ಮೆಂತ್ಯೆ ಅಥವಾ ಮೆಂತೆ ಕಹಿ ಗುಣ ಹೊಂದಿದ್ದರೂ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಮಧುಮೇಹ ನಿಯಂತ್ರಿಸುವಲ್ಲಿ ಮೆಂತ್ಯೆ ಕಾಳಿನ ಸೇವನೆ ಅತ್ಯುತ್ತಮ ವಿಧಾನ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಪೂರಕ ಈ ಮೆಂತ್ಯೆ. ಗ್ಯಾಸ್ಟ್ರಿಕ್, ಅಸಿಡಿಟಿಗೂ ಉತ್ತಮ ಮದ್ದು.
ಆರೋಗ್ಯ
♦ ಅರ್ಪಿತಾ ಕುಂದರ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ಪುತ್ತೂರು
newsics.com@gmail.com
ಭಾ ರತೀಯ ಅಡುಗೆಮನೆ ಎಂದರೆ ಸಾಂಬಾರ ಪದಾರ್ಥಗಳ ಆಗರ. ಅಂದರೆ, ಔಷಧಾಲಯವೇ ಮನೆಯಲ್ಲಿದ್ದಂತೆ. ಒಂದೊಂದು ಸಾಂಬಾರ ಪದಾರ್ಥವೂ ಅಗಣಿತ ಗುಣಗಳ ಔಷಧೀಯ ಗುಣಗಳನ್ನು ಹೊಂದಿದೆ. ಎಲ್ಲ ಸಾಂಬಾರ ಪದಾರ್ಥಗಳಿಗಿಂತ ಭಿನ್ನ ರುಚಿ, ಗುಣ ಹೊಂದಿರುವುದೆಂದರೆ ಮೆಂತ್ಯೆ. ಖಾರ, ಸಿಹಿ ಮಿಶ್ರಣದ ಸಾಂಬಾರ ಪದಾರ್ಥಗಳಿಗಿಂತ ಬೇರೆಯದೇ ಆದ ಕಹಿ ಗುಣ ಹೊಂದಿರುವ ಇದು ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ನಿತ್ಯದ ಆಹಾರದಲ್ಲಿ ಮೆಂತ್ಯೆ ಸೇವನೆ ಮಾಡುವುದು ಆರೋಗ್ಯವರ್ಧಕ. ಕಹಿಗುಣದಿಂದಾಗಿ ಇದನ್ನು ಅನೇಕರು ಇಷ್ಟಪಡುವುದಿಲ್ಲವಾದರೂ ಮೆಂತ್ಯೆ ಕಾಳಿಗಿರುವ ಔಷಧೀಯ ಗುಣ ಮಾತ್ರ ಅನನ್ಯ. ಏನೆಲ್ಲ ಪ್ರಯೋಜನ?
• ರಾತ್ರಿ ನೆನೆ ಹಾಕಿದ ಮೆಂತ್ಯೆ ಕಾಳನ್ನು ಬೆಳಗ್ಗೆ ಎದ್ದು ಸೇವಿಸಿದರೆ ಅದು ಕರುಳಿನ ಕ್ಯಾನ್ಸರ್ ತಡೆಯುತ್ತದೆ. ಅಷ್ಟೇ ಅಲ್ಲದೆ, ಎದೆಯುರಿ ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್, ಅಸಿಡಿಟಿಯನ್ನು ದೂರ ಮಾಡುತ್ತದೆ.
• ಒಂದು ಚಮಚ ಜೇನುತುಪ್ಪ ಮತ್ತು ನಿಂಬೆರಸದೊಡನೆ ಮೆಂತ್ಯೆ ಕಾಳನ್ನು ಸೇವನೆ ಮಾಡಿದರೆ ಜ್ವರ ಶಮನವಾಗುತ್ತದೆ. ಇದರಲ್ಲಿ ಇರುವಂತಹ ಗೋಂದಿನಂತಹ ಅಂಶವು ಗಂಟಲಿನ ಕಿರಿಕಿರಿ ದೂರ ಮಾಡುತ್ತದೆ.
• ಮಹಿಳೆಯರಿಗೆ ಈ ಕಾಳು ಅತ್ಯಂತ ಹೆಚ್ಚಾಗಿ ಉಪಯೋಗಕ್ಕೆ ಬರುತ್ತದೆ. ಋತುಚಕ್ರದ ಸಮಯದಲ್ಲಿ ಆಗುವ ಸೆಳೆತ ಹಾಗೂ ಹೊಟ್ಟೆ ನೋವು ನಿವಾರಣೆಗಾಗಿ ಇದನ್ನು ಸೇವಿಸುವುದು ಉತ್ತಮ.
ಸೌಂದರ್ಯವರ್ಧಕ
• ಸೌಂದರ್ಯವರ್ಧಕವನ್ನಾಗಿಯೂ ಮೆಂತ್ಯೆಯನ್ನು ಬಳಸುವುದು ಕಂಡುಬರುತ್ತದೆ. ಕೂದಲನ್ನು ಕಾಪಾಡುವಂತಹ ಪೋಷಕಾಂಶಗಳು ಮೆಂತ್ಯೆ ಕಾಳಿನಲ್ಲಿದೆ. ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳನ್ನು ಬೇಯಿಸಿಕೊಂಡು, ತೆಂಗಿನಎಣ್ಣೆ ಜತೆಗೆ ಸೇರಿಸಿ ತಲೆಗೆ ಸರಿಯಾಗಿ ಮಸಾಜ್ ಮಾಡಿಕೊಂಡರೆ ಕೂದಲು ಉದುರುವುದನ್ನು ತಪ್ಪಿಸಬಹುದು. ತಲೆಹೊಟ್ಟು ನಿವಾರಣೆಗೆ ಕೂಡ ಇದು ಸಹಕಾರಿ.
• ಮುಖದ ಮೊಡವೆ ಮತ್ತು ಮೈಮೇಲಿನ ಗುಳ್ಳೆಗಳನ್ನು ಕೂಡ ಇದು ನಿವಾರಣೆ ಮಾಡುತ್ತದೆ.
• ಜೀರ್ಣಕ್ರಿಯೆಯ ಸಮಸ್ಯೆಯಿದ್ದರೆ ಮೆಂತ್ಯೆ ನೆನೆಸಿಟ್ಟು ಅದರ ನೀರನ್ನು ಕುಡಿದರೆ ಒಳ್ಳೆಯದು.
• ಗರ್ಭಕೋಶದ ಸಂಕೋಚನಕ್ಕೆ ಮೆಂತ್ಯೆ ತುಂಬ ಲಾಭಕಾರಿ. ಇದರಿಂದ ಹೆರಿಗೆ ಸರಾಗವಾಗಿ ಆಗುತ್ತದೆ.
• ಮೆಂತ್ಯೆ ಪುಡಿಯನ್ನು ಮಿತವಾಗಿ ಬೆಳಗ್ಗೆ ಮಜ್ಜಿಗೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣ ಸಾಧ್ಯ.
• ಮೆಂತ್ಯೆ ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಕಾಳು ಮಾತ್ರವಲ್ಲ, ಮೆಂತ್ಯೆ ಸೊಪ್ಪು ಕೂಡ ಆರೋಗ್ಯಕಾರಿಯಾಗಿದೆ. ಇದನ್ನು ಆಗಾಗ ಸೇವಿಸುವುದರಿಂದ ಮೈಕೈ ನೋವು, ಬೆನ್ನು ನೋವು, ಸೊಂಟ ನೋವು ನಿವಾರಣೆಯಾಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನದಿರಿ