newsics.com
ಒಂದು ಮಗುವನ್ನು ಹೆರುವುದು ಎಂದರೆ ಸಾಮಾನ್ಯದ ವಿಷಯವಲ್ಲ. ಹೆತ್ತ ತಾಯಿಯು ಆಕೆಯ ಜೀವವನ್ನು ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡುತ್ತಾಳೆ. ಹೆರಿಗೆ ಸಮಯದಲ್ಲಿ ಉಂಟಾಗುವ ನೋವು ಹಾಗೂ ಪ್ರಸವದಿಂದ ಆಕೆಯ ದೇಹದ ಮೂಳೆಗಳು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ. ಹೆರಿಗೆಯಾದ ಮರುದಿನದಿಂದಲೇ ಆಕೆಯ ಬಾಣಂತಿ ಆತಿಥ್ಯ ಶುರುವಾಗಲೇಬೇಕು.
ಆಕೆ ಕಳೆದುಕೊಂಡ ಹಳೆಯ ಚೇತನ ಹಾಗೂ ದೇಹದ ಗಟ್ಟಿತನಕ್ಕೆ ಬಾಣಂತನದಲ್ಲಿ ಅನೇಕ ರೀತಿಯ ಮನೆಮದ್ದುಗಳನ್ನು ಮಾಡಲಾಗುತ್ತದೆ. ಅದರಲ್ಲಿ ಒಂದು ವಿಶಿಷ್ಟವಾಗಿ ಉಪಯೋಗಿಸಲಾಗುವ ಕಾಳು ಎಂದರೆ ಅದು ಮೆಂತ್ಯೆ ಕಾಳು. ಈ ಮೆಂತ್ಯೆಯನ್ನು ಲೇಹ್ಯದ ರೂಪದಲ್ಲಿ ತಯಾರಿಸಿ ಬಾಣಂತಿಗೆ ನೀಡಲಾಗುತ್ತದೆ. ಹೆರಿಗೆಯಾದ ಎರಡು ತಿಂಗಳಿನ ನಂತರವಷ್ಟೇ ಈ ಮೆಂತ್ಯ ಲೇಹವನ್ನು ಕೊಡಲು ಪ್ರಾರಂಭಿಸಬಹುದು.
ಮೆಂತ್ಯ ಲೇಹ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು :
• ಒಂದು ಪಾವು ಮೆಂತ್ಯ
• ಒಂದು ಮುಷ್ಟಿ ಚಿರೋಟಿ ರವೆ
• ಬೆಲ್ಲ
• ಕಾಲು ಕೆ.ಜಿ ತುಪ್ಪ
• ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಮೆಂತ್ಯೆಯನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ಮೆಂತ್ಯ ಚೆನ್ನಾಗಿ ನೆಂದು ಉಬ್ಬಿ ಬಂದ ನಂತರ, ಅದನ್ನು ಚಿರೋಟಿ ರವೆಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಟ್ಟುಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಿ ತುಪ್ಪದಲ್ಲಿ ಹುರಿದುಕೊಳ್ಳಬೇಕು. ಚೆನ್ನಾಗಿ ಹುರಿದ ನಂತರ ಅದಕ್ಕೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ, ಕುದಿಯುವ ವೇಳೆಯಲ್ಲಿ, ಅದಕ್ಕೆ ಸವಳು ಮುರಿಯುವಷ್ಟು ಉಪ್ಪು ಸೇರಿಸಬೇಕು. ಬೇಕಾದಲ್ಲಿ ಇನ್ನು ಸ್ವಲ್ಪ ತುಪ್ಪವನ್ನು ಸೇರಿಸಿ ಚೆನ್ನಾಗಿ ಕುದಿಸಿ ಲೇಹ್ಯದ ಹದ ಬಂದ ತಕ್ಷಣ ಬೆಂಕಿಯನ್ನು ನಂದಿಸುವುದು.
ಹೀಗೆ ತಯಾರಿಸಿದ ಲೇಹ್ಯವನ್ನು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಾಣಂತಿಗೆ ಹಾಲಿನ ಜೊತೆಯಲ್ಲಿ ತಿನ್ನಲಿಕ್ಕೆ ಕೊಟ್ಟರೆ, ಬಾಣಂತಿಯ ಮೂಳೆಗಳು ಗಟ್ಟಿಯಾಗುವುದಲ್ಲದೆ, ಎದೆ ಹಾಲನ್ನು ಸಹ ಹೆಚ್ಚಿಸಲು ಸಹಾಯಕವಾಗುತ್ತದೆ.