newsics.com
ಒಂದು ಬೇರಿಗೆ ಒಂದೇ ಎಲೆ ಚಿಗುರುವ, ದುಂಡು ದುಂಡಾಗಿ, ಬಹಳ ಉಪಯೋಗಕಾರಿ ಅಂಶಗಳನ್ನು ಹೊಂದಿರುವ ಸಸ್ಯ ಈ ಒಂದೆಲಗ. ಒಂದೆಲಗ ಅಥವಾ ಬ್ರಾಹ್ಮೀಯನ್ನು ಔಷಧ ಹಾಗೂ ಆಹಾರ ರೂಪವಾಗಿಯೂ ತೆಗೆದುಕೊಳ್ಳಬಹುದು. ಈ ಒಂದೆಲಗ ಸಸ್ಯಕ್ಕೆ ನೀರು ಹಾಗೂ ಮಣ್ಣು ಸಮೃದ್ಧಿಯಾಗಿರಬೇಕು. ಕರಾವಳಿ ಪರಿಸರದಲ್ಲಿ, ಮಲೆನಾಡಿನ ಕಡೆಯ ಅಡಕೆ ತೋಟಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು.
ಒಂದೆಲಗವನ್ನು ಜ್ಯೂಸ್, ತಂಬುಳಿ, ಲೇಹ್ಯ ಹೀಗೆ ವಿವಿಧ ರೂಪಗಳಲ್ಲಿ ನಾವು ತೆಗೆದುಕೊಳ್ಳಬಹುದು. ಅನೇಕ ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಒಂದೆಲಗವನ್ನು ಆದಷ್ಟು ಹಸಿಯಾಗಿ ಸೇವಿಸುವುದು ಬಹಳ ಉತ್ತಮ. ಇದನ್ನು ಕಾಯಿಸದೆ ಹಾಗೆಯೇ ಹಸಿ ಎಲೆಯನ್ನು ಜ್ಯೂಸ್ ಅಥವಾ ಹಾಗೆಯೇ ಬೆಳಗ್ಗಿನ ಹೊತ್ತಿಗೆ ಖಾಲಿ ಹೊಟ್ಟೆಗೆ ತಿಂದರೆ ಇದರಿಂದ ನೂರಕ್ಕೆ ನೂರರಷ್ಟು ಫಲವನ್ನು ನಾವು ಪಡೆದುಕೊಳ್ಳಬಹುದು. ಒಂದೆಲಗ ಒಂದು ರೀತಿಯಲ್ಲಿ ಸರಸ್ವತಿ ದತ್ತವೆಂದೇ ಹೇಳಬಹುದು.
ಈ ಎಲೆಗಳು ಮನುಷ್ಯನ ದೇಹಕ್ಕೆ ಬಹಳ ಉಪಯೋಗಕಾರಿ ಅಂಶಗಳನ್ನು ಒಳಗೊಂಡಿದೆ.
• ಒಂದೆಲಗವನ್ನು ನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಎಲೆಯಂತೆ ನಿತ್ಯ ಸೇವಿಸುತ್ತಾ ಬಂದರೆ, ಮನುಷ್ಯನ ಬುದ್ಧಿಶಕ್ತಿಯು ಬಹಳ ಚುರುಕಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು, ಎಂದರೆ ಆರು ತಿಂಗಳು ಕಳೆದ ಮಕ್ಕಳಿಗೆ ಪ್ರತಿನಿತ್ಯ ಈ ಎಲೆಯನ್ನು ಬುಡ ಸಮೇತವಾಗಿ ಕೊಯ್ದು, ಚೆನ್ನಾಗಿ ಅರೆದು ಅದರ ರಸವನ್ನು ತೆಗೆದು ಸ್ವಲ್ಪ ಜೇನುತುಪ್ಪ ಬೆರೆಸಿ, ಬೆಳಗ್ಗಿನ ಹೊತ್ತಿಗೆ ಕೊಟ್ಟರೆ ಮಗುವಿನ ಬುದ್ಧಿ ಶಕ್ತಿಯು ಚೆನ್ನಾಗಿ ವೃದ್ಧಿಯಾಗುತ್ತದೆ.
