Wednesday, September 27, 2023

ಹಾಡ ಬದುವಿನ ಗುಂಟ ಹೊಂಟು…

Follow Us

  • ವಿಜಯಕಾಂತ ಪಾಟೀಲ,
    ನ್ಯಾಯವಾದಿ

ಗ ನಾನು ಎಂಟೋ ಒಂಬತ್ತನೆಯದೋ ಇಯತ್ತೆಯಲ್ಲಿದ್ದೆ ಅಂತ ಕಾಣುತ್ತದೆ. ನಮ್ಮೂರಿಂದ ಪಕ್ಕದ ಶಕುನವಳ್ಳಿ ಹೈಸ್ಕೂಲಿಗೆ ಬಹುತೇಕ ಕಾಲುನಡಿಗೆಯಲ್ಲಿಯೇ ಹೋಗುತ್ತಿದ್ದೆವು. ನಮ್ಮೂರಿಂದ ಭಾಳ ಅಂದರೆ ಎರಡು ಮೈಲಿ ದೂರದಲ್ಲಿ ಆ ಶಾಲೆ. ಅದು ಖಾಸಗಿ ಶಾಲೆಯಾಗಿದ್ದರಿಂದ ಕಟ್ಟಡವೂ ಹೇಳಿಕೊಳ್ಳುವಂತಿರಲಿಲ್ಲ ಅಂದರೆ ಮಳೆಗಾಲದಲ್ಲಿ ಮಧ್ಯಾಹ್ನದ ಹೊತ್ತಿಗೆ ಜೋರು ಮಳೆ ಏರಿ ಗುಡುಗು-ಮಿಂಚು ಶುರುವಾದರೆ ಶಾಲೆಯನ್ನು ಬೇಗ ಬಿಟ್ಟುಬಿಡುತ್ತಿದ್ದರು. ಅಂಥ ಹೊತ್ತಲ್ಲಿ ನಾವು ಗಡಗಡ ನಡುಗುತ್ತಲೇ ಕುಂತಿರುತ್ತಿದ್ದೆವು. ದಿನಾಲೂ ನಾಲ್ಕಾರು ಮಂದಿ ಗೆಳೆಯರು ಹೀಗೆ ಪಾದಸಂಚಾರಿಗಳಾಗುತ್ತಿರುವ ಹೊತ್ತು ಹೋಗಿ ಬರುವಾಗ ನೇರಳೆ ಮರ, ಪರಗಿ ಹಣ್ಣಿನ ಮಟ್ಟಿ, ಶಿರಕ್ಯಾನ ಹಣ್ಣು, ಇಲಾತಿಹಣ್ಣುಗಳ ಗಿಡಗಳನ್ನು ಎಡತಾಕುತ್ತಲೇ ಊರು ತಲುಪುತ್ತಿದ್ದುದು ಆಗ ಸರ್ವೇಸಾಮಾನ್ಯವಾಗಿತ್ತು. ಆಗ ಸೈಕಲ್ ಎಂಬ ದ್ವಿಚಕ್ರವಾಹನವೇ ಮಹಾನ್ ವಾಹನ ಎಂಬಂತಾಗಿದ್ದರಿಂದ ಅಷ್ಟು ಸುಲಭವಾಗಿ ನಮಗೆ ಶಾಲೆಗೆ ಹೋಗಿಬರಲು ಮನೆಯವರು ಅದನ್ನು ಕೊಡುತ್ತಿರಲಿಲ್ಲ ಅನ್ನುವುದಕ್ಕಿಂತ ಮನೆಗೆ ಹೆಚ್ಚಾಗಿ ಒಂದೇ ಸೈಕಲ್ ಇರುವುದೂ ಕಾರಣವಾಗಿತ್ತು. ಹೀಗೆ ಅಡ್ಡಾಡುತ್ತಿರುವಾಗ ಬಾಯಿಗೆ ಬಂದ ಸಿನೆಮಾ ಹಾಡುಗಳನ್ನು ಜೋರಾಗಿ ಹಾಡಿಕೋಂತ ಬರುವುದು ರೂಢಿಯಾಗಿತ್ತು. ಶಾಲೆಯಿಂದ ಬರುವಾಗಲೇ ಹಾಡು ಹೇಳುವುದು ಯಾಕೆಂದರೆ.. ಶಾಲೆಗೆ ಹೋಗುವಾಗ ಗಣಿತ-ವಿಜ್ಞಾನ ಕ್ಲಾಸುಗಳು, ಹೋಮ್‍ವರ್ಕ್ ಎಂಬಿತ್ಯಾದಿ ನೂರೆಂಟು ಟೆನ್ಶನ್‍ಗಳು ತಲೆತುಂಬಿ ತುಳುಕುತ್ತಿದ್ದವು. ಬರುವಾಗ ಏನೋ ಒಂಥರಾ ಮೈಂಡ್ ಫುಲ್ ಫ್ರೀ ಆದಂತಾಗಿ ತನ್ನಿಂದ ತಾನೇ ಹಾಡುಗಳು ಹಾಡಿಸಿಕೊಳ್ಳುತ್ತಿದ್ದವು; ಅದೂ ನಮ್ಮದೇ ಆದ (ಅ)ಪ್ರಬುದ್ಧ ಧಾಟಿಯಲ್ಲಿ.! ಶಾಲೆ ಬಿಟ್ಟಾದ ಮೇಲಿನ ನಮ್ಮ ಸಂತೋಷಕ್ಕೆ ಎಣೆಯೇ ಇರುತ್ತಿರಲಿಲ್ಲವಾಗಿ, ಈ ಸಂದರ್ಭದಲ್ಲಿ ನನ್ನ ಕಾಲೇಜ್‍ಮೇಟ್ ಮತ್ತು ದೋಸ್ತ್ ಶಿವಾನಂದ ಕ್ಯಾಲಕೊಂಡನ ಒಂದು ಖಾಯಂ ಡೈಲಾಗು ನೆನಪಿಗೆ ಬರುತ್ತಿದೆ. ಯಾರಾದರೂ ಪೂರಾ ಖುಷಿಯಿಂದ ತೇಲಾಡುತ್ತಿದ್ದರೆ, ಹುರುಪಿನಿಂದ ಇದ್ದರೆ.. `ವಿಜ್ಯಾ, ಅವಂದು ಪೂರಾ ಶಾಲಿ ಬಿಟ್ಟೇತಿ ನೋಡ್ಲೇ..!’ ಅಂತಿದ್ದ. ಅಂದರೆ ಶಾಲೆ ಬಿಟ್ಟ ಆ ಕ್ಷಣದ ಮಕ್ಕಳ ಮನೋಸ್ಥಿತಿ ಪರಿಪೂರ್ಣ ಸ್ವಾತಂತ್ರ್ಯ ಪಡೆದಂತೆ, ಸಂಭ್ರಮಾತಿರೇಕದಲ್ಲಿ ಮುಳುಗಿ ಎದ್ದಂತೆ ಕಾಣುತ್ತಿದ್ದುದು.. ಹಾರಾಡುವ ಹಕ್ಕಿಯಂತಲೋ, ಪುಟಿನೆಗೆದಾಡುವ ಕರುಗಳಂತೆಯೋ, ಜಿಗಿದೊಡುವ ಜಿಂಕೆಗಳಂತೆಯೋ ಇರುತ್ತಿದ್ದುದು ಇತ್ಯಾದಿ.

