ಅಡುಗೆಗೆ ಬಳಸುವ ಪಾತ್ರೆಗಳ ಬಗ್ಗೆ ಎಚ್ಚರವಿರಲಿ
ಆಹಾರವನ್ನು ಯಾವುದರಲ್ಲಿ ತಯಾರಿಸುತ್ತೇವೆ ಎನ್ನುವುದು ಬಹುಮುಖ್ಯ. ಇಂದಿನ ಮಾರುಕಟ್ಟೆಯಲ್ಲಿ ಹೊಳೆಯುವ, ಚೆಂದವಾಗಿ ಕಾಣುವ ಪಾತ್ರೆಗಳು ಕಣ್ಣುಕುಕ್ಕುತ್ತವೆ. ಆದರೆ, ಎಲ್ಲದರಲ್ಲೂ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಸುರಕ್ಷಿತ ಮಾದರಿಯ ಪಾತ್ರೆಗಳಲ್ಲಿ ಅಡುಗೆ ಮಾಡಿದಾಗಲೇ ಆರೋಗ್ಯವೂ ಸಂರಕ್ಷಣೆಯತಾಗುತ್ತದೆ.
♦ ವಿಧಾತ್ರಿ
newsics.com@gmail.com
‘ಆಹಾರದಿಂದ ಆರೋಗ್ಯ’ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಮನೆಯ ಸದಸ್ಯರಿಗಾಗಿ ಆರೋಗ್ಯಪೂರ್ಣ ಆಹಾರ ತಯಾರಿಸುವುದು ಪ್ರತಿಯೊಬ್ಬರ ಆಸೆ. ಎಂತಹ ಪಾತ್ರೆಗಳನ್ನು ಅಡುಗೆಗೆ ಬಳಸುತ್ತೇವೆ ಎನ್ನುವುದು ಸಹ ಇಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ, ಕೆಲವು ವಿಧದ ಪಾತ್ರೆಗಳು ಆಹಾರವನ್ನು ಕೆಡಿಸುತ್ತವೆ. ಹೀಗಾಗಿ, ಸುರಕ್ಷಿತವೆನಿಸುವ ಪಾತ್ರೆಗಳನ್ನಷ್ಟೇ ಅಡುಗೆ ಮಾಡಲು ಬಳಸುವುದು ಉತ್ತಮ ಅಭ್ಯಾಸ.
ನಾನ್ ಸ್ಟಿಕ್ ಅಥವಾ ಟೆಫ್ಲಾನ್ ಪಾತ್ರೆಗಳು
ಕೆಲವು ವರ್ಷಗಳ ಹಿಂದೆ ನಾನ್ ಸ್ಟಿಕ್ ಅಥವಾ ಟೆಫ್ಲಾನ್ ಪಾತ್ರೆಗಳ ಹಾವಳಿ ಭಾರೀ ಜೋರಾಗಿತ್ತು. ನೂತನ ವಧುವರರಿಗೆ ಉಡುಗೊರೆ, ಮನೆಪ್ರವೇಶಕ್ಕೆ ಈ ಪಾತ್ರೆಗಳನ್ನು ಗಿಫ್ಟ್ ನೀಡುವುದು ಹೆಮ್ಮೆಯ ಸಂಗತಿಯಾಗಿತ್ತು. ಆದರೆ, ಇತ್ತೀಚೆಗೆ ಈ ಪಾತ್ರೆಗಳು ಆರೋಗ್ಯಕ್ಕೆ ಅತ್ಯಂತ ಹಾನಿಕರ ಎನ್ನುವುದು ಬಹುತೇಕ ಜನರಿಗೆ ಅರಿವಾಗಿದೆ. ಟೆಫ್ಲಾನ್ ಪಾತ್ರೆಗಳಿಗೆ ಪಿಟಿಎಫ್ಒ (ಪಾಲಿಟೆಟ್ರಾಫ್ಲೂರೋಇಥೆಲೀನ್) ಕೋಟಿಂಗ್ ಬಳಕೆಯಾಗುತ್ತದೆ. ಇದು ಪ್ಲಾಸ್ಟಿಕ್ ಪಾಲಿಮರ್. 572 ಡಿಗ್ರಿ ಫ್ಯಾರನ್ ಹೀಟ್ಗೂ ಅಧಿಕ ಮಟ್ಟದಲ್ಲಿ ಇದನ್ನು ಕಾಯಿಸಿದಾಗ ವಿಷಕಾರಿ ಅಂಶ ಬಿಡುಗಡೆಯಾಗುತ್ತದೆ. ಈ ವಿಷಕಾರಿ ಅಂಶದಿಂದ ಪಾಲಿಮರ್ ಫ್ಯೂಮ್ ಫೀವರ್ ಕಂಡುಬರುತ್ತದೆ. ಇದನ್ನು ಟೆಫ್ಲಾನ್ ಫ್ಲೂ ಎಂದೂ ಕರೆಯಲಾಗಿದೆ. ಮನುಷ್ಯರಿಗಷ್ಟೇ ಅಲ್ಲ, ಪಕ್ಷಿಗಳಿಗೂ ಈ ಪಾತ್ರೆಯಿಂದ ಹಾನಿಯಾಗುತ್ತದೆ.
