- ಪ್ರಭಾಮಣಿ ನಾಗರಾಜ
ವಿವಿಧ ಸಸ್ಯರಾಶಿಗಳಿಂದ ತುಂಬಿರುವ `ಈ ಭೂಮಿಯೇ ಒಂದು ಸುಂದರ ತೋಟ’ ಎಂದು ಕವಿಗಳು ಬಣ್ಣಿಸುತ್ತಾರೆ. ಆದರೆ ಮಾನವ ನಿರ್ಮಿತವಾದ ನಮ್ಮ ತೋಟಗಳಲ್ಲಿ ನಮಗೆ ಬೇಕಾದ ಸಸ್ಯಗಳನ್ನು, ಬೇಕಾದಂತೆ ಬೆಳೆದುಕೊಳ್ಳುತ್ತೇವಲ್ಲವೆ?. ವೈವಿಧ್ಯತೆಯೇ ಆಗರವಾದ ಈ ಪ್ರಕೃತಿಯಲ್ಲಿ ಎಲ್ಲಾ ಜೀವಿಗಳೂ ತಮ್ಮದೇ ಜೀವನ ಶೈಲಿಯಲ್ಲಿ, ತಮ್ಮದೇ ರೀತಿಯ ಜೀವನವನ್ನು ನಡೆಸಲು ಸಮರ್ಥವಾಗಿ ಅಥವಾ ಡಾರ್ವಿನ್ನನ ವಿಕಾಸವಾದದಂತೆ ಉಳಿವಿಗಾಗಿ ಹೋರಾಟ ನಡೆಸಿ ಸಮರ್ಥವಾದವುಗಳೇ ಉಳಿದು ಬದುಕನ್ನು ಮುಂದುವರೆಸುತ್ತಿವೆ ಎನ್ನುತ್ತಾರೆ. ಅವುಗಳಲ್ಲಿ ಉಪಯುಕ್ತ-ಅನುಪಯುಕ್ತ ಎನ್ನುವ ಪ್ರಶ್ನೆಯೇ ಇಲ್ಲ. ಆದರೆ ನಾವು ನಮ್ಮ ದೃಷ್ಟಿಯಿಂದ ಜೀವಸಂಕುಲವನ್ನು ಗಮನಿಸುತ್ತಾ ನಮಗೆ ಬೇಕಾದವನ್ನು ಉಪಯುಕ್ತ ಎಂದೂ, ಬೇಡದವನ್ನು ಅನುಪಯುಕ್ತ ಎಂದೂ ಹಣೆಪಟ್ಟಿ ಕೊಟ್ಟು ವರ್ಗೀಕರಿಸುತ್ತಿದ್ದೇವೆ. ವರ್ಗೀಕರಿಸುವವರು ನಾವೇ ಆದ್ದರಿಂದ ನಮ್ಮನ್ನು ಎಲ್ಲಿ ಇರಿಸುವುದು ಎನ್ನುವ ಪ್ರಶ್ನೆ ಬರದಂತೆ ಎಚ್ಚರ ವಹಿಸುತ್ತೇವೆ!
ನಮ್ಮೂರಿನಲ್ಲಿ ನಮ್ಮ ಮನೆಯ ಹಿಂಭಾಗದಲ್ಲಿದ್ದ ಕೈತೋಟವನ್ನು ಹಿತ್ತಲು ಎನ್ನುತ್ತಿದ್ದೆವು. ಕೈತೋಟ ಎನ್ನುವಾಗ ಹಿತ್ತಲೇ ತಮ್ಮ ಜೀವ ಎನ್ನುವಂತಿದ್ದ ನಮ್ಮ ಸೋದರತ್ತೆ ಕೈಯಲ್ಲಿ ಪಿಳ್ಳುಗುದ್ದಲಿ ಹಿಡಿದು ಯಾವುದಾದರೂ ದೇವರನಾಮವನ್ನು ಉಚ್ಛಕಂಠದಲ್ಲಿ ಹಾಡುತ್ತಾ ನೆಲವನ್ನು ಅಗೆಯುತ್ತಲೋ, ಗಿಡಗಳಿಗೆ ಪಾತಿ ಮಾಡುತ್ತಲೋ, ಕಳೆ ಕೀಳುತ್ತಲೋ ಕುಳಿತಿರುತ್ತಿದ್ದ ಚಿತ್ರವೇ ಕಣ್ಣಮುಂದೆ ಬರುತ್ತದೆ. ನಮಗೋ ಹಿತ್ತಲೆಂದರೇ ನಮ್ಮತ್ತೆ ಎನ್ನುವಷ್ಟು ತಾದ್ಯಾತ್ಮ! ಅತ್ತೆಗೆ ಗಿಡಗಳ ಬಗ್ಗೆ ಅದೆಷ್ಟೊಂದು ಕಾಳಜಿ ಇತ್ತೆಂದರೆ ಬೇಸಿಗೆಕಾಲದಲ್ಲಿ ಗಿಡಗಳು ನೀರಿಲ್ಲದೆ ನಲುಗಿ ಹೋಗುತ್ತವೆಂದು ರವಿಮೂಡುವ ಮೊದಲೇ ನಮ್ಮನ್ನು ಎಬ್ಬಿಸಿ ಆತುರಪಡಿಸುತ್ತಾ ಮನೆಯ ಹಿಂಭಾಗದಲ್ಲಿದ್ದ ಭಾವಿಗೆ ನೀರು ಸೇದಲು ಕರೆದುಕೊಂಡು ಹೋಗಿಬಿಡುತ್ತಿದ್ದರು. ನಮಗೂ ಬೇಸಿಗೆ ರಜೆ ಇರುತ್ತಿದ್ದರಿಂದ ಸೂರ್ಯ ನೆತ್ತಿಗೇರಿದರೂ ತಮ್ಮ ಸಸ್ಯಸಂಪತ್ತಿಗೆ ನೀರುಣಿಸುವ ಕಾರ್ಯವನ್ನು ಮುಗಿಸುತ್ತಲೇ ಇರಲಿಲ್ಲ ನಮ್ಮತ್ತೆ. ಅಷ್ಟು ಹೊತ್ತಾದರೂ ಸುಮಾರು ಅರ್ಧ ಎಕರೆಯಷ್ಟಿದ್ದ ನಮ್ಮ ಹಿತ್ತಲಿನ ಕಾಲುಭಾಗ ಗಿಡಗಳಿಗೂ ನೀರೆರೆಯಲಾಗುತ್ತಿರಲಿಲ್ಲ. ನಾನು-ಅಕ್ಕ ಬಿಸಿಲಲ್ಲಿ ಬಸವಳಿದಿದ್ದರೂ ಸ್ವಲ್ಪವೂ ಗಮನಿಸದೇ, `ಅಯ್ಯೋ ತಬ್ಬಲಿ ಮುಂಡೇದೆ ಹೇಗೆ ನೀರಿಲ್ಲದೆ ಸೊರಗಿ ಹೋಗಿದೀಯ ಈಗ್ಲಾದರೂ ಸ್ವಲ್ಪ ತಲೆ ಎತ್ತು, ನಿನ್ನ ಸಿಹಿನಿಂಬೆ ಅಂತ ಹಾಕಿ ಆಗ್ಲೇ ಹತ್ತು ವರ್ಷ ಆಯ್ತು. ಇನ್ನೂ ಒಂದೂ ಹೂವಿಲ್ಲ ಹೀಚಿಲ್ಲ. ಈಗ ನಿಂಗೆ ಒಂದು ಹತ್ತುಕೊಡ ನೀರಾದರೂ ಕಟ್ಟಲೇ ಬೇಕು, ಈ ಸಾರಿ ನೀನು ಫಲ ಕಚ್ಚೋದು ಗ್ಯಾರಂಟಿ…..’ಎಂದು ಗಿಡಗಳೊಂದಿಗೆ ತಮ್ಮದೇ ರೀತಿಯಲ್ಲಿ ಮಾತನಾಡುತ್ತಾ ಒಂದೊಂದಕ್ಕೂ ಅದರ ಯೋಗ್ಯತಾನುಸಾರವಾಗಿ ನೀರು ಹಾಕುವುದನ್ನು ಮುಂದುವರೆಸುತ್ತಿದ್ದರು. `ಮಕ್ಕಳನ್ನ ತಿಂಡಿಗೂ ಕಳಿಸದಂತೆ ಈ ಬಿರುಬಿಸಿಲಲ್ಲಿ ಏನು ಜೀವತಿಂತಾರೊ ನಮ್ಮವ್ವ ನಾಕಾಣೆ. ಈ ಹಾಳು ಬೇಸಿಗೆ ರಜ ಏಕಾದರೂ ಕೊಡ್ತಾರೊ…’ ಎಂದು ಅಲವತ್ತುಕೊಳ್ಳುತ್ತಿದ್ದರು ಎಂದೂ ತಮ್ಮ ಅತ್ತಿಗೆಮ್ಮನ ಎದುರು ನಿಂತು ಮಾತನಾಡದ ನಮ್ಮಮ್ಮ. ನಮ್ಮತ್ತೆಗೆ ತಾವು ಬೆಳೆಸಿದ ಎಲ್ಲಾ ಗಿಡಗಳ ಪ್ರವರವೂ ಬಾಯಿಪಾಠವಾಗಿತ್ತು. ಅವುಗಳನ್ನು ಎಲ್ಲಿಂದ ತಂದಿದ್ದು, ಯಾರು ಕೊಟ್ಟಿದ್ದು, ಯಾವಾಗ ಹಾಕಿದ್ದು, ಮೊದಲು ಹೂಬಿಟ್ಟದ್ದೆಂದು ಎನ್ನುವುದೆಲ್ಲವನ್ನೂ ಆಸ್ತೆಯಿಂದ ಹೇಳುತ್ತಿದ್ದರು. ಯಾವ ಊರಿಗೇ ಹೋದರೂ ಒಂದಾದರೂ ವಿಶೇಷವಾದ ಗಿಡವನ್ನು ತರದೇ ಇರುತ್ತಿರಲಿಲ್ಲ. ತಾವು ಹಾಕದೇ ತಾನಾಗೇ ಬೆಳೆದ ಗಿಡವನ್ನು ತಬ್ಬಲಿಗಿಡ ಎನ್ನುತ್ತಿದ್ದರು. ಹೀಗೆ ಒಂದಲ್ಲಾ ಒಂದು ಕಾರಣದಿಂದ ಎಲ್ಲೆಲ್ಲಿಂದಲೋ ಬಂದ ಸಸ್ಯ ಸೊಬಗಿಯರು ನಮ್ಮ ಹಿತ್ತಲಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದುದರಿಂದ ನಮ್ಮ ಹಿತ್ತಲು ಗಿಡ-ಮರ-ಬಳ್ಳಿಗಳಿಂದ ಕಿಕ್ಕಿರಿದು ತುಂಬಿರುತ್ತಿತ್ತು. ಆದರೆ ಅವುಗಳಿಂದ ಬರುವ ಶೂನ್ಯ ಉತ್ಪತ್ತಿ ಒತ್ತಟ್ಟಿಗಿರಲಿ ದಿನಬೆಳಗಾದರೆ ಅವರಿವರ ಮನೆ ಹಸುವೋ ಎಮ್ಮೆಯೋ ಬೇಲಿ ನುಗ್ಗಿ ಬಂದು ತಮ್ಮ ಪರಮ ಪ್ರಿಯ ಗಿಡಗಳನ್ನು ತಿಂದುಹಾಕಿತೆಂದು ಅಕ್ಕಪಕ್ಕದವರೊಂದಿಗಿನ ಜಗಳ ತಪ್ಪುತ್ತಲೇ ಇರಲಿಲ್ಲ. ಬಹುತೇಕ ನಮಗೆ ಬೆಳಿಗ್ಗೆ ಎಚ್ಚರವಾಗುತ್ತಿದ್ದುದು ಅತ್ತೆಯ ಆರ್ಭಟದ ಸಹಸ್ರನಾಮಾರ್ಚನೆಯಿಂದಲೇ! ಯಾವುದೇ ಪ್ರತಿಫಲಾಪೇಕ್ಷೆಯನ್ನೂ ಪಡದೇ ನಮ್ಮತ್ತೆ ಹಗಲೆಲ್ಲಾ ಹಿತ್ತಲಲ್ಲಿ, `ಮಾ ಫಲೇಶು ಕದಾಚನ,’ ಎನ್ನುವ ಕಾಯಕಯೋಗಿಯಂತೆ ದುಡಿಯುತ್ತಿದ್ದರೂ ಅಮಾವಾಸ್ಯೆ ಬಂತೆಂದರೆ ಹೂ-ಹೀಚಾಗದ ಬಂಜೆ ಮರಗಳನ್ನು ಆರಿಸಿ ಕಬ್ಬಿಣದ ಮೊಳೆ ಹೊಡೆಯುತ್ತಲೋ, ಎಡಗಾಲ ಚಪ್ಪಲಿಯಿಂದ ಬಾರಿಸುತ್ತಲೋ ರಣಚಿಕಿತ್ಸೆ ನೀಡುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿರುತ್ತಿತ್ತು! ಹೂಗಿಡಗಳಂತೂ ನಮ್ಮತ್ತೆಯ ಶ್ರಮಕ್ಕೆ ಮೋಸಮಾಡದೇ ಧಾರಾಳವಾಗಿ ಹೂಬಿಡುತ್ತಿದ್ದವು. ಬೇಸಿಗೆ ಬಂತೆಂದರೆ ಸೂಜಿಮಲ್ಲಿಗೆ, ದುಂಡುಮಲ್ಲಿಗೆ ಇರುವಂತಿಗೆಗಳ ಸಡಗರವೋ ಸಡಗರ! ನಿತ್ಯಮಲ್ಲಿಗೆ ಮಾತ್ರ ಅನಿತ್ಯ ಪುಷ್ಪವತಿಯಾಗಿದ್ದಳು! ಆ ವಿಶಾಲ ಹಿತ್ತಲಲ್ಲಿ ನಾನೂ ಅತ್ತೆಯಿಂದ ಸ್ವಲ್ಪ ಜಾಗ ಎರವಲು ಪಡೆದು ಕೆಲವು ಗಿಡಗಳನ್ನು ಬೆಳೆಯುತ್ತಿದ್ದೆ! ದಿನಬೆಳಗಾದರೆ ನನ್ನ ಗಿಡ ಎಷ್ಟು ಬೆಳೆದಿದೆ ಎಂದು ನೋಡುವುದೇ ಹಿಗ್ಗು! ಆಗೆಲ್ಲಾ ನಮ್ಮೂರ ಸಮೀಪದ ಪಟ್ಟಣಕ್ಕೆ ಹೋದಾಗ ಅಲ್ಲಿಯ ತಾರಸಿಮನೆಗಳ ಮುಂದೆ, ಅಕ್ಕಪಕ್ಕಗಳಲ್ಲಿ ಗಿಡಬೆಳೆಸಿರುವುದನ್ನು ನೋಡಿ, ನಮ್ಮ ಮನೆಯ ಹಿಂದಿರುವುದು ಹಿತ್ತಲಾದರೆ ಇಲ್ಲಿ ಮುಂದಿರುವುದನ್ನು ಮುತ್ತಲು, ಪಕ್ಕದಲ್ಲಿರುವುದನ್ನು ಪತ್ತಲು ಎನ್ನುತ್ತಾರೇನೋ ಎಂದುಕೊಳ್ಳುತ್ತಿದ್ದೆವು!
ತವರಿನ/ಪತಿಗೃಹದ ತಲತಲಾಂತರದ ಸ್ವಂತಸೂರುಗಳಿಂದ ದೂರವಾಗಿ ಬಾಡಿಗೆ ಮನೆಗಳಲ್ಲಿದ್ದು, ನಮ್ಮದೇ ಒಂದು ಪುಟ್ಟಗೂಡನ್ನು ಕಟ್ಟಿಕೊಳ್ಳುವ ಕಾಲ ಕೂಡಿ ಬಂದಾಗ ಮುಂಭಾಗದಲ್ಲಿ ಗಿಡಬೆಳೆಸಲೆಂದೇ ಜಾಗಬಿಟ್ಟು ಮನೆಯನ್ನು ಕಟ್ಟಿಕೊಂಡೆವು. ಆ ಜಾಗದಲ್ಲಿ ಎಲ್ಲೆಲ್ಲಿ ಯಾವಯಾವ ಗಿಡಗಳನ್ನು ಬೆಳೆಯಬೇಕು ಎನ್ನುವ ಏಕಸ್ವಾಮ್ಯ ನಿರ್ಧಾರವನ್ನು ನನ್ನವರೇ ತೆಗೆದುಕೊಂಡು ತೋಟಗಾರಿಕೆಯನ್ನು ಪ್ರಾರಂಭಿಸಿಯೇಬಿಟ್ಟರು. ಈ ನಮ್ಮ ಕಿರುಬನವನ್ನು `ಮುತ್ತಲು’ಎನ್ನಲಾಗದೇ ಕೈತೋಟದ `ಕೈ’ ನನಗೆ ಅಷ್ಟೇನೂ ಸಮ್ಮತವೆನಿಸದಿದ್ದರಿಂದ `ಕಿರುತೋಟ’ ಎನ್ನುವುದೇ ಸೂಕ್ತವೆನ್ನುವ ನನ್ನ ಅಭಿಪ್ರಾಯಕ್ಕೆ ಮಾನ್ಯತೆ ದೊರೆತರೂ ಇತರರೆದುರು ಸ್ಟೈಲಾಗಿ ಗಾರ್ಡನ್ ಎನ್ನುವಂತಾಯಿತು. ಅವರಿವರು ಕೊಟ್ಟ, ಇವರೇ ತಂದು ನೆಟ್ಟಸಸಿಗಳಿಂದ ನಮ್ಮ ಕಿರುತೋಟ ತುಂಬಿತುಳುಕಿತು. ಹೂಗಿಡಗಳು ವಿವಿಧ ವರ್ಣಗಳ ಹೂಗಳನರಳಿಸಿ ಕಣ್ಣಿಗೆ-ಮನಸ್ಸಿಗೆ ಪರಮಾನಂದವನ್ನು ನೀಡಿದವು. ಆ ಹೂಗಳನ್ನೆಲ್ಲಾ ಬಿಡಿಸಿ ಪೂಜಿಸುವ/ಮುಡಿಗೆರಿಸುವ ಬಗ್ಗೆ,
`ಆ ಹೂ
ಗಿಡದಲೇ ಇರಲಿ
ಬಿಡು ಗೆಳೆಯಾ,
ದೇವರ ಅಡಿಯ,
ಹೆಣ್ಣಿನ ಮುಡಿಯ
ಸೇರಲೇ ಬೇಕೆಂಬ
ಆಸೆ ಏಕೆ?
