ಉತ್ತಮ ಆಹಾರ ಪದ್ಧತಿ ಅನುಸರಿಸಿ
ನಮ್ಮ ಜೀವನಶೈಲಿಯೇ ನಮಗಿಂದು ಅನೇಕ ಅನಾರೋಗ್ಯಗಳನ್ನು ನೀಡುತ್ತಿದೆ. ದುಡಿಯುವುದಕ್ಕೆ ಇಂದು ಹಗಲು-ರಾತ್ರಿಗಳ ಭೇದವಿಲ್ಲ. ಆದರೆ, ದೇಹಕ್ಕೂ ಒಂದು ಗಡಿಯಾರವಿದೆ. ಅದು ವ್ಯತಿರಿಕ್ತವಾಗಿ ಕೆಲಸ ಮಾಡಲು ಆರಂಭಿಸಿದಾಗ ಟೈಪ್ 2 ಮಧುಮೇಹ, ನಿದ್ರಾಹೀನತೆ, ಖಿನ್ನತೆಯಂತಹ ಸಮಸ್ಯೆಗಳು ಕಂಡುಬರುತ್ತವೆ.
♦ ಡಾ. ಸುಮನ್
ಮನುಷ್ಯನ ಮೂಲಭೂತ ಸಮಸ್ಯೆ ಎಂದರೆ ಇಲ್ಲದಿರುವ ಬಗ್ಗೆ ಕೊರಗುವುದು. ದೂರದಿಂದ ಕಾಣುವುದನ್ನು ಸುಂದರ ಎಂದುಕೊಳ್ಳುವುದು. ಹೀಗಾಗಿಯೇ ಅನೇಕ ಅಧ್ವಾನಗಳನ್ನು ತಾನಾಗಿಯೇ ಆವಾಹಿಸಿಕೊಳ್ಳುತ್ತಾನೆ. ಮಾನಸಿಕ ಸಮಸ್ಯೆಗಳಿಗೂ ಈ ಗುಣಗಳೇ ಮೂಲ. ಇತ್ತೀಚೆಗಂತೂ ಯಾರನ್ನು ಕೇಳಿದರೂ “ಸ್ವಲ್ಪ ಖಿನ್ನತೆಯ ಸಮಸ್ಯೆ’ ಎನ್ನುತ್ತಾರೆ.
ಖಿನ್ನತೆ ಬರಲು ಮನುಷ್ಯನ ಮನೋಗುಣ ಪ್ರಮುಖ ಪಾತ್ರ ವಹಿಸುತ್ತದೆ. ನೆಗೆಟಿವ್ ವಿಚಾರಧಾರೆ ಖಂಡಿತವಾಗಿ ಆರೋಗ್ಯವಂತ ಮನಸ್ಸಿನ ಮೂಲದಲ್ಲಿರುವುದಿಲ್ಲ. ನಮ್ಮ ಯೋಚನೆಗಳು, ಚಿಂತನೆಗಳೇ ನಮ್ಮನ್ನು ಖಿನ್ನತೆಗೆ ದೂಡುತ್ತವೆ ಎನ್ನುವ ಅರಿವು ಇಂದಿಗೂ ಸಾಕಷ್ಟು ಜನರಿಗೆ ಇರುವುದಿಲ್ಲ. ಅವುಗಳ ಬಗ್ಗೆ ಅರಿವಿದ್ದರೆ ಆರಂಭದಲ್ಲೇ ಮನಸ್ಸಿನ ಮೇಲೆ ನಿಯಂತ್ರಣ ಇರಿಸಿಕೊಳ್ಳಲು ಪ್ರಯತ್ನಿಸಬಹುದು.
ಕೆಲವೊಮ್ಮೆ ನಮ್ಮ ಜೀವನಶೈಲಿ, ಅನಾರೋಗ್ಯಗಳೂ ಖಿನ್ನತೆಯನ್ನು ತರಬಹುದು. ಟೈಪ್ 2 ಮಧುಮೇಹದಿಂದಲೂ ಖಿನ್ನತೆ ಉಂಟಾಗುವ ಸಾಧ್ಯತೆಯನ್ನು ಬ್ರಿಟಿಷ್ ತಜ್ಞರು ಹೇಳಿದ್ದಾರೆ.
