- ಸದಾಶಿವ್ ಸೊರಟೂರು
ಅವತ್ತೊಂದಿನ ಹೀಗಾಯಿತು. ನಾನು ಮೈಸೂರಿಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದೆ. ಸರಿಯಾಗಿ ಟ್ರೈನ್ ಅರಸೀಕೆರೆಗೆ ಬಂದು ನಿಲ್ಲುವ ಹೊತ್ತಿಗೆ, ಮೈಸೂರಿನಿಂದ ಹೊರಟು ಶಿವಮೊಗ್ಗ ಸೇರುವ ರೈಲು ನನ್ನ ಪಕ್ಕದ ಫ್ಲಾಟ್ ಫಾರ್ಮಿಗೆ ಬಂದು ನಿಂತಿತು. ನಾನು ಬಾಗಿಲ ಬಳಿ ಬಂದೆ, ಎದುರಿಗೆ ನಿಂತ ರೈಲಿನಿಂದ ಹುಡುಗಿಯೊಬ್ಬಳು ಕೂಡ ಬಾಗಿಲ ಬಳಿ ಬಂದು ನಿಂತಳು. ಅಚಾನಕ್ಕಾಗಿ ಅವಳ ಕಡೆ ದೃಷ್ಟಿ ಹೋಯಿತು. ಅವಳು ನನ್ನನ್ನು ನೋಡಿದಳು. ನನಗ್ಯಾವ ಪರಿಚಯವೂ ಇರಲಿಲ್ಲ. ಬಹುಶಃ ಅವಳಿಗೂ ಇಲ್ಲವೇನೊ!. ಅವಳು ನೋಡತೊಡಗಿದಳು, ನಾನೂ ನೋಡಿದೆ. ನೋಡುತ್ತಲೇ ಇದ್ದೆ. ನನ್ನ ರೈಲಿಗೆ ಸಿಳ್ಳೆ ಬಿತ್ತು. ಕ್ರಾಸಿಂಗ್ ಟೈಮ್ ಮುಗಿದಿತ್ತು ಅನಿಸುತ್ತೆ. ಅವಳ ರೈಲು ಕೂಡ ಮೆಲ್ಲಗೆ ಗಾಲಿ ಬಿಚ್ಚಿತು. ಎರಡೂ ರೈಲುಗಳು ಅಕ್ಕಪಕ್ಕದಲ್ಲಿ ನಿಧಾನಕ್ಕೆ ವಿರುದ್ಧ ದಿಕ್ಕಿನಲ್ಲಿ ಇಷ್ಟಿಷ್ಟೇ ತೆವಳತೊಡಗಿದವು. ಅವಳು ನಕ್ಕಳು, ನಾನೂ ನಕ್ಕೆ. ಹುಬ್ಬು ಹಾರಿಸಿದಳು, ನನ್ನಿಂದ ಆಗಲಿಲ್ಲ ಸೋತೆ. ಕೈ ಬೀಸಿ ‘ಹಾಯ್..’ ಮಾಡಿದಳು. ನಾನೂ ಕೈ ಬೀಸಿ ಹಾಯ್ ಅಂದೆ. ನಾವೆಷ್ಟು ಹತ್ತಿರವಾಗಬೇಕು ಎಂಬ ಆತುರದಲ್ಲಿದ್ದವೊ ಅಷ್ಟೇ ಆತುರದಲ್ಲಿ ನಮ್ಮಿಬ್ಬರ ರೈಲುಗಳು ವೇಗ ಹೆಚ್ಚಿಸಿಕೊಂಡವು. ಇವೆಲ್ಲಾ ಜಸ್ಟ್ ಅರೆ ನಿಮಿಷದಲ್ಲಿ ನಡೆದುಹೋದವು. ನಾನು ಬಾಗಿಲ ಬಳಿ ಬಂದು ಬಾಗಿ ನೋಡತೊಡಗಿದೆ; ಅವಳು ಕೂಡ!. ರೈಲು ದೂರ-ದೂರವಾಗುವವರೆಗೂ ಇಬ್ಬರೂ ಕಣ್ಣು ಕೀಳಲಿಲ್ಲ. ದೂರ ಆಗ್ತಾ ಆಗ್ತಾ ಇಡೀ ರೈಲು ಒಂದು ಚುಕ್ಕಿಯಂತಾಗಿ ಮರೆಯಾಯಿತು. ಎಷ್ಟೊ ಹೊತ್ತಿನವರೆಗೂ ನಾನು ಆ ಖಾಲಿ ದಾರಿಯನ್ನು ನೋಡುತ್ತಲೇ ನಿಂತಿದ್ದೆ. ಇದೆಲ್ಲವೂ ಒಂದು ಕನಸೆಂಬಂತೆ ಮುಗಿದುಹೋಯಿತು. ಅಂದಿನಿಂದ ಆ ಜಂಕ್ಷನ್ ಗೆ, ಆ ರೈಲುಗಳಿಗೆ, ಅಲ್ಲಿನ ಗಲಾಟೆಗೆ ಒಂದು ಜೀವ ಬಂದು ಬಿಡ್ತು. ಪ್ರತಿ ಬಾರಿ ಅರಸೀಕೆರೆಗೆ ಹೋದಾಗ ಅವಳನ್ನು ಹುಡುಕತೊಡಗಿದೆ. ಹುಡುಕಿ-ಹುಡುಕಿ ಸೋತೆ. ಹದಿನೈದು ವರ್ಷಗಳು ಕಳೆದುಬಿಟ್ಟವು. ಇತ್ತೀಚೆಗಂತೂ ಆ ಮಾರ್ಗದಲ್ಲಿ ಹೋಗಲೂ ಸಾಧ್ಯವಾಗದಷ್ಟು ಬದುಕಿನಲ್ಲಿ ಬ್ಯುಸಿಯಾಗಿಬಿಟ್ಟೆ.