ಗಿಡದಲೇ ಇದ್ದು
ಬುಡ ಸೇರಿದರೆ
ಸಾರ್ಥಕವಾಗದೇಕೆ?’ ಎನಿಸಲಾರಂಭಿಸಿತು.
ಗಿಡಮರಗಳಲ್ಲಿ ಗೂಡುಕಟ್ಟಿ ಸಡಗರಪಡುವ ಪಕ್ಷಿಗಳ ಕಲರವವೇ ದಿನಾರಂಭದ ಸುಪ್ರಭಾತವಾಯತು. ವರುಷಗಳು ಕಳೆದಂತೆ `ನ್ಯಗ್ರೋದ ಬೀಜಂ ಕೆಲಂ ಸಿಡಿದುಂ ಪೆರ್ಮರನಾಗದೇ’, ಎನ್ನುವಂತೆ ನಮ್ಮ ಕಿರುತೋಟದ ತುಂಬೆಲ್ಲಾ ಹಲಸು, ಮಾವು, ಸೀಬೆ, ತೆಂಗು ಮುಂತಾದ ಮರಗಿಡಗಳೇ ತುಂಬಿ `ಅಸೂರ್ಯಂ ಪಶ್ಯಂತಿ’ ಎನ್ನುವಂತೆ ಮೇಲುಸ್ತರದವರ ಆಟಾಟೋಪದಲ್ಲಿ ನೆಲವರ್ಗದವರು ಸೂರ್ಯನ ಬೆಳಕೇ ಇಲ್ಲದಂತೆ ನೆರಳಕೂಪದಲ್ಲಿ ನೆರಳುವಂತಾಯಿತು. ತರುಲತೆಗಳಿಂದ ಉದುರಿದ ಮುದಿಎಲೆಗಳಿಂದ ಉಂಟಾಗುತ್ತಿದ್ದ ತರಗೆಲೆಯ ಹಾಸಿನಿಂದ ಕನಲಿದ ಇವರು, `ಮನೆಯ ಮುಂದೆಲ್ಲಾ ಗಲೀಜು, ನೋಡಿದವರು ಏನಂತಾರೆ,’ ಎಂದು ಗುಡಿಸುವ ಕೈಂಕರ್ಯದಲ್ಲಿ ತೊಡಗಿ ನಮ್ಮ ಕಿರುತೋಟವನ್ನು ಅತ್ಯಂತ ಸ್ವಚ್ಚವಾದ ಅಂಗಳದಂತೆ ಕಂಗೊಳಿಸುವಂತೆ ಇಡುವುದರಲ್ಲಿ ಯಶಸ್ವಿಯಾದರು. ಆ ಎಲೆಗಳಿಂದ ಗೊಬ್ಬರವಾಗುತ್ತದೆ ಎನ್ನುವ ನನ್ನ ಅಹವಾಲಿಗೆ ಕಿವಿಗೊಡದೇ ಅವಿರತವಾಗಿ ಶುಚಿತ್ವಕ್ಕೆ ಗಮನಕೊಡುವ ಅವರ ಈ ನಡೆಯಿಂದ ನನಗೆ ಬೇಡಬೇಡವೆಂದರೂ ಝೆನ್ ಕತೆಯೊಂದು ನೆನಪಾಗುವಂತಾಯ್ತು. ಝೆನ್‍ಗುರುವೊಬ್ಬರ ಮಾರ್ಗದರ್ಶನದಲ್ಲಿ ಝೆನ್‍ಮಾದರಿಯ ತೋಟವೊಂದನ್ನು ಮಾಡಲು ಹೊರಟ ರಾಜ ಮೂರುವರ್ಷಗಳ ನಂತರ ಗುರುಗಳು ಬಂದು ಪರೀಕ್ಷಿಸುವ ಮುನ್ನಾ ಸೇವಕರಿಂದ ಒಣ ಎಲೆಗಳನ್ನೆಲ್ಲಾ ಗುಡಿಸಿ ಹೊರ ಹಾಕಿಸಿ ಅನುತ್ತೀರ್ಣನಾಗುತ್ತಾನೆ. ಈ ಮೂಲಕ ಝೆನ್‍ಗುರುಗಳು ಬದುಕಿನ ಪಾಠವನ್ನೇ ಜಗತ್ತಿಗೆ ಅರಿಯುವಂತೆ ಮಾಡುತ್ತಾರೆ. ಆದರೆ, `ಒಣ ಎಲೆಗಳ ಒಳಗೆ ಹಾವು ಸೇರಿದರೆ…’ ಎಂದು ವಾದಿಸುವವರು ಮಾತ್ರ ಇದನ್ನು ಒಪ್ಪಲಾರರು!
