Saturday, April 17, 2021

ಚರ್ಮ ನಳನಳಿಸಬೇಕೆ? ಮನಸ್ಸಿನ ಆರೋಗ್ಯ ರಕ್ಷಿಸಿಕೊಳ್ಳಿ

ಮಾನಸಿಕ ಏರುಪೇರುಗಳಿಗೂ ಚರ್ಮದ ಆರೋಗ್ಯಕ್ಕೂ ಸಮೀಪದ ಸಂಬಂಧವಿದೆ. ಕಿರಿಕಿರಿಯ ಸ್ವಭಾವ ನಿಮ್ಮದಾಗಿದ್ದರೆ, ಅತೀವ ಅಸಹಾಯಕತೆಯಿಂದ ಬಳಲುತ್ತಿದ್ದರೆ, ಖಿನ್ನರಾಗಿದ್ದರೆ ಚರ್ಮದ ರೋಗಗಳು ಬರುವ ಅಪಾಯ ಹೆಚ್ಚು.

♦ ಡಾ. ಸುಮನ್
newsics.com@gmail.com


 ಯಾರನ್ನಾದರೂ ನೋಡಿದರೆ, ಯಾರ ಬಳಿಯಾದರೂ ಮಾತನಾಡಿದರೆ ಕೆಲವೊಮ್ಮೆ ‘ಮೈ ಎಲ್ಲ ಉರಿಯುತ್ತದೆ’ ಎಂದು ಹೇಳಿರುತ್ತೇವೆ. ಇದು ಸಹಜ. ಯಾರಾದರೂ ನಮಗೆ ಇಷ್ಟವಾಗದಿದ್ದರೆ, ಅವರ ವರ್ತನೆ ಸರಿಹೋಗದಿದ್ದರೆ ಅವರನ್ನು ಕಂಡಾಗಲೆಲ್ಲ ನಾವು ಕಿರಿಕಿರಿ ಮಾಡಿಕೊಳ್ಳುತ್ತೇವೆ. ಎಲ್ಲೋ ಅಪರೂಪಕ್ಕೆ ಒಮ್ಮೆ ಹಾಗಾದರೆ ಪರವಾಗಿಲ್ಲ. ಆದರೆ, ಪದೇ ಪದೆ ಅಥವಾ ದಿನವೂ ಹಾಗಾಗುತ್ತಿದ್ದರೆ ನಿಜಕ್ಕೂ ಮೈ ಉರಿಯುವ ಸಮಸ್ಯೆ ಶುರುವಾಗುತ್ತದೆ! ನಿಜ. ಅಚ್ಚರಿ ಬೇಡ. ಮೈ ಉರಿಯುವ ಸಮಸ್ಯೆಗೂ ಮಾನಸಿಕ ಕಿರಿಕಿರಿಗೂ ಬಹಳ ಹತ್ತಿರದ ನಂಟಿದೆ.
ಅಷ್ಟೇ ಅಲ್ಲ, ‘ಕೈಲಾಗದವನು ಮೈ ಪರಚಿಕೊಂಡ’ ಎನ್ನುವ ಮಾತನ್ನು ಎಲ್ಲರೂ ಕೇಳಿದ್ದೇವೆ, ಅಲ್ಲವೇ? ಕೈಲಾಗದತನ ಎಂದರೆ ಅಸಹಾಯಕತೆ. ಮೈ ತುರಿಕೆ ಅಥವಾ ಮೈಮೇಲೆ ಮೊಡವೆಗಳೇಳುವುದಕ್ಕೂ ಅಸಹಾಯಕತೆಗೂ ಬಂಧವಿರುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಮನದಾಳದಲ್ಲಿ ಅಸಹಾಯಕ ಭಾವನೆ ತೀವ್ರವಾಗಿದ್ದಾಗ ಮೈಮೇಲೆ ಮೊಡವೆಗಳು ನಿರಂತರವಾಗಿ ಏಳುತ್ತಿರುತ್ತವೆ! ಅಂದರೆ, ಮಾನಸಿಕ ಏರಿಳಿತಕ್ಕೂ, ಒತ್ತಡಕ್ಕೂ ಚರ್ಮದ ಆರೋಗ್ಯಕ್ಕೂ ನೇರವಾದ ಸಂಬಂಧವಿದೆ.
