ಸೊಳ್ಳೆಗಳು ನಮಗೇಕೆ ಕಚ್ಚುತ್ತವೆ ಎಂಬ ಪ್ರಶ್ನೆ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತದೆ. ಪ್ರಿನ್ಸ್ ಟನ್ ವಿವಿ ಸಂಶೋಧಕರು ಅಚ್ಚರಿದಾಯಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ದೇಹಕ್ಕೆ ನೀರಿನ ಅಗತ್ಯವಿದ್ದಾಗ ಮನುಷ್ಯರ ರಕ್ತ ಹೀರುವ ಚಾಳಿಯನ್ನು ಅವು ಅಭ್ಯಾಸ ಮಾಡಿಕೊಂಡಿವೆ ಎಂದಿದ್ದಾರೆ.
♦ ವಿಧಾತ್ರಿ
newsics.com@gmail.com
ಮೂ ರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ಈ ಪುಟಾಣಿ ಕೀಟವನ್ನು ನೋಡಿಯೇ ಬಂದಿದ್ದಿರಬೇಕು! ವಿಶ್ವಾದ್ಯಂತ ಲಕ್ಷಾಂತರ ಜನರ ಪ್ರಾಣ ತೆಗೆಯುವ ಕೆಲಸವನ್ನು ಇದು ಸತತವಾಗಿ, ಅತ್ಯಂತ ಸುಲಭವಾಗಿ ಮಾಡುತ್ತಲೇ ಇರುತ್ತದೆ. ಹೀಗಾಗಿಯೇ ರೋಗ ಹರಡುವ ಕೀಟಗಳಲ್ಲಿಯೇ ಇದು “ಗ್ರೇಟೆಸ್ಟ್ ಭೀತಿ ಹುಟ್ಟಿಸುವಂಥದ್ದು, ವಿನಾಶಕಾರಿ’ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟಿದೆ. ಇಷ್ಟಕ್ಕೂ ಈ ಕೀಟ ನಮಗೆಲ್ಲರಿಗೂ ಚಿರಪರಿಚಿತ. ಮಲೇರಿಯಾ, ಡೆಂಗ್ಯೂ, ಹಳದಿ ಜ್ವರ, ಚಿಕೂನ್ ಗುನ್ಯಾ ಸೇರಿದಂತೆ ಹಲವಾರು ಮಾರಣಾಂತಿಕ ಜ್ವರ ಹಾಗೂ ಕಾಯಿಲೆಗಳನ್ನು ತರಬಲ್ಲ ಆ ಕೀಟ ಬೇರ್ಯಾವುದೂ ಅಲ್ಲ- ಸೊಳ್ಳೆ.
ತೆರೆದ ಪ್ರದೇಶದಲ್ಲಿ ಬೆಳೆಯುವ ಸೊಳ್ಳೆ ಮನುಷ್ಯ ಹಾಗೂ ಇತರ ಪ್ರಾಣಿಗಳ ರಕ್ತವನ್ನು ಹೀರಿಕೊಂಡೇ ಬೆಳೆದು, ಜೀವಿಸುತ್ತವೆ. ಹೆಣ್ಣುಸೊಳ್ಳೆಗಳು ಮಾತ್ರವೇ ರಕ್ತ ಹಿಂಡುತ್ತವೆ ಎನ್ನುವುದು ಅಧ್ಯಯನಗಳಿಂದ ಸಾಬೀತಾದ ಸಂಗತಿ.