ಈ ಹೈಸ್ಕೂಲು ಓದಿನ ನಡುವೆ ಅಂದರೆ ಶಾಲಾ ಸಮಯದ ನಂತರ ನಮ್ಮೂರಿನಲ್ಲಿರುವ ನಮ್ಮ ಕಿರಾಣಿ ಅಂಗಡಿಯನ್ನು ನಡೆಸುವ ಪಾರ್ಟ್‍ಟೈಮ್ ಕಾಯಕವೊಂದು ನನಗಾಗಿ ಕಾದಿರುತ್ತಿತ್ತು. ಅಪ್ಪಯ್ಯನದು ಬರೀ ರಾಜಕಾರಣ ಆ ಕಾರಣ ಈ ಕಾರಣ ಅಂತಾ ತಿರುಗಾಟವೇ ಆಗಿಹೋಗುತ್ತಿತ್ತಾದ್ದರಿಂದ ಹಿರಿಯ ಮಗನಾದ ನನ್ನ ಪಾಲಿಗದು ಖಾಯಂ ಆಗಿತ್ತು. ಆಗ ತಕ್ಕಡಿಗಳಿಗಿಂತ ಸಾಮಾನುಗಳನ್ನು ಕೊಡಲು ನೌಟಾಕು ಪಾವು ಅಚ್ಚೇರು ಸೇರು ಸಿದ್ದಿ ಪಡಿ-ಗಿದ್ನಗಳೇ ಅಳತೆಯ ಮಾಪನಗಳಾಗಿದ್ದವು. ಸಂಜೆಯಾದರೆ ನಮ್ಮೂರಿನ ಕೂಲಿಕಾರರು ಜೋಳವನ್ನು ಈ ಮಾಪನಗಳಿಂದಲೇ ಅಳೆಸಿ ಖರೀದಿಸಿ ನಮ್ಮದೇ ಆದ ಹಿಟ್ಟಿನ ಗಿರಣಿಯಲ್ಲಿ ಹಸನು ಮಾಡದೆಯೇ ಹಿಟ್ಟು ಹಾಕಿಸಿಕೊಂಡು ಹೋಗುತ್ತಿದ್ದರು. ನನಗಂತೂ ಜೋಳವನ್ನು ಅಳೆದು ಕೊಟ್ಟು ಕೊಟ್ಟೂ ಜೋಳದ ಸುಂಕಿನ ಧೂಳಿನಿಂದ ರಾತ್ರಿಯಿಡೀ ಮೈ ಕಡಿತ ಶುರುವಾಗಿ ಪರಪರ ಕೆರಿಕೆಯಾನವೂ ಜರುಗಿ ಬೆಳಿಗ್ಗೆ ಅದರ ಗುರುತುಗಳು ಇಮ್ಮಡಿಗೊಂಡು ಗೋಚರಿಸುತ್ತಿದ್ದವು. ಆದರೂ ಅಂಗಡಿ ನಡೆಸುವಲ್ಲಿ ಸುಮಾರಷ್ಟು ಖುಷಿಯ ಸಂಗತಿಗಳೂ ಇದ್ದವು. ಅದರಲ್ಲಿ ನಮ್ಮ ಭಾವ ಹೊಸದಾಗಿ ತಂದ ಟೇಪ್‍ರೆಕಾರ್ಡರ್ ಒಂದು. ಬಹುತೇಕ ನಮ್ಮೂರಿಗೆ ಬಂದ ಮೊದಲ ಕೌತುಕದ, ಆಕರ್ಷಣೆಯ ನವೀನ ವಸ್ತು ಅದಾಗಿತ್ತು. ಇಂಥ ಹೊಸಹೊಸ ಸಂಶೋಧನೆ ಮತ್ತು ಖರೀದಿಯಿಂದಾಗಿ ಭಾವ ಮನೆಯ ಹಿರಿಯರಿಂದ ಬೈಸಿಕೊಳ್ಳುವುದು ಸಾಮಾನ್ಯವಾಗಿತ್ತು. ಏನೇ ಆಗಲಿ, ನನಗಂತೂ ಈ ಟೇಪ್‍ರೆಕಾರ್ಡರ್ ಹಾಡಿನಹಾದಿಯ ಹೊಸ ಗೆಳೆಯನಂತಾಗಿತ್ತು. ಅಂಗಡಿಯಲ್ಲಿಯೇ ಅದು ಸೆಟ್ಲ್ ಆಗಿದ್ದುದರಿಂದ ಅಂಗಡಿ ನಡೆಸುವಲ್ಲಿನ ನನ್ನ ಉಮೇದಿಗೆ ಮತ್ತಷ್ಟು ಪುಷ್ಠಿ ಒದಗಿಸಿತ್ತು.

