳಲಾಗದ ಹತಾಶೆಯಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚು. ಆತನ ಸಮಸ್ಯೆಯನ್ನು ಗುರುತಿಸುವಲ್ಲಿ ಶಾಲೆ, ಶಿಕ್ಷಕರು, ಪಾಲಕರು ಎಲ್ಲರೂ ವಿಫಲರಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಭಾರತದಂಥ ದೇಶದಲ್ಲಿ ಮಕ್ಕಳ ಮನಸ್ಥಿತಿಯತ್ತ ಹೆಚ್ಚಿನ ಪಾಲಕರು ಗಮನ ನೀಡುವುದಿಲ್ಲ. ಆದರೆ, ಮಕ್ಕಳ ಯೋಚನಾ ಪದ್ಧತಿಯನ್ನೇ ಬದಲಿಸಿಬಿಡುವ ಮಾನಸಿಕ ಏರಿಳಿತಗಳನ್ನು ಆರಂಭದಲ್ಲೇ ಗುರುತಿಸುವ ಅಗತ್ಯವಿರುತ್ತದೆ. ಮಕ್ಕಳ ಯೋಚನಾಕ್ರಮ, ಭಾವನೆ, ವರ್ತನೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದರೆ ಅವುಗಳ ಬಗೆಗೆ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ, ಇಂಥ ಬದಲಾವಣೆಗಳು ಮುಂದೊಂದು ದಿನ ದೊಡ್ಡ ಮಾನಸಿಕ ಸಮಸ್ಯೆಯನ್ನು ತಂದೊಡ್ಡಬಹುದು. ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಬಹುದು. ಅಲ್ಲದೆ, ಮನೆ, ಶಾಲೆ ಹಾಗೂ ಸಮಾಜದಲ್ಲಿ ವರ್ತನೆ ಸಮಸ್ಯೆಗೆ ಕಾರಣವಾಗಬಹುದು.
ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಅಷ್ಟು ತೀವ್ರವಾಗಿ ಕಂಡುಬರುವುದಿಲ್ಲ. ಅಲ್ಲಿನ ಸಮಸ್ಯೆ ಬೇರೆಯದೇ ಆಗಿದೆ. ಓದು-ಬರಹದಿಂದ ದೂರವುಳಿದು, ಕೂಲಿ ಕಾರ್ಮಿಕರಾಗಿ ಬದಲಾಗಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ಗ್ರಾಮೀಣ ಪ್ರದೇಶಗಳ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ, ನಗರ ಪ್ರದೇಶಗಳ ಮಕ್ಕಳು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಸಾಮಾನ್ಯ ಸಮಸ್ಯಾತ್ಮಕ ಲಕ್ಷಣಗಳು
• ಆನ್ ಲೈನ್ ಕ್ಲಾಸುಗಳನ್ನು ತಪ್ಪಿಸಿಕೊಳ್ಳಲು ಯತ್ನಿಸುವುದು
• ಏಕಾಗ್ರತೆಯ ಕೊರತೆ
• ಶೈಕ್ಷಣಿಕವಾಗಿ ಕುಸಿತ
• 2-3 ವಾರಗಳಿಗೂ ಹೆಚ್ಚು ಅವಧಿ ದುಃಖಿತರಾಗಿರುವುದು
• ಸಾಮಾಜಿಕವಾಗಿ ನಾಲ್ಕು ಜನರೊಂದಿಗೆ ಬೆರೆಯುವ ಅವಕಾಶವಿಲ್ಲದಿರುವುದು
• ತಮ್ಮನ್ನು ತಾವೇ ಹಿಂಸಿಸಿಕೊಳ್ಳುವುದು ಅಥವಾ ಪದೇಪದೆ ಇನ್ನೊಬ್ಬರಿಗೆ ಹಿಂಸೆ ನೀಡುವ ಮಾತುಗಳನ್ನಾಡುವುದು
• ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಮಾತನಾಡುವುದು
• ಅತಿಯಾದ ಕಿರಿಕಿರಿ ಅಥವಾ ಕೋಪ
• ನಿಯಂತ್ರಣಕ್ಕೆ ಸಿಗದೇ ಇರುವಂಥ ವರ್ತನೆ
• ಮನಸ್ಥಿತಿ, ವರ್ತನೆ, ವ್ಯಕ್ತಿತ್ವದಲ್ಲಿ ಬದಲಾವಣೆ
• ಆಹಾರ ಸೇವನೆ ಪದ್ಧತಿಯಲ್ಲಿ ಬದಲಾವಣೆ
• ನಿದ್ರೆ ಬಾರದಿರುವುದು
• ಹೊಟ್ಟೆನೋವು ಅಥವಾ ತಲೆನೋವು

