Saturday, November 27, 2021

ಲೆಕ್ಕ ಚುಕ್ತವಾಗದ ಹೊರತು…

Follow Us

‘ಕೊರೋನಾ ಜೋರಾ ನಿಮ್ ಕಡೆ’ ಅಂತ ಕೇಳ್ತಿದ್ದಾರೆ ಸೌಖ್ಯ ವಿಚಾರಿಸಿಕೊಳ್ಳಲು ಫೋನ್ ಮಾಡುವವರು.
ನನ್ನ ಕಿವಿಗೆ ಅದು ಹಬ್ಬ ಜೋರಾ ಅಂದ ಹಾಗೇ ಕೇಳಿಸ್ತಿದೆ. ಇನ್ನಾರೋ ಕ್ವಾರಂಟೈನ್ ಕಾಲದಲ್ಲಿ ಏನ ಮಾಡಿದ್ರಿ ಅಂತಾರೆ.
ನನಗೆ ಮೈ ಉರಿಯುತ್ತದೆ. ‘ರೀ, ಕ್ವಾರಂಟೈನು ಅನ್ನುವುದು ಸೋಂಕಿತರು ಅಥವಾ ಕೊರೋನಾ ಶಂಕಿತರಿಗೆ ಮಾತ್ರ ಬಳಸುವ ಪದ… ನಮ್ಮದು ನಿಮ್ಮ ಹಾಗೇ ಕೇವಲ ಲಾಕ್ ಡೌನ್ ಅಷ್ಟೇ’ ಅಂತೀನಿ.
♦ ನಂದಿನಿ ಹೆದ್ದುರ್ಗ
response@134.209.153.225
newsics.com@gmail.com

ನನ್ನೋ ಓದಬೇಕು.
ಅಂದುಕೊಂಡಿದ್ದನ್ನು ಬರೆಯಬೇಕು.
ಕಪಾಟು ಸ್ವಚ್ಛ ಮಾಡಬೇಕು.
ಈ ಸಂಜೆ ತೋಟಕ್ಕೆ ಹೋಗಿ ಬರಬೇಕು.
ಫ್ರಿಜ್ಡ್ ಕ್ಲೀನ್ ಮಾಡಬೇಕು.
ಟಿಪ್ಪಣಿ ತಯಾರಿಸಿಕೊಳ್ಳಬೇಕು.
ಈ ಸಂಜೆಯಿಂದಲಾದರೂ ಯೋಗ ಮುಂದುವರಿಸಬೇಕು…
__
ದಿನವೂ ಈ ಬೇಕುಗಳ ಪಟ್ಟಿ ಬೆಳೆಯುತ್ತಲೇ ಇದೆ..ಅಂದುಕೊಂಡ ಒಂದನ್ನೂ ಮಾಡಿಲ್ಲ…
ಮಾಡಲಾಗುತ್ತಿಲ್ಲ ಅಂದರೆ ಮುಜುಗರ..

ಕೊರೋನಾ ಜೋರಾ ನಿಮ್ ಕಡೆ ಅಂತ ಕೇಳ್ತಿದ್ದಾರೆ ಸೌಖ್ಯ ವಿಚಾರಿಸಿಕೊಳ್ಳಲು ಫೋನ್ ಮಾಡುವವರು.
ನನ್ನ ಕಿವಿಗೆ ಅದು ಹಬ್ಬ ಜೋರಾ ಅಂದ ಹಾಗೇ ಕೇಳಿಸ್ತಿದೆ..
ಇನ್ನಾರೋ ಕ್ವಾರಂಟೈನ್ ಕಾಲದಲ್ಲಿ ಏನ ಮಾಡಿದ್ರಿ ಅಂತಾರೆ.
ನನಗೆ ಮೈ ಉರಿಯುತ್ತದೆ.
‘ರೀ ಕ್ವಾರಂಟೈನು ಅನ್ನುವುದು ಸೋಂಕಿತರು ಅಥವಾ ಕೊರೋನಾ ಶಂಕಿತರಿಗೆ ಮಾತ್ರ ಬಳಸುವ ಪದ… ನಮ್ಮದು ನಿಮ್ಮ ಹಾಗೇ ಕೇವಲ ಲಾಕ್ ಡೌನ್ ಅಷ್ಟೇ’
ಅಂತೀನಿ.
ಆಮೇಲೆ ಯೋಚಿಸಿದೆ.
ಅಷ್ಟೊಂದು ಒರಟು ಪ್ರತಿಕ್ರಿಯೆಯ ಅಗತ್ಯವಿತ್ತೇ….?