**

ಈ ಟೇಪ್ ರೆಕಾರ್ಡರ್ ಎಂಬ ಮಾಯೆ ನಮ್ಮಂಗಡಿಯಲ್ಲಿ ವಿರಾಜಮಾನವಾಗಿ ಕುಂತಮೇಲೆ (ಆಗ ಮೊದಮೊದಲು ಅಡ್ಡ ಮಲಗಿಸುವ ಟೇಪ್‍ರೆಕಾರ್ಡರ್‍ಗಳೇ ಮಾರುಕಟ್ಟೆಯಲ್ಲಿದ್ದವು) ಗಿರಾಕಿಗಳಿಗಿಂತ ಹೆಚ್ಚಾಗಿ ಶ್ರೋತೃಗಳೇ ಹೆಚ್ಚಾಗಿ ಜಮಾಯಿಸತೊಡಗಿದರು. ಇಡೀ ಊರತುಂಬಾ ನಮ್ಮ ಟೇಪ್ ರೇಕಾರ್ಡರ್‍ನ ಸದ್ದೇ ತುಂಬಿ, ಅದು ಪ್ರೇಕ್ಷಣೀಯ ವಸ್ತುವಾದಂತೆ ಅಂಗಡಿಯೂ ಪ್ರೇಕ್ಷಣೀಯ ಸ್ಥಳವಾಯಿತು. ಹಗಲೆಲ್ಲ ಕೆಲಸ ಮಾಡಿ ದಣಿದ ಜೀವಗಳು ರಿಲ್ಯಾಕ್ಷ್‍ಗಾಗಿ ನಮ್ಮಲ್ಲಿಗೇ ಬಂದು ಕುಂದುರತೊಡಗಿ, `ಗೌಡ್ರ.. ಆ ಜಾನಪದಗೀತೆ ಹಾಕ್ರೀ.. ಈ ಸಿನೆಮಾ ಹಾಡು ಹಾಕ್ರೀ..!’ ಎಂದು ಗಂಟುಬಿಳುತ್ತಿದ್ದರು. ಅದೂ ಗುರುರಾಜ್ ಹೊಸಕೋಟೆ ಅವರ ಕ್ಯಾಸಟ್‍ಗೆ ಬಲು ಬೇಡಿಕೆ. `ಸಂಗವಕ್ಕನ ಮುದ್ದಿನ ಸೊಸೆಯೂ.. ರಾದ ಸುದ್ದಿ; ಕಾಳಗಿಚ್ಚಿನಂತೆ ಹಬ್ಬಿತವ್ವ ಊರತುಂಬ ಸುದ್ದಿ.!’ ; `ಕಲಿತ್ ಹುಡುಗಿ, ಕುದುರೆಯ ನಡಿಗೀ, ಕುಣಕೊಂತ್ ಬರುತ್ತಿತ್ತ..!’ `ಉಂಡ ನೀರಾ ಉಗುಳುದುರಾಗ, ಬಂದ ನಿಲ್ಲತಿ ಬಾಗಿಲದಾಗ, ನನಗೂ ನುನಗೂ ಏನ ದೂರ; ಎಡವಿ ಬಿದ್ದರೆ ನಿನ ತೋಳಾಗ.. (ಕವಿ-ಸಿದ್ಧಲಿಂಗ ದೇಸಾಯಿ) ಇಂಥ ಹಾಡುಗಳಿಗೆ ತಾವೂ ದನಿಸೇರಿಸಿ ಊರಿಗೇ ಕೇಳುವಂತೆ ಅರಚುವುದೂ ನಡೆಯುತ್ತಿತ್ತು. ಮತ್ತೂ `ಕಣ್ಣೀರಿನ ಕಥೆಯೂ ಕಂದನಾ ಜೀವನದಾ ವ್ಯಥೆಯೂ..’ `ತಾಯೀ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ..’ … ಎಂಬಿತ್ಯಾದಿ ಹಾಡುಗಳನ್ನು ಕೇಳುತ್ತ ಬಿಕ್ಕಿ ಬಿಕ್ಕಿ ಅಳುವವರನ್ನೂ ಸಂಭಾಳಿಸುತ್ತ ನಾನೂ ಹಾಡಿಗೆ ಕಣ್ಣೀರಾದ ಸಂಗತಿಯೂ ಸುಳ್ಳಲ್ಲ. ಇವೆಲ್ಲದರ ನಡುವೆ, `ಗೌಡ್ರ.. ಒಂದ್ ಚುಟ್ಟಾ ಕೊಡ್ರೀ.. ಒಂದ್ ಬಾಯಿಗೆ ಎಲಾಡಕಿ ಕೋಡ್ರೀ..’ ಎಂಬ ಪುಗಸಟ್ಟೆ ವ್ಯವಹಾರಕ್ಕೂ ಕೊರತೆಯಿರಲಿಲ್ಲ. ಕೆಲವರಂತೂ ಅಣ್ಣಾವ್ರ ಹಾಡುಗಳ ಪರಮ ಭಕ್ತರೂ ಇದ್ದಿರಲಾಗಿ, ಜಾನಪದ ಹಾಡುಗಳ ಶ್ರೋತೃಗಳು ಮತ್ತು ಅಣ್ಣಾವ್ರ ಹಾಡುಗಳ ಭಕ್ತರ ನಡುವೆ ಸಾಕಷ್ಟು ಸಲ ಮಾರಾಮಾರಿಯೂ ನಡೆದು ನಾವು ಅಂಗಡಿ ಬಾಗಿಲು ಬಂಧ್ ಮಾಡಿ ಮನೆಕಡೆ ನಡೆದದ್ದೂ ಉಂಟು.

