- ಎನ್. ಶೈಲಜಾ ಹಾಸನ
ಛತ್ರಿ , ಕೊಡೆ, ಅಂಬ್ರಲಾ ಹೀಗೆ ನಾನಾ ಹೆಸರಿನಿಂದ ಕರೆಸಿ ಕೊಳ್ಳುವ ಈ ವಸ್ತು ಮಳೆಗಾಲದ ನೆಂಟ ಹಾಗು ಬಿಸಿಲಿನ ಭಂಟ .ಈ ನೆಂಟ ಇಲ್ಲದೆ ಹೋದರೆ ಮಳೆಗಾಲದಲ್ಲಿ ಹೊರ ಹೋಗುವಂತೆಯೇ ಇಲ್ಲ. ಸುರಿಯುವ ಮಳೆಯಲಿ ನೆನೆಯದಂತೆ ರೈನ್ ಕೋಟು, ಜರ್ಕಿನ್ ಇನ್ನೂ ಅದೇನೆನೋ ಹೊಸ ಹೊಸ ವಸ್ತುಗಳ ಆವಿಷ್ಕರಿಸಲಾಯಿತಾದರೂ ಈ ಕೊಡೆಯ ಮುಂದೆ ಅವ್ಯಾವುವೂ ನಿಲ್ಲಲಾರವು.
ಬಾಲ್ಯದಲ್ಲಿ ಸಿನಿಮಾ ನೋಡಲು ಹೋದಾಗ ” ಮಳೆಯಲಿ ಬಿಸಿಲಲಿ ಅರಳುವ ಹೂ ಯಾವುದೆಂದು” ಸಿನಿಮಾ ನಾಯಕ ಕೇಳಿದರೆ ನಾಯಕಿ ಉತ್ತರ ಗೊತ್ತಿಲ್ಲದೆ ಬ್ಬೆಬ್ಬೆಬ್ಬೆ ಎನ್ನುವಾಗ ನಾಯಕ ಉತ್ತರ ಹೇಳುವ ಮುಂಚೆಯೇ ಸಿನಿಮಾ ನೋಡುತ್ತಿದ್ದ ನಾವು ಛತ್ರಿ ಛತ್ರಿ ಅಂತ ಎಲ್ಲ ರೂ ಕೇಳುವಂತೆ ಕಿರುಚಿ ಅಪ್ಪ ಅಮ್ಮನಿಂದ ಚೆನ್ನಾಗಿ ಬೈಸಿಕೊಂಡಿದ್ದು ಉಂಟು.
ಈ ಕೊಡೆ ಬಗ್ಗೆ ಇನ್ನೊಂದು ಸ್ವಾರಸ್ಯಕರ ಘಟನೆ ನೆನಪಾಗುತ್ತದೆ. ಲೀವ್ ಲೋಟಸ್ ಪರ್ಲ್ಸ ಅಂಬ್ರಲಾ ಅಂದರೆ ಏನು ಅಂತ ಕನ್ನಡದಲ್ಲಿ ಹೇಳು ಅಂತ ಹೈಸ್ಕೂಲಿನಲ್ಲಿದ್ದಾಗ ಎಲ್ಲಾ ಗೆಳತಿಯರಿಗೂ ಕೇಳಿ ಎಲೆ ಕಮಲ ಮುತ್ತು ಕೊಡೆ ಅಂತ ಉತ್ತರ ಪಡೆದು ಜೋರಾಗಿ ನಗುತ್ತಿದ್ದ ತುಂಟ ಗೆಳತಿಯರ ನೆನಪಾಗಿ ಈಗಲೂ ತುಟಿ ಮೇಲೆ ನಗು ಅರಳುತ್ತದೆ.
