ಬೊಜ್ಜು, ಹೈಪರ್ ಟೆನ್ಷನ್, ಮಧುಮೇಹ ಇಂಥ ಆರೋಗ್ಯ ಸಮಸ್ಯೆಗಳು ಯಾವತ್ತೂ ಅಪಾಯಕಾರಿಯೇ. ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಈ ಸಮಯದಲ್ಲಿ ಇವು ಇನ್ನಷ್ಟು ಸಮಸ್ಯೆ ತಂದೊಡ್ಡುತ್ತಿವೆ. ಯುವ ವಯಸ್ಕರಲ್ಲಿ ಮರಣ ಪ್ರಮಾಣ ಹೆಚ್ಚಲು ಕಾರಣವಾಗುತ್ತಿವೆ.
newsics.com Feature Desk
ಬೊ ಜ್ಜು, ಹೈಪರ್ ಟೆನ್ಷನ್, ಮಧುಮೇಹಗಳಿರುವ ಯುವ ವಯಸ್ಕರಿಗೆ ಕೋವಿಡ್-19 ಸೋಂಕಿನ ಅಪಾಯ ಹಿರಿಯರಿಗಿಂತ ಹೆಚ್ಚು! ’60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್ ಸೋಂಕು ಹೆಚ್ಚು ತೊಂದರೆ ನೀಡುತ್ತದೆ, ಅವರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು, ನಾವು ಚೆನ್ನಾಗಿಯೇ ಇದ್ದೇವೆ, ನಮಗೆ ಸೋಂಕು ಹೆಚ್ಚು ಬಾಧಿಸದು’ ಎನ್ನುವ ನಂಬಿಕೆ ಸಾಮಾನ್ಯವಾಗಿ ಎಲ್ಲರಲ್ಲಿದೆ. ಆದರೆ, ವಯಸ್ಕರೇ ಆದರೂ ಸಹ, ಬೊಜ್ಜು, ಹೈಪರ್ ಟೆನ್ಷನ್, ಮಧುಮೇಹಗಳಾಗಿದ್ದರೆ ಅಂಥವರು ಕೋವಿಡ್-19 ಸೋಂಕಿನಿಂದ ಮೃತರಾಗುವ ಸಾಧ್ಯತೆ ಅಧಿಕ.
ಇಂತಹದೊಂದು ಮಾಹಿತಿಯನ್ನು ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ಬಹಿರಂಗಪಡಿಸಿದೆ. ಅಸೋಸಿಯೇಷನ್ ನ ಜಾಮಾ ಇಂಟರ್ನಲ್ ಮೆಡಿಸಿನ್ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್’ನಲ್ಲಿ ಅಧ್ಯಯನ ನಡೆಸಿದ್ದ ಲ್ಯಾನ್ಸೆಟ್…
ಇತ್ತೀಚೆಗೆ ಲ್ಯಾನ್ಸೆಟ್ ಜರ್ನಲ್’ನಲ್ಲೂ ಇಂಥದ್ದೇ ವರದಿ ಪ್ರಕಟವಾಗಿತ್ತು. ಇಂಗ್ಲೆಂಡ್’ನಲ್ಲಿ ಅಧ್ಯಯನ ನಡೆಸಿದ್ದ ಲ್ಯಾನ್ಸೆಟ್ ತಂಡಕ್ಕೆ ಮಧುಮೇಹ ಹೊಂದಿರುವವರು ಕೋವಿಡ್-19ನಿಂದ ಮರಣ ಹೊಂದಿರುವುದು ತಿಳಿದುಬಂದಿತ್ತು. ಇದೀಗ, ಅಮೆರಿಕದ ಸರದಿ.
ಈ ಅಧ್ಯಯನದಲ್ಲಿ, 35ಕ್ಕಿಂತ ಕಡಿಮೆ ವಯೋಮಾನದವರಲ್ಲಿ ಮಧುಮೇಹ, ಹೈಪರ್ ಟೆನ್ಷನ್, ಬೊಜ್ಜು ಸಮಸ್ಯೆ ಇದ್ದಾಗ ಹೆಚ್ಚು ಆರೋಗ್ಯ ತೊಂದರೆ ಕಂಡುಬಂದಿದೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಸುಮಾರು 3 ಸಾವಿರಕ್ಕೂ ಅಧಿಕ 18ರಿಂದ 34ರ ವಯೋಮಾನದವರನ್ನು ಕೇಂದ್ರೀಕರಿಸಿ, ಏಪ್ರಿಲ್ 1ರಿಂದ ಜೂನ್ 30ರವರೆಗೆ ಈ ಅಧ್ಯಯನ ನಡೆಸಲಾಗಿತ್ತು. ಇವರಲ್ಲಿ ಶೇ.21ರಷ್ಟು ಮಂದಿಗೆ ಇಂಟೆನ್ಸಿವ್ ಕೇರ್ ಸೌಲಭ್ಯದ ಅಗತ್ಯ ಕಂಡುಬಂದಿತ್ತು. ಶೇ.10ರಷ್ಟು ಮಂದಿಗೆ ವೆಂಟಿಲೇಷನ್ ಬೇಕಾಗಿದ್ದರೆ, ಶೇ. 2.7 ಮಂದಿ ಸಾವಿಗೀಡಾಗಿದ್ದರು.
