- ರಾಘವೇಂದ್ರ ಈ. ಹೊರಬೈಲು
ಮೇಷ್ಟ್ರು ಚೊಂಬೇಶ ಪಕ್ಕಾ ಕನ್ನಡಾಭಿಮಾನಿ. ಮೇಷ್ಟ್ರಾಗಿ ನೌಕರಿ ಸಿಕ್ಕಾಗ ಅವನಿಗೆ ಸ್ವರ್ಗಕ್ಕೆ ಒಂದೇ ಗೇಣು. ಸರ್ಕಾರಿ ಕೆಲಸ ಸಿಕ್ಕಿತೆಂಬುದಕ್ಕೆ ಮಾತ್ರವಲ್ಲ, ತಾನು ಬಯಸಿದ, ತನ್ನಿಷ್ಟದ ಕೆಲಸ ಸಿಕ್ಕಿತೆಂದು. ನೌಕರಿಯ ಆರ್ಡರ್ ಹಿಡಿದು, ವಿಶ್ವವಿಜೇತನಂತೆ ತನಗೆ ದೊರೆತ ಹೊಸ ಶಾಲೆಯಿರುವ ಊರಿಗೆ ಕಾಲಿಟ್ಟಾಗಲೇ ಅವನಿಗೆ ಅರಿವಾದದ್ದು, ತಾನು ಬಯಸಿ ಪಡೆದ ಕೆಲಸ ಅಷ್ಟು ಸುಲಭಕ್ಕೆ ಸಾಗುವಂತದ್ದಲ್ಲ ಎಂದು. ತಾನು ಹೋಗುತ್ತಿರುವ ಊರು ಯಾವ ತರದ್ದು, ಅಲ್ಲಿಯ ಭಾಷೆ ಹೇಗೆ ಎಂಬುದರ ಬಗ್ಗೆ ಅಲ್ಪ ಸ್ವಲ್ಪ ತಿಳಿದಿತ್ತು. ಆದರೆ ಮೊದಲ ದಿನ ಊರಿಗೆ ಬಂದಿಳಿದದ್ದೇ ತಾನು ಯಾವ ರಾಜ್ಯದಲ್ಲೀದ್ದೀನಿ ಎಂಬುದೇ ಮರೆಯುವ ವಾತಾವರಣ ಚೊಂಬೇಶನಿಗೆ. ಶುದ್ಧ ಕನ್ನಡದ ಜೊತೆಗೆ ಹರುಕು ಮುರುಕು ಇಂಗ್ಲಿಷ್ ಮತ್ತು ಅಲ್ಪ ಸ್ವಲ್ಪ ಹಿಂದಿಯನ್ನು ತಿಳಿದುಕೊಂಡಿದ್ದ ಚೊಂಬೇಶನಿಗೆ ಈ ಹೊಸ ಊರಿನ ಭಾಷೆ ಎಳ್ಳಷ್ಟೂ ಅರ್ಥವಾಗದ್ದು. ಕರ್ನಾಟಕದಲ್ಲೇ ತನಗೆ ನೌಕರಿ ದೊರೆತಿದ್ದು, ತಾನೀಗ ಕರ್ನಾಟಕದಲ್ಲೇ ಇದ್ರೂ ಒಬ್ಬೇ ಒಬ್ಬರೂ ಕನ್ನಡ ಮಾತಾಡುವವರು ಅವನಿಗೆ ಸಿಗದೆ, ‘ಕತ್ತಲಲ್ಲಿ ಕಣ್ಕಟ್ಟಿ ಬಿಟ್ಟವನಂತಾದ’. ಅದು ಕರ್ನಾಟಕ ಮತ್ತು ಆಂದ್ರಪ್ರದೇಶದ ಗಡಿ ಭಾಗದಲ್ಲಿರುವ ತೆಲುಗು ಪ್ರಭಾವಿತ ಊರು. ಅಲ್ಲಿನ ಆಡಳಿತ ಭಾಷೆಯೇ ತೆಲುಗು ಆಗಿ ಹೋಗಿದೆ. ಸರಿ, ಶಾಲೆಗೆ ಹೋಗಿ ವರದಿ ಮಾಡಿಕೊಂಡು, ಎಲ್ಲಾದರೇನು ತನ್ನ ಕಾಯಕ ತಾನು ಮಾಡಬೇಕು, ಅದರಲ್ಲೂ ಪಕ್ಕಾ ಕನ್ನಡಾಭಿಮಾನಿಯಾದ ತನಗೆ ಇದೊಂದು ಅವಕಾಶವೆಂದುಕೊಂಡು ಕಾಯಕವನ್ನರಂಭಿಸಿಯೇಬಿಟ್ಟ.