ಚರ್ಮವೇ ಆರೋಗ್ಯ ತಿಳಿಸುವ ಸಾಧನ
ನಮ್ಮ ಆರೋಗ್ಯ ಹೇಗಿದೆ ಎಂದು ನಮ್ಮ ಚರ್ಮವೇ ಹೇಳಬಲ್ಲದು. ನಮ್ಮ ದೇಹದ ಚರ್ಮವು ದೈಹಿಕ ಹಾಗೂ ಮಾನಸಿಕ ಆರೋಗ್ಯಗಳಿಗೆ ತುಂಬ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿರುತ್ತದೆ. ಹೀಗಾಗಿ, ಚರ್ಮ ನಮ್ಮ ಆರೋಗ್ಯ ಬಿಂಬಿಸುವ ಕನ್ನಡಿಯೆಂದೇ ಹೇಳಬಹುದು.
ಕೊರೋನೋತ್ತರದ ಬದುಕು ಅನೇಕ ರೀತಿಯ ಒತ್ತಡದಿಂದ ಕೂಡಿದೆ. ಆರ್ಥಿಕ ಒತ್ತಡ ಸೇರಿದಂತೆ ಹಲವಾರು ರೀತಿಯ ಸಾಂಸಾರಿಕ ಒತ್ತಡಗಳು ಕೊರೋನಾ ವೈರಸ್ ಸಾಂಕ್ರಾಮಿಕದ ಬಳಿಕ ಬದುಕನ್ನು ಹಿಪ್ಪೆ ಮಾಡಿ ಹಾಕುತ್ತಿವೆ. ಬಹಳಷ್ಟು ಜನರು ಅತೀವ ಅನಿವಾರ್ಯತೆ, ಒತ್ತಡದಲ್ಲೇ ಇಂದು ಜೀವನ ನಡೆಸುತ್ತಿದ್ದಾರೆ. ಯಾವುದೇ ವ್ಯಕ್ತಿ ಒತ್ತಡದಲ್ಲಿರುವಾಗ ದೇಹದ ಹಾರ್ಮೋನುಗಳಲ್ಲೂ ಬದಲಾವಣೆ ಅಥವಾ ಏರಿಳಿತ ಉಂಟಾಗುತ್ತದೆ. ಇದರಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ.
ಒತ್ತಡದಿಂದ ಯಾವೆಲ್ಲ ರೋಗಗಳು?
• ದದ್ದುಗಳು
• ಸೋರಿಯಾಸಿಸ್
• ಎಸ್ಜಿಮಾ ಅಥವಾ ಇಸುಬು
• ನಿರ್ಜಲೀಕರಣ, ಕಳಾಹೀನ ಚರ್ಮ
• ಮೊಡವೆ ಗುಳ್ಳೆಗಳು (ರೊಸಾಸಿಯಾ)
• ವಿಟಿಲಿಗೊ
• ಚರ್ಮದ ಮೇಲೆ ಹೊಸ ಬೆಳವಣಿಗೆ
ಈ ಎಲ್ಲ ಸಮಸ್ಯೆಗಳಿಗೆ ಬೇರೆ ಹಲವು ಕಾರಣಗಳಿರಬಹುದಾದರೂ ಒತ್ತಡದಿಂದ ಇವುಗಳ ಸಮಸ್ಯೆ ಹೆಚ್ಚಾಗುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡದಿರುವ, ಒತ್ತಡದ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಬಹಳ ಬೇಗ ಚರ್ಮದ ವಿವಿಧ ರೋಗಗಳು ಅನುಭವಿಸುತ್ತಾರೆ. ಸಾಮಾನ್ಯವಾಗಿ ಚರ್ಮದ ಮೇಲೆ ಮೂಡುವ ದದ್ದುಗಳು ಸ್ವಲ್ಪ ದಿನಗಳಲ್ಲಿ ಮಾಯವಾಗುತ್ತವೆ, ಕೆಲವೊಮ್ಮೆ ಚಿಕಿತ್ಸೆ ಬೇಕಾಗುತ್ತದೆ. ಆದರೆ, ಯಾವುದೇ ಚಿಕಿತ್ಸೆಗೂ ಸ್ಪಂದಿಸದ ದದ್ದುಗಳು ಕೀಲು ಮತ್ತು ಮಾಂಸಖಂಡಗಳ ನೋವನ್ನು ಹೆಚ್ಚು ಮಾಡುತ್ತವೆ. ಇದು ಸಹ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗುತ್ತದೆ.