• ನಿತ್ಯ ಬ್ರಾಹ್ಮೀ ಅಥವಾ ಒಂದೆಲಗವನ್ನು ಸೇವಿಸುವುದರಿಂದ ರಕ್ತದೊತ್ತಡ ಹಾಗೂ ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.
• ಒಂದೆಲಗ ಸೌಂದರ್ಯವರ್ಧಕವೂ ಹೌದು. ಬ್ರಾಹ್ಮಿಯನ್ನು ಚೆನ್ನಾಗಿ ಜಜ್ಜಿ ಮನೆಯಲ್ಲಿ ಮಾಡಿದ ಕೊಬ್ಬರಿ ಎಣ್ಣೆಗೆ ಹಾಕಿಟ್ಟುಕೊಂಡು ಅದನ್ನು ನಿತ್ಯ ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ಕೂದಲಿನ ಸೌಂದರ್ಯ ವೃದ್ಧಿಯಾಗುತ್ತದೆ. ಕಪ್ಪಾದ ಉದ್ದನೆಯ ಕೂದಲನ್ನು ನಾವು ಪಡೆದುಕೊಳ್ಳಬಹುದು.
• ಒಂದೆಲಗವು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಯಕೃತ್ತು ದೇಹದಿಂದ ವಿಷವನ್ನು ಹೊರ ಹಾಕುವ ಅತ್ಯಂತ ನಿರ್ಣಾಯಕ ಅಂಗವಾಗಿದೆ. ಆಯುರ್ವೇದದ ಪ್ರಕಾರ, ಬ್ರಾಹ್ಮಿ ಯಕೃತ್ತಿನ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ದೇಹಕ್ಕೆ ಸೇರಿದ ವಿಷ ಅಂಶವನ್ನು ಹೊರತೆಗೆಯಲು ಬೆಂಬಲಿಸುತ್ತದೆ.
• ಒಂದೆಲಗವನ್ನು ಸೇವಿಸುವುದರಿಂದ ನಿದ್ರಾಹೀನತೆಯ ಸಮಸ್ಯೆಯಿಂದ ಹೊರ ಬರಬಹುದು. ಈಗಿನ ಕಾಲದಲ್ಲಿ ಹೆಚ್ಚಿನ ಜನರಿಗೆ ನಿದ್ರಾಹೀನತೆ ಕಾಡುತ್ತಿರುತ್ತದೆ. ಆ ಸಮಸ್ಯೆಗೆ ಇದು ವರವಾಗಿದೆ.
• ಒಂದೆಲಗವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೆನಪಿಡಬೇಕಾದ ವಿಷಯ:
ಮನುಷ್ಯನು ತನ್ನ ಒತ್ತಡದ ಜೀವನದಿಂದ ಸಸ್ಯಗಳನ್ನು ಬೆಳೆಸಲು, ಅದಕ್ಕೆ ನೀರು ಹಾಕಲು ಸಮಯವನ್ನು ಕೊಡಲು ವಿಫಲನಾಗಿದ್ದಾನೆ. ಹಾಗಾಗಿ ಹೆಚ್ಚಿನ ಜನರು ಒಂದೆಲಗವನ್ನು ಬಾಣಲೆಯಲ್ಲಿ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಇದು ಒಂದೆಲಗದ ನೈಸರ್ಗಿಕ ಪ್ರಯೋಜನಗಳಲ್ಲಿ ಶೇಕಡ 20ರಷ್ಟೂ ಲಾಭ ಕೊಡುವುದಿಲ್ಲ. ಹಾಗಾಗಿ ಇದನ್ನು ಹಸಿಯಾಗಿಯೇ ಸೇವಿಸುವುದು ಬಹಳ ಮುಖ್ಯ ಹಾಗೂ ಉತ್ತಮ.