Monday, March 1, 2021

ಮಕ್ಕಳ ಕ್ಷಮತೆ ಕುಗ್ಗಿಸುವ ಜಂತುಹುಳು

ಇಂದು (ಫೆಬ್ರವರಿ 10) ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ. ಇದರ ಅಂಗವಾಗಿ ಪ್ರತಿ ಶಾಲೆಗಳಲ್ಲಿ ಫೆ.15ವರೆಗೆ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗುತ್ತದೆ.

   ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ   

♦ ಪ್ರಮಥ
newsics.com@gmail.com


 ಕ್ಕಳು ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ, ಪದೇ ಪದೆ ಮಗ್ಗಲು ಬದಲಿಸುತ್ತಿದ್ದರೆ, ಹೊಟ್ಟೆತುಂಬ ತಿಂದರೂ ದುರ್ಬಲವಾಗಿದ್ದರೆ “ಹೊಟ್ಟೆಯಲ್ಲಿ ಜಂತುವಾಗಿರಬೇಕು, ಔಷಧಿ ಹಾಕಿಸಿ’ ಎನ್ನವ ಸಲಹೆ ಕೇಳಿಬರುವುದು ಸಾಮಾನ್ಯ. ವೈದ್ಯರ ಬಳಿ ಕರೆದೊಯ್ದರೆ ಪ್ರತಿ ಆರು ತಿಂಗಳಿಗೆ ಜಂತುಹುಳುವಿಗೆ ಔಷಧ ನೀಡಬೇಕೆಂದು ತಿಳಿಸುತ್ತಾರೆ. ಮಕ್ಕಳ ಆರೋಗ್ಯಕ್ಕೆ, ಬೆಳವಣಿಗೆಗೆ ಅಷ್ಟರಮಟ್ಟಿಗೆ ತಡೆಯೊಡ್ಡುವ ಜೀವಿ ಜಂತುಹುಳು.
ಮಾನವ ಕರುಳಿನಲ್ಲಿ ನೆಲೆಸುವ ಪರೋಪಜೀವಿಯಾಗಿರುವ ಜಂತುಹುಳು ಮಕ್ಕಳ ಆರೋಗ್ಯಕ್ಕೆ ಮಾರಕವಾಗಿ ಕಾಡಬಲ್ಲದು. ಮಕ್ಕಳಿಗೆ ಮಾತ್ರವಲ್ಲ, 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಭಾರತ ಜಂತುಹುಳು ಸೋಂಕನ್ನು ಅತ್ಯಧಿಕವಾಗಿ ಹೊಂದಿರುವ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ದೇಶದಲ್ಲಿ ಸರಿಸುಮಾರು 20 ಕೋಟಿಗೂ ಅಧಿಕ ಮಕ್ಕಳು ಜಂತುಹುಳು ಬಾಧೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಲು ಪ್ರಮುಖ ಕಾರಣವೇ ಜಂತುಹುಳು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ 10ರಲ್ಲಿ 7 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದಕ್ಕೆ ಜಂತುಹುಳು ಬಾಧೆಯೇ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.
ಮಾನವ ಮಲದಿಂದ ಹೊರಬಂದ ಜಂತುಹುಳುವಿನ ಮೊಟ್ಟೆಗಳು ಮಣ್ಣಿನಲ್ಲಿ 2-3 ವಾರಗಳ ಕಾಲ ಬದುಕಿರುತ್ತವೆ. ಸಂಪರ್ಕಕ್ಕೆ ಬಂದ ತತ್ತಿಗಳು ಪುನಃ ಮಾನವನ ದೇಹ ಸೇರುತ್ತವೆ. ಅಥವಾ ಕೆಲವೊಮ್ಮೆ ತತ್ತಿ ಒಡೆದು ಹುಳು ಹೊರಬಂದ ಬಳಿಕವೂ ದೇಹ ಪ್ರವೇಶಿಸಿ ರಕ್ತಗತವಾಗುವುದೂ ಇದೆ ಎಂದರೆ ಇವುಗಳ ಸಾಮರ್ಥ್ಯದ ಅರಿವಾಗುತ್ತದೆ!
ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಿಂದ ಫೆಬ್ರವರಿ 10ರಂದು ಜಂತುಹುಳು ನಿವಾರಣಾ ದಿನವನ್ನು ಆಚರಿಸುತ್ತಿದೆ. ಇದಕ್ಕೂ ಮುನ್ನ ಪ್ರತಿವರ್ಷ ಜಂತುಹುಳು ಮಾತ್ರೆಯನ್ನು ನೀಡಲಾಗುತ್ತಿದ್ದರೂ ಇದಕ್ಕಾಗಿ ಒಂದು ದಿನವನ್ನು ನಿಗದಿ ಮಾಡಬೇಕೆನ್ನುವ ಉದ್ದೇಶದಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಫೆ.10ರಂದು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳಲ್ಲಿ ಈ ದಿನವನ್ನು ಆಚರಿಸುವ ಮೂಲಕ ಜಂತುಹುಳು ನಿವಾರಣೆಗೆ ಮಾತ್ರೆಗಳನ್ನು ವಿತರಿಸುತ್ತದೆ. 1-19 ವಯೋಮಾನದವರಿಗೆ ಜಂತುಹುಳು ಮಾತ್ರೆಯನ್ನು ನೀಡಲಾಗುತ್ತದೆ.