ನಮ್ಮ ಭಾವನಿಗೆ ಸಿನೆಮಾ, ನಾಟಕ, ಹಾಡುಗಳ ಹುಚ್ಚು ವಿಪರೀತ ಅನ್ನುವಷ್ಟು ಇತ್ತು. ಕೆಲವು ನಾಟಕಗಳಿಗೆ ಮನೆಮಂದಿಯ ವಿರೋಧ ಕಟ್ಟಿಕೊಂಡು ಮ್ಯಾನೇಜರ್ ಆಗಿ ಡ್ಯಾಮೇಜ್ ಆದ ಉದಾಹರಣಗಳೂ ಹೇರಳ. ಯಾವುದೇ ಫಿಲ್ಮ್ ಹೊಸದಾಗಿ ರಿಲೀಜಾದರೂ ಹುಬ್ಬಳ್ಳಿ-ಶಿರಸಿ-ದಾವಣಗೆರೆ ತನಕ ಹೋಗಿ ದಿನದ ಎಲ್ಲ ಆಟಗಳನ್ನೂ ನೋಡಿಕೊಂಡು ಬರುತ್ತಿದ್ದರು. ಒಮ್ಮೊಮ್ಮೆ ಇವರ ಜೊತೆ ಸಿನೆಮಾ ನಾಟಕ ನಾನೂ ನೋಡಿಬಂದು ನನ್ನ ವಾರಿಗೆಯ ದೋಸ್ತರೆದುರು ಬೀಗಿದ್ದೂ ಇತ್ತು. ಜೊತೆಗೆ ಭಾವ ( ಅಪ್ಪಯ್ಯನ ತಂಗಿಯ ಮಗ ಅಲಿಯಾಸ್ ನನ್ನಕ್ಕನ ಗಂಡ) ತಾನು ನೋಡಿದ ಹೊಸ ಸಿನೆಮಾ-ನಾಟಕಗಳ ಕ್ಯಾಸೆಟ್‍ಗಳನ್ನೂ ತಂದು ಹಾಕುತ್ತಿದ್ದ ಅರ್ಥಾತ್ ಬಂದು ಬಿದ್ದೇ ಬೀಳುತ್ತಿದ್ದವು. ಒಂದು ರೀತಿಯಲ್ಲಿ ನಮ್ಮೂರಿನ ಅಂಗಡಿ ಕಟ್ಟೆ ಆಡಿಯೋ ಟಾಕೀಜ್ ಆಗಿತ್ತು. ಹಳೆಯ ಸಿನೆಮಾಗಳ ಚಿತ್ರಕಥೆಯ ಕ್ಯಾಸೆಟ್ ಕೇಳಿಕೆ ಮುಗಿಯುವವರೆಗೂ ಕೇಳುತ್ತಲೇ ನಿದ್ದೆ ಹೋಗಿ ಬೆಳಿಗ್ಗೆ ಎದ್ದು ಹೋದವರೂ ಇದ್ದರು. ನಮ್ಮಂಗಡಿಯ ಮೆತ್ತಿ(ಅಟ್ಟ)ಯ ಒಂದು ಕೋಲಿ ನಮಗೆ ಓದಲಿಕ್ಕಾಗಿಯೇ ಇತ್ತು. ಇನ್ನು ಅಟ್ಟದ ಮೇಲಿನ ಹೊರಗಿನ ಹಾಲು ಮತ್ತು ಅಂಗಡಿ ಮುಂದುಗಡೆಯ ಪಾಟಿಕಲ್ಲಿನ ಹಾಸು ಕೆಲವರಿಗೆ ರಾತ್ರಿನಿದ್ದೆಯ ಖಾಯಂ ವಾಸಸ್ಥಳವೂ ಆಗಿತ್ತು. ಮಳೆಗಿಳೆ ಬಂದು ಮನೆ ಸೋರಹತ್ತಿದರೆ ಸುತ್ತಲಿನ ಗುಡುಸಲಿನ ಹೆಣ್ಣುಗಂಡುಮಕ್ಕಳಾದಿಯಾಗಿ ಸುಮಾರು ಮಂದಿ ಕೌದಿಗಳನ್ನು ಹೊದ್ದು ಮುದುರಿಕೊಂಡು ಮಲಗಿರುತ್ತಿದ್ದರು. ಈ ಅಂಗಡಿಮನೆಯು ಮಹಾಮನೆಯೂ ಆದಂತಿದ್ದುದದಕ್ಕೆ ನಮ್ಮ ಮನೆಜನರ ಹಚ್ಚಿಕೊಳ್ಳುವ ಗುಣವೂ ಕಾರಣವಾಗಿತ್ತು. ಆಮೇಲೆ ನಮ್ಮ ಭಾವನ ಹಾಡು ಕೇಳಿಕೆಯ ಹುಚ್ಚು ಮೈಕ್‍ಸೆಟ್ (ಲೌಡ್‍ಸ್ಪೀಕರ್) ತರುವ ಮಟ್ಟಿಗೂ ಹೋಯಿತು. ಈ ಗೀಳು ಬಾಡಿಗೆಗಿಂತಲೂ ಹೆಚ್ಚಾಗಿ ಅಭಿಮಾನಿಗಳ ಪಡೆಯೇ ನಮ್ಮಂಗಡಿಯ ತಾವ ನೆರೆಯುವುದು ಹೆಚ್ಚಾಗಲಿಕ್ಕೆ ಕಾರಣವಾಯಿತು ಹಾಗೂ ಹಬ್ಬಗಿಬ್ಬಗಳ ಹೊತ್ತಿನಲ್ಲಿ ಇಡೀ ಊರಿಗೇ ಹಾಡು ಕೇಳಿಸುತ್ತ ಹಬ್ಬಕ್ಕೆ ಇನ್ನಷ್ಟು ರಂಗು ತರುತ್ತಿತ್ತು. ಚುನಾವಣಾ ಫಲಿತಾಂಶದ ಸಮಯದಲ್ಲಿ ಈ ಲೌಡ್‍ಸ್ಪೀಕರ್‍ಗೆ ಧಾರವಾಡ ಆಕಾಶವಾಣಿಯ ಪ್ರದೇಶ ಸಮಾಚಾರವನ್ನು ಲಿಂಕ್ ಮಾಡಿ ನೆರೆದ ರಾಜಕೀಯ ಪ್ರಿಯರಿಗೆ ಮತ್ತು ಊರಿಗೆ ಸುದ್ದಿ ಬಿತ್ತರಿಸುವ ಕಾರ್ಯವೂ ಬಲುಪಸಂದಾಗಿಯೇ ನೆರವೇರುತ್ತಿತ್ತು. ನಮ್ಮ ಒಲವಿನ ಪಕ್ಷ ಗೆಲ್ಲುವ ಸೂಚನೆ ಗೊತ್ತಾಗುತ್ತಿದ್ದಂತೆ ಎಣ್ಣೆಗಿರಾಕಿಗಳಿಗೆ ಅರ್ಧಕ್ಕೋ ಫುಲ್ಲಿಗೋ ಧನವಿನಿಯೋಗಿಸುವ ಜವಾಬ್ದಾರಿಯೂ ಆಗ ನಮ್ಮ ಮೇಲಿತ್ತು. ಆಮೇಲೆ ನಮ್ಮ ಓನರ್‍ಶಿಪ್ ಟೇಪ್‍ರೆಕಾರ್ಡರ್‍ಗೆ ಪ್ರತಿಯಾಗಿ ನಮ್ಮ ಭಾವನ ವಾರಿಗೆಯ ಅಣ್ಣನೊಬ್ಬ ಅದನ್ನು ತಂದು ತನ್ನ ಅಂಗಡಿಯಲ್ಲಿ ಅದನ್ನು ಹಚ್ಚಿ ಹೆಚ್ಚಾಗಿ ಹಿಂದಿ ಹಾಡುಗಳನ್ನೇ ಕೇಳಿಸಹತ್ತಿದ. ಆಗ ನನಗೆ ಗೊತ್ತಿರುವಂತೆ, ಕೆಲವರು ನಮ್ಮ ಅಂಗಡಿಯನ್ನು ಕನ್ನಡ ಟಾಕೀಜ್ ಎಂತಲೂ, ಅವರ ಅಂಗಡಿಯನ್ನು ಹಿಂದಿ ಟಾಕೀಜ್ ಅಂತಲೂ ಕರೆಯಹತ್ತಿದರು. ಏನೇ ಆದರೂ ದಣಿದಮನಗಳಿಗೊಂದು ಸಾಂತ್ವನದ ಗುನುಗುಮಳೆಯಂತೆ ಇಲ್ಲಿ ನಿತ್ಯಸಂಜೆಗಳು ಕಳೆದುಹೋಗುತ್ತಿದ್ದವು.