ಪಾಲಕರೇನು ಮಾಡಬೇಕು?
• ಪಾಲಕರಿಗೆ ಏನೇ ಅನಿವಾರ್ಯತೆಗಳಿರಬಹುದು. ಆದರೆ, ಮಕ್ಕಳ ವರ್ತನೆ, ಮನಸ್ಥಿತಿಯ ಕಡೆಗೆ ಗಮನ ನೀಡಬೇಕಾದುದು ಅವರ ಕರ್ತವ್ಯ.
• ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಯತ್ನಿಸುವುದು. ಅವರೊಂದಿಗೆ ವಿನೋದದಿಂದ ನಲಿಯುವುದು.
• ಅಲ್ಪಸ್ವಲ್ಪ ವಿದ್ಯೆ ಬಲ್ಲವರೂ ಆಸಕ್ತಿ ಬೆಳೆಸಿಕೊಂಡು ಮಕ್ಕಳಿಗೆ ವಿವಿಧ ಚಟುವಟಿಕೆ ಹೇಳಿಕೊಡುವುದು
• ಮುಜುಗರವಿಲ್ಲದೆ ವೈದ್ಯರನ್ನು ಭೇಟಿಯಾಗುವುದು.
• ತಿಳಿದವರಲ್ಲಿ ಸಮಸ್ಯೆಯ ಬಗ್ಗೆ ವಿಚಾರ ವಿನಿಮಯ ಮಾಡುವುದು
• ಮಾನಸಿಕ ಸಮಸ್ಯೆಯುಳ್ಳ ಮಕ್ಕಳನ್ನು ನಿಭಾಯಿಸಲು, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಲು ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳಿವೆ, ಅವುಗಳಿಗೆ ಸೇರಿಕೊಂಡು ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ.
• ಮಕ್ಕಳ ಚಿಕ್ಕಪುಟ್ಟ ಉತ್ತಮ ಅಭ್ಯಾಸ, ಸಾಧನೆಗಳನ್ನು ಸಹ ಗುರುತಿಸಿ ಮೆಚ್ಚಿಕೊಳ್ಳುವುದು. ಉತ್ತೇಜನ ನೀಡುವುದು.
ಶೈಕ್ಷಣಿಕ ಪ್ರಗತಿಯೂ ಕುಂಠಿತ
ಅಜೀಂ ಪ್ರೇಮ್ ಜಿ ಫೌಂಡೇಷನ್ ನಡೆಸಿದ್ದ ಅಧ್ಯಯನದಲ್ಲಿ ಹಲವಾರು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಅದೆಂದರೆ, ಮಕ್ಕಳ ಸಾಮಾನ್ಯ ಗಣಿತದ ಜ್ಞಾನದಲ್ಲೂ ಕುಸಿತ ಕಂಡುಬಂದಿದೆ. ನಾಲ್ಕನೇ ತರಗತಿಯ ಶೇ.11ರಷ್ಟು ವಿದ್ಯಾರ್ಥಿಗಳು ಗಡಿಯಾರದಲ್ಲಿ ಸಮಯ ನೋಡುವುದನ್ನು ಸಹ ಮರೆತಿದ್ದಾರೆ!
ಕೊರೋನಾ ಸೋಂಕಿನ ಸಾಂಕ್ರಾಮಿಕದ ಸಮಯದಲ್ಲಿ ಕಲಿಕೆಯ ನ್ಯೂನತೆ’ ಕುರಿತ ವರದಿಯನ್ನು ಅಜೀಂ ಪ್ರೇಮ್ ಜಿ ಫೌಂಡೇಷನ್ ಬಿಡುಗಡೆ ಮಾಡಿದೆ. 2021ರ ಜನವರಿಯಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಕರ್ನಾಟಕ, ಛತ್ತೀಸ್’ಗಢ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ರಾಜ್ಯಗಳ 1137 ಶಾಲೆಗಳ 16 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ಅಧ್ಯಯನವು, ಬಹಳಷ್ಟು ವಿಸ್ಮಯಕಾರಿ ಅಂಶಗಳನ್ನು ಬಹಿರಂಗ ಮಾಡಿದೆ.
ಇದರ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಸ್ಮಾರ್ಟ್ ಫೋನ್ ಮತ್ತಿತರ ಅಗತ್ಯ ಸಲಕರಣೆಗಳಿಲ್ಲದೆ ಶೇ.27ರಿಂದ ಶೇ.80ರಷ್ಟು ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸುಗಳಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.
2ರಿಂದ 6ನೇ ತರಗತಿಯ ವಿದ್ಯಾರ್ಥಿಗಳು ಸಂಖ್ಯೆಗಳನ್ನು ಗುರುತಿಸುವುದನ್ನು, ಸಾಮಾನ್ಯ ಕೂಡಿಸು-ಕಳೆಯುವ ಲೆಕ್ಕಗಳನ್ನು ಸಹ ಮರೆತುಬಿಟ್ಟಿದ್ದಾರೆ. 4ನೇ ತರಗತಿಯ ಶೇ.70ರಷ್ಟು ಮಕ್ಕಳು ದೊಡ್ಡ ಸಂಖ್ಯೆ, ಸಣ್ಣ ಸಂಖ್ಯೆಯಂಥ ಚಿಕ್ಕಪುಟ್ಟ ಅಂಶಗಳನ್ನು ಸಹ ಮರೆತಿದ್ದಾರೆ. 6ನೇ ತರಗತಿಯ ಮಕ್ಕಳು ಕೋನ ಗುರುತಿಸುವುದನ್ನು, ನಾಲ್ಕು ಸಂಖ್ಯೆಯ ಭಾಗಾಕಾರವನ್ನು ಮರೆತಿದ್ದಾರೆ.
2019ನೇ ಸಾಲಿನ ವರದಿಗೂ 2021ನೇ ಸಾಲಿನ ವರದಿಗೂ ಅಗಾಧ ವ್ಯತ್ಯಾಸವನ್ನು ಗುರುತಿಸಲಾಗಿದೆ. ಗಣಿತ ಸೇರಿದಂತೆ ಕಲಿಕಾ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿರುವುದು ಪ್ರಸಕ್ತ ವರದಿಯಲ್ಲಿ ಹೇಳಲಾಗಿದೆ.

ಆನ್’ಲೈನ್ ಕ್ಲಾಸ್; ಮಕ್ಕಳಲ್ಲಿ ದೃಷ್ಟಿದೋಷ ಆತಂಕ

ಉದುರಿದ ಎಲೆಗಳು ಅಲ್ಲೇ ಇರಲಿ…

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!