ಪರಿಹಾರ ಹೇಗೆ?
• ಒತ್ತಡದ, ಅಸಹಾಯಕ ಮನಸ್ಥಿತಿಯಿಂದ ಹೊರಗೆ ಬರುವುದು ಅಗತ್ಯ. ಈ ನಿಟ್ಟಿನಲ್ಲಿ ಧ್ಯಾನ, ಪ್ರಾಣಾಯಾಮಗಳು ಬಹಳ ಪರಿಣಾಮಕಾರಿಯಾಗಿವೆ. ದಿನವೂ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವುದು, ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
• ಸ್ನಾಯುಗಳ ಒತ್ತಡ ಕಡಿಮೆ ಮಾಡಿಕೊಳ್ಳಲು ಮಸಾಜ್ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು.
• ಆಹಾರಕ್ಕೂ ಆರೋಗ್ಯಕ್ಕೂ ನೇರವಾದ ಬಂಧ. ಅದರಲ್ಲೂ ಚರ್ಮವಂತೂ ಆಹಾರಕ್ಕೆ ಬಹಳ ಸೂಕ್ಷ್ಮವಾಗಿ ವರ್ತಿಸುತ್ತದೆ. ಕರಿದ ತಿಂಡಿಗಳು, ಕಡಲೆ, ಬದನೆಕಾಯಿ, ಮಸಾಲೆ ಮುಂತಾದ ಪದಾರ್ಥಗಳನ್ನು ಸೇವಿಸಿದರೆ ಮೈ ತುರಿಕೆ ಉಂಟಾಗುವುದು ಕೆಲವೊಮ್ಮೆ ಅನುಭವಕ್ಕೂ ಬಂದಿರಬಹುದು. ಹೀಗಾಗಿ, ತಿಳಿದು ಆಹಾರ ಸೇವಿಸಬೇಕು.
• ಯಾವುದೇ ಚರ್ಮದ ಸಮಸ್ಯೆಗಳಿಗೆ ವೃತ್ತಿಪರರ ನೆರವು ಪಡೆಯಬೇಕು. ಏಕೆಂದರೆ, ಸೋರಿಯಾಸಿಸ್ ನಂಥ ಚರ್ಮ ರೋಗಗಳು ವ್ಯಕ್ತಿಯ ಮಾನಸಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಜತೆಗೆ ಸಾಮಾಜಿಕ ಬದುಕಿಗೂ ಹಿನ್ನಡೆ ತಂದೊಡ್ಡುತ್ತವೆ. ಅವುಗಳನ್ನು ಎದುರಿಸಲು ವೃತ್ತಿಪರರ ನೆರವು ಅಗತ್ಯ.
• ಚರ್ಮ ರೋಗಗಳ ನಿಯಂತ್ರಣಕ್ಕೆ ಚಿಕಿತ್ಸೆಯ ಜತೆಗೆ ಮಾನಸಿಕ ಸಮಸ್ಯೆಯ ಮೂಲವನ್ನು ಕೆದಕಿ ಅರಿತುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ, ಆಪ್ತಸಮಾಲೋಚನೆಯನ್ನೂ ಪಡೆದುಕೊಳ್ಳುವುದು ಸೂಕ್ತ.
• ಖಿನ್ನತೆಯಾಗದಂತೆ ನೋಡಿಕೊಳ್ಳುವುದು.
• ಉತ್ತಮ ನಿದ್ರೆ, ವಿಶ್ರಾಂತಿ, ಹೆಚ್ಚು ನೀರು ಕುಡಿಯುವುದು ಅಗತ್ಯ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!