Saturday, April 17, 2021

ನಿದಿರಾದೇವಿಯೇ, ಆಲಂಗಿಸು ಎಮ್ಮನು

ಮನುಷ್ಯರಲ್ಲಿ ಕೆಲವರು ನಿದ್ದೆಗೇಡಿಗಳು, ಕೆಲವರು ಸದಾಕಾಲ ನಿದ್ದೆ ಮಾಡುತ್ತಿರುವವರು. ಆದರೆ, ಇವೆರಡಕ್ಕೂ ಮಧ್ಯದ ಕೆಟಗರಿ ಜನ ಮಾತ್ರ ಆರೋಗ್ಯವಾಗಿರುತ್ತಾರೆ.

       ಇಂದು ವಿಶ್ವ ನಿದ್ರಾ ದಿನ        


♦ ವಿಧಾತ್ರಿ
newsics.com@gmail.com


 ಕೆ ಲವರಿಗೆ ಮಲಗಿದರೂ ನಿದ್ದೆಯೇ ಬಾರದು, ಕೆಲವರಿಗೆ ಮಲಗುವುದೊಂದೇ ತಡ, ದೀರ್ಘವಾದ ಉಸಿರಿನೊಂದಿಗೆ ನಿದ್ರೆ ಚಾಲೂ ಮಾಡಿಬಿಡುತ್ತಾರೆ. ಬೇಗ ನಿದ್ರೆ ಬಾರದಿರುವವರು ಇಂಥವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದೂ ಇದೆ. ಏನೇ ಆಗಲಿ, ಚೆನ್ನಾಗಿ ನಿದ್ರೆ ಮಾಡುವುದೊಂದು ಸೌಭಾಗ್ಯವೇ ಸರಿ!
ಹೌದು, ಮನುಷ್ಯ ಊಟ-ತಿಂಡಿ-ನೀರಿಲ್ಲದೆ ಕೆಲವು ಕಾಲ ಬದುಕಬಲ್ಲ. ಆದರೆ, ಸತತವಾಗಿ 48 ಗಂಟೆಗಳಿಗೂ ಕಾಲ ಎಚ್ಚರವಾಗಿರುವುದು ಕಷ್ಟಸಾಧ್ಯ. ದಿನವೂ 6-7 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಕುಸಿಯುತ್ತ ಸಾಗುತ್ತದೆ. ವೈದ್ಯರ ಪ್ರಕಾರ, ಮಾನವ ದೇಹಕ್ಕೆ ಕನಿಷ್ಟ 7-8 ಗಂಟೆ ನಿದ್ರೆ ಬೇಕು. ಆದರೆ, ಇಂದಿನ ಜೀವನಶೈಲಿಯಿಂದ ನಿದ್ರಾಪ್ರಮಾಣ ಕಡಿಮೆಯಾಗಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ರಕ್ತದೊತ್ತಡ, ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ನಿದ್ರಾಹೀನತೆ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಸಮಸ್ಯೆ ಬಹಳಷ್ಟು ಹೆಚ್ಚಾಗಿದೆ. ನಗರ ಪ್ರದೇಶದಲ್ಲಿರುವವರಂತೂ ನಿದ್ರಾಹೀನತೆಯಿಂದ ಬಳಲುವವರು ಹೆಚ್ಚು. ಇದಕ್ಕೆ ಕಾರಣಗಳು ಸಾಕಷ್ಟು. ಅನಿಯಂತ್ರಿತ ಜೀವನಶೈಲಿಯಿಂದ ಹಿಡಿದು, ಒತ್ತಡ, ಚಿಂತೆ, ದೈಹಿಕ ಅನಾರೋಗ್ಯ, ಜೀವನದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು ಸಹ ನಿದ್ರೆ ಬಾರದಂತೆ ಮಾಡಬಹುದು. ಆದರೆ, ಏನೇ ಆದರೂ ಆರೋಗ್ಯವಾಗಿರಲು ನಿದ್ರೆ ಬೇಕೇ ಬೇಕು. ಹೀಗಾಗಿ, ಚಿಂತೆ, ಒತ್ತಡ ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ.
ಇಂದು ವಿಶ್ವ ನಿದ್ರಾ ದಿನ (ಮಾರ್ಚ್ 19). ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು, ನಿದ್ರಾ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ನಿರ್ವಹಣೆ ಮಾಡುವ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.
ವಿಶ್ವ ನಿದ್ರಾ ದಿನದ ಈ ಬಾರಿಯ ಥೀಮ್ ‘ನಿಯಮಿತ ನಿದ್ರೆ, ಆರೋಗ್ಯಕರ ಭವಿಷ್ಯ’ ಎಂದಾಗಿದೆ. ನಿದ್ರೆಗಿರುವ ಮಹತ್ವವನ್ನು ಈ ಘೋಷವಾಕ್ಯ ಸಾರಿ ಹೇಳುತ್ತದೆ.
ನಿದ್ರೆಯಿಂದ ನಳನಳಿಸುವ ಆರೋಗ್ಯ
ಪ್ರತಿನಿತ್ಯ ನಿಯಮಿತ ಸಮಯ ನಿದ್ರೆ ಮಾಡುವುದರಿಂದ ಮನಸ್ಥಿತಿ ಉತ್ತಮವಾಗುತ್ತದೆ. ಅನಿಯಮಿತ ನಿದ್ರೆ ಮಾಡುವ ಅಭ್ಯಾಸ ಎಂದಿಗೂ ಉತ್ತಮವಲ್ಲ. ದೇಹಕ್ಕೆ ನಿದ್ರೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ದಿನವೂ ಮಾಡುವುದರಿಂದ ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ. ಹಾರ್ಮೋನುಗಳ ಸ್ರವಿಕೆ ನಿಯಂತ್ರಣದಲ್ಲಿರುತ್ತದೆ. ದೇಹದ ಪ್ರಮುಖ ವ್ಯವಸ್ಥೆಗಳೆಲ್ಲವೂ ಸುಗಮವಾಗಿರುತ್ತವೆ. ನಿದ್ರೆಯ ಕೊರತೆಯಾದರೆ ದೈನಂದಿನ ಕಾರ್ಯಕ್ಷಮತೆ ಮೇಲೆ ಪರಿಣಾಮವುಂಟಾಗುತ್ತದೆ.
ನಿದ್ರೆ ಕಸಿದ ಕೊರೋನಾ
ಇತ್ತೀಚಿನ ವರದಿಯೊಂದರ ಪ್ರಕಾರ, ನಿದ್ರಾಹೀನತೆಯಿಂದ ಔಷಧ ಬಳಕೆ ಹೆಚ್ಚಾಗಿದೆ. 2020ರ ಫೆಬ್ರವರಿಯಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ನಿದ್ರೆಗೆ ಸಂಬಂಧಿಸಿದ ಔಷಧಿಗಳ ಬಳಕೆ ಶೇ.21ರಷ್ಟು ಏರಿಕೆಯಾಗಿದೆಯಂತೆ. ಇದಕ್ಕೆ ಕೊರೋನಾ ಸೋಂಕು ಕಾರಣ ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆ, ಆತಂಕ, ಅನಿಶ್ಚಿತತೆ, ಅನಾರೋಗ್ಯಗಳಿಂದ ಜನರಿಗೆ ನಿದ್ರೆ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಜೀವನಶೈಲಿ ಉತ್ತಮಪಡಿಸಿಕೊಳ್ಳೋಣ
ದೈನಂದಿನ ಬದುಕಿನಲ್ಲಿ ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಶಿಸ್ತು ಮೂಡುತ್ತದೆ. ಯೋಗದಿಂದ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕವಾಗಿ ಶಾಂತಿ, ದೃಢತೆ, ಆತ್ಮವಿಶ್ವಾಸ ಹೆಚ್ಚುತ್ತದೆ. ಆಹಾರ ಪದ್ಧತಿಯಲ್ಲಿ ಶಿಸ್ತು ತಂದುಕೊಳ್ಳಲು ಯೋಗ ನೆರವಾಗುತ್ತದೆ. ನಕಾರಾತ್ಮಕ ಮನಸ್ಥಿತಿ ದೂರವಾಗುತ್ತದೆ. ಪರಿಣಾಮ, ನಿದ್ರೆ ಸಮಸ್ಯೆ ದೂರವಾಗುತ್ತದೆ.
ಉತ್ತಮ ನಿದ್ರೆ ಹೇಗೆ ಸಾಧ್ಯ?
• ದಿನವೂ ನಿಗದಿತ ಸಮಯಕ್ಕೆ ಮಲಗುವುದು, ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
• ರಾತ್ರಿ ಮಲಗುವ ಮುನ್ನ ಕೃತಜ್ಞತಾ ಭಾವದಿಂದ ಆ ದಿನ ನಮಗೆ ಎದುರಾದ, ನಾವು ಒಡನಾಡಿದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು. ಯಾರೊಂದಿಗಾದರೂ ಜಗಳವಾಡಿದ್ದರೂ ಸರಿ, ಅವರನ್ನೂ ಕೃತಜ್ಞತೆಯಿಂದಲೇ ಸ್ಮರಿಸಿಕೊಳ್ಳಬೇಕು.
• ಪ್ರತಿದಿನ ಮಲಗುವ ಮುನ್ನ ಆ ದಿನ ನಮಗೆ ಕೋಪ ಬರಿಸಿದವರನ್ನು, ನೋವು ನೀಡಿದವರನ್ನು ಕ್ಷಮಿಸಬೇಕು.
• ಆಲ್ಕೋಹಾಲ್, ಧೂಮಪಾನ ತ್ಯಜಿಸಬೇಕು.
• ದಿನದ ಸಮಯದಲ್ಲಿ ಕಿರು ವಿಶ್ರಾಂತಿಯನ್ನಷ್ಟೇ ಪಡೆಯಬೇಕು. ಈ ಸಮಯ ಅರ್ಧ ಗಂಟೆ ಮೀರಬಾರದು.
• ರಾತ್ರಿ ಆಹಾರ ಮಿತವಾಗಿರಬೇಕು. ಮಸಾಲೆಯುಕ್ತ, ಸಕ್ಕರೆಯುಕ್ತ ಆಹಾರ ರಾತ್ರಿ ಸೂಕ್ತವಲ್ಲ.
• ಪ್ರತಿದಿನ ನಿಯಮಿತ ವ್ಯಾಯಾಮ ಮಾಡುವುದು ಮುಖ್ಯ. ರಾತ್ರಿ ಮಲಗುವ ಮುನ್ನ ಭ್ರಾಮರಿ ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಶಾಂತವಾಗಿ ನಿದ್ರೆ ಮಾಡಲು ಸಾಧ್ಯ.
• ಮಲಗುವ ಸಮಯದಲ್ಲಿ ನಮ್ಮ ಯಾವುದೇ ಸಮಸ್ಯೆ ಬಗ್ಗೆ ಯೋಚಿಸಬಾರದು.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!