ಸೆಪ್ಟೆಂಬರ್ 26 ವಿಶ್ವ ಗರ್ಭನಿರೋಧಕ ದಿನ. ಯುವ ದಂಪತಿಗೆ ಗರ್ಭನಿರೋಧಕ ವಿಧಾನಗಳ ಆಯ್ಕೆಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಅನಪೇಕ್ಷಿತವಾಗಿ ಗರ್ಭ ಧರಿಸುವ ಚಿಂತೆಯಿಂದ ಮುಕ್ತಿ ಪಡೆದು ಅಪೇಕ್ಷಿತ ಗರ್ಭವನ್ನು ಮಾತ್ರವೇ ಧರಿಸುವ ಅವಕಾಶಗಳನ್ನು ಅರಿತಾಗಲೇ ಸುಂದರ ಕುಟುಂಬ ಸಾಧ್ಯ.
newsics.com Features Desk
ಬ ರೋಬ್ಬರಿ 759 ಕೋಟಿ ಜನ! ನಮ್ಮ ವಸುಧೆ ಇಷ್ಟು ಬೃಹತ್ ಜನಸಂಖ್ಯೆಯನ್ನು ಹೊತ್ತು ನಮ್ಮನ್ನು ಪೊರೆಯುತ್ತಿದ್ದಾಳೆ. ಜನರೊಂದಿಗೆ ಇನ್ನುಳಿದ ಜೀವಿಗಳ ಸಂಖ್ಯೆ ಲೆಕ್ಕಕ್ಕಿಲ್ಲ. ಜನಸಂಖ್ಯೆಯಲ್ಲಿ ನಮ್ಮ ದೇಶದ ಪಾಲೇ 130 ಕೋಟಿ! ಅಬ್ಬಾ.
ಪ್ರಾಣಿ ಪ್ರಪಂಚದಲ್ಲಿ ಯಾವುದೇ ಒಂದು ಪ್ರಭೇದದ ಜೀವಿಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಲು ಅವಕಾಶವಿಲ್ಲ. ನೈಸರ್ಗಿಕವಾಗಿಯೇ ಅಂಥದ್ದೊಂದು ವ್ಯವಸ್ಥೆ ಅಲ್ಲಿ ಕಂಡುಬರುತ್ತದೆ. ಆದರೆ, ಮನುಷ್ಯನಿಗೆ ಹಾಗಲ್ಲ. ತಾನೇ ಸೃಷ್ಟಿಸಿಕೊಂಡಿರುವ ಅತ್ಯಾಧುನಿಕ ಸೌಲಭ್ಯಗಳಿಂದ ಮರಣದ ವಯಸ್ಸನ್ನು ಮತ್ತಷ್ಟು ಮುಂದೂಡಿಕೊಂಡಿರುವ ಜತೆಗೆ, ತನಗೆ ಬೇಕಷ್ಟು, ಬೇಕೆನಿಸುವಷ್ಟು ಸಂತತಿಯನ್ನು ಪಡೆಯುವ ಅವಕಾಶವಿದೆ. ಎಲ್ಲ ಸೇರಿ ಭೂಮಿಗೆ ಹೊರೆಯಾಗುವಷ್ಟು ಜನರು. ಎಲ್ಲೆಲ್ಲೂ ಜನರೇ ಜನರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲೆಂದು ಇಡೀ ಪ್ರಪಂಚದಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದಲ್ಲೇ ಕುಟುಂಬ ನಿಯಂತ್ರಣ ಯೋಜನೆಯಿಂದ ಹಿಡಿದು, “ಎರಡು ಮಕ್ಕಳಿದ್ದರೆ ಹಲವಾರು ಸೌಲಭ್ಯಗಳು’ ಎಂಬೆಲ್ಲ ಆಮಿಷಗಳನ್ನು ಸಹ ಒಡ್ಡಲಾಗಿದೆ. ಜನರಲ್ಲಿ ಅರಿವು ಮೂಡಿಸುವುದೊಂದೇ ಜನಸಂಖ್ಯೆ ನಿಯಂತ್ರಣಕ್ಕಿರುವ ಪರಿಹಾರ. ಹೀಗಾಗಿ ಇಲ್ಲಿ ಕುಟುಂಬ ಯೋಜನೆ ಮಹತ್ವದ್ದಾಗುತ್ತದೆ.
