
♦ ಕಲ್ಗುಂಡಿ ನವೀನ್
ಪಕ್ಷಿನೋಟ- 2
ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ಕುಟುರ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. ಇಂಗ್ಲಿಷಿನಲ್ಲಿ ಇದನ್ನು ವೈಟ್ ಚೀಕ್ಡ್ ಬಾರ್ಬೆಟ್ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಮೆಗಲೈಮಾ ವಿರಿಡಿಸ್ ಎನ್ನಲಾಗುತ್ತದೆ. ಬೆಂಗಳೂರಿನಲ್ಲಂತೂ ಇದು ಅತಿ ಸಾಮಾನ್ಯವಾದ ಹಕ್ಕಿ. ನೀವು ಕೇಳುವ ಕುಟುರ್…ಕುಟುರ್…ಕುಟುರ್… ಧ್ವನಿ ಇದರದ್ದೇ! ಪ್ರಧಾನವಾಗಿ ಹಸಿರು ಬಣ್ಣದ ಹಕ್ಕಿಯಾದ್ದರಿಂದ ಇದು ಕಾಣಿಸುವುದಕ್ಕಿಂತ ಕೇಳಿಸುವುದು ಹೆಚ್ಚು.
===
ಕುಟುರ್…ಕುಟುರ್….ಕುಟುರ್… ಕೇಳಿದೊಡನೆಯೇ ಕುವೆಂಪು ಭಾವಪರವಶರಾಗುತ್ತಿದ್ದರಂತೆ. ಅವರ ಸುಪುತ್ರ ಏಕೆಂದು ಕೇಳಿದರೆ, “ಕುಟುರನ ಹಕ್ಕಿಯ ಕೂಗು ಕೇಳಿದೊಡನೆಯೇ ನನ್ನ ಚೇತನ ಈ ಊರಿನ ಸದ್ದು ಗೊಂದಲಗಳಿಂದ ಪಾರಾಗಿ ಮಲೆನಾಡಿನ ವಿಸ್ತಾರವಾದ ಕಾಡಿಗೆ ಸ್ಥಳಾಂತರಗೊಳ್ಳುತ್ತದೆ. ನಿಮಗೆಲ್ಲ ಅದೊಂದು ಹಕ್ಕಿಯ ಕೂಗಾದರೆ, ನನಗೆ ಅದೊಂದು ಮಂತ್ರ!” ಎಂದರಂತೆ. ಆ ಹಕ್ಕಿಯೇ ಬಿಳಿ ಕೆನ್ನೆಯ ಕುಟುರ. ಸೊಪ್ಪುಕುಟಿರ, ಕುಟಿರ ಎಂದೆಲ್ಲ ಕರೆಸಿಕೊಳ್ಳುವ ಹಕ್ಕಿ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಒಂದು. ಇಂಗ್ಲಿಷಿನಲ್ಲಿ ಇದನ್ನು ವೈಟ್ ಚೀಕ್ಡ್ ಬಾರ್ಬೆಟ್ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಮೆಗಲೈಮಾ ವಿರಿಡಿಸ್ ಎನ್ನಲಾಗುತ್ತದೆ. ಬೆಂಗಳೂರಿನಲ್ಲಂತೂ ಇದು ಅತಿ ಸಾಮಾನ್ಯವಾದ ಹಕ್ಕಿ. ನೀವು ಕೇಳುವ ಕುಟುರ್…ಕುಟುರ್…ಕುಟುರ್… ಧ್ವನಿ ಇದರದ್ದೇ! ಪ್ರಧಾನವಾಗಿ ಹಸಿರು ಬಣ್ಣದ ಹಕ್ಕಿಯಾದ್ದರಿಂದ ಇದು ಕಾಣಿಸುವುದಕ್ಕಿಂತ ಕೇಳಿಸುವುದು ಹೆಚ್ಚು. ಕೊಕ್ಕು ತೆರೆಯದೇ ಕೂಗುವುದರಿಂದ ಕಾಣಿಸುವುದು ಇನ್ನೂ ಕಷ್ಟ.