ಕಾಲಕಾಲಕ್ಕೆ ಕರುಳಿನಲ್ಲಿರುವ ಜಂತುಹುಳುವನ್ನು ನಿವಾರಣೆ ಮಾಡಿಕೊಳ್ಳುವುದು ಅಗತ್ಯ. ಜಂತುಹುಳು ಸರಿಯಾಗಿ ನಿವಾರಣೆಯಾಗದಿದ್ದರೆ ಇವುಗಳ ಸಂಖ್ಯೆ ಅಧಿಕವಾಗಿ, ಕರುಳಿನಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ. ಆಗ ದೇಹಕ್ಕೆ ಹಾನಿಯಾಗಲು ಆರಂಭವಾಗುತ್ತದೆ.
ಜಂತುಹುಳು ಎಷ್ಟು ಅಪಾಯಕಾರಿ?
ಜಂತುಹುಳು ಹೆಚ್ಚಳದಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಕಂಡುಬರುತ್ತದೆ. ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರವುಂಟಾಗಿ ತೂಕ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಲ್ಲಿ ದೀರ್ಘಾವಧಿ ಆರೋಗ್ಯದ ಮೇಲೆ ಪರಿಣಾಮವುಂಟಾಗುತ್ತದೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಏಕಾಗ್ರತೆಯ ಸಮಸ್ಯೆ ಉಂಟಾಗುತ್ತದೆ. ಕಲಿಕಾ ಸಾಮರ್ಥ್ಯ, ಉತ್ಪಾದನಾ ಸಾಮರ್ಥ್ಯವೂ ಕುಸಿಯುತ್ತದೆ.
ಮಕ್ಕಳಲ್ಲಿ ಹುಳುವಾದ ಲಕ್ಷಣಗಳು
• ಗುದದ್ವಾರದ ಬಳಿ ರಾತ್ರಿ ಸಮಯದಲ್ಲಿ ತುರಿಕೆ
• ಗುದದ್ವಾರದ ಸುತ್ತಮುತ್ತ ಕೆಂಪಾಗುವುದು
• ಸದಾಕಾಲ ಚಡಪಡಿಕೆ, ನಿದ್ರೆಯಲ್ಲೂ ಪದೇ ಪದೆ ಮಗ್ಗಲು ಬದಲಿಸುವುದು
ನೈಸರ್ಗಿಕ ವಿಧಾನವನ್ನೂ ಯತ್ನಿಸಬಹುದು
• ಉಗುರು ಬಿಸಿಯಾಗಿರುವ ಹಾಲಿಗೆ ಒಂದು ಟೇಬಲ್ ಚಮಚದಷ್ಟು ಪಪ್ಪಾಯ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ತೆಗೆದುಕೊಳ್ಳುವುದು.
• ಅರಿಶಿಣವನ್ನು ಆಹಾರದಲ್ಲಿ ಬಳಕೆ ಮಾಡುವುದು. ಹಾಲಿಗೆ ಅರಿಶಿಣ ಸೇರಿಸಿ ಕುಡಿಯುವುದು. ಅರಿಶಿಣದಲ್ಲಿ ಸೂಕ್ಷ್ಮಾಣುಜೀವಿ ನಾಶಕ ಗುಣವಿದೆ.
• ಕುಂಬಳಕಾಯಿ ಬೀಜದಲ್ಲಿ ಕುಕುರ್ಬಿಟಾಸಿನ್ ಎನ್ನುವ ಅಂಶವಿರುತ್ತದೆ. ಇದು ಸಹ ಪರಾವಲಂಬಿಜೀವಿಗಳ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದರ ಬೀಜದ ಚಿಟಿಕೆ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿಕೊಂಡು ಸೇವನೆ ಮಾಡಬಹುದು.
ಹಲವು ರೀತಿಯ ಹುಳುಗಳು
ನಮ್ಮ ದೇಹದಲ್ಲಿ ಹಲವು ರೀತಿಯ ಪರಾವಲಂಬಿ ಹುಳುಗಳು ಜೀವಿಸುತ್ತವೆ. ಅವುಗಳಲ್ಲಿ ಮುಖ್ಯವಾದವು, ಕೊಕ್ಕೆಹುಳು, ಲಾಡಿಹುಳು, ಹಂದಿ-ಹಸುಗಳ ಲಾಡಿಹುಳು, ನಾಯಿ ಲಾಡಿಹುಳು, ಚಾಟಿ ಹುಳು ಅಥವಾ ಚಪ್ಪಟೆ ಹುಳು.
ಮುನ್ನೆಚ್ಚರಿಕೆ ಹೇಗೆ?
• ಮಲಮೂತ್ರಗಳನ್ನು ಬಯಲು, ಕೆರೆ, ಹೊಳೆಗಳ ಪಕ್ಕ ವಿಸರ್ಜನೆ ಮಾಡಬಾರದು. ಶೌಚಾಲಯದಲ್ಲೇ ಮಾಡಬೇಕು.
• ಚರಂಡಿ ನೀರಿನಲ್ಲಿ ಸೊಪ್ಪು, ತರಕಾರಿ ಬೆಳೆಯಬಾರದು. ಮನುಷ್ಯ ತ್ಯಾಜ್ಯವನ್ನು ಸಹ ಇದಕ್ಕೆ ಉಪಯೋಗಿಸಬಾರದು.
• ಏನಾದರೂ ಸೇವಿಸುವ ಮುನ್ನ ಹಾಗೂ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಅಗತ್ಯ.
• ಉಗುರುಗಳಲ್ಲಿ ಕಸ ಕಟ್ಟದಂತೆ ನಿಯಮಿತವಾಗಿ ಕತ್ತರಿಸಿಕೊಳ್ಳಬೇಕು.
• ಊಟಕ್ಕೆ, ಕುಡಿಯಲು ಶುದ್ಧ ನೀರು ಬಳಕೆ ಮಾಡಬೇಕು.
• ಸಾಕು ಪ್ರಾಣಿಗಳಿಗೂ ನಿಯಮಿತವಾಗಿ ಜಂತುಹುಳು ಔಷಧ ನೀಡಬೇಕು.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!