ಆಸ್ಪತ್ರೆಗೆ ಸೇರಿದ್ದ ವಯಸ್ಕರಲ್ಲಿ ಶೇ.36ರಷ್ಟು ಮಂದಿ ಬೊಜ್ಜುದೇಹಿಗಳಾಗಿದ್ದರು. ಶೇ.24.5ರಷ್ಟು ಮಂದಿ ತೀವ್ರತರನಾದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು. ಶೇ.18ರಷ್ಟು ಮಂದಿ ಮಧುಮೇಹಿಗಳು ಹಾಗೂ ಶೇ.16ರಷ್ಟು ಮಂದಿ ಹೈಪರ್ ಟೆನ್ಷನ್ ಹೊಂದಿದ್ದರು ಎನ್ನುವುದು ತಿಳಿದುಬಂದಿದೆ.
ಭಾರತದಲ್ಲೂ ಸಾಬೀತು…
ಭಾರತದಲ್ಲೂ ಈ ಅಂಶಗಳು ಈಗಾಗಲೇ ಸಾಬೀತಾಗಿದೆ ಎನ್ನುತ್ತಾರೆ ವೈದ್ಯರು. ಇಲ್ಲಿ, ಕೊರೋನಾ ಸೋಂಕಿನಿಂದ ಸಾವಿಗೀಡಾಗುತ್ತಿರುವವರಲ್ಲಿ ಪುರುಷರೇ ಹೆಚ್ಚು. ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಸಾವಿನ ಪ್ರಮಾಣ ಪುರುಷರಲ್ಲಿ ಕಂಡುಬರುತ್ತಿದೆ. ಕೊರೋನಾ ಸೋಂಕಿನಿಂದ ಸಾವಿಗೀಡಾದವರಲ್ಲಿ ಶೇ.69ರಷ್ಟು ಜನ ಪುರುಷರು. ಕೇಂದ್ರ ಆರೋಗ್ಯ ಇಲಾಖೆಯ ದಾಖಲೆಗಳು ಇದನ್ನು ಪುಷ್ಟೀಕರಿಸಿವೆ. 40ಕ್ಕಿಂತ ಕಡಿಮೆ ವಯೋಮಾನದವರು ಶೇ.10ರಷ್ಟು ಸಾವಿಗೀಡಾಗಿದ್ದಾರೆ. ಆದರೆ, 61-70ರ ವಯೋಮಾನದವರು ಅಧಿಕ ಸಂಖ್ಯೆಯಲ್ಲಿ ಮೃತರಾಗಿದ್ದಾರೆ.
ಭಾರತದಲ್ಲಿ 40ಕ್ಕಿಂತ ಕಡಿಮೆ ವಯಸ್ಕರಲ್ಲಿ ಸೋಂಕಿನ ತೀವ್ರತೆ ಕಮ್ಮಿ. ಮನೆಯಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅವರನ್ನು ನೋಡಿಕೊಂಡರೆ ಸಾಕು. ಆದರೆ, ಆಸ್ಪತ್ರೆಗೆ ದಾಖಲಾದವರು ಬೊಜ್ಜು, ಮಧುಮೇಹ, ಹೈಪರ್ ಟೆನ್ಷನ್ ನಿಂದ ಬಳಲುತ್ತಿರುವವರೇ ಆಗಿದ್ದಾರೆ ಎಂದಿದ್ದಾರೆ ತಜ್ಞರು.
ಅನಿರೀಕ್ಷಿತ ಮರಣ ವಯಸ್ಕರಲ್ಲೇ ಹೆಚ್ಚು!…
ಇಲ್ಲೊಂದು ಮುಖ್ಯವಾದ ಸಂಗತಿಯೆಂದರೆ, ಕೊರೋನಾ ಸೋಂಕಿನಿಂದ ಏಕಾಏಕಿ ಸಾವಿಗೀಡಾಗುವವರು 40ಕ್ಕಿಂತ ಕಡಿಮೆ ವಯೋಮಾನದವರೇ ಎನ್ನುವುದು ವಿಚಿತ್ರ. ವಯಸ್ಸಾದವರು ನ್ಯೂಮೋನಿಯಾಕ್ಕೆ ಒಳಗಾಗಿ ನಂತರ ಮೃತರಾದರೆ, ವಯಸ್ಕರು ಮಾತ್ರ ಆಸ್ಪತ್ರೆಗೆ ಸೇರಿದ 24 ಗಂಟೆಗಳಲ್ಲೇ ಮೃತರಾಗುತ್ತಿರುವುದು ಕಂಡುಬಂದಿದೆ. ಅನಿರೀಕ್ಷಿತ ಮರಣವಾಗುವುದು ವಯಸ್ಕರಲ್ಲೇ ಹೆಚ್ಚು ಎಂದಿದ್ದಾರೆ, ದೆಹಲಿಯ ಲಿವರ್ ಸಂಸ್ಥೆಯ ನಿರ್ದೇಶಕರು.
40ಕ್ಕಿಂತ ಕಡಿಮೆ ವಯೋಮಾನದವರು ಶೇ.4.5ರಷ್ಟು ಮಂದಿ, 40-59ರ ವಯೋಮಾನದವರು ಶೇ.29ರಷ್ಟು, 60-74ರ ವಯೋಮಾನದವರು ಶೇ.47ರಷ್ಟು ಸಾವಿಗೀಡಾಗಿರುವುದು ಭಾರತದಲ್ಲಿ ಕಂಡುಬಂದಿದೆ.
ಹೀಗಾಗಿಯೇ ಇರಬೇಕು, ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರು ಯಾವ ರೀತಿಯ ಜೀವನಶೈಲಿಯನ್ನು ಅನುಸರಿಸಬೇಕು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗಷ್ಟೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಯೋಗ, ಪ್ರಾಣಾಯಾಮಗಳಿಗೆ ಆದ್ಯತೆ ನೀಡಲಾಗಿದೆ.