Saturday, April 17, 2021

ಆರೋಗ್ಯಪೂರ್ಣ ವಿಶ್ವ ನಿರ್ಮಿಸೋಣ

ಇಂದು ವಿಶ್ವ ಆರೋಗ್ಯ ದಿನ
ಇಂದು (ಏಪ್ರಿಲ್ 7) ವಿಶ್ವ ಆರೋಗ್ಯ ದಿನ. ಕೊರೋನೋತ್ತರ ದಿನಗಳಲ್ಲಿ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಪ್ರತಿಯೊಬ್ಬರ ಆರೋಗ್ಯದಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುವುದರಿಂದ ಆರೋಗ್ಯಕರ ಆಹಾರದ ಬಗೆಗೂ ಅರಿವು ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.

ಪ್ರಮಥ
newsics.com@gmail.com

ಬೆಂಗಳೂರಿನ ಕಿರಿದಾದ ಒಂದು ಓಣಿ. ಎರಡೂ ಸಾಲಿನಲ್ಲಿ ದೋಸೆ, ಇಡ್ಲಿಯಿಂದ ಹಿಡಿದು ಆಧುನಿಕ ಬರ್ಗರ್’ವರೆಗೆ ಮಾರಾಟ ಮಾಡುವ ಸ್ಟಾಲ್’ಗಳು. ಎಂಟ್ಹತ್ತು ಅಂಗಡಿಗಳಿರಬಹುದಷ್ಟೆ. ನೂರಾರು ಜನ ಕಿಕ್ಕಿರಿದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಹೆಚ್ಚುತ್ತಿದೆ ಎನ್ನುವ ಸುದ್ದಿ ಈ ಓಣಿಗೆ ಹೋದರೆ ಸುಳ್ಳೆನಿಸುತ್ತದೆ.
* * *
ಮಧ್ಯಮ ವರ್ಗದ ಕುಟುಂಬದ ಮಗುವೊಂದು ಒಂದೇ ಸಮನೆ ಅಳುತ್ತಿದೆ. ಒಂದನೇ ತರಗತಿಯ ಮಗು ಅಳುತ್ತಿರುವುದು ಅದಕ್ಕೆ ಬೇಕಾದ ಬೇಕರಿ ತಿಂಡಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ. ಸಿಹಿ, ಮಸಾಲೆ ತಿಂಡಿಗಳನ್ನು ತಿಂದು ವ್ಯಸನವಾಗಿರುವ ಅದಕ್ಕೆ ಒಂದು ದಿನವಾದರೂ ಮನೆಯ ಸಾಧಾರಣ ಊಟ-ತಿಂಡಿ ಮಾಡುವುದೆಂದರೆ ಅಲರ್ಜಿ. ಮನೆಯವರೂ ಹಠ ಮಾಡಿದ್ದನ್ನೆಲ್ಲ ‘ಪ್ರೀತಿ’ಯಿಂದ ಕೊಡಿಸುತ್ತಾರೆ. ತನಗೆ ತಂದಿಟ್ಟ ತಿಂಡಿಯನ್ನು ಯಾರಾದರೂ ಸ್ವಲ್ಪ ತೆಗೆದುಕೊಂಡರೂ ಅದರ ಕೋಪ ತಾರಕಕ್ಕೇರುತ್ತದೆ. ಆ ಮಗು ಹಾಗೂ ಮನೆಯವರ ‘ಪ್ರೀತಿ’ ನೋಡಿದರೆ ಪಶ್ಚಾತ್ತಾಪವೆನಿಸುತ್ತದೆ…
* * *
ಅಪ್ಪನಿಗೆ ಕೆಲಸವಿಲ್ಲ. ಅಮ್ಮ ಕಡು ಸೋಮಾರಿ. ಕೆಲಸ ಮಾಡಲು ಸಾಕಷ್ಟು ಅವಕಾಶಗಳಿದ್ದಾಗ್ಯೂ ಏನೊಂದು ಕೆಲಸ ಮಾಡಲು ಮನಸ್ಸಿಲ್ಲ. ಮಕ್ಕಳಿಬ್ಬರೂ ಹೊರಗಿನ ತಿಂಡಿ ಪ್ರಿಯರು. ಗಂಡನಿಗೆ ಮೊದಲು ಕೆಲಸವಿದ್ದಾಗ ವಾರದ ನಾಲ್ಕು ದಿನ ಹೊರಗಿನ ತಿಂಡಿಗಳನ್ನು ಪೂರೈಸಿ ಅಭ್ಯಾಸವಾಗಿದ್ದರಿಂದ ಈಗಲೂ ಮಕ್ಕಳು ಅದನ್ನೇ ಹಠ ಮಾಡುತ್ತಾರೆ. ಅಪ್ಪ ಸೋತು ಕಂಗಾಲಾಗುತ್ತಾನೆ. ಅಮ್ಮನಿಗೆ ಕೆಲಸವಿಲ್ಲವೆಂದು ದಿನವಿಡೀ ಗಂಡನನ್ನು ದೂಷಿಸುವುದೇ ಕೆಲಸ.  
* * *
ಇವೆಲ್ಲ ನಮ್ಮ ನಿಮ್ಮ ನಡುವೆ ನಡೆಯುವಂಥ ಸಾಮಾನ್ಯ ಘಟನೆಗಳು, ನೋಟಗಳು. ಇದರಲ್ಲೇನು ವಿಶೇಷ ಅಂದಿರಾ? ದೇಹಾರೋಗ್ಯ, ಮಾನಸಿಕ ಆರೋಗ್ಯದ ಬಹು ವಿಸ್ತಾರದ ಸಮಸ್ಯೆಗಳು ಇವುಗಳೊಂದಿಗೆ ಜೋಡಿಸಿಕೊಂಡಿವೆ. ವಿಶ್ವ ಆರೋಗ್ಯ ದಿನವೆಂದಾಕ್ಷಣ ಮೇಲಿನ ಘಟನೆಗಳು ಬೇಡವೆಂದರೂ ಸ್ಮರಣೆಗೆ ಬರುತ್ತವೆ.