ಕನ್ನಡವೇ ಮರೀಚಿಕೆಯಂತಿರುವ ಆ ಊರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಂದ ಬರುತ್ತಿರುವ ಮಕ್ಕಳಿಂದ ಅದೆಷ್ಟು ಕನ್ನಡ ನಿರೀಕ್ಷಿಸಲು ಸಾಧ್ಯ? ಹಿರಿ- ಕಿರಿಯಾರಾದಿಯಾಗಿ, ಅಕ್ಷರಸ್ಥ- ಅನಕ್ಷರಸ್ಥರಾದಿಯಾಗಿ ಎಲ್ಲರೂ ತೆಲುಗಿನಲ್ಲೇ ಉಸಿರಾಡುವ ಪ್ರದೇಶವದು. ಮನೆಯೊಳಗೆ, ಹೊರಗೆ, ಸುತ್ತ ಮುತ್ತಲೆಲ್ಲಾ ತೆಲುಗಿನಲ್ಲೇ ಮಾತನಾಡುವ, ಶಾಲೆಗೆ ಬಂದಾಗ ಮಾತ್ರ ಕನ್ನಡವೆಂಬ ಕನ್ನಡವನ್ನು ಕಲಿಯುವ ಮತ್ತು ಮೇಷ್ಟ್ರು ಕನ್ನಡ ಮಾತಾಡಿಸಿದರೆ ಮಾತ್ರ ಕನ್ನಡದಲ್ಲಿ ಮಾತನಾಡುವ, ಇಲ್ಲದಿದ್ದರೆ ಮೇಷ್ಟ್ರ ಜೊತೆಗೂ ತೆಲುಗಿನಲ್ಲೇ ವ್ಯವಹರಿಸುವ ಮಕ್ಕಳಿಗೆ ಕನ್ನಡವೆಂಬುದು ‘ಕನ್ನಡಿಯೊಳಗಿನ ಗಂಟು!’ ಅಂತೂ ಪಟ್ಟು ಬಿಡದೆ ಕಲಿಸಲು ಪ್ರಯತ್ನಿಸುವ ಕೆಲವು ಮೇಷ್ಟ್ರುಗಳ ಪರಿಶ್ರಮದಿಂದಲೋ, ಸರ್ಕಾರದ ಕನ್ನಡ ಮಾಧ್ಯಮವೆಂಬ ನೀತಿಯಿಂದಲೋ ಇಂತಹ ಪ್ರದೇಶಗಳಲ್ಲಿ ಮಕ್ಕಳು ತೆಲುಗಿಗೇ ಅಂಟಿಕೊಂಡರೂ ಕೆಲವೊಮ್ಮೆ ಕನ್ನಡದೊಂದಿಗೆ ತೆಲುಗು ಸೇರಿಸಿ ‘ತೆಲುಗನ್ನಡವೋ’, ‘ತೆನ್ನಡವೋ’, ‘ಕಲುಗೋ’ ಮಾತನಾಡಲು ಪ್ರಯತ್ನಿಸುತ್ತಾರೆ. ಪಾಪ, ನಮ್ಮ ಚೊಂಬೇಶನಿಗೇನು ಗೊತ್ತು. ತೆಲುಗಿನ ಒಂದೆರಡು ಪದಗಳ ಗಂಧಗಾಳಿಯೂ ಇಲ್ಲದ ಚೊಂಬೇಶ ಶಾಲೆಗೆ ಹೋದ ಹೊಸತರಲ್ಲಿ ಒಂದು ದಿನ “ನಿನ್ನೆ ಯಾಕೋ ಶಾಲೆಗೆ ಬರ್ಲಿಲ್ಲ” ಅಂತ ಒಬ್ಬ ವಿದ್ಯಾರ್ಥಿಗೆ ಕೇಳಿದವನಿಗೆ ತಲೆ ಸುತ್ತಿ ಬಂದಿತ್ತು. “ನಾನೇನುಕ್ಕೆ ಬಂದಿಲ್ಲ ಸಾರ್?” ಪ್ರಶ್ನೆಗೇ ಪ್ರಶ್ನೆ! “ನೀನ್ ಯಾಕೆ ಬಂದಿರ್ಲಿಲ್ವೋ ಅಂದ್ರೆ ನಂಗೇ ಪ್ರಶ್ನೆ ಮಾಡ್ತೀಯಲ್ಲೋ” ಚೊಂಬೇಶನ ಪ್ರಶ್ನೆ. “ನಿಂಗೆ ನಮ್ಮಪ್ಪ ಹೇಲಿದ್ನಂತೆ ಸಾರ್” ಈ ಮಾತನ್ನು ಕೇಳಿ ನಮ್ಮ ಚೊಂಬೇಶ ಮೇಷ್ಟ್ರು ಮೂರ್ಛೆ ಹೋಗೋದೊಂದೇ ಬಾಕಿ. “ಸರಿ ಹಾಳಾಗಿ ಹೋಗ್ಲಿ, ನಿನ್ನೆ ಎಲ್ಲಿಗೆ ಹೋಗಿದ್ಯೋ?” “ಬಾಯ್ ತಾಕೆ ಹೋಗಿದ್ದೆ ಸಾರ್, ಅಂದುಕೆ ಬರಲಿಲ್ಲ ಸಾರ್” ಎಂದ ವಿದ್ಯಾರ್ಥಿ. ಬಾಯಿ ಬಿಟ್ಕೊಂಡು ನೋಡೋ ಸ್ಥಿತಿ ಚೊಂಬೇಶನದ್ದು. ಸರಿ, ಸಾವರಿಸಿಕೊಂಡು ಕೇಳಿದ. “ಯಾರ ಬಾಯ್ ತಾಕೆ ಹೋಗಿದ್ಯೋ?” “ನಮ್ಮ ಚಿಕ್ಕಪ್ಪನ ಬಾಯ್ ತಾಕೆ ಸಾರ್”. “ನಿಮ್ಮ ಚಿಕ್ಕಪ್ಪನ ಬಾಯ್ ಹತ್ತಿರ ನೀನೇನ್ ಮಾಡ್ತಿದ್ಯೋ?” “ಬಾಯ್ ತಾಕೆ ಶಾಪ ಹಿಡಿಯಾಕೆ ಹೋಗಿದ್ದೆ ಸಾರ್”. ಬಾಯಿಂದ ಹಿಡಿ ಶಾಪ ಹಾಕೋದನ್ನು ಚೊಂಬೇಶ ಕೇಳಿದ್ದ, ‘ಇದೇನಿದು ಬಾಯ್ ಹತ್ರ ಶಾಪ ಹಿಡಿಯೋದು?’ ” ಏಯ್ ಕತ್ತೆ ಅದೇನು ಸರಿಯಾಗಿ ಹೇಳು” ಎಂದರಚಿದ. “ಬಾಯ್ ತಾಕೆ ಪಿಶ್ ಹಿಡಿಯಾಕೆ ಹೋಗಿದ್ದೆ ಸಾರ್”. ಮತ್ತೆ ಚೊಂಬೇಶ ಮೇಷ್ಟ್ರ ತಲೆ ಕೆಡ್ತು. “ಬಾಯಲ್ಲಿ ಯಾವನಾದ್ರೂ ಮೀನು ಬಿಟ್ಕೊಂಡಿರ್ತಾನಾ? ಅದೇನೋ ಬಾಯೋ, ಕೆರೆನೋ?” ಎಂದಬ್ಬರಿಸಿದ. ಅಷ್ಟರಲ್ಲಿ ಯಾರೋ ಇರೋದ್ರಲ್ಲೇ ಸ್ವಲ್ಪ ಚೆನ್ನಾಗಿ ಕನ್ನಡ ಬರೋ ಬುದ್ಧಿವಂತ ಬಂದು ‘ಬಾಯ್’ ಅಂದ್ರೆ ‘ಬಾವಿ’ ಅಂದ, ಚೊಂಬೇಶ ತಲೆ ಕೆರ್ಕೊಂಡ.