ಬರೀ ಧಡಧಡ ಸದ್ದು. ಅಂಗಳದಲ್ಲಿ ಮಕ್ಕಳು ಆಡುವ ಆಟಿಕೆಗಳಂತೆ ಅಲ್ಲೊಂದು-ಇಲ್ಲೊಂದು ರೈಲು. ಟೀ, ಕಾಫಿ, ಇಡ್ಲಿ-ವಡೆ, ದೋಸೆ ಅಂತ ಕೂಗುವವನ ಪ್ರಾಸ ನನ್ನೊಳಗೆ ಪ್ರತಿ ಬಾರಿ ಕವನವೊಂದನ್ನು ಹುಟ್ಟುಹಾಕುತ್ತಿತ್ತು. ಅದೊಂದು ಜಂಕ್ಷನ್. ಎಲ್ಲೆಲ್ಲಿಗೋ ಹಾದು ಹೋಗುವ ರೈಲುಗಳು ಇಲ್ಲಿ ಒಂದು ಹಾಜರಾತಿ ಪಡೆಯಬೇಕು. ಪ್ರತಿ ರೈಲು ಅಲ್ಲಿ ಬಂದು ನಿಂತಾಗ ಜಾತ್ರೆ ತೆರೆದುಕೊಳ್ಳುತ್ತದೆ. ಊರಿನ ತೇರು ನೆನಪಾಗುತ್ತದೆ. ಕೆನ್ನೆಗೆ ರಂಗು ಮೆತ್ತಿಕೊಂಡು ಓಡಾಡುವ ಹುಡುಗಿಯರು ನೆನಪಾಗುತ್ತಾರೆ. ಹೋಗ್ತಾ ಮೈಸೂರು, ಬರ್ತಾ ಶಿವಮೊಗ್ಗ ಮುಟ್ಟಬೇಕಾದ ನಾನು ಆ ಜಂಕ್ಷನ್ನಲ್ಲಿ ಸುಮ್ಮನೆ ಒಂದು ನಿಮಿಷ ಇಳಿಯುತ್ತೇನೆ. ಒಂದು ಕಪ್ ಚಹಾ ಹೀರುತ್ತೇನೆ. ಕ್ಷಣಕ್ಷಣಕ್ಕೂ ಹುಟ್ಟಿ ಕರಗುವ ಬದುಕಿನ ಜಾತ್ರೆಯನ್ನು ಇಷ್ಟಿಷ್ಟೇ ಎದೆಯೊಳಗೆ ತುಂಬಿಕೊಳ್ಳುತ್ತಾ ಬದುಕಿಗೆ ಎಂತಹ ಅದ್ಭುತ ಬಣ್ಣಗಳಿವೆಯಲ್ಲಾ ಅಂತೆನಿಸಿ ರೋಮಾಂಚಿತನಾಗುತ್ತೇನೆ. ಹೀಗೆ ಮತ್ತೆ ಮತ್ತೆ ಬದುಕಿನ ರಂಗು ತೋರಿಸುವ ಆ ಜಂಕ್ಷನ್ ನ ಹೆಸರು ಅರಸೀಕೆರೆ.