* * *
ನ್ಯಾಯಯುತ, ಆರೋಗ್ಯಕರ ವಿಶ್ವ ನಿರ್ಮಿಸುವುದು
1950ರಿಂದಲೂ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳ ಆರೋಗ್ಯ, ಅವರ ಪಾಲನೆ, ಮಾನಸಿಕ ಆರೋಗ್ಯದಂಥ ಹಲವಾರು ವಿಭಿನ್ನ ಆಯಾಮಗಳ ಮೇಲೆ ಕೇಂದ್ರೀಕರಿಸಿ ಆರೋಗ್ಯ ದಿನವನ್ನು ಆಚರಿಸುತ್ತಿರುವುದು ಕಂಡುಬರುತ್ತದೆ. ಈ ಬಾರಿ ‘ನ್ಯಾಯಯುತ, ಆರೋಗ್ಯಕರ ವಿಶ್ವ ನಿರ್ಮಿಸುವುದು’ ಎನ್ನುವ ಥೀಮ್ ಮೇಲೆ ಆಚರಿಸಲಾಗುತ್ತಿದೆ.
ಕೊರೋನಾ ಸಾಂಕ್ರಾಮಿಕದ ಬಳಿಕ ಜಗತ್ತು ಬದಲಾಗಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೋನಾದಿಂದಲೂ ನಲುಗುತ್ತಿರುವವರು ಅನೇಕ. ಈ ನಡುವೆ ಜಗತ್ತು ಆರ್ಥಿಕವಾಗಿಯೂ ಇಬ್ಭಾಗವಾಗಿದೆ. ಹಣವುಳ್ಳವರು ಇನ್ನಷ್ಟು ಶ್ರೀಮಂತವಾಗುತ್ತಿದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಬಡವರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಆರೋಗ್ಯದ ವಿಚಾರದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಯಾವತ್ತಿಗೂ ಅಗಾಧ ವ್ಯತ್ಯಾಸ ಇದ್ದೇ ಇದೆ. ಸರ್ಕಾರಗಳು ಯಾವುದೇ ಯೋಜನೆ, ಏನೇ ಕಾರ್ಯಕ್ರಮ ಹಮ್ಮಿಕೊಂಡರೂ ಈ ವ್ಯತ್ಯಾಸ ಇದ್ದಿದ್ದೇ. ಆದರೆ, ಆರೋಗ್ಯವೆಂದರೆ ಆರೋಗ್ಯವಷ್ಟೆ. ಎಲ್ಲರಿಗೂ ಬೇಕು. ಬಡವರಿಗೂ ಆರೋಗ್ಯ ಸೌಲಭ್ಯಗಳು ಕೈಗೆಟುಕಬೇಕು. ವಿಶ್ವ ಆರೋಗ್ಯ ಸಂಸ್ಥೆ ಇದೇ ಆಶಯದೊಂದಿಗೆ ಆರೋಗ್ಯಕರ ವಿಶ್ವ ನಿರ್ಮಾಣಕ್ಕೆ ಕರೆ ನೀಡಿದೆ.
ಆಹಾರದ ವ್ಯಸನಕ್ಕೆ ಮಕ್ಕಳನ್ನು ತಳ್ಳುವ ಪಾಲಕರು
ಆರೋಗ್ಯವೇ ಭಾಗ್ಯ ಎನ್ನುವುದು ಸುಳ್ಳಲ್ಲ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯ ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಬಹುತೇಕ ಜನರಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಅರಿವೇ ಇಲ್ಲ. ಮನೆಯಲ್ಲೇ ತಯಾರಿಸಿದ ರೊಟ್ಟಿಯಿದ್ದರೂ ಮಕ್ಕಳಿಗೆ ಬ್ರೆಡ್-ಜಾಮ್ ನೀಡುವುದು ಕಂಡುಬರುತ್ತದೆ. ಹೀಗಾಗಿ, ಆರೋಗ್ಯಕರ ಆಹಾರದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಅಗತ್ಯ ಹೆಚ್ಚಾಗಿದೆ. ಅರಿತೋ ಅರಿಯದೆಯೋ ಮಕ್ಕಳನ್ನು ವಿವಿಧ ರೀತಿಯ ಆಹಾರದ ವ್ಯಸನಕ್ಕೆ ದೂಡುತ್ತಿರುವ ಪಾಲಕರನ್ನು ಎಚ್ಚರಿಸಬೇಕಿದೆ. 

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!