**

ಹೈಸ್ಕೂಲಿನ ಕಾಲ್ನಡಿಗೆಯ ನನ್ನ ದಿನಗಳಿಗೆ ಈ ಕ್ಯಾಸೆಟ್ ಹಾಡುಗಳು ಜೊತೆಯಾಗಿ ದಾರಿ ಸವೆಸಿದ್ದನ್ನು ಮರೆತೇನೆಂದರೂ ಮರೆಯಲಾಗುವುದಿಲ್ಲ. ಶಾಲೆ ಬಿಟ್ಟಾದ ಮೇಲೆ ಬರುವಾಗ ನಮ್ಮಲ್ಲಿರುವ ಕ್ಯಾಸೆಟ್‍ಗಳ ಹಾಡುಗಳು ನನ್ನ ಕಠೋರಕಂಠದೊಳು ಒಂದೊಂದಾಗಿ ತೇಲಿಬರುತ್ತಲೇ ಮನೆ ಸೇರಿಸುತ್ತಿದ್ದವು. ಹಾದಿಯಲ್ಲಿಯೇ ನಾ ಯಾವ ಕ್ಯಾಸೆಟ್‍ನ್ನು ಇವತ್ತು ಹಾಕಿ ಕೇಳಬೇಕೆನ್ನುವುದನ್ನು ನಿರ್ಧರಿಸಿಯಾಗಿ ಆ ಖುಷಿಯಾತಿರೇಕದಲ್ಲಿ ಆ ಹಾಡುಗಳೇ ಆ ಹೊತ್ತಿನ ಹಾದಿಹೆಜ್ಜೆಗಳಾಗಿ ಹರಿಯುತ್ತಿದ್ದವು. `ಮೊದಲನೇ ನೋಟಕೆ ನಿನ್ನಾ ಮೇಲೆ ನನಗೆ ಮನಸಾಯ್ತು; ಮನಸಾಗಿ ಲವ್ವಾಯ್ತು..’ `ನಮ್ಮೂರ ಮಂದಾರ ಹೂವೇ..’ `ಜೇನಿನ ಹೊಳೆಯೋ ಹಾಲಿನ ಮಳೆಯೋ..’ `ಬಾರೇ ಬಾರೇ ಚಂದದ ಚೆಲುವಿನ ತಾರೆ..’ `ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ನೀ ಯಾರು..’ ಮೊದಲಾದ ಹಾಡುಗಳ ಗುನುಗು ನನಗೆ ಗುಂಗಾಗಿ ಕಾಡುತ್ತಿದ್ದವು. ಸಿಟ್ಟು ಬಂದಾಗ.. ಜಗಳ ಆದಾಗ ನನ್ನ ಸಹಪಾಠಿಗಳ ಎದುರು, `ಯಾರು ತಿಳಿಯುವರು ನನ್ನ ಭುಜಬಲದ ಪರಾಕ್ರಮ..!’ ಮತ್ತು `ಬಿಸಿ ಬಿಸಿ ಕಜ್ಜಾಯ ಬಿಸಿ ಬಿಸಿ ಕಜ್ಜಾಯ ಮಾಡಿಕೊಡಲೇ ನಾನು..!’ ಎಂಬ ರೋಷಾವೇಷದ ಹಾಡುಗಳನ್ನೂ ಅವಾಗ ಧಿಮಾಕಿನಿಂದಲೇ ಹಾಡಿ ಪಾವು ರಕುತವಿಲ್ಲದ ನನ್ನ ದೇಹವನ್ನು ಮುಟ್ಟಿನೋಡಿಕೊಂಡಿದ್ದೂ ನೆನಪಿದೆ. ಇಂಥ ನೂರಾರು ಹಾಡುಗಳ ಗುನುಗು ಗುಂಗಾಗಿ ಕಾಡಿದ್ದರೂ ನಾ ಗಾಯಕನಾಗಲೇ ಇಲ್ಲ ಅನ್ನುವ ಕೊರಗು ನನಗೀಗಲೂ ಖಂಡಿತ ಇಲ್ಲ; ಯಾಕೆಂದರೆ `ನಾವೇನು ಆಗಬೇಕೋ ಅದಷ್ಟೇ ಆಗುವುದು’ ಎಂಬ ನಿಜ ನನಗೆ ಆಗಲೇ ತಿಳಿದಂತಿತ್ತು. ಆದರೆ ಹಾಡು ಕೇಳುವ, ತಿಳಿದಂತೆ ಹಾಡುವ ಹುಚ್ಚು ಮಾತ್ರ ಈಗಲೂ ಜೀವಂತವಿದೆ.

ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ ನಮಗೆ ಪಾಠ ಹೇಳಿದ ಬಸಪ್ಪ ಮಾಸ್ತರಂತೂ ಆಗ ನಮ್ಮೂರಿನ ಮಟ್ಟಿಗೆ ಹಾಡಿನ ಹಳ್ಳದ ಮಾಲೀಕರೇ ಆಗಿದ್ದರು. ಅವರು ಹೆಚ್ಚಾಗಿ ಪಿ.ಸುಶೀಲಾ, ಎಸ್.ಜಾನಕಿ ಅವರುಗಳ ಹಾಡುಗಳನ್ನೇ ಹೇಳುತ್ತಿದ್ದರು. ಖರೆ ಖರೆ ಇಂಪಾಗಿ ಹಾಡುತ್ತಿದ್ದರು ಕೂಡ. ಅವರಿಗೊಂದು ಜಂಭವಿತ್ತು: `ಪಿ.ಸುಶೀಲಾ ಅವರಂತೆಯೇ ನಾನು ಹಾಡುತ್ತೇನೆ ಮತ್ತು ಅವರನ್ನು ನಾನು ಮೀರಿಸಿದ್ದೇನೆ!’ ಅನ್ನುವುದು. ಅವರ ಆತ್ಮವಿಶ್ವಾಸಕ್ಕೆ ನಾವೆಂದೂ ಅಲ್ಲ ಅನ್ನಲೇ ಇಲ್ಲ. ಇನ್ನೂ ಮುಂದುವರೆದು ಅವರು, ಆಕಾಶವಾಣಿಯಲ್ಲಿ ಬೆಳಿಗ್ಗೆ ಬಿತ್ತರಗೊಳ್ಳುತ್ತಿದ್ದ ನಾಡಗೀತೆ-ದೇಶಭಕ್ತಿಗೀತೆಗಳನ್ನು ಅದೇ ಸ್ಪೀಡ್‍ಲ್ಲಿ ಬರೆದುಕೊಂಡು ಶಾಲಾ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ರಾóಷ್ಟ್ರೀಯ ದಿನಾಚರಣೆಗಳ ಸಮಯದಲ್ಲಿ ಅವನ್ನು ಪ್ರಭಾತ್‍ಪೇರಿಯ ಹಾಡುಗಳನ್ನಾಗಿ ತಾವೇ ಮುಖ್ಯಗಾಯಕರಾಗಿ ಹಾಡುತ್ತ ಮಕಗಕಳಿಂದ ಸಾಮೂಹಿಕವಾಗಿ ಹಾಡಿಸುತ್ತಿದ್ದರು. ಏನೇ ಆಗಲಿ, ಆಗಿನ ಶಾಲಾ ವಾತಾವರಣದ ಖದರು, ಸಂಭ್ರಮ ಹಾಗೂ ಶಿಕ್ಷಕನಿಗಿದ್ದ ಆ ಹೊತ್ತಿನ ಬದ್ಧತೆ ಇವತ್ತು ಇಲ್ಲವಾಗಿಯೇ ಬಹುಪಾಲು ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ನಿಂತದ್ದು ಘನಘೋರ ವಿಷಾದದ ಸಂಗತಿಯು ಹೌದು. ಹಾಡು, ನೃತ್ಯ, ಅಭಿನಯವೇ ಮೈವೆತ್ತಂತಿದ್ದ ಆಗಿನ ಶಿಕ್ಷಕ ಪಡೆ ನಮ್ಮಗಳ ಪಾಲಿನ ಬಹುದೊಡ್ಡ ಕೊಡುಗೆಯಾಗಿತ್ತು. ಈ ಹೊತ್ತು ನಾವು ಅಷ್ಟಿಷ್ಟಾದರೂ ಈ ನಿಟ್ಟಿನಲ್ಲಿ ತಿಣುಕಾಡುತ್ತಿದ್ದೇವೆಂದರೆ ಆ ಸದಾ ಹಸಿರಿನ ಗುರುಕುಲಗಣದ ಮಹತ್ತರ ಕಾಣಿಕೆಯ ಫಲವೇ ಹೌದು.

**

ಅದೇನೋ ಈ ಬಸಪ್ಪ ಮಾಸ್ತರು ಆಗಿನ ಕಾಲದಲ್ಲಿ ನಾವು ಕಂಡ ಹತ್ತಿರದ ಮಹಾನ್ ಗಾಯಕರು. ಅಣ್ಣಾವ್ರು ಹಾಡಿದ ಗುರುರಾಯರ ಕುರಿತ ಭಕ್ತಿಗೀತೆಗಳನ್ನು ಭಾಳ ತನ್ಮಯತೆಯಿಂದ ಹಾಡುತ್ತಿದ್ದರು. `ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ..’ `ಏನು ಮೋಹ ಯಾವ ದಾಹ ತಿಳಿಯದಾಗಿದೇ ಸ್ವಾಮಿ..’ `ಮಂತ್ರಾಲಯಕೆ ಹೋಗೋಣ, ಗುರುರಾಯರ ದರುಶನ ಪಡೆಯೋಣ..’ ಇತ್ಯಾದಿ ಭಕ್ತಿಗೀತೆಗಳನ್ನು ಹಾಡುವಾಗಿನ ಅವರ ತಲ್ಲೀನತೆಯು ನನಗೂ ಆ ಭಕ್ತಿಗೀತೆಗಳನ್ನು ಹಾಡುವ ಉಮೇದು ಉಂಟು ಮಾಡಿ, ನಾನೂ ನಮ್ಮೂರಿನಲ್ಲಿ ಮದುವೆ ಗಿದುವೆ ದೇವರ ಸಮಾರಂಭಗಳಲ್ಲಿ ಮೈಕಿನಲ್ಲಿ ಅವನ್ನು ಬಾಯಿಪಾಠ ಮಾಡಿ ಹಾಡಿಯೂ ಬಿಟ್ಟೆ. ಚಪ್ಪಾಳೆಗಳ ಸುರಿಮಳೆ ಆಗದಿದ್ದರೂ ಮುಂದೆಯೂ ಆಗಾಗ ನಾ ಹಾಡುವುದನ್ನು ಮಾತ್ರ ಬಿಡಲಿಲ್ಲ. ಈ ಹೊತ್ತಿನಲ್ಲಿ ನನ್ನ ಗೆಳೆಯರಾದ ನಾಗರಾಜ ಗಾಜಿಪುರ ಮತ್ತು ನನ್ನ ಕಾಕಾ ಶಿವಕುಮಾರ ಪಾಟೀಲ ಇಬ್ಬರು ಮಾತ್ರ ತದನಂತರದಲ್ಲಿ ಒಳ್ಳೆಯ ಗಾಯಕರಂತೆ ಹಾಡುತ್ತಿದ್ದರು. ನಾಗರಾಜ್ `ಎಲ್ಲೋ ಜೋಗಪ್ಪ ನಿನ್ನರಮಾನೆ..!’ ಜನಪದ ಹಾಡನ್ನು ಮಸ್ತಾಗಿ ಹಾಡುತ್ತಿದ್ದ. ಈ ಶಿವಕುಮಾರ ಪಾಟೀಲನಂತೂ ಬಬ್ರುವಾಹನನ ಪಡಿಯಚ್ಚೇ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತನಾಗಿದ್ದ. ಈಗಲೂ ವಿರಾಮವಾಗಿ ಕುಂತಾಗ ಆತ ಡೈಲಾಗುಗಳನ್ನು ಹೊಡೆಯುತ್ತಿರುತ್ತಾನೆ ಮತ್ತು ಹಾಡುಗಳನ್ನು ಅದ್ಭುತವಾಗಿ ಹಾಡುತ್ತಿರುತ್ತಾನೆ. ಕೆಲವರು ಆತನಿಗೀಗಲೂ ಅಣ್ಣಾವ್ರು ಎಂದೇ ಕರೆಯುತ್ತಾರೆ. ಬರಬರುತ್ತ ಹಾಡುವುದನ್ನು ಕಡಿಮೆ ಮಾಡಿದ ನಾನು ಕೇಳುವುದಕ್ಕಷ್ಟೇ ಸಿಮೀತನಾದರೂ ನನ್ನ ಫೆವರೇಟ್ ಹಾಡುಗಳನ್ನು ಒಬ್ಬಂಟಿಯಾಗಿದ್ದಾಗ ಹಾಡಿಕೊಂಡು ಖುಷಿಪಡುತ್ತೇನೆ. ಅಂಥ ಹಾಡುಗಳಲ್ಲಿ `ಬೆಳ್ಳಿ ಮೋಡವೇ, ಎಲ್ಲಿ ಓಡುವೆ, ನನ್ನ ಬಳಿಗೆ ಒಲಿದು ಬಾ.. ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ..’ ಅಂಬುದು ಪ್ರಥಮ ಪ್ರಾಶಸ್ತ್ಯ ಪಡೆದರೆ, ಲಂಕೇಶರ `ಕೆಂಪಾದವೋ ಎಲ್ಲ ಕೆಂಪಾದವೋ.. ಹಸುರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲ ನೆತ್ತಾರ ಕುಡಿದ್ಹಾಂಗೆ ಕೆಂಪಾದವೋ..!’ `ಎಲ್ಲಿದ್ದೆ ಇಲ್ಲಿತನಕ, ಎಲ್ಲಿಂದ ಬಂದ್ಯವ್ವ..’ ಮೊದಲಾದವುಗಳು ತದನಂತರದ ಪ್ರಾಶಸ್ತ್ಯ ಪಡೆದುಕೊಳ್ಳುತ್ತಾ ನನ್ನ ಗಂಟಲನ್ನು ಇನ್ನೂ ಸರಿಯಾಗಿಟ್ಟಿವೆ.

