ರಾಗದೇವತೆಯೇ ನಿನ್ನೆಯ ಮಳೆಯ ರೂಪದಲ್ಲಿ ಬಂದು ತನಗೊಲಿಯಿತೋ ಎನ್ನುವ ಹಾಗಿನ ಅನುಭವ. ಆ ಮಯೂರಕ್ಕೆ ಗರಿಗೆದರುವಾಸೆ. ಮನದಣಿಯೆ ನರ್ತಿಸುವಾಸೆ. ಇನ್ನೇನು ಏರಿ ಬರಲಿರುವ ಕೆಂಗದಿರನ ಬಿಸಿಲಿಗೆ ತನ್ನ ಆಯುಷ್ಯವನ್ನು ಕಳೆದುಕೊಳ್ಳಬಹುದಾದ ಮಳೆಹನಿಗೆ ಏನನ್ನೋ ಕಂಡ ಧನ್ಯತಾ ಭಾವ. ಪೂರ್ಣ ತೃಪ್ತಿಯಿಂದ ಬಿಸಿಲಿಗೆ ಮೈಯೊಡ್ಡಿ ಕೂತಿದೆ ಮಳೆಹನಿ.

♦ ಅನಂತ ಕಾಮತ, ಬೆಳಂಬಾರ್
newsics.com@gmail.com
ಭೂ ದೇವಿ ಹೊಚ್ಚಹೊಸ ಹಸಿರು ಸೀರೆ ಉಟ್ಟು, ಸಾವಿರಾರು ವರ್ಷಗಳ ನಂತರ ಮೊದಲ ಬಾರಿ ನಗುತ್ತಿರುವಳೋ ಎಂಬ ಹಾಗೆ ಶುಭ್ರವಾಗಿ ಕಂಗೊಳಿಸುತ್ತಿದ್ದಾಳೆ. ಏನೋ ಅನಿರ್ವಚನೀಯ ಆನಂದ ಅವಳಿಗೆ. ಮದುವೆಯಾಗಬೇಕಾದ ಹುಡುಗನನ್ನು ಮೊದಲ ಬಾರಿ ನೋಡಹೋಗುವ ಹೆಣ್ಣಿನ ಮುಖದ ಕಳೆಯನ್ನು ಹೊತ್ತವಳಂತೆ ಕಾಣುತ್ತಿದ್ದಾಳೆ. ಯಾಕೀ ಸಂತಸ..? ಇಳೆವೆಣ್ಣು ಉತ್ತರಿಸಲಾರಳು.
ರೆಕ್ಕೆಗಳನ್ನೊದರಿ ಮೈಗಂಟಿದ ನೀರನ್ನು ಕೊಡವಿ ಗೂಡಿನಿಂದೆದ್ದ ಹಕ್ಕಿಗೆ ಹಾಡುವ ಬಯಕೆ. ಅರೆ.. ಏನಿದು..? ಇಂದು ತನ್ನ ಕಂಠದಿಂದ ಹಾದು ಹಾಡಾಗಿ ಬಂದ ಸ್ವರದ ಕುರಿತು ಸ್ವತಃ ಅದಕ್ಕೇ ಆಶ್ಚರ್ಯ..! ಹೌದು.. ಎಂದಿನಂತಿಲ್ಲ ಇಂದು. ರಾಗದೇವತೆಯೇ ನಿನ್ನೆಯ ಮಳೆಯ ರೂಪದಲ್ಲಿ ಬಂದು ತನಗೊಲಿಯಿತೋ ಎನ್ನುವ ಹಾಗಿನ ಅನುಭವ. ಯಾರ ಕುರಿತಾಗಿ ಹಾಡುತ್ತಿದ್ದೇನೆ ನಾನು..? ಹಕ್ಕಿಗೆ ಉತ್ತರ ಗೊತ್ತಿಲ್ಲ.