ಇದರಲ್ಲಿರುವ ಇನ್ನೊಂದು ಕೆಮಿಕಲ್ ಅಂಶವೆಂದರೆ, ಪಿಎಫ್ಒಎ)(ಪರ್ ಫ್ಲೂರೋಆಕ್ಟಾನೊಯಿಕ್ ಆಸಿಡ್). ಇದು ಸ್ತನ, ಪ್ರೊಸ್ಟೇಟ್, ಗರ್ಭಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈ ಅಂಶ ಅತ್ಯಂತ ಸಣ್ಣ ಮಟ್ಟದಲ್ಲಿದ್ದರೂ ನಿತ್ಯವೂ ಬೇರೆ ಬೇರೆ ಅನಿವಾರ್ಯ ಕಾರಣಗಳಿಂದ ಈ ಅಂಶಗಳನ್ನು ನಾವು ಸೇವನೆ ಮಾಡುತ್ತಲೇ ಇರುತ್ತೇವೆ. ಹೀಗಾಗಿ, ಈ ಪಾತ್ರೆಗಳನ್ನು ಅಡುಗೆಮನೆಯಿಂದ ದೂರವಿಡುವುದು ಅತ್ಯುತ್ತಮ.
ಇವೆರಡೂ ಕೆಮಿಕಲ್ ಅಂಶವಿರದ ಇನ್ನೊಂದು ರೀತಿಯ ನಾನ್ ಸ್ಟಿಕ್ ಕುಕ್ ವೇರ್ಗಳೂ ಮಾರುಕಟ್ಟೆಯಲ್ಲಿವೆ. ಆದರೆ, ಇವುಗಳನ್ನು ಮೇಲಿನ ಕೋಟಿಂಗ್ ಚೆನ್ನಾಗಿರುವವರೆಗೆ ಮಾತ್ರ ಬಳಕೆ ಮಾಡಬೇಕು. ಕೋಟಿಂಗ್ನಲ್ಲಿ ಚಿಕ್ಕದೊಂದು ಬ್ರೇಕ್ ಆಗಿದ್ದರೂ ತಕ್ಷಣ ಬಳಕೆ ಮಾಡುವುದನ್ನು ನಿಲ್ಲಿಸಬೇಕು.
ಅಲ್ಯೂಮಿನಿಯಂ ಪಾತ್ರೆಗಳು ಹಾಗೂ ಅಲ್ಯೂಮಿನಿಯಂ ಫಾಯಿಲ್
ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಅತ್ಯಂತ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತದೆ. ಅಸಲಿಗೆ, ಇದು ಭಾರೀ ಜನಪ್ರಿಯವೂ ಹೌದು. ಹಗುರವಾಗಿರುತ್ತದೆ. ಬಾಳಿಕೆ ಬರುತ್ತದೆ ಹಾಗೂ ಶೀಘ್ರ ಅಡುಗೆ ಮಾಡಲು ಸಹಕಾರಿಯಾಗುತ್ತದೆ…ಇತ್ಯಾದಿ ಅಂಶಗಳಿವೆ. ಆದರೆ, ಅಲ್ಯೂಮಿನಿಯಂ ಅಡುಗೆಗೆ ಬಳಕೆ ಮಾಡಲು ಯೋಗ್ಯವಲ್ಲದ ಲೋಹ. ಏಕೆಂದರೆ, ಇದೊಂದು ನ್ಯೂರೋಟಾಕ್ಸಿಕ್ ಲೋಹ. ಅಂದರೆ, ಅಲ್ಯೂಮಿನಿಯಂ ಪಾತ್ರೆಗಳ ಅಧಿಕ ಬಳಕೆಯಿಂದ ನರವ್ಯೂಹಕ್ಕೆ ಹಾನಿಯಾಗಿ, ಅದಕ್ಕೆ ಸಂಬಂಧಿಸಿದ ರೋಗಗಳು ಉಂಟಾಗಬಹುದು. ಅಲ್ಜೀಮರ್ಸ್ ಗೂ ಅಲ್ಯೂಮಿನಿಯಂ ಕಾರಣವಾಗಬಲ್ಲದು. ಅಡುಗೆ ಮಾಡುವಾಗ ಈ ಪಾತ್ರೆಗಳಿಂದ ಆಹಾರಕ್ಕೆ ವಿಷಕಾರಿ ಲೋಹದ ಅಂಶ ಬಿಡುಗಡೆಯಾಗುತ್ತಿರುತ್ತದೆ.
ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳು
ಸಾಂಪ್ರದಾಯಿಕ ಪದ್ಧತಿಗೆ ಜೋತುಬಿದ್ದು ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳಲ್ಲಿ ಅಡುಗೆ ಮಾಡುವ ಮುನ್ನ ಯೋಚನೆ ಮಾಡಬೇಕು. ನಮ್ಮ ದೇಹಕ್ಕೆ ತಾಮ್ರದ ಅಂಶ ಬೇಕು ನಿಜ. ಆದರೆ, ಅಡುಗೆಯಲ್ಲಿ ಅದರ ಬಳಕೆ ಬೇಡ. ತಾಮ್ರ ಬೇಗ ಉಷ್ಣವಾಗುವ ಲೋಹವಾಗಿರುವುದರಿಂದ ಅಡುಗೆ ತಯಾರಿಸಲು ಸುಲಭವಾಗಬಹುದು. ಆದರೆ, ತಾಮ್ರ ಅತ್ಯಂತ ವಿಷಕಾರಿ ಲೋಹದ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಉಪ್ಪು ಹಾಗೂ ಹುಳಿಯ ಅಂಶದ ಆಹಾರ ತಯಾರಿಸಿದರೆ ಅಪಾಯ ಗ್ಯಾರಂಟಿ. ತಾಮ್ರದ ಪಾತ್ರೆಗಳ ಕೋಟಿಂಗ್ ನಲ್ಲಿ ನಿಕ್ಕೆಲ್ ಅಂಶವೂ ಇರುತ್ತದೆ. ಇದು ಸಹ ಅಪಾಯಕಾರಿ ಲೋಹ.
ಬಿಸಿ ಮಾಡಿದಾಗ ಹಿತ್ತಾಳೆಯೂ ಸಹ ಉಪ್ಪು ಮತ್ತು ಹುಳಿಯ ಅಂಶಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಿ ವಿಷಕಾರಿ ಅಂಶವನ್ನು ಬಿಡುಗಡೆ ಮಾಡುತ್ತದೆ.
ಕಳಪೆ ಸ್ಟೀಲ್ ಪಾತ್ರೆಗಳು
ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳಂತೂ ಅತ್ಯಂತ ಜನಪ್ರಿಯ. ಇದು ಯಾವುದೇ ರೀತಿಯಲ್ಲಿ ಉಪ್ಪಿನಂಶ ಹಾಗೂ ಹುಳಿಯಂಶದೊಂದಿಗೆ ವರ್ತಿಸುವುದಿಲ್ಲವಾದರೂ ಕಳಪೆ ದರ್ಜೆಯ ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡಬಾರದು. ಸ್ಟೀಲ್ ಪಾತ್ರೆಗಳನ್ನು ಕ್ರೋಮಿಯಂ, ನಿಕ್ಕೆಲ್, ಸಿಲಿಕಾನ್ ಹಾಗೂ ಕಾರ್ಬನ್ ಅಂಶಗಳ ಹದವಾದ ಸಂಯೋಜನೆಯಿಂದ ಮಾಡಲಾಗುತ್ತದೆ. ಸರಿಯಾದ ವಿಧಾನದಲ್ಲಿ ತಯಾರಿಸದೆ ಇದ್ದರೆ ಈ ಪಾತ್ರೆಗಳು ಮನುಷ್ಯ ದೇಹಕ್ಕೆ ಹಾನಿಕರವಾಗುತ್ತವೆ. ಹೀಗಾಗಿ, ಯಾವತ್ತೂ ಉತ್ತಮ ಗುಣಮಟ್ಟದ ಪಾತ್ರೆಗಳನ್ನಷ್ಟೇ ಬಳಕೆ ಮಾಡಬೇಕು.