ಕೊಡೆ ಅಥವಾ ಛತ್ರಿಯನ್ನು ಹೇಗೆ ತಯಾರಿಸುತ್ತಾರೆಂದರೆ ಕಟ್ಟಿಗೆ ಅಥವಾ ಲೋಹದ ಅಡ್ಡಪಟ್ಟಿಗಳಿಂದ ಆಧಾರಪಡೆದ, ಸಾಮಾನ್ಯವಾಗಿ ಒಂದು ಕಟ್ಟಿಗೆಯ, ಲೋಹದ, ಅಥವಾ ಪ್ಲಾಸ್ಟಿಕ್ ಕೋಲಿನ ಮೇಲೆ ಆರೋಹಿತವಾದ ಒಂದು ಮಡಚಬಲ್ಲ ಮೇಲಾವರಣವನ್ನು ಮಾಡಿರುತ್ತಾರೆ. ಇದನ್ನು ಒಬ್ಬ ವ್ಯಕ್ತಿಯನ್ನು ಮಳೆ ಅಥವಾ ಬೆಳಕಿನಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಕೆಲವು ಕೊಡೆಗಳು ಕೇವಲ ಮಳೆಯಿಂದ ರಕ್ಷಣೆ ಒದಗಿಸಲು ವಿನ್ಯಾಸಗೊಂಡಿರುತ್ತವೆ. ಮತ್ತೆ ಕೆಲವು ಸೂರ್ಯನಿಂದ ರಕ್ಷಣೆ ಒದಗಿಸಲು ವಿನ್ಯಾಸಗೊಂಡಿರುತ್ತವೆ. ಹಲವುವೇಳೆ ಇಂತಹ ಕೊಡೆಗಳಲ್ಲಿ ವ್ಯತ್ಯಾಸ ಮೇಲಾವರಣಕ್ಕೆ ಬಳಸಲ್ಪಡುವ ವಸ್ತುವಿನಲ್ಲಿರುತ್ತದೆ; ಕೆಲವು ಕೊಡೆಗಳು ಜಲನಿರೋಧಕವಾಗಿರುವುದಿಲ್ಲ. ಕೊಡೆಗಳ ಮೇಲಾವರಣಗಳನ್ನು ಬಟ್ಟೆ ಅಥವಾ ಮೆದುವಾದ ಪ್ಲಾಸ್ಟಿಕ್‍ನಿಂದ ತಯಾರಿಸಿರಬಹುದು.
ಕೊಡೆಗಳು ಮುಖ್ಯವಾಗಿ ವೈಯಕ್ತಿಕ ಬಳಕೆಗೆ ಬರುವಷ್ಟು ಗಾತ್ರ ಹೊಂದಿರುವ, ಕೈಯಲ್ಲಿ ಹಿಡಿಯುವ, ಸಾಗಿಸಬಲ್ಲ ಸಾಧನಗಳಾಗಿರುತ್ತವೆ. ಗಾಲ್ಫ್ ಕೊಡೆಗಳು ಅತ್ಯಂತ ದೊಡ್ಡ ಕೈ ಹಿಡಿಯ ಕೊಡೆಗಳಾಗಿವೆ. ಕೊಡೆಗಳನ್ನು ಎರಡು ವರ್ಗಗಳಾಗಿ ವಿಭಜಿಸಬಹುದು. ಸಂಪೂರ್ಣವಾಗಿ ಬಾಗಿಕೊಳ್ಳಬಹುದಾದ ಕೊಡೆಗಳು, ಇವುಗಳಲ್ಲಿ ಮೇಲಾವರಣವನ್ನು ಆಧರಿಸಿರುವ ಲೋಹದ ಕೋಲು ಒಳಸರಿಯುತ್ತದೆ, ಮತ್ತು ಹೀಗೆ ಕೊಡೆಯು ಕೈಚೀಲದಲ್ಲಿ ಹಿಡಿಸುವಷ್ಟು ಚಿಕ್ಕದಾಗುತ್ತದೆ; ಮತ್ತು