ಸಂಗಾತಿ ಹೀಗಿರಬೇಕು ಎನ್ನುವ ಕಲ್ಪನೆ ಎಲ್ಲರಲ್ಲಿ ಸಾಮಾನ್ಯ. ಹೊಂದಾಣಿಕೆಯ ಬುದ್ಧಿ ಹಾಗೂ ಸಮಾನ ಅಭಿರುಚಿಯ ಸಂಗಾತಿಯಿದ್ದರೆ ಬದುಕು ಸುಲಭ ಹಾಗೂ ಸರಳ ಎನ್ನುವುದನ್ನು ಅರಿತಿರುವ ನಮ್ಮ ಯುವಜನಾಂಗ ಇದನ್ನೇ ತಮ್ಮ ಸಂಗಾತಿಯಿಂದ ಅಪೇಕ್ಷಿಸಿದ್ದಾರೆ.
♦ ವಿಧಾತ್ರಿ
newsics.com@gmail.com
ನಿಮ್ಮ ಸಂಗಾತಿ ಹೇಗಿರಬೇಕು ಎಂದು ಯುವತಿಯರನ್ನೋ, ಯುವಕರನ್ನೋ ಕೇಳಿ ನೋಡಬೇಕು. ದೊಡ್ಡದಾದ ಲಿಸ್ಟ್ ನೀಡುತ್ತಾರೆ. ಗಂಡನಾಗುವ/ ಹೆಂಡತಿಯಾಗುವವರ ಕುರಿತು ಬಹಳ ಆಕರ್ಷಕ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ನೋಡಲು ಸುಂದರವಾಗಿರಬೇಕು, ಸ್ಟೈಲಿಷ್ ಲುಕ್ ಇರಬೇಕು, ಮೂವಿ ನೋಡುವ ಆಸಕ್ತಿ ಇರಬೇಕು, ಹುಡುಗ ಬದುಕಿನಲ್ಲಿ ಸೆಟಲ್ ಆಗಿರಬೇಕು, ಸ್ವಂತ ಮನೆ ಹೊಂದಿರಬೇಕು, ಕೆಲಸದಲ್ಲಿರುವ ಹುಡುಗಿ ಬೇಕು ಅಥವಾ ಬೇಡ, ಹೆಂಡತಿಯಾಗುವವಳು ತನ್ನ ಸ್ನೇಹಿತರೊಂದಿಗೆ ಹೆಚ್ಚು ಬೆರೆಯಬಾರದು ಎನ್ನುವುದರಿಂದ ಹಿಡಿದು ಹುಡುಗನ ತಂದೆ-ತಾಯಿ ತಮ್ಮ ಜತೆ ಇರದೆ ದೂರವಿರಬೇಕು, ಒಬ್ಬನೇ ಮಗನಾಗಿರಬೇಕು ಎನ್ನುವವರೆಗೆ ಚಿತ್ರವಿಚಿತ್ರ ಬೇಡಿಕೆಗಳ ಪಟ್ಟಿಯನ್ನೇ ಮುಂದಿಡುತ್ತಾರೆ. ಅವೆಲ್ಲ ಈಡೇರುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಕನಸು ಕಾಣುವುದಕ್ಕೇನು ಅಡ್ಡಿಯಿಲ್ಲವಲ್ಲ!
ಆದರೆ, ಇಂತಹ ಬೇಡಿಕೆಯಿಂದಾಚೆಗೂ ಕೆಲವರು ಯೋಚನೆ ಮಾಡುತ್ತಾರೆ. ಸ್ವಲ್ಪ ಪ್ರಬುದ್ಧತೆ ಇರುವವರು ಸಂಗಾತಿಯನ್ನು ಆಯ್ಕೆ ಮಾಡುವಾಗ ಸೌಂದರ್ಯ, ಆರ್ಥಿಕ ಸ್ಥಿತಿಗಳ ಹೊರತಾಗಿರುವ ಮಾನದಂಡಗಳ ಬಗ್ಗೆ ಯೋಚಿಸುತ್ತಾರೆ. ಅದರಲ್ಲೂ ನಾವು ಭಾರತೀಯರು ಮದುವೆಯೆಂದರೆ ಜೀವನದಲ್ಲಿ ಒಮ್ಮೆ ಮಾತ್ರ ಆಗುವಂಥದ್ದು, ಒಮ್ಮೆ ಮಾತ್ರ ಏರ್ಪಡುವ ಬಾಂಧವ್ಯ ಎಂದು ಇಂದಿಗೂ ಯೋಚಿಸುತ್ತೇವೆ. ಅಂಥವರು ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ವಾಸ್ತವತೆಯನ್ನು ಅರಿತಿರುತ್ತಾರೆ. ಅದಕ್ಕೆ ತಕ್ಕಂತೆ ಹೊಂದಾಣಿಕೆ ಬುದ್ಧಿಯುಳ್ಳ ಹುಡುಗ ಅಥವಾ ಹುಡುಗಿ ತನ್ನ ಸಂಗಾತಿಯಾದರೆ ಉತ್ತಮ ಎಂದು ಯೋಚಿಸುತ್ತಾರೆ. ಹೌದು, ಇತ್ತೀಚೆಗೆ ಬೆಟರ್ ಹಾಫ್ ಎನ್ನುವ ಮ್ಯಾಟ್ರಿಮೊನಿ ಸಂಸ್ಥೆಯೊಂದು ನಡೆಸಿದ್ದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಇಂದಿನ ಆಧುನಿಕ ಯುವಕ-ಯುವತಿಯರು ಕೂಡ ತಮ್ಮ ಸಂಗಾತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವ ಗುಣ ಇರಬೇಕೆಂದು ಆಶಿಸಿದ್ದಾರೆ. ಅಷ್ಟೇ ಅಲ್ಲ, ಸಮಾನ ಆಸಕ್ತಿಯೂ ಇರಬೇಕೆಂದು ಬಯಸಿದ್ದಾರೆ.
