ಕನ್ನಡ ಕನ್ನಡ ಹಾ ಸವಿಗನ್ನಡ
ಕನ್ನಡದಲಿ ಹರಿ ಬರೆಯುವನು
ಕನ್ನಡದಲಿ ಹರ ತಿವಿಯುವನು…
ಈಗಲೂ ನೆನಪಿನ ಕೋಶದೊಳಗೆ ಬೆಚ್ಚಗೆ ಕುಳಿತಿದೆ ನಾಲ್ಕನೇ ತರಗತಿಯ ಪಠ್ಯದಲ್ಲಿ ಕಂಠಪಾಠ ಮಾಡಿದ ಪದ್ಯ.
ಹಾಗೇ ನೋಡಿದರೆ ಕನ್ನಡ ಬಿಟ್ಟು ಇಂಗ್ಲೀಷ್ ಮತ್ತು ಹಿಂದಿ ಭಾಷೆಯ ಒಂದಕ್ಷರವೂ ಗೊತ್ತಿರದ ಕಾಲವದು. ಕೆಲವೊಂದು ಇಂಗ್ಲೀಷ್ ಪದಗಳು ಸ್ಕೂಲ್ ಇಸ್ಕೂಲ್ ಆಗಿ ಕೆಲವೊಂದು ಕನ್ನಡದ ರೂಪಾತಂತರವಾಗಿ ಅದು ನಮ್ಮದೇ ಭಾಷೆಯೇನೋ ಅನ್ನುವಷ್ಟರ ಮಟ್ಟಿಗೆ ಆಗಿ ಬಳಸಿದ್ದು ಬಿಟ್ಟರೆ ಪ್ರಜ್ಞಾಪೂರ್ವಕವಾಗಿ ನಾವುಗಳು ಇಂಗ್ಲೀಷನ್ನು ಬಳಸಿದ್ದೇ ಇಲ್ಲ. ಕೆಲವೊಮ್ಮೆ ಚೂರು ಪಾರು ಗೊತ್ತಿದ್ದರೂ ಬಳಸಲು ಹೆದರಿಕೆ. ಯಾರಾದರೂ ಇಂಗ್ಲೀಷ್ ಮಾತನಾಡುವವರು ಸಿಕ್ಕರಂತೂ ಎದ್ದೆವೋ ಬಿದ್ದೆವೋ ಅಂತ ಪೋಲಿಸರ ಕಂಡಂತೆ ಭಯ ಭೀತರಾಗಿ ಓಡುತ್ತಿದ್ದದ್ದು ಯಾಕಾಗಿ?. ನಮ್ಮ ನೆರೆಮನೆಯ ಮಕ್ಕಳಿಬ್ಬರೂ ಕಾನ್ವೆಂಟ್ ಶಾಲೆಗೆ ಶೂ ಕೋಸಿ ಹೋಗುವುದನ್ನ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದು ಏಕಿರಬಹುದು ?.ನಮ್ಮಲಿ ಈ ಕೀಳರಿಮೆಯನ್ನು ಬಿತ್ತಿರಾದರೂ ಯಾರು?. ಈ ಗೊಂದಲದ ಹೊತ್ತಿನಲ್ಲೇ ಏಕಾಏಕಿ ಎಂಟನೇ ತರಗತಿಗೆ ನನ್ನನ್ನೂ ಸರಕಾರಿ ಶಾಲೆಯಲ್ಲಿ ಇದ್ದಂತಹ ಆಂಗ್ಲ ಬೋಧಿಸುವ ತರಗತಿಗೆ ಸೇರಿಸುವಾಗ ನಿಜಕ್ಕೂ ಗಲಿಬಿಲಿಗೊಂಡು ತಬ್ಬಿಬ್ಬಾದರೂ ಯಾವುದೋ ಒಂದು ರೀತಿಯ ಅಹಂ ನನ್ನೊಳಗೂ ಕಾಡಿದ್ದೂ ಸುಳ್ಳಲ್ಲ. ’ಎ’ ವಿಭಾಗ ಎಂದರೆ ಅದು ಬುದ್ಧಿವಂತ ಮಕ್ಕಳ ಗುಂಪು ಎಂದೇ ಅರ್ಥ. ಅಸಲಿಗೆ ಒಂದೇ ಒಂದು ಇಂಗ್ಲೀಷ್ ಪದ ತಲೆಗೆ ಹೊಕ್ಕದೆ , ಎದೆಯೊಳಗಿಳಿಯದೆ ಎಲ್ಲವನ್ನೂ ಪೂರ್ತಿ ಕಂಠ ಪಾಠ ಮಾಡಿ ಯಾವುದೋ ಪವಾಡದಂತೆ ಹತ್ತನೇ ಈಯತ್ತೆಯನ್ನು ಪಾಸು ಮಾಡಿದ್ದು ಬೇರೆ ವಿಷಯ. ತರಗತಿಯೊಳಗೆ ಬೆಪ್ಪು ತಕ್ಕಡಿಯಂತಾಗಿ ಅದೆಷ್ಟೋ ಬೆನ್ನಿಗೆ ಬಾರಿಸಿಕೊಂಡರೂ ಕ್ಲಾಸಿನ ಹೊರಗೆ ಮಾತ್ರ ಉಳಿದ ತರಗತಿಯ ಮಕ್ಕಳು ನಮ್ಮನ್ನು ವಿಶೇಷವಾಗಿ ನೋಡುತ್ತಿದ್ದದ್ದು ಇಂಗ್ಲೀಷ್ ಪ್ರಭಾವಳಿಯಾ?. ಆದರೆ ಎಲ್ಲಾ ಗುರುಗಳು ಭಯ ಹುಟ್ಟಿಸಿವಂತೆ ಕಂಡರೂ ಕನ್ನಡ ಟೀಚರು ಮಾತ್ರ ಶಾಂತ ದೇವತೆಯಂತೆ ಗೋಚರಿಸುತ್ತಿದ್ದದ್ದು ಸುಳ್ಳಲ್ಲ. ಅಷ್ಟೆಲ್ಲಾ ಹಗಲು ರಾತ್ರೆ ಉರು ಹೊಡೆದರೂ ಯಾವುದೂ ನೆನಪಿಲ್ಲದೆ ಕನ್ನಡದ ಎಲ್ಲಾ ಪದ್ಯಗಳು, ಗದ್ಯಗಳು ಇಂದಿಗೂ ಚಿತ್ತ ಭಿತ್ತಿಯಲ್ಲಿ ಮರೆತೆನೆಂದರೆ ಮರೆಯದೆ ಆಗಾಗ್ಗೆ ನೆನಪಾಗಿ ನೇವರಿಸಿ ಹೊಸತೊಂದು ಭಾವವನ್ನು ನಮ್ಮಲ್ಲಿ ಉದಿಸುವುದು ಯಾಕೆ?. ಕಾಲೇಜು ಮೆಟ್ಟಿಲು ಹತ್ತಿದಾಗ ಅದೇ ಕನ್ನಡದ ಮಕ್ಕಳು ನಮ್ಮನ್ನೂ ಹಿಂದಿಕ್ಕಿ ಹೋದರಲ್ಲ?. ಕನ್ನಡದ ಎದೆಹಾಲಿನ ಶ್ರೇಷ್ಟತೆಯನ್ನು ಉದಾಹರಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕೇ?. ಇವೆಲ್ಲಾ ಯೋಚಿಸುತ್ತಿರುವ ಹೊತ್ತಿನಲ್ಲಿ ೨೦ ವರುಷದ ಹಿಂದಿನ ಪ್ರಸಂಗವೊಂದು ನೆನಪಾಗಿ ಸುಳಿಯುತ್ತಿದೆ. ಇಂಗ್ಲೀಷ್ ಹವಾ ಜೋರಾಗಿ ಬೀಸುತ್ತಿದ್ದ ಸಮಯ. ಅದೊಂದು ಪ್ರತಿಷ್ಟಿತ ಆಂಗ್ಲ ಮಾದ್ಯಮ ಶಾಲೆಗೆ ಮಕ್ಕಳನ್ನು ಸೇರಿಸಬೇಕೆಂದರೆ ಸರತಿ ಸಾಲಿನಲ್ಲಿ ನಿಂತು ಸಂದರ್ಶನ ಪಾಸಾಗ ಬೇಕಿತ್ತು. ಇದೇ ಆತಂಕದಲ್ಲಿದ್ದ ಇಂಗ್ಲೀಷ್ ಮೋಹ ಅಂಟಿಸಿಕೊಂಡ ಹೆತ್ತವರೊಬ್ಬರು ಇದ್ದ ಬದ್ದ ಕೆಲಸ ಬಿಟ್ಟು ತನ್ನ ಮಗನಿಗೆ ಎಬಿಸಿಡಿ ಕಲಿಸಿ ಬಣ್ಣಗಳ ಪರಿಚಯ ಮಾಡಿಸಿ ಹೆಮ್ಮೆಯಿಂದ ಹೆಮ್ಮೆಯಿಂದ ಗೆದ್ದೆವೆಂದು ಬೀಗುತ್ತಾ ಸಂದರ್ಶನ ಕೊಠಡಿಯೊಳಗೆ ಹೋದರೆ, ಅಲ್ಲಿ ಆನೆಯನ್ನು ತೋರಿಸಿ ವಾಟ್ ಈಸ್ ದಿಸ್ ಅಂತ ಕೇಳಿದರೆ ಮಗು ಆನೆ ಎನ್ನಬೇಕೆ?!. ಹೋಗಲಿ ಬಿಡು ಇದರ ಕಲರ್ ಗುರುತಿಸು ಅಂದರೆ ಮಗು ತಕ್ಷಣವೇ ಅದು ಕರಿ ಬಣ್ಣ ಅಂದಿತ್ತಂತೆ. ಇಲ್ಲ, ದಿಸ್ ಈಸ್ ಬ್ಲ್ಯಾಕ್ ಅಂತ ಎಷ್ಟು ಹೇಳಿದರೂ ಮಗು ಒಪ್ಪದೆ ಆನೆಯ ಬಣ್ಣ ಕರಿಯೇ ಅಂತ ರಚ್ಚೆ ಹಿಡಿದು ಕೂಗಿ ಹೊರಬಂತಂತೆ. ಇದು ತಮಾಷೆಯಂತೆ ಅನ್ನಿಸಿದರೂ ಇದರ ಹಿಂದೆ ಎಷ್ಟೊಂದು ಅರ್ಥ ತೆರೆದುಕೊಳ್ಳುತ್ತದೆ? . ಇದುವೇ ಸರಿ ಅಂತ ವಾದ ಮಾಡಲು , ಪ್ರತಿಭಟಿಸಲು ಧೈರ್ಯ ದಕ್ಕುವುದು ನಮ್ಮ ಕನ್ನಡದಲ್ಲಿಯೇ. ಇಂತಹ ಹೊತ್ತಿನಲ್ಲಿ ಇವತ್ತು ಕನ್ನಡ ಶಾಲೆಗಳು ಒಂದೊಂದೇ ಬಾಗಿಲು ಹಾಕುತ್ತಿವೆ.
ಬಾಬಾ..ಮಳೆರಾಯ ಮರೆತು ರೈನ್ ರೈ ಗೋ ಅವೇ ಅಂತ ಹಾಡಿಕೊಳ್ಳುವಾಗಲೆಲ್ಲಾ
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯ… ಅಂತ ಬಲವಾಗಿ ಅನ್ನಿಸಿ ಎದೆಯೊಳಗಿನಿಂದ ಮೊರೆಯುತ್ತಿದೆ.
- ಸ್ಮಿತಾ ಅಮೃತರಾಜ್ ಸಂಪಾಜೆ