ಮೊನ್ನೆ ಫೇಸ್ಬುಕ್ನಲ್ಲಿ ಸುಮ್ಮನೆ ಸ್ಕ್ರಾಲ್ ಮಾಡುತ್ತಾ ಕೂತಿದ್ದೆ. ಯಾರೋ ಶೇರ್ ಮಾಡಲಾಗಿದ್ದ ಒಂದು ಬರಹ ಸೆಳೆಯಿತು. ಸ್ಕ್ರಾಲ್ ಮಾಡೋದನ್ನ ನಿಲ್ಲಿಸಿ ಅದರ ಹೆಡ್ಡಿಂಗ್ ನೋಡಿದೆ. ಕುತೂಹಲವಿತ್ತು, ಓದತೊಡಗಿದೆ.
ಒಂದು ನೋಟ, ಒಂದು ನಗು, ಒಂದು ದನಿ…
ನನ್ನ ಲೈಫ್ನಲ್ಲಿ ಒಂದು ಬೆಚ್ಚನೆಯ ನೆನಪಿದೆ. ಅವತ್ತು ಯಾವುದೂ ಕೂಡ ಉದ್ದೇಶಪೂರ್ವಕವಾಗಿ ನಡೆಯಲಿಲ್ಲ. ಆತ ಬಂದು ರೈಲಿನ ಬಾಗಿಲಲ್ಲಿ ನಿಂತಿದ್ದ. ತುಂಬಿದ ರೈಲು, ನಾನು ಬಾಗಿಲ ಬಳಿ ಬಂದು ನಿಂತೆ. ಅವನು ಕಣ್ಣಿಗೆ ಬಿದ್ದ. Not extraordinary,ಆದರೂ ಯಾಕೋ ಅವನನ್ನು ನೋಡಬೇಕು ಅನಿಸಿತು, ನೋಡಿದೆ. ಮತ್ತೆ ಮತ್ತೆ ನೋಡಿದೆ, ಆತನೂ ನೋಡಿದ. ಯಾಕೊ ಏನೊ ಗೊತ್ತಿಲ್ಲ ನಾನು ಹುಬ್ಬು ಹಾರಿಸಿದೆ. ಪಾಪ ಅವನು ನಾಚಿಕೊಂಡ ಅನಿಸುತ್ತೆ, ಗಂಡು ಮಕ್ಕಳು ಪಾಪದವರು. ಕೈಯೆತ್ತಿ ಹಾಯ್ ಅಂದೆ. ಅವನು ನನಗೆ ಪ್ರತಿಯಾಗಿ ಹಾಯ್ ಮಾಡ್ತಾನೆ ಅಂದುಕೊಂಡಿರಲಿಲ್ಲ, ಆದ್ರೂ ಮಾಡಿದ. ನನ್ನನ್ನು ತಲೆಹರಟೆ ಹುಡುಗಿ ಅಂದುಕೊಂಡನೊ ಏನೊ. ರೈಲು ಹೊರಟಿತು. ನನ್ನ ಎದೆ ಜೋರಾಗಿ ಒಡೆದುಕೊಳ್ಳಲು ಆರಂಭಿಸಿತು. ಆತ ದೂರ ದೂರ ಹೋದ. ನನ್ನ ರೈಲು ಕೂಡ ಓಡುತ್ತಿತ್ತು. ಮತ್ತೆಂದೂ ಸಿಗದಂತೆ ದೂರವಾದೆವು. ಎಷ್ಟೋ ವರ್ಷಗಳ ಕಾಲ ಅದೇ ಜಂಕ್ಷನ್ ನಲ್ಲಿ ಅವನನ್ನು ಹುಡುಕಿದೆ. ಕಣ್ಣಿಗೆ ಬೀಳಲಿಲ್ಲ. ಪಾಪದ ಹುಡುಗ. ಮದುವೆ, ಮಕ್ಕಳು, ಜವಾಬ್ದಾರಿ, ಜಂಜಾಟ ಎಲ್ಲವೂ ನನ್ನನ್ನು ಬಿಡುವಿಲ್ಲದಂತೆ ಕಬಳಿಸಿಬಿಟ್ಟವು. ಆದರೆ ಆ ಒಂದು ನೆನಪನ್ನು ಮಾತ್ರ ತುಂಬಾ ಜತನ ಮಾಡಿಟ್ಟುಕೊಂಡಿದ್ದೀನಿ.