ಬಾಗಿಕೊಳ್ಳದ ಕೊಡೆಗಳು, ಇವುಗಳಲ್ಲಿ ಆಧಾರ ದಂಡವು ಒಳಸರಿಯುವುದಿಲ್ಲ ಮತ್ತು ಕೇವಲ ಮೇಲಾವರಣವನ್ನು ಬಾಗಿಸಬಹುದು. ಕೈಯಾರೆ ನಿರ್ವಹಿಸಲಾದ ಕೊಡೆಗಳು ಮತ್ತು ಲಂಘಕವನ್ನು ಹೊಂದಿದ ಸ್ವಯಂಚಾಲಿತ ಕೊಡೆಗಳ ನಡುವೆ ಮತ್ತೊಂದು ವ್ಯತ್ಯಾಸವನ್ನು ಮಾಡಬಹುದು. ಲಂಘಕವಿರುವ ಕೊಡೆಗಳು ಗುಂಡಿ ಒತ್ತುತ್ತಿದ್ದಂತೆ ತೆರೆದುಕೊಳ್ಳುತ್ತವೆ. ಇದು ಕೊಡೆಯ ಇತಿಹಾಸ. ಈ ಕೊಡೆಗಳ ಉಪಯೋಗ ಬರಿ ಮಳೆಯಿಂದ ಮತ್ತು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳುವುದಕ್ಕೆ ಮಾತ್ರವೇ ಅಲ್ಲದೆ ಈ ಕೊಡೆಗಳನ್ನು ಅನೇಕ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು.ರಸ್ತೆಯಲ್ಲಿ ಕೊಡೆ ಹಿಡಿದು ನಡೆದುಕೊಂಡು ಹೋಗುವಾಗ ನಮಗೆ ಸಾಲ ಕೊಟ್ಟವರೊ, ನಮಗೆ ಕಿರಿಕಿರಿ ಮಾಡುವವರೋ,ನಮಗೆ ಬೇಡವಾದವರೊ ಎದುರಿಗೆ ಬಂದಾಗ, ನಮ್ಮ ಕೊಡೆಯಿಂದ ಎದುರಿಗೆ ಬರುವವರೆಗೆ ನಮ್ಮ ಮುಖ ಕಾಣದಂತೆ ಮರೆ ಮಾಡಿ ಕೊಂಡು ಅವರಿಗೆ ನಾವು ಅಂತ ಗೊತ್ತಾಗದಂತೆ ತಪ್ಪಿಸಿಕೊಂಡು ಹೋಗಿ ಬಿಡಬಹುದು.
ಕೊಡೆಯಿಂದ ಕೆಲವೊಮ್ಮೆ ನಮ್ಮನ್ನು ರಕ್ಷಿಸಿಕೊಳ್ಳುವುದೇ. ಹೇಗೆಂದರೆ ಕೈಯಲ್ಲಿ ಕೊಡೆ ಇದ್ದರೆ ಆಪತ್ ಕಾಲದಲ್ಲಿ ರಕ್ಷಣೆಗೆ ಬರುತ್ತದೆ.ಹಸುವೊ ಎಮ್ಮೆಗಳೊ ತಿವಿಯಲು ಬಂದರೆ ಆಯಧದಂತೆ ಕೊಡೆಯನ್ನು ಉಪಯೋಗಿಸಿಕೊಂಡು ಎಮ್ಮೆಗೆ ಹೊಡೆದು ಓಡಿಸಬಹುದು.ರಸ್ತೆಯಲ್ಲಿ ನಾಯಿಗಳು ಅಟ್ಟಿಸಿಕೊಂಡು ಕಚ್ಚಲು ಬಂದರೆ ವೀರರಂತೆ
