ಜಗತ್ತನ್ನು ಏಕಕಾಲದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ನಡುಗಿಸುತ್ತಿರುವ ಕೊರೋನಾ ಪರಿಣಾಮಗಳು, ಇಚ್ಛೆಯಂತೆ ಸುರಿಯುವ ಮಳೆ, ಜತೆಗೀಗ ಡ್ರಗ್ಸ್ ಕಹಾನಿ ಸೇರಿ ಇನ್ನೂ ಏನೇನೋ ಭಯೋತ್ಪಾದನೆಯ ಅನೇಕ ಘಟನೆಗಳು ಬೀರುವ ಹೊಗೆಯಿಂದ ಉಸಿರು ಉಸಿರನ್ನೂ ತಲ್ಲಣಿಸುತ್ತಿದೆ. ಅಲ್ಲಮನ ಪ್ರಕಾರ, ತನ್ನ ತಾನರಿತರೆ ಪ್ರತಿ ಕ್ಷಣವೂ ಪ್ರಳಯವಲ್ಲ…

♦ ಸುನೀತ ಕುಶಾಲನಗರ
newsics.com@gmail.com
ಬೆ ಳ್ಳಂಬೆಳಗ್ಗೆ ಕಣ್ತೆರೆದ ಮೊದಲ ಉಸಿರಿನಲ್ಲೆ ಭಯ ಶುರುಹಚ್ಚಿಬಿಡುತ್ತದೆ. ಬೆಳಗ್ಗೆ ಕೈಸೇರುವ ವಾರ್ತಾಪತ್ರಿಕೆ, ಹಾಲಿನ ಪ್ಯಾಕೆಟ್ಟಿನಿಂದ ಹಿಡಿದು ತರಕಾರಿ, ಹಣ್ಣುಗಳು, ಬಾಗಿಲು, ಗೋಡೆ, ಬಟ್ಚೆ ಮಾತ್ರವಲ್ಲ ಮನೆ ಮಂದಿಯನ್ನೇ ಯಾಕೆ, ನಮ್ಮನ್ನೇ ನಮಗೆ ಅಥವಾ ಎಡಗೈಯನ್ನೇ ಬಲಗೈ ನಂಬಲಾಗದ ಪರಿಸ್ಥಿತಿಯ ಹುದುಲಿಗೆ ಸಿಕ್ಕಿಸಿ ಜಡತ್ವದ ಉಸಿರಿಗೆ ದಬ್ಬಿ ಲೋಕವನ್ನೇ ಕಿರುಬೆರಳಲ್ಲಿ ನಡುಗಿಸುತಿರುವ ಕೊರೋನಾ ಕಾಳನರ್ತನ. ಈ ಅಸಹಜ ಸ್ಥಿತಿಗೆ ಹೆದರಿ ಅದೆಷ್ಟೋ ಆಸೆಗಳು ಈಡೇರದೆ, ಈಡೇರಿಸಲಾಗದೆ ಬದಿಗೆ ಸರಿದಿದ್ದೇವೆ.
ರಾಶಿ ರಾಶಿ ನೀಲಿ ಕುರಿಂಜಿ…
ದಿನಗಳ ಹಿಂದೆ ಕೋಟೆಬೆಟ್ಟದಲ್ಲರಳಿದ ರಾಶಿ ರಾಶಿ ನೀಲಿ ಕುರಿಂಜಿ ಹೂಗಳನ್ನು ನೋಡಿ ಬಂದ ಪಟಗಳನ್ನು ಗೆಳೆಯರು ಡಿಪಿ, ಸ್ಟೇಟಸ್, ಫೇಸ್ಬುಕ್’ಗಳಲ್ಲಿ ಹಾಕಿ ಖುಷಿಪಡುತಿರುವುದನ್ನು ನೋಡಿ ಮುದಗೊಂಡು ನನ್ನೊಳಗಿನ ಆಸೆಗೂ ರೆಕ್ಕೆ ಮೂಡಿ ದಿನೇ ದಿನೇ ಬಲಿಯುತ್ತಿದೆ. ಏಕೆಂದರೆ ‘ನಾ. ಡಿಸೋಜಾ”ರವರ ಕಾದಂಬರಿಯೊಂದರಲ್ಲಿ ಕುರಿಂಜಿ ಹೂವಿನ ಉಲ್ಲೇಖವಿದ್ದು ಓದಿದಾಗಿನಿಂದ ಕಣ್ತುಂಬಿಸಿಕೊಳ್ಳುವ ಬಯಕೆ ನನ್ನೊಳಗೂ ಮೊಳೆತು ಮರೆಯಲ್ಲಿತ್ತು. ಇದೀಗ ನೋಡಿ ಬಂದ ಸ್ನೇಹಿತರ ಕುರಿಂಜಿಯ ಜತೆಗಿನ ವಿವಿಧ ಪಟಗಳನ್ನು ನೋಡ ನೋಡುತ್ತಲೇ ನನಗೂ ಕುರಿಂಜಿಯನ್ನು ನೋಡಲೇಬೇಕೆಂಬ ಆಸೆಯಂತೂ ಹಠಕ್ಕೆ ಬಿದ್ದಿದೆ. ಹೂವರಳುವುದು ಯಾವಾಗ ನಿಂತು ಹೋಗುತ್ತದೋ, ನನಗೆ ಕಾಣಲು ಸಿಗುತ್ತದೋ ಇಲ್ಲವೋ ಎಂದು ಎಗ್ಗಿಲ್ಲದೆ ನುಗ್ಗಿ ಕಾಡುತ್ತಿದೆ. ಭಾರತದಲ್ಲಿ ಸುಮಾರು 46 ಪ್ರಭೇದಗಳಿರುವ ಕುರಿಂಜಿಯಲ್ಲಿ ಕೆಲವು ವಾರ್ಷಿಕ, ಕೆಲವು 6, 7, 8, 12, 14,16 ವರ್ಷಗಳಿಗೊಮ್ಮೆ ಹೂಬಿಡುತ್ತವೆ. ತಮಿಳು ಕ್ಲಾಸಿಕಲ್ ಸಾಹಿತ್ಯದಲ್ಲಿ ಇದರ ಉಲ್ಲೇಖವಿದ್ದು, ಹೂ ಬಿಡಲು ದೀರ್ಘ ಕಾಲ ತೆಗೆದುಕೊಳ್ಳುವ ಕುರಿಂಜಿಯದು ಅಕಂತೇಸಿಯಾ ಕುಟುಂಬ. ಕೋಟೆಬೆಟ್ಟದ ಕುರಿಂಜಿ ಅರಳಲು ಇನ್ನೆಷ್ಟು ವರ್ಷ ಕಾಯಬೇಕೋ ಎಂದು ಕೆಲವು ಆತ್ಮೀಯರಲ್ಲಿ ತಡೆಯಲಾರದೆ ನೋಡಲೇಬೇಕೆಂಬ ಆಸೆಯನ್ನು ಹೇಳಿಯೂಬಿಟ್ಟಿದ್ದೆ. ಆದರೆ ಸ್ವಲ್ಪ ಸಮಯ ಇವೆಲ್ಲ ಬೇಡ, ಸಾಧ್ಯವಾದಷ್ಟು ಜಾಗೃತರಾಗಿರಬೇಕೆಂದು ಪ್ರೀತಿಯ ತಾಕೀತು ನೀಡುತ್ತಾ ಇತಿಶ್ರೀ ಹಾಡಿದರು.ಅಪರಾಧಿ ಭಾವ…
ಹೇಳದೆ ಕೇಳದೆ ಘನಘೋರ ಹೆಜ್ದೆಯಿಟ್ಟ ಈ ಕೊರೋನಾ ಕ್ರೂರ ಜಾದೂ ಇನ್ನೆಷ್ಟು ಕಾಲವೋ? ಸಣ್ಣ ಪುಟ್ಟ ಕಾಯಿಲೆಗೂ ಆಸ್ಪತ್ರೆಗೆ ಓಡುತ್ತಿದ್ದ ನಮ್ಮ ಮುಂದೆ ಬೇರೆ ಕಾಯಿಲೆಗಳೆಲ್ಲಾ ಗೌಣವೀಗ. ಒಂದೊಮ್ಮೆ ತುರ್ತು ಅಗತ್ಯದ ಚಿಕಿತ್ಸೆಗಾಗಿ ಹೋದರೂ ಆಸ್ಪತ್ರೆ ಗೇಟಿನಿಂದ ಹಿಡಿದು ಒಳ ಪ್ರವೇಶದವರೆಗೂ ಪ್ರಶ್ನೆ ಮಾಡುವ ಸನ್ನಿವೇಶಗಳು ನಮ್ಮೊಳಗೆ ಅಪರಾಧಿಯ ಭಾವ ಮೂಡಿಸಿ ನಮ್ಮನ್ನು ನಾವೇ ಪ್ರಶ್ನೆ ಮಾಡುವಂತೆ ಭಯ ಹುಟ್ಟಿಸಿಬಿಡುತ್ತವೆ. ಇವೆಲ್ಲಾ ಜಾಣ ಕುರುಡು ಹಾಗೂ ಕಿವುಡಿನ ಕೊರೋನಾದ ಕಾಳ ನರ್ತನದ ಮಾಯೆ.
ಓಡುತ್ತಿಲ್ಲ ಬಣ್ಣ ಬಣ್ಣದ ಬಸ್…
ಒಂದಷ್ಟು ಬಿಡುವು ಸಿಕ್ಕಿ ಕೈಯಲ್ಲಿ ಇದ್ದಷ್ಟು ಕಾಸು ಹಿಡಿದು ಆಗಾಗ ಶಾಪಿಂಗ್ ಹೋಗುವುದೆಂದರೆ ನಮಗೆ ಎಂದೆಂದಿಗೂ ಎಲ್ಲಿಲ್ಲದ ಖುಷಿ ಕೊಡುವ ವಿಚಾರ. ಕಂಡ ಕಂಡವನ್ನೆಲ್ಲ ಮನದಿಚ್ಛೆಯಂತೆ ಕೊಂಡು, ಬಾಯಿರುಚಿಯನ್ನು ಉಂಡು ಬರುವ ದಿನಗಳೆಲ್ಲಾ ಎಷ್ಟು ಬೇಗ ಬದಿಗೆ ಸರಿದವು? ಇತ್ತೀಚಿನ ದಿನಗಳಲ್ಲಿ ಅಪರೂಪಕೊಮ್ಮೆ ಹೊರಟರೂ ಮನಸ್ಸು ತೀರಾ ಅಗತ್ಯವಿದ್ದರೆ ಮಾತ್ರ ಹೋಗು ಎಂದು ಫರ್ಮಾನು ಹೊರಡಿಸುವಾಗ ಪಾದಗಳನ್ನು ಹಿಂದಕ್ಕೆ ಎಳೆದುಬಿಡುತ್ತೇವೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ರಾಮ, ಕೃಷ್ಣ, ಉದಯ, ಜಯಲಕ್ಮಿ, ಭಗವತಿ, ಭಗಂಡೇಶ್ವರ, ಮಂಜುನಾಥ, ರಾಘವೇಂದ್ರ… ಇನ್ನೂ ಅನೇಕ ಶಿರೋನಾಮೆಯಡಿ ಪ್ರತಿ ಐದು ನಿಮಿಷಕೊಮ್ಮೆ ಓಡಾಡಿಕೊಂಡಿದ್ದ ರಂಗುರಂಗಿನ ಬಸ್ಸುಗಳೆಲ್ಲಾ ರಸ್ತೆ ಕಾಣದೆ ಎಲ್ಲಿ ನಿದ್ರಿಸುತ್ತಿವೆಯೋ? ಝಗಮಗದಿಂದ ಜನ ತುಂಬಿಸಿ ತ್ರಾಸಿಲ್ಲದೆ ಊರಿಂದೂರಿಗೆ ತಲುಪಿಸುತಿದ್ದ ರಂಗು ರಂಗಿನ ಬಸ್ಸುಗಳನ್ನು ಕಾಣದೆ ಏನೋ ತಳಮಳ. ಕೆಲವೊಮ್ಮೆ ಬಿಕೋ ಎನ್ನುವ ರಸ್ತೆ ನೋಡುವಾಗ ತವರೂರು ತುಂಬಾ ನೆನಪಾಗುತ್ತದೆ. ನನ್ನೂರನ್ನು ಹಾದು ಸಾಗುವ ಬಣ್ಣ ಬಣ್ಣದ ಬಸ್ಸುಗಳು ಈಗ ಒಂದೊಂದಾಗಿ ರಸ್ತೆಗಿಳಿಯುವುದನ್ನು ಕಂಡು ತುಸು