ಕೆಲವೇ ಜಾತಿಯ ಸೊಳ್ಳೆಗಳು
ಮನುಷ್ಯನ ಪ್ರಾಣಕ್ಕೆ ಎರವಾಗುವ ಸೊಳ್ಳೆ ಯಾಕಾಗಿ ರಕ್ತವನ್ನು ಕುಡಿಯಬಹುದು ಎನ್ನುವ ಪ್ರಶ್ನೆ ಒಂದಲ್ಲ ಒಂದು ಬಾರಿಯಾದರೂ ಎಲ್ಲರಿಗೂ ಕಾಡಿರಬಹುದು. ಇದೀಗ ಈ ಪ್ರಶ್ನೆಗೆ ವಿಜ್ಞಾನಿಗಳು ಅಚ್ಚರಿದಾಯಕ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ಲಕ್ಷಾಂತರ ವರ್ಷಗಳ ಮೊದಲು ಸೊಳ್ಳೆಗಳು ಮನುಷ್ಯರ ರಕ್ತ ಹೀರುತ್ತಿರಲಿಲ್ಲ. ಯಾವುದೇ ಜೀವಿಗಳ ರಕ್ತ ಹೀರುವ ಅಭ್ಯಾಸ ಸೊಳ್ಳೆಗಳಿಗೆ ಇರಲಿಲ್ಲ. ಆದರೆ, ಕಾಲಾನುಕ್ರಮದಲ್ಲಿ ವಾತಾವರಣದಲ್ಲಾದ ಬದಲಾವಣೆಯಿಂದ ಸೊಳ್ಳೆಗಳು ಮಾನವರ ರಕ್ತ ಹೀರುವ ಧೈರ್ಯ ಮಾಡಿದವು. ಅಷ್ಟಕ್ಕೂ ಎಲ್ಲ ಸೊಳ್ಳೆಗಳೂ ರಕ್ತ ಹೀರುವುದಿಲ್ಲವಂತೆ. ಕೆಲವೇ ಜಾತಿಯ ಸೊಳ್ಳೆಗಳು ಮಾತ್ರವೇ ರಕ್ತ ಹೀರುತ್ತವೆ.
ದಾಹ ತೀರಿಸಿಕೊಳ್ಳಲು ರಕ್ತ!
ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್ ಟನ್ ವಿವಿ ವಿಜ್ಞಾನಿಗಳು” ನ್ಯೂಸೈಂಟಿಸ್ಟ್’ ಎನ್ನುವ ನಿಯತಕಾಲಿಕದಲ್ಲಿ ಪ್ರಕಟಿಸಿರುವ ಅಧ್ಯಯನ ಲೇಖನದ ಪ್ರಕಾರ, ಡೆಂಗ್ಯು, ಚಿಕೂನ್ ಗುನ್ಯಾ, ಹಳದಿ ಜ್ಷರ ಮುಂತಾದವುಗಳನ್ನು ಉಂಟುಮಾಡಬಲ್ಲ ಈಡೀಸ್ ಇಜಿಪ್ಟಿ ಸೊಳ್ಳೆಯ ಹೆಚ್ಚಿನ ಪ್ರಭೇದಗಳು ಮನುಷ್ಯರನ್ನು ಕಡಿಯುತ್ತವೆ.
ಲಕ್ಷಾಂತರ ವರ್ಷಗಳ ಹಿಂದೆ ಸೊಳ್ಳೆಗಳು ನೀರು, ಮತ್ತಿತರ ಆಹಾರ ಸೇವಿಸಿ ಬದುಕುತ್ತಿದ್ದರು. ಯಾವಾಗ ವಾತಾವರಣ ಶುಷ್ಕವಾಗಿ, ನೀರಿಲ್ಲದೆ ಒಣಗಲು ಆರಂಭವಾಯಿತೋ ಆಗ ಅವು ದಾಹ ತೀರಿಸಿಕೊಳ್ಳಲು ಮನುಷ್ಯರು ಹಾಗೂ ಇತರ ಪ್ರಾಣಿಗಳ ರಕ್ತ ಕುಡಿಯಲು ಆರಂಭಿಸಿದವು ಎನ್ನುವುದು ಈ ಸಂಶೋಧಕರ ನಿಲುವು. ಎಲ್ಲಿ ನೀರು ಚೆನ್ನಾಗಿರುತ್ತದೆಯೋ ಅಲ್ಲಿ ಸೊಳ್ಳೆಗಳಿಗೆ ಮನುಷ್ಯರ ರಕ್ತ ಬೇಕಾಗಿಲ್ಲ. ಆದರೆ, ನೀರಿನ ಕೊರತೆಯಿರುವ ಕಡೆಗಳಲ್ಲಿ ಕಚ್ಚುವುದು ಕಂಡುಬಂದಿದೆ. ಅಂದರೆ, ತಮ್ಮ ದೇಹಕ್ಕೆ ಬೇಕಾದ ದ್ರವಾಹಾರ ಪೂರೈಸಿಕೊಳ್ಳಲೆಂದು ಅವು ಕಚ್ಚುವುದನ್ನು ಅಭ್ಯಾಸ ಮಾಡಿಕೊಂಡಿವೆ ಎನ್ನುತ್ತಾರೆ ಪ್ರಿನ್ಸ್ ಟನ್ ವಿವಿ ಸಂಶೋಧಕರು.