ಚೊಂಬೇಶ ಮೇಷ್ಟ್ರು ಕನ್ನಡದಲ್ಲಿ ಮಾತಾಡ್ಸಿದ್ದಕ್ಕೆ ಆವತ್ತು ಆ ಹುಡುಗ ಕನ್ನಡದಲ್ಲಿ ಮಾತನಾಡಿದ್ದ. ಇಲ್ಲ ಅಂದ್ರೆ ಅವನೊಬ್ನೇ ಅಲ್ಲ, ಎಲ್ಲರೂ ಮಾತಾಡೋದು ತೆಲುಗಿನಲ್ಲಿ ಮಾತ್ರವೇ. ಇದು ಆಂದ್ರದ ಗಡಿ ಪ್ರದೇಶವಾದ್ರಿಂದ ಇಲ್ಲಿ ತೆಲುಗು, ಬೇರೆ ಗಡಿ ಭಾಗಗಳಲ್ಲಿ ಆ ರಾಜ್ಯಗಳ ಭಾಷೆಯದೇ ಭರಾಟೆ ಎಂಬುದು ಚೊಂಬೇಶನಿಗೆ ತಿಳಿಯದ ವಿಷಯವೇನಲ್ಲ. ಕರ್ನಾಟಕದ ಒಳಗಿದ್ದು, ಇಲ್ಲಿಯ ಅನ್ನ ತಿಂದು ಕನ್ನಡ ಬಂದರೂ ಮಾತನಾಡದೆ, ಒಂದು ದಿನ ‘ಕನ್ನಡ ರಾಜ್ಯೋಸ್ತವ!’ ಆಚರಿಸಿ ಕೈತೊಳೆದುಕೊಳ್ಳುವ ಇಂತಹ ಪ್ರದೇಶಗಳಲ್ಲಿ ತಾನೇನಾದರೂ ಮಾಡಲೇಬೇಕೆಂಬುದು ಚೊಂಬೇಶನ ತೀರ್ಮಾನ. ಹಾಗಾಗಿ ತನ್ನ ಮನಸ್ನಲ್ಲಿ ಒಂದು ವಿಷಯವನ್ನು ಗಟ್ಟಿಯಾಗಿ ನಿಶ್ಚಯಿಸಿದ. ನನ್ನೊಬ್ನಿಂದಾನೆ ಕನ್ನಡ ಉಳೀದಿದ್ರೂ ಪರವಾಗಿಲ್ಲ, ನಾನೊಬ್ನಾದ್ರೂ ಯಾಕೆ ಪ್ರಯತ್ನಿಸಬಾರ್ದು ಅಂದುಕೊಂಡು, ತನ್ನಿಂದ ಸಾಧ್ಯವಾದಷ್ಟು ಕನ್ನಡಪರವಾದ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತುತ್ತಾ, ಶಾಲೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿ, ಮಕ್ಕಳಲ್ಲಿ ಕನ್ನಡದ ಮಹತ್ತನ್ನು ತಿಳಿಸುತ್ತಾ, ಅದರ ಅವನತಿಗೆ ಕಾರಣವನ್ನೂ ತಿಳಿಸುತ್ತಾ, ಕನ್ನಡ ಶಾಲೆಯನ್ನು ಕಾಪಿಡುವಲ್ಲಿ ತನ್ನ ಕೈಲಾದ ಕಾರ್ಯವನ್ನು ಮಾಡುತ್ತಾ, ಕನ್ನಡಕ್ಕಾಗಿ ಕಟಿಬದ್ಧನಾಗಿ ಸಾಗಿದ್ದಾನೆ.