ನಿರಾಳವೆನಿಸಿದೆ. ಬಿಟ್ಟೇನೆಂದರೂ ಬಿಡದ ಮಳೆ ಅದೆಷ್ಟೋ ತಿಂಗಳು ಕಾಯಿಸಿ ಕೊನೆಗೂ ರೇಗಿ ಭೋರ್ಗರೆದು ಸುರಿದು ಸರಿದಿತ್ತು. ಮತ್ತೆ ಸುರಿಯುತ್ತಾ ಅಸಹಜತೆಯಲ್ಲಿ ತೊಯ್ದು ತೊಪ್ಪೆಯಾಗುವ ಆತಂಕ. ಹವಾಮಾನ ವೈಪರೀತ್ಯದ ಬಗ್ಗೆ ತಲೆಕೆಡಿಸುವಷ್ಟರಲ್ಲೇ ಡ್ರಗ್ಸ್ ಮಾಫಿಯಾ ಸುದ್ದಿ ಸರಮಾಲೆಗೆ ಬೆಚ್ಚಿಹೋಗಿದ್ದೇವೆ. ಟಿವಿ ಮೂಲಕ ಕಂತೆ ಕಂತೆ ಕತೆಗಳು ರವಾನೆಯಾಗಿ ದಿನ ದಿನವೂ ಒಂದಿಲ್ಲೊಂದು ರೀತಿಯಲ್ಲಿ ಭೀತಿ ಹುಟ್ಟಿಸುತ್ತಿವೆ.
ತನ್ನ ತಾನರಿತರೆ…
ಜಗತ್ತನ್ನು ಏಕಕಾಲದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ನಡುಗಿಸುತ್ತಿರುವ ಕೊರೋನಾ ಪರಿಣಾಮಗಳು, ಇಚ್ಛೆಯಂತೆ ಸುರಿಯುವ ಮಳೆ, ಜತೆಗೀಗ ಡ್ರಗ್ಸ್ ಕಹಾನಿ ಸೇರಿ ಇನ್ನೂ ಏನೇನೋ ಭಯೋತ್ಪಾದನೆಯ ಅನೇಕ ಘಟನೆಗಳು ಬೀರುವ ಹೊಗೆಯಿಂದ ಉಸಿರು ಉಸಿರನ್ನೂ ತಲ್ಲಣಿಸುತ್ತಿದೆ. ಅಲ್ಲಮನ ಪ್ರಕಾರ, ‘ತನ್ನ ತಾನರಿತರೆ ಪ್ರತಿ ಕ್ಷಣವೂ ಪ್ರಳಯವಲ್ಲ…’ ಬದುಕಿನ ತಳ ಮುಟ್ಟಿ ಬಂದ ಅಲ್ಲಮರ ಮಾತು ನಿತ್ಯ ಸತ್ಯವೇ ಆದರೂ ಸಾಮಾನ್ಯರಾದ ನಮಗೆ ಇವನ್ನೆಲ್ಲಾ ಅರಗಿಸಿಕೊಳ್ಳಲಾಗದೆ ‘ಸಹಜ ಉಸಿರಿನಷ್ಟು ಸರಾಗವಲ್ಲ ಈ ಬದುಕು’ ಎಂದು ಮನಸ್ಸು ಪದೇ ಪದೇ ಸಾರಿ ಹೇಳುತ್ತಿದೆ.
ಕೊರೋನಾ ನಿಲ್ಲಲ್ಲ; ಆನ್ಲೈನ್ ಸಂಕಷ್ಟವೂ…
ಅಡುಗೆ ಮನೆಗಳಲ್ಲಿ ಉರಿಯಲಿವೆ ವಿದ್ಯುತ್ ಒಲೆಗಳು