ಇಮ್ಯುನಿಟಿ ಬೂಸ್ಟರ್ ರೆಸಿಪಿ 7
– ಪವಿತ್ರಾ ಜಿಗಳೇಮನೆ
newsics.com@gmail.com
ಆಧುನಿಕ ಯುಗದ ಪ್ರಭಾವದಿಂದ ಬದಲಾದ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯ ಮತ್ತು ಆಹಾರ ಪದ್ದತಿ ಎರಡೂ ಬದಲಾವಣೆಗೊಂಡಿದೆ. ಜಂಕ್ ಫುಡ್‍ಗಳಿಗೆ ಮೊರೆಹೋಗಿ ಆರೋಗ್ಯಯುತ ಸಾಂಪ್ರದಾಯಿಕ ಆಹಾರಗಳತ್ತ ನಿರಾಸಕ್ತಿ ಹೊಂದಿದ್ದೇವೆ. ದೇಹದ ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಂಪ್ರದಾಯಿಕ ಆಹಾರಗಳಲ್ಲಿ ರಾಗಿ ಕೂಡ ಒಂದು. ರಾಗಿಯಲ್ಲಿ ಯಥೇಚ್ಛವಾದ ಕ್ಯಾಲ್ಶಿಯಂ ಇದೆ, ಹೀಗಾಗಿ ಮಕ್ಕಳಿಂದ ಹಿಡಿದು, ಗರ್ಭಿಣಿಯರಿಗೆ, ವೃದ್ಧರವರೆಗೂ ಅತೀ ಅಗತ್ಯ ಆಹಾರ.
ರಾಗಿ ಸೇವನೆಯಿಂದ ದೇಹಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುತ್ತದೆ. ಇದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೆ ರಾಗಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ರಾಗಿಯಲ್ಲಿನ ಅಧಿಕ ಪ್ರಮಾಣದ ಪ್ರೊಟೀನ್, ಟ್ರಿಪ್ಟೋಫಾನ್, ಸಿಸ್ಟೀನ್, ಮೆಥಿಯೋನಿನ್, ಅಮೈನೊ ಆಮ್ಲಗಳು ದೇಹವನ್ನು ಸದೃಢವಾಗಿರಿಸಲು ಸಹಾಯಕವಾಗಿದೆ. ಮಧುಮೇಹಿಗಳಿಗೆ ರಾಗಿಮುದ್ದೆಯಂತಹ ತಿನಿಸು ಹೇಳಿಮಾಡಿಸಿದ ಆಹಾರವಾಗಿದೆ. ಮುಖ್ಯವಾಗಿ ರಕ್ತಹೀನತೆಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ರಾಗಿ ಸಹಾಯ ಮಾಡುತ್ತದೆ. ಹೀಗಾಗಿ ರಾಗಿಯನ್ನು ಅತ್ಯಂತ ಪೌಷ್ಟಿಕ ಆಹಾರ ಎನ್ನುತ್ತಾರೆ. ರಾಗಿಯ ಇನ್ನೊಂದು ವಿಶಿಷ್ಟ ಗುಣವೆಂದರೆ ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಲು ನೆರವಾಗುತ್ತದೆ. ಹೌದು, ರಾಗಿಯಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.
ರಾಗಿ ಮುದ್ದೆ
ಬೇಕಾಗುವ ಸಾಮಗ್ರಿ
ರಾಗಿ ಹಿಟ್ಟು- 2 ಕಪ್
ತುಪ್ಪ- 1ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- 2 ಟೀ ಸ್ಪೂನ್
ಒಂದು ಪಾತ್ರೆಯಲ್ಲಿ 2 ಲೋಟ ನೀರು ಮತ್ತು 1 ಚಮಚ ಎಣ್ಣೆ ಹಾಕಿ, ನೀರನ್ನು ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದಾಗ ರಾಗಿ ಹಿಟ್ಟನ್ನು ನಿಧಾನವಾಗಿ ಹಾಕುತ್ತಾ ನಿಧಾನವಾಗಿ ಕಲಕುತ್ತಾ ಇರಿ.
ಕಡಿಮೆ ಉರಿಯಲ್ಲಿ ನಿಧಾನವಾಗಿ ಕಲುತ್ತಾ ಇರಿ, ಆದರೆ ಜಾಗ್ರತೆ, ರಾಗಿ ಹಿಟ್ಟು ಗಂಟಾಗದಂತೆ ನೋಡಿಕೊಳ್ಳಿ. ಸುಮಾರು 5-10 ನಿಮಿಷಗಳ ಕಾಲ ಕಲಕುತ್ತಾ ಇರಿ. ನಂತರ ಈ ಮಿಶ್ರಣವನ್ನು ಒಂದು ತಟ್ಟೆಯ ಮೇಲೆ ಇಟ್ಟುಕೊಳ್ಳಿ. ಬಳಿಕ ಕೈಗೆ ತುಪ್ಪ ಸವರಿಕೊಂಡು ನಿಧಾನವಾಗಿ ಮೃದುವಾದ ಮುದ್ದೆಯಾಗುವಂತೆ ಮಾಡಿದರೆ ಆರೋಗ್ಯಕ್ಕೆ ಹಿತವಾದ ರಾಗಿ ಮುದ್ದೆ ಸವಿಯಲು ಸಿದ್ಧ.
ತಯಾರಾದ ರಾಗಿ ಮುದ್ದೆಯನ್ನು ಬಸಳೆ ಸೊಪ್ಪಿನ ಸಾರಿನೊಂದಿಗೆ ಸವಿದರೆ ಇನ್ನಷ್ಟು ಸ್ವಾದಿಷ್ಟವಾಗಿರುತ್ತದೆ.