ದೇಹದ ರೋಗ ನಿರೋಧಕ ಶಕ್ತಿ ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಎಷ್ಟು ಸಮಯ ಉಳಿಸಿಕೊಂಡಿರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ದೊರೆತಿದೆ.
ಆರೋಗ್ಯ
♦ ಡಾ.ಸುಮನ್
newsics.com@gmail.com
“ಕೊ ರೋನಾ ಸೋಂಕಿಗೆ ಒಮ್ಮೆ ತುತ್ತಾದರೆ ದೀರ್ಘಕಾಲ ಅದರ ಪರಿಣಾಮಗಳು ದೇಹದಲ್ಲಿರುತ್ತವೆ. ದೇಹದ ರೋಗನಿರೋಧಕ ಶಕ್ತಿ ಬಹುಬೇಗ ಸುಧಾರಣೆಯಾಗುವುದಿಲ್ಲ. ಮತ್ತೆ ಮತ್ತೆ ಸೋಂಕಿಗೆ ತುತ್ತಾಗುತ್ತಲೇ ಇರುತ್ತಾರೆ..’ ಇತ್ಯಾದಿ ಸುದ್ದಿಗಳನ್ನು ಕೇಳಿ ಸುಸ್ತಾಗಿದ್ದೇವೆ. ಆದರೆ, ಇದೀಗ, ಖುಷಿಪಡುವಂಥ ಸಂಗತಿಯೊಂದು ಬಹಿರಂಗವಾಗಿದೆ. ಅದೆಂದರೆ, ಒಮ್ಮೆ ಕೊರೋನಾ ಸೋಂಕಿಗೆ ತುತ್ತಾದವರು ಮತ್ತೆ ಅದಕ್ಕೆ ತುತ್ತಾಗುವ ಸಾಧ್ಯತೆ ಅತಿ ಕಡಿಮೆ. ಕನಿಷ್ಠ ಮುಂದಿನ ಆರು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಸೋಂಕು ಪುನಃ ಕೊರೋನಾ ಸೋಂಕಿತರನ್ನು ಬಾಧಿಸದು ಎಂದು ಹೊಸ ಅಧ್ಯಯನವೊಂದು ಆಶಾದಾಯಕ ವಿಚಾರವನ್ನು ತಿಳಿಸಿದೆ.
ಕೊರೋನಾ ಸೋಂಕು ವರ್ಷಗಟ್ಟಲೆ ಬಾಧಿಸುತ್ತದೆ, ಮತ್ತೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಈ ಅಧ್ಯಯನ ಅಲ್ಲಗಳೆದಿದೆ. ಈ ಮೂಲಕ, ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿಯನ್ನು ಎಷ್ಟು ಸಮಯ ಉಳಿಸಿಕೊಂಡಿರುತ್ತದೆ ಎನ್ನುವ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಅಮೆರಿಕದ ಮಾಲೆಕ್ಯುಲರ್ ಇಮ್ಯುನಾಲಜಿ ಸಂಸ್ಥೆಯ ಪ್ರಯೋಗಾಲಯ ತಜ್ಞರು ಈ ಕುರಿತು ತೀವ್ರ ಅಧ್ಯಯನ ನಡೆಸಿದ್ದರು. ಇದೀಗ ಈ ಅಧ್ಯಯನ ವರದಿ “ನೇಚರ್’ ನಿಯತಕಾಲಿಕದಲ್ಲಿ ವರದಿಯಾಗಿದೆ.
ರೋಚಕ ನೆನಪಿನ ರೋಗನಿರೋಧಕ ಶಕ್ತಿ!
ನಮ್ಮ ದೇಹದ ರೋಗನಿರೋಧಕ ಶಕ್ತಿಯ ಕಾರ್ಯ ಹಾಗೂ ಸಾಮರ್ಥ್ಯ ಅತ್ಯದ್ಭುತ ಎನ್ನಲು ಈ ನಿದರ್ಶನ ಸಾಕು. ರೋಗನಿರೋಧಕ ಶಕ್ತಿ ಕೊರೋನಾ ವೈರಸ್ ಅನ್ನು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಯಾವುದೇ ಸೋಂಕು ಬಂದಾಗ ದೇಹದಲ್ಲಿ ಅದನ್ನು ಎದುರಿಸುವ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಹಾಗೆಯೇ ಕೊರೋನಾ ಸೋಂಕು ಉಂಟಾದಾಗಲೂ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಅಲ್ಲದೆ, ಸೋಂಕು ನಿವಾರಣೆಯಾದರೂ ಪ್ರತಿಕಾಯಗಳು ಸೋಂಕಿಗೆ ಮೂಲವಾಗಿರುವ ವೈರಸ್ ಅನ್ನು ನೆನಪಿನಲ್ಲಿರಿಸಿಕೊಂಡಿರುತ್ತವೆ ಎಂದು ಈ ಅಧ್ಯಯನ ಬಹಿರಂಗಪಡಿಸಿದೆ. ಇದು ನಿಜಕ್ಕೂ ರೋಚಕ. ಮೊದಲು ಕಂಡುಬಂದಿದ್ದ ಸಾರ್ಸ್-ಕೋವಿಡ್-19 ವೈರಸ್ ಮಾತ್ರವಲ್ಲದೆ, ಇತ್ತೀಚೆಗೆ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಬಾರದಂತೆಯೂ ಇವು ನಮ್ಮನ್ನು ರಕ್ಷಿಸುತ್ತವೆ.