ಮತ್ತೆ ಮಳೆಯಾಗುವ ಲಕ್ಷಣಗಳಿಲ್ಲ. ಮಳೆ ನಿನ್ನೆಯ ರಾತ್ರಿಯೇ ನಿಂತಿದೆ. ತನ್ನೆಡೆಗೆ ಸೆಳೆದುಕೊಳ್ಳಬಹುದಾದ ಹೆಣ್ಣು ನವಿಲುಗಳು ಹತ್ತಿರದಲ್ಲಿಲ್ಲ. ಆದರೂ ಆ ಮಯೂರಕ್ಕೆ ಗರಿಗೆದರುವಾಸೆ. ಮನದಣಿಯುವವರೆಗೆ ನರ್ತಿಸುವಾಸೆ. ತನ್ನನ್ನು ಹೀಗೆ ಪ್ರಚೋದಿಸುತ್ತಿರುವ ಆ ಶಕ್ತಿ ಯಾವುದು..? ಅದಕ್ಕೆ ಉತ್ತರ ಸಿಗುತ್ತಿಲ್ಲ. ಅದರ ಅವಶ್ಯಕತೆಯೂ ಅದಕ್ಕಿರುವಂತೆ ತೋರುತ್ತಿಲ್ಲ. ಕುಣಿಯಬೇಕು.. ಕುಣಿಯುತ್ತಿರುವ ಈ ಪ್ರಪಂಚದೊಟ್ಟಿಗೆ ತಾನೂ ಹೆಜ್ಜೆ ಹಾಕಬೇಕು ಅಷ್ಟೇ..
ನಿನ್ನೆಯವರೆಗೆ ಹೆಜ್ಜೆಯೊಡನೆ ತೂಗುತ್ತಾ ನಲಿಯುತ್ತಿದ್ದ ನವಿಲುಗರಿಗಳಿಗೆ..? ಊಹೂಂ.. ಅವಕ್ಕೆ ಇಂದು ತೃಪ್ತಿಯಿಲ್ಲ. ನಾವು ಸಿಂಗರಿಸಬೇಕಾದದ್ದು ಈ ಕುಣಿಯುವ ನವಿಲನ್ನಲ್ಲ. ಎಲ್ಲವನ್ನೂ ಎಲ್ಲರನ್ನೂ ಕುಣಿಸಬಲ್ಲ, ಆಕರ್ಷಿಸಬಲ್ಲವನನ್ನು ಎನ್ನುವ ಭಾವ ಅವುಗಳಲ್ಲಿ..
ಅಗೋ. ಆ ಬಿದಿರು ಮೆಳೆಗಳ ಮೂಲೆಯಲ್ಲೊಂದು ಚಿಗುರು ಮೊಳಕೆಯೊಡೆದು ನಿಂತಿದೆ. ಸಮಸ್ತ ವೇದಗಳೂ ನಾದವಾಗಿ ತನ್ನೊಡಲನ್ನು ಹಾದು ಹೋಗಬೇಕು ಎನ್ನುವ ಆಸೆ ಅದರದ್ದು. ಹುಟ್ಟುವ ಮೊದಲೆಷ್ಟು ತಪಸ್ಸು ಮಾಡಿತ್ತೋ ಏನೋ. ಈಗಲೂ ಅದನ್ನೇ ಮುಂದುವರೆಸಿದಂತಿದೆ.ಒಡೆಯನ ಪಾತ್ರೆ ತುಂಬಿ ಕರುವಿನ ಹೊಟ್ಟೆ ತುಂಬುವಷ್ಟು ಹಾಲನ್ನು ನೀಡಿದ ನಂತರವೂ ಹಸುವಿನ ಕೆಚ್ಚಲು ಇನ್ನೂ ತುಂಬಿಯೇ ಇದೆ. ತಾನೇ ತಾನಾಗಿ ಹಾಲನ್ನು ಸುರಿಸುತ್ತಿದೆ. ಯಾಕೆ ಹೀಗಾಗುತ್ತಿದೆ..? ನಂದಗೋಕುಲವೇನಾದರೂ ಕ್ಷೀರವಾರಿಧಿಯಾಗಲಿಕ್ಕಿದೆಯೇ..?