ನಮ್ಮ ಹಿತೈಶಿಗಳು, `ಎಷ್ಟು ದೊಡ್ಡ ಜಾಗವಿದೆ. ಬೇಕಾದ ತರಕಾರಿಗಳನ್ನೆಲ್ಲಾ ಬೆಳೆದುಕೊಳ್ಳಬಹುದು. ಆದ್ರೆ ಮರಗಾಡು ಮಾಡಿಕೊಂಡಿದೀರಿ,’ ಎಂದು ಇವರ ಅತ್ಯಾಪ್ತ ಹವ್ಯಾಸದ ಬೇರನ್ನೇ ಅಲುಗಿಸಿಬಿಡುತ್ತಾರೆ. `ಎಂದೂ ಹಣ್ಣೇ ಬಿಡ್ದಿರೋ ಈ ಹಲಸಿನಮರಾನೇಕೆ ಹೀಗೆ ಎದ್ವಾತದ್ವಾ ಬೆಳೆಯಕ್ಕೆ ಬಿಟ್ಟಿದೀರಿ. ಬುಡಸಮೇತ ತೆಗೆದು ಹಾಕಿದ್ರೆ ನೆಲಕ್ಕೆ ಸ್ವಲ್ಪ ಬಿಸಿಲಾದ್ರೂ ಬೀಳುತ್ತೆ,’ ಎಂಬ ಸಲಹೆಗಳನ್ನೂ ಕೊಡ್ತಾರೆ. ನಮ್ಮೆದುರಿಗೇ ಮನೆಯನ್ನೂ ಮೀರಿ ಬೆಳೆದು, ಹಸಿರು ಛತ್ರಿಯಂತೆ ಹರಡಿಕೊಂಡು ನಳನಳಿಸುತ್ತಿರುವ ಹಲಸುಸುಂದರಿ ಹಣ್ಣು ಕೊಡದಿದ್ದರೇನು? ಅವಳು ಕೊಡುವ ಆಮ್ಲಜನಕಕ್ಕೆ ಕೊರತೆಯೇ? ತಂಗಾಳಿ, ತಂಪುನೆರಳು…..ಎಂದೆಲ್ಲಾ ಹೇಳಲಾಗುತ್ತದೆಯೇ ಮನುಜಲೋಕಕ್ಕೆ! ಇವರಂತೂ ಕೆಲವೊಮ್ಮೆ ಥೇಟ್ ನಮ್ಮತ್ತೆಯಂತೆಯೇ ಮರಕ್ಕೆ ಮೊಳೆಹೊಡೆಯುವುದು, ಚಪ್ಪಲಿ ತೂಗುಹಾಕುವುದು ಯಾವುದನ್ನೂ ಬಿಟ್ಟಿಲ್ಲ! ಆಪ್ತಬಂಧುಗಳಂತೂ, `ಮನೆಮುಂದಿನ ದೊಡ್ಡರಸ್ತೆ ಆಗೋಹಾಗಿದೆಯಲ್ಲಾ, ಈ ಪ್ರಯೋಜನಕ್ಕೆ ಬಾರದವುಗಳನ್ನೆಲ್ಲಾ ತೆಗೆಸಿಹಾಕಿ ಅಂಗಡಿ ಮಳಿಗೆಗಳನ್ನ ಹಾಕಿಸಿಬಿಡಿ, ಬಾಡಿಗೇನಾದರೂ ಬರುತ್ತೆ,’ ಎಂದು ನಮ್ಮ ಸಸ್ಯಸಂಕುಲದ ಅಸ್ತಿತ್ವಕ್ಕೇ ಧಕ್ಕೆತರುವಂಥಾ ಹಿತೋಕ್ತಿಗಳನ್ನು ನೀಡಿದಾಗ ನಮ್ಮ ಕಿರುತೋಟದಲ್ಲಿನ ಮತ್ಸ್ಯಕೊಳದಲ್ಲಿ ವಿಹರಿಸುತ್ತಿರುವ ಮುದ್ದು ಮೀನುಗಳು ಕಿಲಕಿಲನೆ ನಕ್ಕಂತಾಗುತ್ತದೆ. ಗಿಡ ಬೆಳೆಯಕ್ಕೆ ಇಷ್ಟು ದೊಡ್ಡ ಜಾಗಾನೇ ಇರಬೇಕೆಂದೇನೂ ಇಲ್ಲವಲ್ಲಾ, ಸುತ್ತಾ ಎರಡು ಅಡಿ ಜಾಗ ಇದ್ರೆ ಸಾಕು, ಲೇಯರ್ ಗಾರ್ಡನಿಂಗ್ ಮಾಡಬಹುದು. ಅದೂ ಇಲ್ಲದಿದ್ರೆ ಟೆರೇಸ್ ಗಾರ್ಡನಿಂಗ್, ಬಾಲ್ಕನಿ/ಕಿಟಕೀಲಿ ಕರ್ಟನ್ ಗಾರ್ಡನಿಂಗ್, ಮನೆಯ ಬಾಗಿಲು ಗೋಡೆಗಳಲ್ಲಿ ವರ್ಟಿಕಲ್ ಗಾರ್ಡನಿಂಗ್ ಎಲ್ಲಾ ಮಾಡುವ ಅವಕಾಶವಿದೆ ಎನ್ನುವ ಹಿತನುಡಿಗಳಿಂದ (ಕೆಲವಂ ಬಲ್ಲವರಿಂದ ಕಲ್ತು) ಇವರೆಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಕಿರುತೋಟದ ಸೊಬಗಿಗೆ ಕಂಟಕರಾಗುತ್ತಾರೋ ಎಂಬ ಶಂಕೆಯಲ್ಲಿ ನನ್ನ ತೀವ್ರ ವಿರೋಧವನ್ನು ಕುಟುಂಬದ ಬಹುಮತದೊಂದಿಗೆ ಪ್ರದರ್ಶಿಸಲು ನಾನು ಕಾರ್ಯಸನ್ನದ್ದಳಾಗುತ್ತೇನೆ.
ಈಗೀಗ ಇವರ ಕೃಷಿಕತನ ಕೆಲವೊಮ್ಮೆ ಎಲ್ಲೆಮೀರಿ ಕಟುಕತನವಾಗಿ ಕೈಯಲ್ಲಿ ಮಚ್ಚನ್ನು ಹಿಡಿದು ಗಿಡಮರಗಳ ರೆಂಬೆಗಳನ್ನೆಲ್ಲಾ ಕತ್ತರಿಸಿ, ಬಳ್ಳಿಗಳನ್ನು ಎಳೆದು ರಾಶಿಹಾಕಲಾರಂಭಿಸಿಬಿಡುತ್ತಾರೆ. ಇವರೊಂದಿಗೆ ಸಾಥ್ ನೀಡುವ ನಮ್ಮ ಟಾಮಿಯೂ ಮನಬಂದಂತೆ ಅಡ್ಡಾದಿಡ್ಡಿಯಾಗಿ ಬಳ್ಳಿಗಳನ್ನು ಎಳೆಯುತ್ತಾ, ಕಾಲಿನಿಂದ ನೆಲವನ್ನು ಬಗೆದು ಪಾತಿಮಾಡುತ್ತಾ ಶಹಬಾಸ್‍ಗಿರಿ ಪಡೆಯಲು ಪ್ರಯತ್ನಿಸುತ್ತದೆ. ಇವರಿಬ್ಬರ ವಿದ್ವಂಸಕಕೃತ್ಯಕ್ಕೆ ಬೆದರಿ ಇಲ್ಲೂ ಉತ್ಸಾಹದಿಂದಲೇ ಪ್ರಾರಂಭಿಸಿದ್ದ ನಮ್ಮೂರಿನಲ್ಲಿ ಮಾಡುತ್ತಿದ್ದಂಥಾ ನನ್ನ ಕಿರುಬೇಸಾಯಕ್ಕೆ ತಿಲಾಂಜಲಿ ಇತ್ತಿದ್ದೇನೆ. ನನ್ನಿಂದಲೇ ಇತಿಶ್ರೀಯಾಯಿತು ಎನ್ನುವುದಕ್ಕಿಂತಾ ತಮಗೆ ಬೇಕಾದಂತೆ ಬೆಳೆಯಲು ಸ್ವಾತಂತ್ರ್ಯವಿತ್ತಿದ್ದ ನನ್ನ ಸ್ವಾಮ್ಯದ ಸಸ್ಯಗಳನ್ನು ಇವರು ನಿಯಂತ್ರಿಸಿ, ಟಾಮಿ ನಿರ್ನಾಮಗೊಳಿಸಿತು ಎನ್ನುವುದೇ ಸೂಕ್ತ. ಇದನ್ನೆಲ್ಲಾ ನೋಡುವಾಗ,
`ಕೊಡಲಿಚ್ಚೆಯಿಲ್ಲ ನನ್ನ ಕೈತೋಟವ
ಮಾಲಿಯ ಸುಪರ್ದಿಗೆ
ಆತ ಬೆಳೆಯಲು ಬಿಟ್ಟದ್ದು
‘ಹಳು’ನನ್ನ ಪಾಲಿಗೆ
‘ಕಳೆ’ಎಂದು ಕಿತ್ತೆಸೆದದ್ದು
ಸಂಜೀವಿನಿ ಮೂಲಿಕೆ!’ ಎನಿಸುತ್ತದೆ. ನನ್ನ ಕಿರುತೋಟ ನನ್ನದೇ ನಿರ್ದೇಶನದಲ್ಲಿದ್ದರೆ ನನಗೆ ಬೇಕಾದ್ದನ್ನು ಅಲ್ಲಿ ಬೆಳೆಯಬಹುದು. ಆದರೆ ಬೇಡವಾದದ್ದು ಯಾವುದು? ಅದಕ್ಕೂ ಬೆಳೆಯುವ ಹಕ್ಕಿಲ್ಲವೆ? ಎನಿಸುವ ನನಗೆ ಕೃಷಿಕಳಾಗುವ ಅರ್ಹತೆಯಾದರೂ ಇದೆಯೆ ಎನಿಸುವುದಿದೆ.