ಅಧ್ಯಯನದ ಪ್ರಕಾರ, ಪ್ರತಿಕಾಯಗಳು ನಿರಂತರವಾಗಿ ಅಭಿವೃದ್ಧಿಯಾಗುತ್ತ ಕರುಳಿನ ಕೋಶಗಳಲ್ಲಿ ಅಡಗಿರುವ ವೈರಸ್ ಅನ್ನು ಹುಡುಕಿ ನಾಶಪಡಿಸುತ್ತವೆ. ಹೀಗಾಗಿ, ಒಂದೊಮ್ಮೆ ಕೊರೋನಾ ಸೋಂಕು ಸುತ್ತಮುತ್ತ ಇದ್ದರೂ ದೇಹದ ಪ್ರತಿಕ್ರಿಯೆ ಬಹಳ ಚುರುಕಾಗಿತ್ತದೆ ಹಾಗೂ ಸೋಂಕು ಮರುಕಳಿಸುವುದಿಲ್ಲ ಎಂದಿದ್ದಾರೆ ಸಂಶೋಧಕರು.
“ರೋಗನಿರೋಧಕ ಶಕ್ತಿ ದೇಹವನ್ನು ಸಶಕ್ತವಾಗಿಡುವ ಮೂಲಕ, ವೈರಸ್ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಪುನಃ ಸೋಂಕು ಉಂಟಾಗದಂತೆ ಕಾಪಾಡುತ್ತದೆ. ಇದು ನಿಜಕ್ಕೂ ಅದ್ಭುತ’ ಎಂದಿದ್ದಾರೆ ತಜ್ಞರಾದ ಮೈಕೆಲ್ ಸಿ ನುಸೆನ್ಸ್ವೆಗ್. ಅಮೆರಿಕದ ನ್ಯೂಯಾರ್ಕ್ ನಗರದ ರೋಗಿಗಳನ್ನು ಇವರು ನಿರಂತರವಾಗಿ ತಪಾಸಣೆ ನಡೆಸಿದ್ದರು.
ಜಾಣತನವೆಂದರೆ ಇದು!
ಸೋಂಕಿನ ವಿರುದ್ಧ ದೇಹ ಸೃಷ್ಟಿಸುವ ಪ್ರತಿಕಾಯಗಳು ರಕ್ತದ ಪ್ಲಾಸ್ಮಾದಲ್ಲಿ ಹಲವು ವಾರ ಅಥವಾ ತಿಂಗಳುಗಳ ಕಾಲ ನೆಲೆಸುತ್ತದೆ. ಕೆಲ ಸಮಯದ ಬಳಿಕ ಇವುಗಳ ಸಂಖ್ಯೆ ಇಳಿಮುಖವಾಗುತ್ತದೆ. ರೋಗ ನಿರೋಧಕ ವ್ಯವಸ್ಥೆಯ ಜಾಣತನ ನೋಡಿ, ಸೋಂಕಿನ ವಿರುದ್ಧ ನಿರಂತರವಾಗಿ ಪ್ರತಿಕಾಯಗಳನ್ನು ಸೃಜಿಸುತ್ತಲೇ ಇರುವ ಬದಲು ಬಿ ಕೋಶಗಳು (ಬಿ ಲಿಂಫೋಸೈಟ್ಸ್- ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತಕಣ) ಸೋಂಕಿಗೆ ಕಾರಣವಾಗುವ ವೈರಸ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿಬಿಡುತ್ತದೆ. ಆಗ, ಒಂದೊಮ್ಮೆ ಎರಡನೇ ಬಾರಿ ಸೋಂಕಿಗೆ ಮುಖಾಮುಖಿಯಾದರೂ ತಕ್ಷಣ ಪ್ರತಿಕಾಯಗಳು ವೈರಸ್ ಎದುರಿಸಲು ಸಿದ್ಧವಾಗಿ, ಸೋಂಕು ಉಂಟಾಗದಂತೆ ಮಾಡಿಬಿಡುತ್ತವೆ.