ಆ ಬರಹವನ್ನು ಓದಿ ಬೆವೆತು ಹೋದೆ. ತೊಟ್ಟ ಅಂಗಿಯನ್ನು ಕಿತ್ತು ಎಸೆದು ಕುಣಿದಾಡಬೇಕು ಅನಿಸಿತು. ಅಷ್ಟು ಖುಷಿಯಾಗಿ ಹೋಗಿತ್ತು. ಅಬ್ಬಾ ನಿಜಕ್ಕೂ ಅದೆಂತಹ ಖುಷಿ. ಪಟಾಪಟ್ ಅಂತ ಅವಳ ಪ್ರೊಫೈಲ್ ಚೆಕ್ ಮಾಡಿದೆ. ಮಸುಕು ನೆನಪಿನ ನಡುವೆ ಭಗ್ಗನೇ ಎದ್ದು ಬಂದ ಒಂದು ಅಸ್ಪಷ್ಟ ಪರಿಚಿತ ಮುಖ. Ohh my god ಅವಳೇ. ಹೌದು ಅವಳೇ! ಅದೇ ಮುಖ. ಹದಿನೈದು ವರ್ಷಗಳಾದ್ರೂ ನೆನಪಿನ ಆಳದಲ್ಲಿ ಮಾಸದೇ ಉಳಿದಿದ್ದ ಮುಖ. ಅಯ್ಯೋ ದೇವ್ರೇ ಹೀಗೂ ಆಗುತ್ತಾ? ಇದೆಲ್ಲಾ ಸಿನೆಮಾದಲ್ಲಿ ಆಗೋದಲ್ವಾ? ಅನಿಸಿಬಿಟ್ಟಿತು.
ನಾನು ನಿಜವಾದ ದ್ವಂದ್ವಕ್ಕೆ ಸಿಲುಕಿದ್ದು ಆಗ. “ನಾನೇ ರೀ ಆ ಹುಡುಗ..” ಅಂತ ಅವರ ಮುಂದೆ ಹೇಗೆ ಹೇಳುವುದು? ಅವಳಿಗೆ ನನ್ನ ಮುಖವೇ ಮರೆತು ಹೋಗಿರಬಹುದು. ಹದಿನೈದು ವರ್ಷವೆಂದರೆ ತಯಾಷೆಯೇ? ಪೇಸ್ಬುಕ್ ತೀರಾ ಅಪನಂಬಿಕೆಯ ತಾಣ. ಅವರು ನನ್ನನ್ನು ನಂಬುವುದಾದರೂ ಹೇಗೆ? ಅಷ್ಟಕ್ಕೂ ಈಗ ಇರುವ ಖುಷಿ, ತಲ್ಲಣ, ಕಾಯುವಿಕೆಯ ಆನಂದ ಕಳೆದು ಹೋಗಿಬಿಟ್ಟರೆ? ಇಷ್ಟಕ್ಕೂ ಬದುಕಿನಲ್ಲಿ ಇಬ್ಬರೂ ಸಾಕಷ್ಟು ದೂರ ಬಂದಿದ್ದೇವೆ. ಮತ್ತೇ ನಾವು ಅರಸೀಕೆರೆ ಜಂಕ್ಷನ್ ನಲ್ಲಿ ನಿಂತು ಅಲ್ಲಿಂದ ಎಲ್ಲವನ್ನೂ ಆರಂಭಿಸಲು ಸಾಧ್ಯವೇ? ಯಾಕೊ ಫ್ರೆಂಡ್ಸ್ ರಿಕ್ವೆಸ್ಟ್ ಬಟನ್ ಮೇಲೆ ಕೈ ಹೋಗಲಿಲ್ಲ. ನಾನು ನನ್ನ ಫೇಸ್ಬುಕ್ ಪುಟದಲ್ಲಿ ಅದೇ ಹ್ಯಾಶ್ ಟ್ಯಾಗ್ ಬಳಸಿ ಅದೇ ಟೈಟಲ್ ಕೊಟ್ಟು ಒಂದೆರಡು ಸಾಲು ಬರೆದುಕೊಂಡೆ. ಮುಂದೆ ಅವಳು ಅದೇ ಹ್ಯಾಶ್ ಟ್ಯಾಗ್ ಹಾಕಿ ತನ್ನದೇ ಬರಹವನ್ನು ಹುಡುಕಿಕೊಳ್ಳುವಾಗ ನನ್ನದೂ ಅವಳಿಗೆ ಸಿಗಲಿ ಎಂಬ ಒಂದು ಸಣ್ಣ ಬಯಕೆ. ಬದುಕಿನಲ್ಲಿ ಕೆಲವೊಂದು ಮುಗಿಯಬಾರದು. ದಡ ಸೇರಬಾರದು. ಉಳಿದು ಪದೇಪದೆ ಕಾಡಬೇಕು ; ಅವಳಂತೆ!.