ಕೊರೋನಾ ಆರಂಭಿಕ ದಿನಗಳಲ್ಲಿ ನಾನು ಪದೇಪದೇ ಅಂದುಕೊಳ್ತಿದ್ದಿದ್ದು ಇದೊಂದೇ…
ಇಡೀ ಬ್ರಹ್ಮಾಂಡ ಒಂದು ನಿಯಮಾನುಸಾರ ನಡೀತಿದೆ.
ನಮ್ಮ ಭೂಮಿಯೂ ಅದೇ ನಿಯಮದಡಿಯಲ್ಲೇ ತನ್ನ ದಿನಚರಿ ಸಂಭಾಳಿಸಿಕೊಳ್ತಿದೆ..
ಒಂದು ಜೀವಿಯ ದೇಹದ ಕ್ರಿಯೆಗಳು ಹೇಗೋ ಹಾಗೇ ಭೂಮಿಯೆಂಬ ದೇಹದ ಕ್ರಿಯೆಗಳೂ ಒಂದು ನಿರ್ದಿಷ್ಟ ವ್ಯವಸ್ಥೆ ಗೆ ಒಳಪಟ್ಟಿವೆ..
ಹಾಗೆ ಅಂದುಕೊಂಡಾಗ ನನಗೆ ಸ್ಪಷ್ಟವಾಗುವುದು ಒಂದೇ..
“ನಾವು ಏನನ್ನು ಕೊಡ್ತೀವೋ ಅದು ನಮಗೆ ಮರಳಿ ದೊರಕುತ್ತದೆ..”
ಅದು ನಮ್ಮ ದೇಹಕ್ಕಾಗಿರಬಹುದು, ಭೂಮಿಗಾಗಿರಬಹುದು,
ಭಾವಕ್ಕಾಗಿರಬಹುದು ಅಥವಾ ನಮ್ಮ ಸಹಜೀವಿಗಾಗಿರಬಹುದು.
ಹಾಗಿದ್ದಾಗ ಮೊದಲಿಗೆ ನಮ್ಮ ಮಣ್ಣನ್ನೇ ಭಾವಿಸೋಣ.

ಯುಗಯುಗಳಿಂದ ಈ ಭೂಮಿ ಏನೆಲ್ಲವನ್ನೂ ಕಂಡಿರಬಹುದು.?
ಈಗ ಜಗತ್ತು ಆಧುನಿಕವಾಗಿದೆ ಅಂದುಕೊಂಡರೆ ಕಣ್ಮರೆಯಾದ ಅನೇಕಾನೇಕ ನಾಗರೀಕತೆಗಳಲ್ಲಿ ಅಷ್ಟು ವೈಜ್ಞಾನಿಕವಾದ, ಆಡಂಬರದ ರಚನೆಗಳು, ಸಂಶೋಧನೆಗಳು ಹೇಗೆ ಸಾಧ್ಯವಾದವು.?
ಋಷಿಗಳ ಕಾಲದಲ್ಲೇ ಕರಾರುವಕ್ಕಾಗಿ ಗ್ರಹತಾರೆಗಳ ಚಲನವಲನಗಳನ್ನು ,ದೂರವನ್ನು ಹೇಗೆ ಅಳೆದರು.?
ಶತಶತಮಾನಗಳ ನಂತರವೂ ವೇದ ಕಾಲದಲ್ಲಿ ಹೇಳಿದ ನಕ್ಷತ್ರ ಪುಂಜಗಳು,ಗ್ರಹಣಗಳು ಸುಳ್ಳಾಗುತ್ತಿಲ್ಲವಾದರೆ ಅವರ ಅಬ್ಸರ್ವೇಷನ್ ಎಷ್ಟು ಸೂಕ್ಷ್ಮವಾಗಿದ್ದಿರಬಹುದು.?
ಇದೆಲ್ಲವನ್ನೂ ನೋಡುವಾಗ ಸ್ಪಷ್ಟವಾಗುವುದು ಒಂದೇ ವಿಚಾರ..
ಮನುಷ್ಯ ಉಗಮವಾದ ದಿನದಿಂದಲೂ ಅವನಿಗಿದ್ದದ್ದು ಒಂದೇ ಧ್ಯೇಯ.
“ಪ್ರಕೃತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಬಯಕೆ.”
ಆದರೆ ಮನುಷ್ಯ ಜೀವಿ ಈ ಪ್ರಕೃತಿಯ ಮುಂದೆ ಯಂಕಶ್ಚಿತ್..

ಕಾಲಕಾಲಕ್ಕೆ ಪ್ರಕೃತಿ ಹೀಗೆ ತನ್ನನ್ನು ಹಿಡಿಯಬಂದವನಿಗೆ ಬುದ್ಧಿ ಕಲಿಸಲು ಥರೇವಾರಿ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಬಂತು.
ಈ ನಡುವೆ ಎಲ್ಲೋ ಓದಿದ ಅದ್ಭುತ ವಾಕ್ಯವೊಂದು ಸದಾ ನೆನಪಿಗೆ ಬರುತ್ತದೆ.
“ಪ್ರತಿ ಕಾಲವೂ ಆಯಾ ಕಾಲಕ್ಕೆ ನವನವೀನವೂ ಅಷ್ಟೇ ಪುರಾತನವೂ ಆಗಿರುತ್ತದೆ..”
ಹಾಗಿದ್ದ ಮೇಲೆ ಪ್ರಕೃತಿಯ ಮೇಲೆ ಸದ್ಯದ ಮನುಷ್ಯನ ಅತೀ ಅತ್ಯಾಚಾರವನ್ನೂ ಕಾಲಧರ್ಮದ ಅನ್ವಯ ಸಹಜವೆಂದೇ ಸ್ವೀಕರಿಸಬಹುದೇ.?
ಹಾಗೇ ಪ್ರಕೃತಿ ತನಗೆ ಸಿಕ್ಕುವ ಈ ಉಡುಗೊರೆಗೆ ಪ್ರತಿ ಉಡುಗೊರೆಯನ್ನು ಕೊಡಲೇಬೇಕಾದ್ದೂ ಅದರ ಕೈಮೀರಿ ನಡೆಯಬಹುದಾದ ಒಂದು ಪ್ರಕ್ರಿಯೆ..
ಹಾಗಾಗಿ ಕೊರೋನಾವನ್ನೂ ಕೊಟ್ಟು ತೆಗೆದುಕೊಂಡ ವಿಚಾರವಾಗಷ್ಟೇ ಸ್ವೀಕರಿಸಬೇಕು..

ಹಾಗಿದ್ದರೆ ಈ ಹಿಂದೆ ಇದೆಲ್ಲವೂ ಆಗಿರಲಿಲ್ಲವೇ.?
ಯಾಕಿಲ್ಲ…
ಪ್ರತಿ ಶತಮಾನದಲ್ಲೂ ಪ್ರಕೃತಿ ವಿಕೋಪಗಳ ಜತೆಜತೆಗೆ ಸಾಂಕ್ರಾಮಿಕ ಕಾಯಿಲೆಗಳು ಬಂದು ಭೂಭಾರವನ್ನು ತಗ್ಗಿಸುತ್ತಲೇ ಇದ್ದರೂ ಸದ್ಯದ ಕೊರೋನಾಕ್ಕೆ ಎಲ್ಲಿಲ್ಲದ ಪ್ರಚಾರದ ಸುಗ್ಗಿ.
ಕಾರಣ ಮತ್ತದೇ ಎಗ್ಗಿಲ್ಲದ ಸುದ್ದಿ ಮಾದ್ಯಮಗಳು.

ಸಣ್ಣ ಊರಿನಲ್ಲಿ ಜೋರು ಸೀನಿದರೂ ಇಂತಹ ಊರಿನಲ್ಲಿ ಇಂತಹವನೊಬ್ಬ ಇಷ್ಟು ಗಂಟೆಗೆ ಇಷ್ಟು ಸೆಕೆಂಡು ಸೀನಿದ್ದರಿಂದ ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ಅವನನ್ನು ಪರೀಕ್ಷೆಗೊಳಪಡಿಸಲು ಕ್ವಾರಂಟೈನಲಿಟ್ಟಿದ್ದಾರೆ ಎನ್ನುವ ಸುದ್ದಿ ಕಾಳ್ಗಿಚ್ಚಿನೋಪಾದಿಯಲ್ಲಿ ಹರಡಿ ಹೌದಾ.. ಹೌದಂತೆ ಎನ್ನುವ ಮಾತುಕತೆಗಳು ಗುಂಪಿನಲ್ಲೋ ವಾಟ್ಸಪ್ಪಿನಲ್ಲೊ ನಡೆದು ಬಾರದ ಕೊರೋನಾವನ್ನು ಭಾವದಲ್ಲಿ ಅನುಭವಿಸಿಯೂ ಬಿಡ್ತಾರೆ..
ಸೀನಿದ ವ್ಯಕ್ತಿ ಮನೆಯಲ್ಲಿ ಒಗ್ಗರಣೆ ಹಾಕಿದ ಮಡದಿಯನ್ನು ಗದರಿರುತ್ತಾನೆ ಅಷ್ಟೇ..

ಕಳೆದ ಶತಮಾನದ ಕೊನೆಯಲ್ಲಿ ವ್ಯಾಪಿಸಿದ ಪ್ಲೇಗೂ, ಮೀಸೆಲ್ಸು, ಇನ್ಪ್ಲುಯೆಂಝಾಗಳಿಂದಾಗಿ ಊರಿಗೆ ಊರೇ ಸ್ಥಳಾಂತರ ಗೊಂಡಿದ್ದನ್ನು ಹಿರಿಯರಿಂದ ಕೇಳುತ್ತಲೇ ಇರ್ತೀವಿ.
ಸಂಸ್ಕಾರವೂ ಸಾಧ್ಯವಾಗದೇ ಹೆಣಗಳನ್ನು ಊರ ಸಮೀಪದ ಆಳ ಕೊರಕಲಿಗೆ ತಳ್ಳುವ ಕಥೆಯೂ. ಇನ್ನೂ ಹದಗೆಟ್ಟು ಕೊರಕಲಿಗೆ ತಲುಪಿಸಲಾಗದೇ ಮನೆಯಲ್ಲಿ, ರಸ್ತೆಯಲ್ಲೇ ಮನುಷ್ಯರು ಯಃಕಶ್ಚಿತ್ ಕ್ರೀಮಿಕೀಟಗಳೋಪಾದಿಯಲ್ಲಿ ಸತ್ತದ್ದು ಕೇವಲ ಕಾಗಕ್ಕ ಗುಬ್ಬಕ್ಕ ಕಥೆಯಲ್ಲ.

ಆದರೆ ಈ ಕಾಲಕ್ಕೆ ವಿಜ್ಞಾನ ಇನ್ನಿಲ್ಲದಂತೆ ಮುಂದುವರೆದಿದೆ.
ಸಾವನ್ನು ಅಷ್ಟು ಸುಲಭವಾಗಿ ನಾವು ಸೃಷ್ಟಿಸಿಕೊಂಡ ವ್ಯವಸ್ಥೆ ಒಪ್ಪಿಕೊಳ್ಳದೇ ಹೋರಾಟ ನಡೆಸುತ್ತಿದೆ..

ನಮ್ಮ ಮೀರಿದವರು ಈ ಭೂಮಂಡಲದಲ್ಲೇ ಇಲ್ಲ ಎನ್ನುತ್ತಿದ್ದವರೂ ಸೊಳ್ಳೆಬ್ಯಾಟು ಬೀಸಿದಾಗ ಸಾಯುವ ಕೀಟಗಳಂತಾಗುತ್ತಿದ್ದಾರೆ..
ಹಾಗಾದ ಮೇಲೆ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಲೇ ನಿಯಮಕ್ಕೆ ಬದ್ಧವಾದ ಪ್ರಕೃತಿಗೆ ತನ್ನ ಲೆಕ್ಕಾಚಾರ ತಪ್ಪದಂತೆ ನಡೆದುಕೊಳ್ಳಲು ಮುಕ್ತವಾಗಿ ಮನುಷ್ಯ ಜೀವಿಯ ಸಹಕಾರ ಬೇಕಲ್ಲವೇ..?

ಬಹುತೇಕರಿಗೆ ಈ ವಾದ ಒಪ್ಪಿಗೆಯಾಗಲಾರದು. ಮುಖೇಡಿತನ ಅಂತಲೂ ಅನ್ನಿಸಬಹುದು.
ಇಡೀ ಭೂಮಂಡಲದಲ್ಲಿ ಒಂದು ಸಾವಿರ ಕೋಟಿ ಜನಸಂಖ್ಯೆ ಇದೆಯೆಂದು ಅಂದಾಜಿಸಲಾಗಿದೆ.. ಇರಲಿ ಬಿಡಿ..
ಹೆತ್ತಮ್ಮನಿಗೆ ಹತ್ತರ ಮೇಲೊಂದು ಭಾರವಾಗಲಾರದು.
ಆದರೆ ಮಕ್ಕಳು ಹೆತ್ತಮ್ಮನ ಒಡಲು ಕತ್ತರಿಸಹೊರಟರು.
ಮನುಷ್ಯ ಆದುನಿಕನಾಗುವ ಭರದಲ್ಲಿ ಅಗತ್ಯಕ್ಕಿಂತಲೂ ಮಿಗಿಲಾಗಿ ಸವಲತ್ತನ್ನೂ ಸಂಪತ್ತನ್ನೂ ಹೊಂದಲಾರಂಭಿಸಿದ.ಪ್ರಕೃತಿಯಲ್ಲಿರುವ ಪ್ರತಿಯೊಂದೂ ತನ್ನ ವೈಭೋಗಕ್ಕಾಗೇ ಇರುವುದೆಂದು ಅತಿಯಾಗಿ ಬಳಸಲಾರಂಬಿಸಿದ.
ಕೃಷಿ, ಕೈಗಾರಿಕೆ, ಪಶುಪಾಲನೆಯಂತಹ ಬದುಕಿನ ಮೂಲ ಅರ್ಥಮೂಲಗಳು ಅರ್ಥ ಕಳೆದುಕೊಂಡು ಅತೀ ಮಾಡುವುದೇ ಅಭಿವೃದ್ಧಿ ಎಂದು ಭ್ರಮಿತನಾದ.
ಬರೆಯುವ ನಾನೂ ಓದುವ ನೀವೂ ಇದಕ್ಕೆ ಹೊರತಲ್ಲ.

ಪರಿಣಾಮ.,
ಪ್ರಾಣವಾಯುವಿಗಿಂತ ನೂರು ಪಟ್ಟು ಮಿಗಿಲು ವಿಷಾನಿಲ ಭೂಮಂಡಲವನ್ನು ವ್ಯಾಪಿಸಿತು. ಯುಗಯುಗಗಳ ನಡೆಯಲ್ಲಿ
ನಿರ್ಮಾಣವಾಗಿದ್ದ
ನೆಲದಾಯಿಯ ಸಹಜ ರಕ್ಷಾಕವಚ ಓಝೋನೂ ಅಲ್ಲಲ್ಲಿ ತೂತಾಯಿತು.
ಗಂಗೆಯಷ್ಟೇ ಪವಿತ್ರವಾಗಿದ್ದ ಪ್ರತಿ ನೀರಿನ ಸೆಲೆಯೂ ಕೊಳಕು,ಕೊಳಚೆ, ತ್ಯಾಜ್ಯಗಳನ್ನು ಹರಿಬಿಡಲು ನೆಲೆಯಾಯಿತು.
ಮಣ್ಣಿನ ಮೇಲಿದ್ದ ಜೀವವೈವಿಧ್ಯದ ಸಾವಿರ ಪಟ್ಟು ಹೆಚ್ಚಿದ್ದ ಜಲಚರಗಳು ಈ ಅತೀ ಬುದ್ಧಿವಂತ ಜೀವಿ ತಮ್ಮ ನೆಲೆಯ ಮೇಲೆ ಮಾಡುತ್ತಿರುವ ನಿತ್ಯ ಅತ್ಯಾಚಾರಕ್ಕೆ ಉಸಿರುಗಟ್ಟಿ ಸಾಯತೊಡಗಿದವು..

ಆದರೇನು.
ಬುದ್ಧಿವಂತನಿಗೆ ಪ್ರಜ್ಞೆ ಬರಲೇ ಇಲ್ಲ.
ಸತ್ತರೆ ಸಾಯಲಿ.
ಲೆಕ್ಲವಿಲ್ಲದಷ್ಟಿರುವ ಜೀವಿಪ್ರಭೇಧಗಳಲ್ಲಿ ಅಷ್ಟು ಸತ್ತರೆ ಏನು ಮಹಾ ನಷ್ಟ ಅಂತ ಲೆಕ್ಕಾಚಾರ ಹಾಕತೊಡಗಿದ.
ಆದರೆ…
ಜಗದ ಪ್ರತಿಯೊಂದು ಸೃಷ್ಟಿಯೂ ಒಂದು ನಿರ್ದಿಷ್ಟ ಕಾರಣಕ್ಕಾಗಿ ಇಲ್ಲಿ ಉಗಮವಾಗಿರುತ್ತದೆ ಮತ್ತು ಸಹಜೀವಿಯೊಂದಿಗೆ ಸರಪಳಿಯನ್ನು ಹೊಂದಿರುತ್ತದೆ..
ನಡುನಡುವೆ ಕತ್ತರಿಸಲ್ಪಟ್ಟ ಈ ಸರಪಳಿಯಿಂದ ಲೋಕದ ಬದುಕು ಸುಸೂತ್ರ ನಡೆಯುತ್ತದೆಯೇ.?

ಮೇಲಿರುವವನಿಗೂ ಕಂಗಾಲು…

ಪರಿಣಾಮ …
ಯುಗಧರ್ಮದ ಪಾಲನೆಯೊಂದಿಗೆ ಪ್ರಳಯವನ್ನೂ ಪ್ರಕೃತಿಯ ಭಾಗವಾಗಿಸಿದ.
ಅಂತೆಯೇ ಪ್ರತೀ ಶತಮಾನಕ್ಕೆ ವಿಕೋಪಗಳೂ,ಸಾಂಕ್ರಾಮಿಕ ರೋಗಗಳೂ ಬಂದು ಮನುಷ್ಯನ ಅತಿ ಅಹಂಕಾರವನ್ನು ತುಸುಮಟ್ಟಿಗಾದರೂ ನಿವಾರಿಸಬಹುದೇ ಎನ್ನುವ ಲೆಕ್ಕಾಚಾರಕ್ಕೆ ಪಕ್ಕಾದ.

“ಜಗದ ವಜ್ಜೆಯನ್ನು ಸರಿತೂಗಿಸಲು ಪ್ರತೀ‌ ಕುಟುಂಬಕ್ಕೆ ಒಬ್ಬರಂತೆ ಕಾಣಿಕೆ ಕೇಳಿದರೆ ಮೊದಲು ಹೊರಡಲು
ನಾನು ತಯಾರಿದ್ದೇನೆ ..”
ಕೊರೋನಾ ಅತಿ ವ್ಯಾಪಿಸುತ್ತಿದ್ದ ಹಿನ್ನೆಲೆಯಲ್ಲಿ ನಾನು ಹೀಗಂದಾಗ ಆತ್ಮೀಯರು ನಕ್ಕರು..
“ಮೊದಲಿಂದಲೂ ಒಲವಿನಷ್ಟೇ ಸಾವಿನ ಕಡುಮೋಹಿ ನೀನು..
ದೇವರು ಕೊಟ್ಟ ಬದುಕಿಗೆ ನ್ಯಾಯ ಒದಗಿಸದೆ ಬೆನ್ನು ತೋರುವ ಮಾತು ಎಂದಿಗೂ ಸಮ್ಮತವಲ್ಲ ”
ಎಂದು ಪ್ರೀತಿಯಿಂದ ಕಿವಿ ಚಿವುಟಿದರು.

ಜಗ ಸರಿತೂಗಲೇಬಹುದಾದರೆ
ಯೋಚಿಸಲು ಸಮರ್ಥರಾದ ನಾವು ಒಂದು ತ್ಯಾಗಕ್ಕೂ ತಯಾರಾಗಬೇಕಲ್ಲವೇ.?
ಹೋಗಲಿ.
ಸಾವು ಬಿಟ್ಟುಬಿಡೋಣಾ..

ಅಕ್ಕರೆಯಲ್ಲಿ ನಮ್ಮ ಹೊತ್ತು ಸಲಹುತ್ತಿರುವ ನೆಲದಾಯಿಗೆ ಕೃತಜ್ಞರಾಗುವಷ್ಟು ನೈತಿಕತೆ ಈಗಲಾದರೂ ಆರಂಭವಾಗಬಹುದೇ?

ಹುಟ್ಟಿದಾರಭ್ಯ ಬಿಟ್ಟಿಯಾಗಿ ಶುದ್ಧ ಗಾಳಿ ಸೇವಿಸಿದ್ದೇವೆ. ನೀರು ಕುಡಿದಿದ್ದೇವೆ.. ಆರೋಗ್ಯ ಪಡೆದಿದ್ದೇವೆ.
ಎಷ್ಟೊಳ್ಳೆ ಆಹಾರ, ಮನೆ, ಸಂಪತ್ತು, ಸವಲತ್ತು, ಕಣ್ಣು ತುಂಬುವಷ್ಟು ಸೌಂದರ್ಯ, ಯೋಚಿಸುವ/ಯೋಜಿಸುವ ತಾಕತ್ತನ್ನು ಉಚಿತವಾಗಿ ಪಡೆದಿದ್ದೇವೆ..
ನನ್ನ ದುಡಿಮೆಯಿಂದ‌ ನಾನಿದನೆಲ್ಲಾ ಪಡೆದೆ ಎನ್ನುವ ಅಹಂಕಾರ ಇನ್ನಾದರೂ ಅಳಿದು ಹೋಗಬೇಕಲ್ಲವೇ.?

ಹಸಿದ ಹೊಟ್ಟೆಗೆ ಸಿಕ್ಕ ಮೊದಲ ತುತ್ತಿಗೆ ಎಷ್ಟು ಆನಂದ,ಧನ್ಯತೆ ಇರುತ್ತದೆಯೋ ಕೊನೆಯ ತುತ್ತಿಗೂ ಇದ್ದರೆ ಮನುಷ್ಯನೆಂಬ ಹೆಸರಿಗೆ ಸಾರ್ಥಕತೆ.
ಕೊನೆ ಪಕ್ಷ ಮತ್ತೇನೂ ಇಲ್ಲದಿದ್ದರೂ ‌ನೈತಿಕತೆಯನ್ನಾದರೂ ಉಳಿಸಿಕೊಳ್ಳಬಹುದೇ.?

ಪಡೆದ ಪ್ರತಿಯೊಂದಕ್ಕೂ ಕೃತಜ್ಞರಾದರೆ ಇನ್ನಷ್ಟು ಸಮೃದ್ಧಿ ನಮ್ಮದಾಗುತ್ತದೆ ಎನ್ನುವ ಮಾತು ಎಷ್ಟು ಸತ್ಯವೋ ‌ಗೊತ್ತಿಲ್ಲ.
ಒಂದು ಧನ್ಯವಾದಕ್ಕೆ ಹೃದಯ ಹಗುರ ಮಾಡುವ ಶಕ್ತಿಯಂತೂ ಇದ್ದೇ ಇದೆ.