ಚಿಂತನಶೀಲಕವಿ ಖಲೀಲ್‍ಗಿಬ್ರಾನ್‍ರವರು ತಮ್ಮ ಅಂತಿಮ ರಚನೆಯಾದ ‘ಪ್ರವಾದಿಯ ತೋಟ’ದಲ್ಲಿ, `ನಮ್ಮ ಮನಸ್ಸೂ ಒಂದು ತೋಟವಿದ್ದಂತೆ. ಕೃಷಿಕನೊಬ್ಬ ಬೆಳೆಯೊಂದನ್ನು ಬೆಳೆಯುವಾಗ ಆ ಬೆಳೆಯಲ್ಲದೆ ಬೇರೆ ಯಾವುದೇ ಸಸ್ಯ ಅದರೊಂದಿಗೆ ಅನಪೇಕ್ಷಿತವಾಗಿ ಬೆಳೆಯದಂತೆ ಅದನ್ನು ‘ಕಳೆ’ ಎಂದು ಪರಿಗಣಿಸಿ ನಿರ್ಮೂಲಗೊಳಿಸುತ್ತಾನೆ. ಆ ಕೃಷಿಕನ ದೃಷ್ಟಿಯಂತೆಯೇ ನಮ್ಮ ದೃಷ್ಟಿಯೂ ಇರುವಂತೆ ನೋಡಿಕೊಳ್ಳಬೇಕು. ನಾವು ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವ ಮಾರ್ಗದಲ್ಲಿ ತಲೆದೋರುವ ಯಾವುದೇ ಅಡಚಣೆಗಳನ್ನು, ಆಮಿಷಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕಾಗುತ್ತದೆ,’ ಎಂದು ಹೇಳುತ್ತಾರೆ
ನಮ್ಮ ಮನೋಭೂಮಿಕೆಯಾದ ತೋಟದಲ್ಲಿ ಹೇಗೆ ಸಸಿಗಳನ್ನು ಬೆಳೆಸುತ್ತೇವೆಯೋ, ಅದು ಚಿಗುರಿಪಲ್ಲೈಸುವುದನ್ನು ನೋಡಿ ಸಂಭ್ರಮಿಸುತ್ತೇವೆಯೋ ಹಾಗೆಯೇ ನಮ್ಮ ಮನಸ್ಸಿನ ಕೋಮಲ ಭಾವನೆಗಳನ್ನೂ ಪೋಷಿಸಿ, ಬೆಳೆಸಿ ಫಲ ನೀಡುವಂತೆ ಪ್ರೋತ್ಸಾಹಿಸಿ ಹರ್ಷಿಸುವಂತಾಗಬೇಕು.
`ಮನೆಯ ಮುಂದೊಂದು ತೋಟವಿದ್ದರೆ ಕೈಯಲ್ಲೊಂದು ಕಾವ್ಯವಿದ್ದಂತೆ’ ಎಂಬ `ರಾಕು’ರವರ ಉಕ್ತಿಯಿದೆ. ಕಾವ್ಯಾಸ್ವಾದನೆಯು ಮನಸ್ಸಿಗೆ ಮುದನೀಡುವಂತೆಯೇ ತೋಟದ ತಂಪು-ಕಂಪು, ಅದನ್ನಾಶ್ರಯಿಸಿದ ಪಕ್ಷಿಸಂಕುಲದ ಇನಿದನಿಯ ಇಂಪು ಮನೆಯನ್ನೂ ಮನವನ್ನೂ ಆನಂದಗೊಳಿಸುವುದಲ್ಲವೆ?