ಎಲೆಯಾಸರೆಯಲ್ಲಿ ನಿಂತು, ಇನ್ನೇನು ಏರಿ ಬರಲಿರುವ ಕೆಂಗದಿರನ ಬಿಸಿಲಿಗೆ ತನ್ನ ಆಯುಷ್ಯವನ್ನು ಕಳೆದುಕೊಳ್ಳಬಹುದಾದ ಮಳೆಹನಿಗೆ ಏನನ್ನೋ ಕಂಡ ಧನ್ಯತಾ ಭಾವ. ಕಂಡವನ ಬಗೆಗಿನ ಸ್ವಲ್ಪಜ್ಞಾನ ಸಿಕ್ಕರೂ ಮುಮುಕ್ಷುಗಳು ಹೇಗೆ ನಿರ್ಲಿಪ್ತವಾಗಿ ಕೂರುತ್ತಾರೋ ಅದೇ ರೀತಿ ಪೂರ್ಣ ತೃಪ್ತಿಯಿಂದ ಬಿಸಿಲಿಗೆ ಮೈಯೊಡ್ಡಿ ಕೂತಿದೆ ಮಳೆಹನಿ. ಅಂದಹಾಗೆ ನಿನ್ನೆ ರಾತ್ರಿ ತಾನು ನೋಡಿದ್ದು ಯಾರನ್ನು..? ಅದಕ್ಕೂ ಗೊತ್ತಿಲ್ಲ.
ಎಲ್ಲರಲ್ಲೂ.. ಎಲ್ಲದರಲ್ಲೂ ಏನೋ ಅವ್ಯಕ್ತ ಆನಂದ, ಏನೋ ಅವರ್ಣನೀಯ ಸಂತೋಷ. ಇದಕ್ಕೆಲ್ಲ ನಿನ್ನೆ ರಾತ್ರಿ ನಂದಗೋಕುಲಕ್ಕೆ ಬಂದ ಅವನೇ ಕಾರಣನೆ..? ಯಾರವನು..? ಪೂರ್ಣ ತಿಳಿದವರಾರು ಅವನ ಬಗ್ಗೆ..? ಮಥುರೆಯಿಂದ ಗೋಕುಲಕ್ಕೆ ಹೊತ್ತು ತಂದ ಅವನ ತಂದೆ ವಿವರಿಸಬಹುದೇ..? ಅವ ಬರುವ ದಾರಿಗಾಗಿ ತನ್ನನ್ನೇ ತಾನು ಸೀಳಿ ನಿಂತ ಯಮುನೆ ವಿವರಿಸಬಲ್ಲಳೆ ಅವನನ್ನು..? ಅವನನ್ನು ಮುಟ್ಟಬಯಸಿ ಭೋರ್ಗರೆದು ಹಾರಿಬಂದ ಮಳೆಗೆ ಅಡ್ಡಲಾಗಿ ನಿಂತ ಆ ಮಹಾಶೇಷ ಅವನ ಪೂರ್ಣ ವಿವರ ಬಲ್ಲನೆ..? ಪ್ರಪಂಚವನ್ನೇ ಉದರದಲ್ಲಿ ಹೊತ್ತುನಿಂತವನನ್ನು ತನ್ನ ಉದರದಲ್ಲಿ ಹೊತ್ತು ತಂದ ಆ ಬಿದಿರಬುಟ್ಟಿ ಅವನನ್ನು ವಿವರಿಸುವಲ್ಲಿ ಶಕ್ತವಾಗಬಲ್ಲದೆ..? ಇಲ್ಲ.. ಆ ಪರಿಪೂರ್ಣನನ್ನು ತಿಳಿದವರು ಯಾರೂ ಇಲ್ಲ. ಯಾರೂ ಅವನ ಕುರಿತು ವಿವರಿಸಲು ಶಕ್ತರಲ್ಲ… ಎಲ್ಲವನ್ನೂ ಉತ್ತರಿಸಬಲ್ಲ ಅವನು ಮಾತ್ರ ಯಶೋಧೆಯ ಮಡಿಲಲ್ಲಿ ಬೆಚ್ಚನೆ ನಿದ್ರಿಸುತ್ತಿದ್ದ.