ಮನುಷ್ಯನಿಗೆ ಊಟದಷ್ಟೇ ಮುಖ್ಯವಾದದ್ದು ನಿದ್ರೆ. ಹೀಗಾಗಿಯೇ ಇರಬೇಕು, ನಿದ್ರೆಯ ಮೇಲೆ ಬೇಕಾದಷ್ಟು ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ ನಿಮ್ಮ ನಿದ್ರೆ ಹೇಗಿದೆ? ನೀವು ಸುಲಭವಾಗಿ ನಿದ್ರೆ ಮಾಡುತ್ತೀರಾ? ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದೀರಾ? ಅವುಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು? ಕೊರೋನಾ ಸೇರಿದಂತೆ ಯಾವುದೇ ಸಮಸ್ಯೆ ಬಗ್ಗೆ ಚಿಂತಿಸದೆ ನಿದ್ರೆ ಮಾಡಿ.
♦ ಡಾ. ಸುಮನ್
newsics.com@gmail.com
ನೀ ವು ಹಾಸಿಗೆಗೆ ತಲೆಕೊಟ್ಟ ತಕ್ಷಣ ನಿದ್ರೆ ಮಾಡುವ ಪೈಕಿಯೇ ಅಥವಾ ಅರ್ಧಗಂಟೆ ಹಾಗೂ ಹೀಗೂ ಪ್ರಯತ್ನಿಸಿ ಕೊನೆಗೆ ನಿದ್ರೆ ಮಾಡುವ ಪೈಕಿಯೇ? ಸುಲಭಕ್ಕೆ ನಿದ್ರೆ ಮಾಡುವವರು ನೀವಾಗಿದ್ದರೆ ನೀವು ಋಣಾತ್ಮಕ ಭಾವನೆಗಳಿಂದ ಹೆಚ್ಚು ಬಳಲುತ್ತಿಲ್ಲ ಎಂದರ್ಥ. ಅದೇ, ನಿದ್ರೆ ಬರಲು ಒದ್ದಾಡುತ್ತಿದ್ದರೆ ನಿಮ್ಮಲ್ಲಿ ಭಾವನೆಗಳ ಒತ್ತಡವಿದೆ ಅಥವಾ ಭಾವನೆಗಳನ್ನು ನಿರ್ವಹಣೆ ಮಾಡಲು ನಿಮಗೆ ಬರುತ್ತಿಲ್ಲ ಎಂದರ್ಥ.
ಅರೆ, ನಿದ್ರೆಯಿಂದ ಹಾಗೆಲ್ಲ ವ್ಯಕ್ತಿತ್ವದ ಬಗ್ಗೆ ಹೇಗೆ ಹೇಳಲು ಸಾಧ್ಯ ಎನ್ನಬೇಡಿ. ನಿದ್ರೆ ಮಾಡುವ ಶೈಲಿ ಅಥವಾ ಅಭ್ಯಾಸವೇ ನಮ್ಮ ವ್ಯಕ್ತಿತ್ವವನ್ನು ತೋರುತ್ತದೆ. ಈವರೆಗಿನ ಅನೇಕ ಅಧ್ಯಯನಗಳೂ ಋಣಾತ್ಮಕ ಭಾವನೆಗಳನ್ನು ಹೆಚ್ಚು ಹೊಂದಿರುವವರು ನಿದ್ರಾ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದೇ ಹೇಳಿದೆ.
ನಿದ್ರೆಯಲ್ಲಿ ಐದು ಹಂತಗಳನ್ನು ನಾವು ದಾಟುತ್ತೇವೆ. ಮೊದಲೆರಡು ಹಂತಗಳು ಲಘು ನಿದ್ರೆಯ ಸಮಯ. ಈ ಅವಧಿಯಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ಮಿದುಳಿನಲ್ಲಿ ಏರಿಳಿತ ಕಡಿಮೆಯಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಆಳವಾದ ನಿದ್ರೆಗೆ ಜಾರುತ್ತೇವೆ. ಈ ಹಂತದಲ್ಲೇ ದೇಹ ದಣಿವಾರಿಸಿಕೊಳ್ಳುತ್ತದೆ. ಅನೇಕ ಹಾರ್ಮೋನುಗಳು ಬಿಡುಗಡೆಯಾಗುತ್ತ ದೇಹದ ರಿಪೇರಿ ಕಾರ್ಯ ಮಾಡುತ್ತಿರುತ್ತವೆ. ಐದನೇ ಹಂತ ಕನಸಿನದ್ದು. ಇಲ್ಲಿ ಕಣ್ಣುಗಳ ಚಲನೆಯಿದ್ದು, ಕನಸುಗಳು ಬೀಳುತ್ತವೆ. ಅಂದ ಹಾಗೆ, ನೀವು ಸಾಮಾನ್ಯವಾಗಿ ಎಂಥ ಕನಸುಗಳನ್ನು ಕಾಣುತ್ತೀರಿ, ಯಾವ ಕನಸುಗಳನ್ನು ಕಂಡು ಎದ್ದೇಳುತ್ತೀರಿ ಎನ್ನುವುದೂ ವ್ಯಕ್ತಿತ್ವವನ್ನು ಸೂಚಿಸಬಲ್ಲ ಅಂಶ ಎಂದರೆ ಅಚ್ಚರಿಯಾಗಬಹುದು. ಒಟ್ಟಾರೆ, ಈ ಐದು ಹಂತಗಳನ್ನು ಎಲ್ಲರೂ ಅನುಭವಿಸುತ್ತೇವೆ. ಆದರೆ, ಇವುಗಳ ಸಮಯ ಪ್ರತಿಯೊಬ್ಬರಲ್ಲಿಯೂ ವಿಭಿನ್ನವಾಗಿರುತ್ತದೆ.ನಿಮಗೇಕೆ ನಿದ್ರೆ ಸಮಸ್ಯೆ?