ಸಮಾನ ಅಭಿರುಚಿ ಮುಖ್ಯ
ಇದು ಹೊಸಯುಗದ ನೂತನ ಮನಸ್ಥಿತಿ. ಮೊದಲೆಲ್ಲ ಹೆಂಡತಿಯಾಗುವ ಹುಡುಗಿ ತನ್ನಷ್ಟೇ ಓದಿರಬೇಕು, ಆದರೂ ಮನೆಯಲ್ಲೇ ಇದ್ದುಕೊಂಡು ಮಕ್ಕಳನ್ನು ನೋಡಿಕೊಂಡರೆ ಸಾಕು ಎಂದು ಬಯಸುವ ಹುಡುಗರೇ ಹೆಚ್ಚಾಗಿದ್ದರು. ಇಂದಿನ ದಿನಗಳಲ್ಲಿ ವಿದ್ಯೆ ಹಾಗೂ ಮನೆಯಲ್ಲಿರುವ/ ಇಲ್ಲದಿರುವ ಬೇಡಿಕೆಯಿಂದಾಚೆ ಸಮಾನ ಅಭಿರುಚಿ ಇರಬೇಕೆಂದು ಆಶಿಸುತ್ತಾರೆ. ಶೇ.83ರಷ್ಟು ಯುವಮಂದಿ ಸಂಗಾತಿಯಾಗುವವರಲ್ಲಿ ಹೊಂದಾಣಿಕೆ ಮನೋಭಾವ ಹಾಗೂ ಸಮಾನ ಅಭಿರುಚಿ ಇರಬೇಕೆಂದು ಹೇಳಿದ್ದಾರೆ. ಮುಖ್ಯವಾಗಿ ನಗರದಲ್ಲಿರುವ ಯುವ ವೃತ್ತಿಪರರ ಚಿಂತನೆ ಬದಲಾಗಿದೆ.
ಸಮೀಕ್ಷೆಯಲ್ಲಿ ಶೇ.10ರಷ್ಟು ಜನ ಸೌಂದರ್ಯ ಹಾಗೂ ಕುಟುಂಬದ ಹಿನ್ನೆಲೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಶೇ.5ರಷ್ಟು ಮಂದಿ ಜಾತಕ ಅಥವಾ ಕುಂಡಲಿಯನ್ನು ಆಧರಿಸಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಜಾತಿ, ಧರ್ಮವೂ ಮುಖ್ಯವೆಂದು ಹೇಳಿದವರು ಇದೇ ಲಿಸ್ಟಿಗೆ ಸೇರಿದ್ದಾರೆ. ಇನ್ನು, ಶೇ.3ರಷ್ಟು ಜನ ಸಂಗಾತಿಯ ಸಂಬಳವೂ ಬಹಳ ಮುಖ್ಯವಾಗುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ.
ಶೇ.63ರಷ್ಟು ಜನ ಸಂಗಾತಿಯೊಂದಿಗೆ ಪ್ರತ್ಯೇಕವಾಗಿ ಬದುಕಲು ಇಷ್ಟಪಟ್ಟಿದ್ದರೆ, ಶೇ.27ರಷ್ಟು ಜನ ಸಾಂಪ್ರದಾಯಿಕ ಪದ್ಧತಿಗೆ ಜೈ ಎಂದಿದ್ದಾರೆ. ಅಂದರೆ, ಹುಡುಗಿ ತನ್ನ ಮನೆ ಬಿಟ್ಟು ಪತಿ ಮನೆಗೆ ಬಂದು ನೆಲೆಸಬೇಕೆಂದು ಆಶಿಸಿದ್ದಾರೆ
ಒಟ್ಟಿನಲ್ಲಿ ಸಾಂಪ್ರದಾಯಿಕ ಪದ್ಧತಿಗಿಂತ ಭಿನ್ನವಾಗಿ ಸಂಗಾತಿಯನ್ನು ಆಶಿಸುವವರ ಸಂಖ್ಯೆ ಹೆಚ್ಚಾಗಿದೆ. ಮದುವೆ ಇಂದು ಕೇವಲ ಎರಡು ಕುಟುಂಬಗಳ ನಡುವಿನ ನಂಟಾಗಿ ಉಳಿದುಕೊಂಡಿಲ್ಲ. ಬದಲಿಗೆ ಹುಡುಗ-ಹುಡುಗಿ ತಮ್ಮಿಷ್ಟದ ನಿಲುವಿಗೆ ಬದ್ಧವಾಗುವ ಮೂಲಕ ಖಾಸಗಿ ಭಾವನೆಗಳಿಗೆ ಒತ್ತು ನೀಡುತ್ತಾರೆ. ಹೊಂದಾಣಿಕೆಯನ್ನೂ ಬಯಸುತ್ತಾರೆ, ಸಮಾನ ಅಭಿರುಚಿಯ ಸ್ವಾತಂತ್ರ್ಯವನ್ನೂ ಆಶಿಸುತ್ತಾರೆ.