ಸೆರಾಮಿಕ್ ಕೋಟೆಡ್ ಪಾತ್ರೆಗಳು
ಸೆರಾಮಿಕ್ ಕೋಟೆಡ್ ಪಾತ್ರೆಗಳು ನೋಡಲು ಬಹಳ ಅಂದವಾಗಿರುತ್ತವೆ. ಮೊದಲ ನೋಟಕ್ಕೆ ಬಳಕೆಗೆ ಯೋಗ್ಯವೆಂಬಂತೆಯೂ ಅನಿಸುತ್ತವೆ. ವಾಸ್ತವವಾಗಿ, ಶೇ.100ರಷ್ಟು ಸೆರಾಮಿಕ್ ಇದ್ದಾಗ ಅಡುಗೆಗೆ ಅತ್ಯಂತ ಯೋಗ್ಯವೂ ಆಗಿರುತ್ತವೆ. ಆದರೆ, ಕೋಟಿಂಗ್ ನದ್ದೇ ಸಮಸ್ಯೆ. ಏಕೆಂದರೆ, ಕೆಲವು ಹಾನಿಕಾರಕ ಅಂಶಗಳನ್ನು ಕೋಟಿಂಗ್ ಮಾಡಲಾಗುತ್ತದೆ. ಸೀಸ ಹಾಗೂ ಕ್ಯಾಡ್ಮಿಯಂ ಅಂಶಗಳು ಇದರ ಕೋಟಿಂಗ್ ನಲ್ಲಿ ಕಂಡುಬರುತ್ತವೆ. ಅಂದ ಮೇಲೆ ಪರಿಣಾಮವನ್ನೂ ಅಂದಾಜು ಮಾಡಬಹುದು. ಸೆರಾಮಿಕ್ ಪಾತ್ರೆಗಳನ್ನು ಕೆಲವೇ ತಿಂಗಳ ಕಾಲ ಬಳಕೆ ಮಾಡಬಹುದು. ಆ ಬಳಿಕ, ಸೀಸ ಹಾಗೂ ಕ್ಯಾಡ್ಮಿಯಂ ಅಂಶಗಳು ಬಿಡುಗಡೆಯಾಗುತ್ತವೆ. ಸೀಸದ ಪರಿಣಾಮವಂತೂ ಅತ್ಯಂತ ಅಪಾಯಕಾರಿ. ಹೊಟ್ಟೆ ನೋವು, ತಲೆನೋವು, ಸಂತಾನಹೀನತೆ ಹಾಗೂ ಇತರ ಅನೇಕ ಆರೋಗ್ಯ ಸಮಸ್ಯೆಗಳು ಇದರಿಂದ ಕಂಡುಬರುತ್ತವೆ. ಕೆಲವು ತೀವ್ರ ಪ್ರಕರಣಗಳಲ್ಲಿ ಕೋಮಾಕ್ಕೂ ಹೋಗಬಹುದು. ಒಂದೊಮ್ಮೆ ಕೋಟಿಂಗ್ ಸೀಸರಹಿತವಾಗಿದ್ದರೂ ಅದರ ಇನ್ನೊಂದು ಹಂತದಲ್ಲಿ ಅಲ್ಯೂಮಿನಿಯಂ ಬಳಕೆಯಾಗಿರುತ್ತದೆ. ಹೀಗಾಗಿ, ಸೆರಾಮಿಕ್ ಪಾತ್ರೆಗಳು ಸಹ ಬಳಕೆಗೆ ಯೋಗ್ಯವಲ್ಲ.
ಯಾವುದು ಬಳಕೆಗೆ ಯೋಗ್ಯ?
* ಹಿಂದಿನ ಪದ್ಧತಿಯಂತೆ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಅತ್ಯಂತ ಸುರಕ್ಷಿತ. ಉತ್ತಮ ಕಬ್ಬಿಣದ ಪಾತ್ರೆಗಳನ್ನೇ ಅಡುಗೆಗೆ ಬಳಕೆ ಮಾಡಬೇಕು.
* ಶೇ.100ರಷ್ಟು ಸೆರಾಮಿಕ್ ಪಾತ್ರೆಗಳಾಗಿದ್ದರೆ ಅತಿ ಉತ್ತಮ. ಇವು ದುಬಾರಿಯಾಗಿದ್ದರೂ ಸುರಕ್ಷಿತವಾಗಿರುತ್ತವೆ, ನೈಸರ್ಗಿಕವಾಗಿರುತ್ತವೆ.
* ಗ್ಲಾಸ್ ಪಾತ್ರೆಗಳೂ ಹಾನಿಕಾರಕವಲ್ಲ. ಬಿಸಿ ಮಾಡಿದರೂ ಇವು ಯಾವತ್ತೂ ಹಾನಿಕಾರಕ ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ.