- ಡಾ. ಸವಿತಾ ನಾಗಭೂಷಣ್
response@134.209.153.225
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಜನರ ಗೊಣಗಾಟವನ್ನೇ ಕವಿ ಕೆ.ಎಸ್. ನರಸಿಂಹಸ್ವಾಮಿ ಕವಿತೆಯಾಗಿಸಿದ್ದಾರೆ. ನಿಜ, ನಾವೆಲ್ಲ ಇತ್ತೀಚೆಗೆ ನೆಮ್ಮದಿಯಾಗಿರುವುದೇ ಅಪರೂಪ ಎಂಬಂತಾಗಿಬಿಟ್ಟಿದೆ. ಆದರೂ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಕಷ್ಟ. ಈ ಅರೋಗ್ಯ ಭಾಗ್ಯ ನಮ್ಮದಾಗಿಸಿಕೊಳ್ಳಲು ನಾವು ಶ್ರಮಪಡಲೇಬೇಕು.
ಈಗ ಚಳಿಯ ಜತೆ ಬಿಸಿಲು. ಬಿಸಿಲ ಧಗೆಯಿಂದ ಪಾರಾಗಲು ನಾನಾ ರೀತಿಯ ಕಷ್ಟ ಅನುಭವಿಸುತ್ತೇವೆ. ಅನಿವಾರ್ಯವಾಗಿ ಹೊರ ಹೋಗಲೇಬೇಕಾಗುತ್ತದೆ. ಇದರಿಂದಾಗಿ ಚರ್ಮದಲ್ಲಿ ಕಪ್ಪು ಕಲೆಗಳು ಅಥವಾ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
ಬಿಸಿಲಿನ ಬೇಗೆಯಿಂದ ತ್ವಚೆಯನ್ನು ಕಾಪಾಡಲು ಸೌತೆಕಾಯಿ ಉತ್ತಮ ಮನೆಮದ್ದು. ನಮ್ಮ ತ್ವಚೆಯ ಆರೈಕೆಗೆ ಮತ್ತು ಆರೋಗ್ಯದ ಕಾಳಜಿಗೆ, ಅದರಲ್ಲೂ ಮುಖ್ಯವಾಗಿ ಬೇಸಿಗೆ ಕಾಲಕ್ಕೆ ಸೌತೆಕಾಯಿ ರಾಮಬಾಣ ಎಂದೇ ಹೇಳಬಹುದು.
ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದಲ್ಲಿ ಸೌತೆಕಾಯಿ ಈ ಕಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ 8 ರಿಂದ 10 ನಿಮಿಷ ಕಣ್ಣಿನ ಮೇಲೆ ಸೌತೆಕಾಯಿ ತುಂಡನ್ನು ಇಡಿ. ಇದು ಕಣ್ಣಿನ ಸುತ್ತ ಮೂಡಿರುವ ಕಪ್ಪು ಕಲೆಗಳನ್ನು ಮಾಯವಾಗಿಸುತ್ತದೆ.
ಸೌತೆ ಚರ್ಮಕ್ಕೆ ಹಿತ ನೀಡುವುದಲ್ಲದೆ ನಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿ ಶೇ. 95ರಷ್ಟು ಪ್ರಮಾಣ ನೀರಿನಂಶವಿದ್ದು ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮತ್ತು ನಿಮ್ಮನ್ನು ಕ್ರಿಯಾಶೀಲರಾಗಿರಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿಯಲ್ಲಿ ಅಧಿಕ ಪ್ರಮಾಣದ ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಅಂಶಗಳಿದ್ದು, ಇವು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಜತೆಗೆ ಇದರಲ್ಲಿರುವ ಹೆಚ್ಚಿನ ನೀರಿನಂಶ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಾಯ ಮಾಡುತ್ತದೆ.
ಸೌತೆಕಾಯಿ ಜ್ಯೂಸ್ ಅನ್ನು ಲಿಂಬೆ ಹಣ್ಣಿನ ಜ್ಯೂಸ್ನೊಂದಿಗೆ ಬೆರೆಸಿ ಚರ್ಮದ ಮೇಲೆ ಲೇಪಿಸಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಟ್ಟು, ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ಸೂರ್ಯನ ಕಿರಣದಿಂದ ಆಗಬಹುದಾದ ಕಪ್ಪು ಕಲೆಗಳಿಂದ ತ್ವಚೆಯನ್ನು ರಕ್ಷಿಸುತ್ತದೆ. ಜತೆಗೆ ಯೌವ್ವನಭರಿತ ತ್ವಚೆ ನಿಮ್ಮದಾಗಿಸುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಚರ್ಮವನ್ನು ಶುದ್ಧಗೊಳಿಸಿ, ಒಣ ಚರ್ಮವನ್ನು ಒದಗಿಸುತ್ತದೆ.
ಸೌತೆಕಾಯಿ ಹೊಟ್ಟೆಯನ್ನು ತಂಪಾಗಿರುವಂತೆ ನೋಡಿಕೊಳ್ಳುತ್ತದೆ. ಸುಮಾರು 30 ಸೆಕೆಂಡ್ ಸೌತೆಕಾಯಿ ತುಂಡನ್ನು ನಾಲಿಗೆಯ ಮೇಲಿಡಿ. ಇದು ಉಸಿರಾಟದಲ್ಲಿ ಬೆರೆತಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಶುದ್ಧ ಉಸಿರಾಟಕ್ಕೆ ಎಡೆ ಮಾಡಿಕೊಡುತ್ತದೆ.
ಸೌತೆಕಾಯಿ ಬೀಜಗಳಲ್ಲಿ ಪೊಟ್ಯಾಷಿಯಂ, ವಿಟಮಿನ್ ಇ ಅಂಶ ಹೆಚ್ಚಿದ್ದು, ಸುಕ್ಕುಗಳ ಅಥವಾ ಕಲೆಗಳ ನಿವಾರಣೆ ಮಾಡುತ್ತದೆ. ಇನ್ನು ನೀರಿಗೆ ಸೌತೆಕಾಯಿ ಬೀಜಗಳನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.