ಕುಟುಂಬ ಯೋಜನೆ ಮೂಲಕ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸಿಕೊಂಡು ಬದುಕನ್ನು ಚೆನ್ನಾಗಿ ಬಾಳಬಹುದು ಎನ್ನುವ ಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ
ಪ್ರತಿವರ್ಷ ಸೆಪ್ಟೆಂಬರ್ 26ರಂದು ಗರ್ಭನಿರೋಧಕ ದಿನವನ್ನು ಆಚರಿಸಲಾಗುತ್ತದೆ. 2007ರಿಂದ ಇದು ಆಚರಣೆಯಲ್ಲಿದೆ. ಪ್ರತಿ ಗರ್ಭವೂ ಅಪೇಕ್ಷಿತ
ಸಾಮಾನ್ಯವಾಗಿ, ಭಾರತದಂಥ ದೇಶದಲ್ಲಿ ಅನಪೇಕ್ಷಿತ ಗರ್ಭ ಧರಿಸುವಿಕೆ ಪ್ರಮಾಣ ಹೆಚ್ಚಾಗಿದೆ. ಆದರೆ, ಗರ್ಭನಿರೋಧಕಗಳ ಬಳಕೆಯಿಂದ ಅನಪೇಕ್ಷಿತವಾಗಿ ಗರ್ಭ ಧರಿಸುವುದರಿಂದ ಮುಕ್ತಿ ಪಡೆದು, ಬೇಕಾದಾಗ ಮಾತ್ರವೇ ಗರ್ಭ ಧರಿಸಬಹುದು. ಹಾಗೆ ನೋಡಿದರೆ ಮಹಿಳೆಯರ ಪಾಲಿಗಂತೂ ಇದು ಅನುಪಮ ಅವಕಾಶ. ಆದರೆ, ಈ ಕುರಿತು ಬಹುಸಂಖ್ಯೆಯ ಮಹಿಳೆಯರಿಗೆ ಅರಿವಿಲ್ಲ. ಈ ನಿಟ್ಟಿನಲ್ಲಿ ದಂಪತಿಗೆ ಗರ್ಭನಿರೋಧಕಗಳ ವಿಧಾನಗಳ ಬಗ್ಗೆ ತಿಳಿಸುವುದು, ಕುಟುಂಬ ನಿಯಂತ್ರಣ ಯೋಜನೆಯ ಮಹತ್ವವನ್ನು ಮನದಟ್ಟುಮಾಡಿಸುವುದು ಈ ದಿನದ ಉದ್ದೇಶ. ಇದರೊಂದಿಗೆ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಕುರಿತಾದ ಆರೋಗ್ಯದ ಬಗೆಗೂ ಜಾಗೃತಿ ಮೂಡಿಸಲಾಗುತ್ತದೆ.
ಹರೆಯದಲ್ಲೇ ಗರ್ಭ ಧರಿಸುವ ಸಮಸ್ಯೆ
ಜಾಗತಿಕ ಸ್ವಾಸ್ಥ್ಯದ ಗುರಿಯನ್ನು ತಲುಪಲು ಕುಟುಂಬ ಯೋಜನೆಯಿಂದ ಸಾಧ್ಯ. ಇಂದಿನ ದಿನಗಳಲ್ಲಿ ಹದಿಹರೆಯದ ಹುಡುಗಿಯರು ಗರ್ಭ ಧರಿಸುವ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಹುಡುಗಿಯರ ಆರೋಗ್ಯ ಹಾಗೂ ಶಿಕ್ಷಣ ಎರಡು ಜೀವನಕ್ಕೂ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನತೆಗೂ ಲೈಂಗಿಕ ಜೀವನದ ಅರಿವು ನೀಡಬೇಕಿದೆ. ಇಂದಿನ ಯುವಜನತೆಯ ಆರೋಗ್ಯದಲ್ಲೇ ಜಗತ್ತಿನ ಆರೋಗ್ಯದ ಭವಿಷ್ಯವಿರುವುದರಿಂದ ಇದು ಇಂದಿನ ಆದ್ಯತೆಯಾಗಬೇಕಿದೆ.