ರಾತ್ರಿ ಕೆಲಸ ಮಾಡುವುದರಿಂದ ಅನಾರೋಗ್ಯ
ಸಾಫ್ಟ್ ವೇರ್ ಜಗತ್ತು ಪ್ರವರ್ಧಮಾನಕ್ಕೆ ಬಂದ ಮೇಲೆ ರಾತ್ರಿಯೂ ಕೆಲಸ ಮಾಡುವ ಪದ್ಧತಿ ಶುರುವಾಗಿದೆ. ಪಾಶ್ಚಾತ್ಯ ದೇಶದ ಕ್ಲೈಂಟುಗಳೊಂದಿಗೆ ರಾತ್ರಿ ವೇಳೆಯೇ ವ್ಯವಹರಿಸಬೇಕು, ರಾತ್ರಿಯೂ ಕೆಲಸ ಮಾಡಬೇಕು. ಇದರ ಪರಿಣಾಮವಾಗಿಯೂ ಖಿನ್ನತೆ ಹೆಚ್ಚಾಗುತ್ತಿದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಮಾನಸಿಕ ಖಿನ್ನತೆಯೊಂದಿಗೆ ಆಸಿಡಿಟಿ, ಬೊಜ್ಜು ಕೂಡ ಕಾಡುವ ಸಮಸ್ಯೆಗಳು. ನಿದ್ರಾಹೀನತೆಯಂತೂ ಅತಿ ಸಾಮಾನ್ಯ ಸಮಸ್ಯೆ. ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಶೇ.30ರಷ್ಟು ಹೆಚ್ಚು ಎನ್ನುವುದು ಅಧ್ಯಯನಗಳಿಂದ ತಿಳಿದುಬಂದ ಸಂಗತಿ.
ನಿದ್ರೆಯಿಲ್ಲದೆ ಮಧುಮೇಹ
ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವವರಲ್ಲಿ ಮಧುಮೇಹ ಬಹಳ ಬೇಗ ಕಾಣಿಸಿಕೊಳ್ಳುತ್ತದೆ. ದೇಹದ ಗಡಿಯಾರದಲ್ಲಿ ವ್ಯತ್ಯಾಸವಾಗಿ ಇನ್ಸುಲಿನ್ ಸ್ರವಿಕೆ ಕಡಿಮೆಯಾಗುತ್ತದೆ. ಹಾರ್ಮೋನ್ ಗಳಲ್ಲಿ ಅಸಮತೋಲನ ಕಾಣಿಸಿಕೊಳ್ಳುತ್ತದೆ. ಹೃದಯಸ್ತಂಭನ ಉಂಟಾಗುವ ಸಾಧ್ಯತೆಯೂ ಹೆಚ್ಚು.
ಏನು ಮಾಡಬಹುದು?
ಇಂದು ದುಡಿಯುವುದಕ್ಕೆ ಹಗಲು-ರಾತ್ರಿಗಳ ಭೇದವಿಲ್ಲ. ದುಡಿಯುವುದು ಸಹ ಅನಿವಾರ್ಯ. ಇಂತಹ ಸನ್ನಿವೇಶದಲ್ಲಿ ಕೆಲವು ಆರೋಗ್ಯಕರ ಪದ್ಧತಿಗಳನ್ನು ಅನುಸರಿಸುವುದು ಅಗತ್ಯ. ಮುಖ್ಯವಾಗಿ, ಆಹಾರಕ್ರಮವನ್ನು ಸೂಕ್ತವಾಗಿಟ್ಟುಕೊಳ್ಳಬೇಕು. ರಾತ್ರಿ ಕಚೇರಿಯಲ್ಲೇ ಊಟ ಮಾಡುವಿರಾದರೆ ಮನೆಯಿಂದಲೇ ಊಟವನ್ನು ತೆಗೆದುಕೊಂಡು ಹೋಗಬೇಕು. ರಾತ್ರಿ ಎಂಟು ಗಂಟೆಗೆ ಹೊಟ್ಟೆ ತುಂಬುವಂತೆ ಅಲ್ಲ, ಮಿತವಾಗಿ ಊಟ ಮಾಡಬೇಕು. ರಾತ್ರಿ ಹಸಿವಾದರೆ ತಿನ್ನಲು ಆರೋಗ್ಯಕರ ಸ್ನ್ಯಾಕ್ಸ್ ಒಯ್ಯುವುದು ಅತ್ಯಂತ ಅಗತ್ಯ. ಒಣಹಣ್ಣುಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಸ್ಯಾಂಡ್ ವಿಚ್, ಬನ್, ಬ್ರೆಡ್ ಗಳನ್ನು ಸೇವನೆ ಮಾಡಬಾರದು. ಕೊನೆಯ ಪಕ್ಷ ಆಹಾರವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನೈಟ್ ಶಿಫ್ಟ್ ನ ಕೆಟ್ಟ ಪರಿಣಾಮವನ್ನು ಸ್ವಲ್ಪವಾದರೂ ನಿಯಂತ್ರಿಸಬಹುದು. ಹಾಗೆಯೇ, ಕೆಲಸ ಮುಗಿದ ಬಳಿಕ ಕನಿಷ್ಠ ಆರು ಗಂಟೆಗಳ ಕಾಲವಾದರೂ ಚೆನ್ನಾಗಿ ನಿದ್ರೆ ಮಾಡಬೇಕು.