ಈ ಬಾರ್ಬೆಟ್ ಅಥವಾ ಕುಟುರಗಳು ಕೊಕ್ಕುಗಟ್ಟಿಯಿರುವ ಹಾಗೂ ಕೊಕ್ಕಿನ ಸುತ್ತ ಬಿರುಗೂದಲಿರುವ ಹಕ್ಕಿಗಳು. ಅದರಿಂದಲೇ ಅವಕ್ಕೆ ಬಾರ್ಬೆಟ್ ಎಂಬ ಹೆಸರು ಬಂದಿರುವುದು. ದಕ್ಷಿಣ ಏಷ್ಯಾದಲ್ಲಿ ಸುಮಾರು ಹನ್ನೊಂದು ಪ್ರಭೇದಗಳು ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ಒಟ್ಟಾರೆ 26 ಪ್ರಭೇದಗಳ ಕುಟುರಗಳು ಅದರ ಮೆಗಲೈನಿಡೇ ಉಪ ಕುಟುಂಬದಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಫಲಾಹಾರಿ ಹಕ್ಕಿಗಳಾದರೂ ಕೀಟಗಳು ಮತ್ತು ಒಮ್ಮೊಮ್ಮೆ ಹಲ್ಲಿಗಳನ್ನೂ ತಿನ್ನುತ್ತವೆ. ಹಣ್ಣಿರುವ ಮರಗಳಲ್ಲಿ ಸಾಮಾನ್ಯವಾಗಿ ಹಲವಾರು ಹಕ್ಕಿಗಳು ಸೇರಿಕೊಂಡು ಹಣ್ಣು ತಿನ್ನುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆಲ, ಆಶ್ವತ್ಥಗಳಂತಹ ಫಿಗ್ ಜಾತಿಯ ಮರಗಳಲ್ಲಿ, ಅದೂ ಅವು ಹಣ್ಣುಬಿಟ್ಟಾಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಬಲಿಷ್ಠ ಕೊಕ್ಕನ್ನು ಹೊಂದಿರುವ ಇವು ಮರಗಳಲ್ಲಿ ಗುಂಡಾದ ರಂಧ್ರವನ್ನು ಮಾಡಿ ಅದರಲ್ಲಿ ಮೊಟ್ಟೆಯಿಟ್ಟು ಮರಿಮಾಡುತ್ತವೆ. ಈ ಹಕ್ಕಿಗಳು ಮರಿಮಾಡಿಕೊಂಡು ಹೋದನಂತರ ಕೆಲವು ಇತರೆ ಹಕ್ಕಿಗಳು ಈ ರಂಧ್ರದಲ್ಲಿ ಮೊಟ್ಟೆಯಿಟ್ಟು ಮರಿಮಾಡಲು ಬಳಸುವುದೂ ಉಂಟು. ಕೆಲವು ಪ್ರಭೇದಗಳು ವರ್ಷದಲ್ಲಿ ಎರಡು ಬಾರಿ ಮರಿಮಾಡುವುದೂ ಉಂಟು.
ಇವುಗಳ ಆಹಾರದಲ್ಲಿ ಕೀಟಗಳು ಮತ್ತು ಹಲ್ಲಿಯೂ ಇರುವುದರಿಂದ ಅವುಗಳ ನಿಯಂತ್ರಣದಲ್ಲಿ ಈ ಹಕ್ಕಿಗಳದ್ದು ಮಹತ್ತರ ಪಾತ್ರವಿದೆ. ಪ್ರಮುಖವಾಗಿ ಫಲಾಹಾರಿಗಳಾದ ಇವುಗಳು ಬೀಜಪ್ರಸರದಲ್ಲಿಯೂ ಬಹುದೊಡ್ಡ ಪಾತ್ರವಹಿಸುತ್ತದೆ.
ನಾವು ನೆನಪಿನಲ್ಲಿಡಬೇಕಾಗಿರುವುದು ಕಾಡು ಬೆಳೆಯುವುದೇ ಹಕ್ಕಿಗಳಿಂದ. ಕಾಡು ಎಷ್ಟು ಮುಖ್ಯವೆಂದು ನಮಗೆ ತಿಳಿದಿದೆ. ಕಾಡುಗಳ ಬೆಳವಣಿಗೆಗೆ ಈ ಹಕ್ಕಿಗಳ ಕೊಡುಗೆ ದೊಡ್ಡದು.
ನಿಮ್ಮೂರಿನ ತೋಟಗಳಲ್ಲಿ (ಅಥವಾ ಮನೆಯ ಸಮೀಪದ ಮರಗಳಲ್ಲಿಯೂ ಸಹ) ಇವು ಕಾಣುತ್ತವೆ. ಅದಕ್ಕಿಂತ ಹೆಚ್ಚಾಗಿ ಕೂಗುವುದು ನಿಮಗೆ ಕೇಳುತ್ತದೆ. ಹಾಗೆ ಕಂಡರೆ ಅಥವಾ ಕೇಳಿದರೆ ನಮಗೂ ತಿಳಿಸಿ! ಹ್ಞಾ ಹಾಗೆಯೇ, ನಮ್ಮಲ್ಲಿ ಚೊಂಬು ಕುಟ್ಟಿದರೆ ಬರುವ ಸದ್ದು ಹೊರಡಿಸುವ ಇದೇ ಪ್ರಭೇದದ ಚೊಂಬು ಕುಟಿಕವೂ ಇದೆ. ಹಾಗೆಯೇ, ಪಶ್ಚಿಮಘಟ್ಟದ ಕಾಡುಗಳಲ್ಲಿ ಮಾತ್ರ ಕಾಣುವ ಕುಟುರವೂ ಇದೆ. ಹುಡುಕಾಟ ಆರಂಭವಾಗಲಿ!