**

ನಾನು ಹೈಸ್ಕೂಲು ದಿನಗಳಲ್ಲೇ ಕವಿಯಾಗಿದ್ದೇನೆಂದು ನಾನೇ ಠರಾವು ಮಾಡಿಕೊಂಡಿದ್ದುದರಿಂದ ಆಗೆಲ್ಲ ಅನುಕರಣೆಯ ಗೀತೆಗಳನ್ನು ಬರೆಯತ್ತಿರಲಾಗಿ, ನಮ್ಮೂರಿನ ನಾಟಕ ಕಲಾವಿದ, ಈಗಲೂ ನನ್ನ ಆತ್ಮೀಯ ಹಿರಿಯ ಮಿತ್ರ ಶೇಖಪ್ಪ ಕೊಡ್ಲೆಣ್ಣನವರ್ ನನ್ನ `ಕನ್ನಡ ಕಲಿಯಿರಿ, ಇಂಗ್ಲೀಷ್ ಮರೆಯಿರಿ; ಕನ್ನಡವಿದು ಕರ್ನಾಟಕವು..!’ ಎಂಬ ಹಾಡನ್ನು `ಆಲಿಸಿರೀ ಸೋದರರೇ..’ ಧಾಟಿ ಹಚ್ಚಿ ನಮ್ಮೂರಿನ ವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವದಲ್ಲಿ ಹಾಡಿ ನನ್ನನ್ನು ಬೀಗುವಂತೆಯೂ ಮಾಡಿದ್ದು ನನಗೂ ಅವನಿಗೂ ಇನ್ನೂ ನೆನಪಿದೆ. ಅವನ್ನೆಲ್ಲ ನಮ್ಮ ಟೇಪ್‍ರೆಕಾರ್ಡರ್ ನಲ್ಲಿ ರೆಕಾರ್ಡ ಮಾಡಿ ಮೆರೆದಾಡಿದ್ದೂ ಇದೆ. ಹೀಗೆ ನನ್ನ ಹಾಡಗುನುಗಿನ ಹಳ್ಳ ಹರಿಯುತ್ತ ಬಂದು ನಾ ನನ್ನ ಮಡದಿಯ ಮನೆಯವರ ಹಾಡಿನ ಮೋಹದ ಸೆಳವಿನಲ್ಲಿ ಸಿಕ್ಕು ಭಾವಗೀತೆಯ ಕೇಳುಗನಾಗಿ ಕೆಲದಿನ ಅದರೊಳಗೇ ತೇಲುತ್ತಿದ್ದದ್ದು ಕೂಡ ರೋಮಾಂಚನಕಾರಿ ಸಂಗತಿಯೇ. ಆಮೇಲೆ ಹಳೆಯ ಸಿನೆಮಾ ಹಾಡುಗಳು ಮತ್ತು ಭಾವಗೀತೆಗಳ ಸಂಗ್ರಹವು ಕ್ಯಾಸೆಟ್‍ನಿಂದ ಸೀಡಿಗಳಿಗೆ ಹೊರಳಲಾಗಿ, ಈಗ ಚಿಪ್‍ಗೆ ಬಂದು ನಿಂತಿದೆ. ನಾ ಎಷ್ಟೇ ಎಡವಟ್ಟು, ಆಕ್ರೋಶದ ಪದ್ಯ ಬರೆದರೂ ಆ ಭಾವಪ್ರಧಾನ ನೆಲೆಯಿಂದ ನನಗೆ ನುಣುಚಿಕೊಳ್ಳಲಾಗದೇ ಮಧ್ಯೆ ಮಧ್ಯೆ ಭಾವಗೀತೆಗಳಂಥ ಪದ್ಯಗಳನ್ನೂ ಬರೆದೆ. ಹರೋನಹಳ್ಳಿ ಸ್ವಾಮಿ ಎಂಬ ಗಾಯಕ ಕಮ್ ಕವಿಯ ಹಳೆಯ ದೋಸ್ತಿಯು ಮರುಕಳಿಸಲಾಗಿ, ಬಿಡಿಸಿಕೊಳ್ಳಲಾಗದ ನಂಟಾಗಿಯೂ ಕಾಡಿ, ಕಳೆದ ಮೂರು ವರ್ಷಗಳ ಹಿಂದೆ ನಾ ಬರೆದ ಭಾವಗೀತೆಗಳ ಧ್ವನಿಸುರುಳಿ ಅಂದರೆ ಸೀಡಿ `ಸದಾ ಹರಿವು ಕನ್ನಡ’ವೂ ಬಿಡುಗಡೆಗೊಂಡು ನನ್ನ ಕೆಲ ಕವಿಮಿತ್ರರು ನನ್ನನ್ನು `ಕ್ಯಾಸೆಟ್ ಕವಿ’ ಅಂತಲೂ ಗೇಲಿ ಮಾಡಿದರು. ಇದೆಲ್ಲದರ ನಡುವೆ ಬಹಳಷ್ಟು ಹಿರಿ ಕಿರಿಯ ಸಾಹಿತಿಗಳು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು ಅಂದರೆ.. ನನ್ನ ಬಾಲ್ಯದ ಹುಚ್ಚುಕನಸು ಹೀಗಾದರೂ ಈಡೇರಿತಲ್ಲ ಅಂಬುವ ಸಮಾಧಾನವೂ ನನಗಾಯಿತು.. ಈ ಸೀಡಿಯಲ್ಲಿರುವ ಕನ್ನಡದ ಹಾಡು.. `ಕನ್ನಡ ಕನ್ನಡ ಅರಿವು ಇರವು ಸಂಗಡ; ಸದಾ ಹರಿವು ಕನ್ನಡ ತುಂಬಿದಂತೆ ಹೊಂಗೊಡ..!’ ಈಗಲೂ ಅಲ್ಲಲ್ಲಿ ಕೇಳಿಸುವಂತೆ ಕೆಲವಾರು ಅಭಿಮಾನಿಗಳನ್ನೂ ಹುಟ್ಟು ಹಾಕಿತು.

**

ಈ ಹೊತ್ತಿಗೂ ಹಾಡುಗಾರನಲ್ಲದ ನಾ ಗುನುಗುವ, ಈ ಗುನುಗುವಿಕೆಯಿಂದ ಕೆನೆದಾಡುವ, ಪುಳಕಿತಗೊಳ್ಳುವ ಖುಷಿ ಕೂಡ ನನ್ನ ಪಾಲಿಗಿದೆ. ಇದಕ್ಕೂ ಹೆಚ್ಚು ಈ ಕುರಿತು ಮಾತಾನಾಡಿದರೆ, ಈ ಹಾಡ ಹೇಳ-ಕೇಳುವ ರೋಮಾಂಚನದಿಂದ ನಾ-ನೀವು ಹೊರತಾದೇವು ಅನ್ನುವ ಭಯ ನನಗೆ… ಅದಕ್ಕೇ, ಈ ನೆಪದಲ್ಲಿ ಮತ್ತೆ ಮತ್ತೆ ನಾ ಬೆಳ್ಳಿಮೋಡದ ತಾವ ಹೋಗುತ್ತೇನೆ. ಹಸಿರಿನೊಂದಿಗೆ ಓಲಾಡುತ್ತೇನೆ. ಕೆರೆ ಕಟ್ಟೆಗಳಗುಂಟ ತೇಲಾಡುತ್ತೇನೆ… ತೇಲಾಡುತ್ತಲೇ ಇರಬೇಕೆಂದೂ ಪಣ ತೊಟ್ಟಿದ್ದೇನೆ.. `ಸರಿ ಸರಿ..’ ಎಂದು ನೀವು ಹ್ಹೂಂಗುಟ್ಟಿದರೆ.. ನನ್ನ ಹಾಡಿನ ಹಳ್ಳ ತುಂಬಿ ತುಳುಕುವುದು.. ಹಸಿರ ಹೊಮ್ಮಿಸುವುದು.. ಏನಂತೀರಿ??

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!