ಕೊಡೆ ಬೀಸಿ ನಾಯಿಗಳನ್ನು ಹೆದರಿಸಬಹುದು…
ರೌಡಿಗಳು ಅಥವಾ ಶತ್ರುಗಳು ಧಾಳಿಮಾಡಿದರೂ ಕೊಡೆಯಿಂದ ಕೈಲಾದಷ್ಟು ಹೋರಾಟ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡ ಬಹುದು.ಮನೆಯಲ್ಲಿ ಮಕ್ಕಳು ಹಠ ಮಾಡುವಾಗ ಕೋಲಿನಂತೆ ಬಳಸಿ ಹೆದರಿಸಲು ಕೊಡೆಯನ್ನು ಬಳಸ ಬಹುದು.ಬಟ್ಟೆ ಒಣಗಿಸಲು ಜಾಗ ಸಾಲದಾದಾಗ ಕೊಡೆಯನ್ನು ಆಗಲಿಸಿ ಅದರ ಮೇಲೆ ಬಟ್ಟೆ ಹಾಕಿ ಒಣಗಿಸ ಬಹುದು.ಏನಾದರೂ ವಸ್ತುಗಳನ್ನು ಮುಚ್ಚುವುದಕ್ಕೆ ಕೊಡೆಗಳನ್ನು ಬಳಸ ಬಹುದು.ಯಾರಿಗೂ ಕಾಣದಂತೆ ಏನನ್ನಾದರೂ ಬಚ್ಚಿಡಲೂ ಈ ಕೊಡೆಗಳು ಉಪಯೋಗಕ್ಕೆ ಬರುತ್ತವೆ. ಒಂದೆ ಎರಡೇ ಈ ಕೊಡೆಯ ಉಪಯೋಗ.ಹತ್ತು ಹಲವಾರು ಇವೆ.ಒಟ್ಟಿನಲ್ಲಿ ಇದು ಒಂಥರಾ ಅಪತ್ಭಾಂದವ.
ಈ ಕೊಡೆಯ ಬಗ್ಗೆ ನನ್ನದೊಂದು ಹಳೆಯ ನೆನಪಿದೆ. ಆಗಷ್ಟೇ ಹೈಸ್ಕೂಲಿ ದಾಟಿ ಕಾಲೇಜು ಸೇರಿದ್ದೆ. ಬಣ್ಣದ ಛತ್ರಿ ತಗೋಬೇಕು ಅಂತ ಬಯಕೆ ಹುಟ್ಟಿ ಬಿಟ್ಟಿತು. ಅದಕ್ಕಾಗಿ ಅಪ್ಪ ನನ್ನ ಖರ್ಚಿಗೆ ಕೊಡುತ್ತಿದ್ದ ಹಣದಲ್ಲಿ ಕಷ್ಟ ಪಟ್ಟು ಉಳಿತಾಯ ಮಾಡಿ ಬಣ್ಣದ ಕೊಡೆ ತಂದು ಕೊಡಿ ಅಂತ ಅಪ್ಪನಿಗೆ ಆ ಹಣವನ್ನು ಕೊಟ್ಟು ಸಂಜೆ ಅಪ್ಪ ತರುವ ನನ್ನ ಕನಸಿನ ಬಣ್ಣದ ಛತ್ರಿಗಾಗಿ ಕಾಯುತ್ತಿದ್ದೆ.ಅಪ್ಪ ಡ್ಯೂಟಿ ಮುಗಿಸಿ ಸಂಜೆ ಬರುವಾಗ ಮರೆಯದೆ ಕೊಡೆಯೊಂದಿಗೆ ಬಂದಿದ್ದರು.ಅಪ್ಪ ಬಂದೊಡನೆ ನಾನೆ ಬಾಗಿಲು ತೆಗೆದು ಅಪ್ಪನ ಕೈಯಲ್ಲಿ ಇದ್ದ ಕೊಡೆ ನೋಡಿ ನಿರಾಶೆ ,ನೋವು, ಕೋಪ ಅಳು ಒಟ್ಟಿಗೆ ಒತ್ತರಿಸಿಕೊಂಡು ಬಂದು ಬಿಟ್ಟಿದ್ದವು.