• ತುಂಬ ಶಿಸ್ತುಬದ್ಧ ಜೀವನ ಬಯಸುವವರಿಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಎನ್ನುತ್ತವೆ ಅಧ್ಯಯನಗಳು. ಇದಕ್ಕೆ ಕಾರಣಗಳು ಸರಳ. ತೀರ ಶಿಸ್ತು, ಸಂಯಮದ ಬದುಕನ್ನು ಅಪೇಕ್ಷಿಸುವವರು ಸಾಮಾನ್ಯವಾಗಿ ಇನ್ನೊಬ್ಬರಿಂದಲೂ ಅಂಥವೇ ಗುಣಗಳನ್ನು ಬಯಸುತ್ತಾರೆ. ಇದು ಸಹಜವಾಗಿ ಭಾವನೆಗಳ ಏರಿಳಿತಕ್ಕೆ ಕಾರಣವಾಗುತ್ತದೆ. ಇದು ನಿದ್ರೆಗೆ ಭಂಗ ತರುತ್ತದೆ.
• ನಮ್ಮ ಕೈಯಲ್ಲಿಲ್ಲದ ವಿಚಾರಗಳ ಬಗ್ಗೆ ನಿರೀಕ್ಷೆ ಮಾಡುವುದು ಕೆಲವೊಬ್ಬರ ಗುಣ. ಇಂಥ ಸ್ವಭಾವಗಳನ್ನು ಹೊಂದಿದವರಿಗೆ ನಿದ್ರೆ ಕಡಿಮೆ.
• ಹಾಸಿಗೆಗೆ ಬರುವಾಗ ನಮ್ಮ ಭಾವನೆಗಳು ಯಾವ ರೀತಿ ಇದೆ ಎನ್ನುವುದು ಮುಖ್ಯ. ದೇಹದಲ್ಲಿ ನೋವುಗಳಿದ್ದರೂ ನಿದ್ರೆ ಬೇಗ ಬರುವುದಿಲ್ಲ.
• ನಾವು ಊಟ ಮಾಡಿದ ಸಮಯ, ಹಾಸಿಗೆಗೆ ಬಂದ ಸಮಯವೂ ಮುಖ್ಯವಾಗುತ್ತದೆ. ಊಟ ಮಾಡಿದಾಕ್ಷಣ ಹಾಸಿಗೆಗೆ ಬಂದರೆ ನಿದ್ರೆ ಹತ್ತಿರ ಸುಳಿಯುವುದಿಲ್ಲ. ಊಟ ಮಾಡಿದ ಕನಿಷ್ಠ ಅರ್ಧ ಗಂಟೆ ಬಳಿಕ ಹಾಸಿಗೆಯತ್ತ ತೆರಳಿ.
• ಇಲ್ಲಿ ವಯಸ್ಸು ಸಹ ಮುಖ್ಯವಾಗುತ್ತದೆ. 60 ವರ್ಷ ಮೇಲ್ಪಟ್ಟವರು ನಿದ್ರೆ ಬೇಗ ಬರುವುದಿಲ್ಲ ಎಂದು ಹೇಳಿರುವುದನ್ನು ಕೇಳಿರಬಹುದು. ಅಂಥವರು ಮಧ್ಯಾಹ್ನದ ನಿದ್ರೆಯನ್ನು ಕೈಬಿಡಬೇಕು. ಮಾಡಿದರೂ ಹತ್ತು-ಇಪ್ಪತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡಬಾರದು.
• ಕೆಲವು ವೈದ್ಯಕೀಯ ಸ್ಥಿತಿ
• ಖಿನ್ನತೆ ಅಥವಾ ಆತಂಕ, ಉದ್ವೇಗ
• ಖಿನ್ನತೆಯೊಂದಿಗೆ ಇನ್ ಸೋಮ್ನಿಯಾ (ನಿದ್ರಾಹೀನತೆ) ಸೇರಿದಂತೆ ಕೆಲವು ಸಮಸ್ಯೆಗಳು ಸೇರಿಕೊಂಡಿರಬಹುದು.
• ಹೃದಯದ ಸಮಸ್ಯೆನಿದ್ರಾ ಕುತೂಹಲ
• ನೀವು ಹೆಚ್ಚು ಮಾತನಾಡುತ್ತೀರಾ? ಹಾಗಿದ್ದರೆ ನಿಮಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ!
• ನೀವು ದೇವರು ಅಥವಾ ಯಾವುದಾದರೂ ಶಕ್ತಿಯನ್ನು ನಂಬುತ್ತೀರಾ? ಹಾಗಿದ್ದರೂ ನಿಮಗೆ ನಿದ್ರೆಯ ಸಮಸ್ಯೆ ಎದುರಾಗದು!
ಸೂಚಿತ ನಿದ್ರಾ ಪ್ರಮಾಣ
• 12 ತಿಂಗಳೊಳಗಿನ ಮಕ್ಕಳು: 14-17 ತಾಸು
• 5 ವರ್ಷದೊಳಗಿನ ಮಕ್ಕಳು: 10-14 ತಾಸು
• 12 ವರ್ಷದೊಳಗಿನ ಮಕ್ಕಳು: 9-11 ತಾಸು • ಯುವಜನರು: 8-10 ತಾಸು • ವಯಸ್ಕರು: 7-9 ತಾಸು
• ವಯಸ್ಸಾದವರು : 7-8 ತಾಸು
ಇದು ಸಾಮಾನ್ಯವಾಗಿ ಸೂಚಿಸಿದ ನಿದ್ರಾ ಪ್ರಮಾಣ. ಆದರೆ, ಇದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿರುತ್ತದೆ. ನಮಗೆ ಸಾಕಾಗುವ ಅಥವಾ ಬೇಕಾಗುವ ನಿದ್ರೆಯ ಪ್ರಮಾಣವನ್ನು ನಾವೇ ಗುರುತಿಸಿಕೊಳ್ಳಬೇಕು. ಎಷ್ಟು ನಿದ್ರೆ ಮಾಡಿದರೆ ಹೆಚ್ಚು, ಎಷ್ಟು ಮಾಡಿದರೆ ಕಡಿಮೆ ಎನ್ನುವುದನ್ನು ಗಮನಿಸಿಕೊಳ್ಳುವುದು ಉತ್ತಮ.
ಪರಿಹಾರಗಳೇನು?
• ತೀವ್ರ ನಿದ್ರಾಹೀನತೆಯಂಥ ಸಮಸ್ಯೆಗಳಿಗೂ ಧ್ಯಾನ ಅತ್ಯುತ್ತಮ ಪರಿಹಾರ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಭ್ರಾಮರೀ ಧ್ಯಾನ ನಿದ್ರೆಗೆ ಅತ್ಯುತ್ತಮ. ಬಲ್ಲವರಿಂದ ತಿಳಿದುಕೊಂಡು ಮಲಗುವ ಮುನ್ನ ಭ್ರಾಮರೀ ಧ್ಯಾನ ಮಾಡುವುದರಿಂದ ಮಿದುಳು, ಮನಸ್ಸು ಸಮತೋಲನಕ್ಕೆ ಬಂದು ನಿದ್ರೆ ಬರುತ್ತದೆ.
• ನಮಗೆ ಯಾರ ಮೇಲಾದರೂ ಕೋಪ, ಬೇಸರಗಳಿದ್ದರೆ ಅವರನ್ನು ಕ್ಷಮಿಸಿಬಿಡುವುದು! ನಮ್ಮ ತಪ್ಪೇ ಇಲ್ಲದಿದ್ದರೂ ಅವರನ್ನು ಕ್ಷಮಿಸುತ್ತ ಬಂದರೆ ಖಂಡಿತವಾಗಿ ನಮ್ಮ ಮನಸ್ಸು ಅವರನ್ನು ಅಥವಾ ಆ ನಿರ್ದಿಷ್ಟ ಘಟನೆ ಅಥವಾ ಸಂಗತಿಯನ್ನು ಹೊರಹಾಕುತ್ತದೆ. ಇದರಿಂದ ನಿರಾಳತೆ ನಿಮ್ಮದಾಗುತ್ತದೆ.
• ಸಾಧ್ಯವಾದಷ್ಟೂ ಎಲ್ಲರ ಬಗೆಗೆ ಪ್ರೀತಿ, ಸಹಾನುಭೂತಿ ಹೊಂದಿರುವುದು.
• ಯಾರ ಬಗ್ಗೆಯೂ ದ್ವೇಷ ಸಲ್ಲದು.
• ಮಲಗುವ ಮುನ್ನ ನಾನು “ಎಲ್ಲರನ್ನೂ ಪ್ರೀತಿಸುತ್ತೇನೆ, ಯಾರ ಮೇಲೂ ನನಗೆ ಕೋಪವಿಲ್ಲ, ನಾನು ಸ್ಟ್ರಾಂಗ್’ ಎಂದು ಹತ್ತು ಬಾರಿ ಹೇಳಿಕೊಂಡರೆ ಅದು ಖಂಡಿತವಾಗಿಯೂ ನಿಜವಾಗುತ್ತದೆ. ಹಾಗೂ ಅಂಥದ್ದೊಂದು ಮನಸ್ಥಿತಿ ರೂಢಿಸಿಕೊಳ್ಳಲು ಸಹಾಯವಾಗುತ್ತದೆ.