ಬಣ್ಣದ ಕೊಡೆಯೊಂದಿಗೆ ಅಪ್ಪನ ನಿರೀಕ್ಷೆ ಯಲ್ಲಿದ್ದ ನನಗೆ ಅಪ್ಪ ತಂದ ಉದ್ದ ಕೊಲಿನ ಪುರುಷರು ಬಳಸುವ ಕೊಡೆ ನೋಡಿ ಹೇಗಾಗಿರ ಬೇಡ.ಈ ಉದ್ದದ ಕೊಡೆಯನ್ನು ನಾನು ಕಾಲೇಜಿಗೆ ತೆಗೆದುಕೊಂಡು ಹೋಗಲು ಸಾಧ್ಯವೆ. ಅಳುವನ್ನು ತಡೆದು ಕೊಳ್ಳುತ್ತಲೇ ಕೋಪದಿಂದ ಕಿರುಚಾಡಿದ್ದೆ.ಅಪ್ಪ ನನ್ನನ್ನು ಸಮಾಧಾನ ಮಾಡುತ್ತ “ನೋಡು ಮಗಳೇ, ಆ ಬಣ್ಣದ ಕೊಡೆ ಗಾಳಿ, ಮಳೆಗೆ ತಡಿಯುವುದಿಲ್ಲವಂತೆ . ಇದು ಗಟ್ಟಿ ಮುಟ್ಟಾಗಿದೆ.ಎಂತಹ ಮಳೆಗೂ ಗಾಳಿಗೂ ಅಲ್ಲಾಡುವುದಿಲ್ಲ ಅಂತೆ ಅದಕ್ಕೆ ಇದನ್ನೇ ತಂದಿದ್ದಿನಿ” ಅಂತ ಹೇಳುತ್ತಿದ್ದರೆ ಕೋಪದಿಂದ ಮೈ ಮನಸ್ಸು ಉರಿದು ಹೋಗಿತ್ತು. ಯಾರು ಎಷ್ಟು ಸಮಾಧಾನ ಹೇಳಿದರೂ ಸಮಾಧಾನವಾಗದೆ ಮುಸುಕಿಕ್ಕಿ ಮಲಗಿ ಬಿಟ್ಟೆ. ಅದೇ ಕೋಪದಲ್ಲಿ ಮಾರನೆ ದಿನ ಮಳೆ ಸುರಿಯುತ್ತಿದ್ದರೂ ಆ ಕೊಡೆಯನ್ನು ಮುಟ್ಟದೆ ಮಳೆಯಲಿ ನೆನೆದುಕೊಂಡೆ ಕಾಲೇಜು ತಲುಪಿದ್ದೆ.ಮಳೆಯಲಿ ನಾನು ಹಾಕಿಕೊಂಡಿದ್ದ ನೀಲಿ ಕೋಟು ತನ್ನ ಬಣ್ಣವನ್ನು ನನ್ನ ಹೊಸ ಬಿಳಿ ಬಣ್ಣದ ಮ್ಯಾಕ್ಸಿ ಮೇಲೆ ಇಳಿಸಿ ಹೊಸ ಚಿತ್ತಾರ ಮೂಡಿಸಿತ್ತು.ಹೊಸ ಡ್ರಸ್ ಹಾಳಾದ ಸಂಕಟ ಒಂದು ಕಡೆ ,ಬಣ್ಣದ ಕೊಡೆ ತರದ ಅಪ್ಪನ ಮೇಲೆ ಕೋಪ ಇನ್ನೊಂದು ಕಡೆ.ಅಂದೆಲ್ಲ ಸಂಕಟ. ನಾನು ಮನೆಗೆ ಬರುವಷ್ಟರಲ್ಲಿ ಅಪ್ಪ ಗುಲಾಬಿ ಬಣ್ಣದ ಕೊಡೆ ತಂದು ನನಗಾಗಿ ಕಾಯುತ್ತಿದ್ದದ್ದನ್ನು ಕಂಡು ನನ್ನ ಸಂಕಟ ಕೋಪ ಎಲ್ಲವೂ ಮಾಯವಾಗಿ ಗುಲಾಬಿ ಕೊಡೆ ಹಿಡಿದು ಹಿರಿ ಹಿರಿ ಹಿಗ್ಗಿದ್ದೆ.
***