ಒಂದು ಪುಟ್ಟ ವಿಸ್ತೀರ್ಣದ ಹಳ್ಳಿಯಲ್ಲಿ ಪ್ರತಿನಿತ್ಯ ಬೇರೆ ಬೇರೆ ಕಾರಣಗಳಿಗಾಗಿ ಬದಲಾಗುವ ಭೂನಕ್ಷೆಯನ್ನು
ಸ್ಥೂಲವಾಗಿ ಗಮನಿಸಿದರೂ ಮನುಷ್ಯ ಮಾತ್ರನಿಂದ ಆಗುತ್ತಿರುವ‌ ಅಸಂಬದ್ಧಗಳ ಅರಿವಾಗುತ್ತದೆ.

ಒಂದು ದಿನದ ಆಯಸ್ಸು ಹೊಂದಿದ ಮಳೆಹುಳವೂ ಹುಟ್ಟಿದ ಕ್ಷಣದಿಂದ ಸಂಭ್ರಮದಿಂದ ಹಾರಾಡಿ ಧನ್ಯತೆಯನ್ನು ಹೊಂದಿ, ಜಗತ್ತಿಗೂ ಹಂಚಿ ಸಾಯುವಾಗ ಹಕ್ಕಿಗೋ ಇರುವೆಗೋ ಆಹಾರವಾಗಿ ತನ್ನ ಕರ್ತವ್ಯ ಮುಗಿಸುತ್ತದೆ..

ಪ್ರಕೃತಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬಹುದೇ ಹೊರತು ದುರಾಸೆಗಳನ್ನಲ್ಲ ಎನ್ನುವ ಮಾತು ಪ್ರತಿಕ್ಷಣ ನಮ್ಮ ಮನಸ್ಸಿನಲ್ಲಿದ್ದರೆ ಭೂಮಿ ನಮ್ಮನ್ನು ಕ್ಷಮಿಸಬಹುದು.
ಮತ್ತೆ ಮನುಷ್ಯ ಒತ್ತಡದಿಂದ ಮುಕ್ತವಾಗಿ ಸಹಜ ಬದುಕು ನಡೆಸಲು ಅನುವು ಮಾಡಿಕೊಡಬಹುದು..

ಕೊರೋನಾ ಈ ಮೊದಲು
ಇರಲಿಲ್ಲ ಎಂದರೆ ಸುಳ್ಳಾದೀತು..
ಒಳಗೊಂದು ದುರಾಸೆಯ, ದುರ್ನಡತೆಯ ಕೊರೋನಾ ಎಲ್ಲರಲ್ಲೂ ಗುಪ್ತವಾಗಿ ಇದ್ದೇ ಇತ್ತು.
ಅದೆಷ್ಟೇ ಹತ್ತಿರದವರಾದರೂ
ಆಂತರ್ಯದಿಂದ ಇನ್ನೊಬ್ಬರೊಂದಿಗೆ ನಾವೊಂದು ಅಂತರವನ್ನು ಕಾಪಾಡಿಕೊಂಡೇ ಬರುವಂತೆ ಸದ್ಯದ ಬದುಕು ಕಲಿಸುತ್ತಲೂ ಇತ್ತು..
ಈಗ ಸೋಷಿಯಲ್ ಡಿಸ್ಟೆನ್ಸ್ ಹೆಸರಿನಲ್ಲಿ ಮುಕ್ತವಾಗಿ ನಾವದನ್ನು ಪಾಲಿಸುವ ಅನಿವಾರ್ಯತೆ ಒದಗಿದೆ.

ಹೊರಗೆ ಬಂದಿರುವ ಕೊರೋನಾ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಹೊರಡುತ್ತದೆ, ಹೋಗುತ್ತದೆ.
ಸಂದೇಹವೇ ಇಲ್ಲ..
ಆದರೆ ಒಳಗಿನ ಕೊರೋನಾ..?
ಜಗತ್ತಿನ ಸಮಸ್ತವನ್ನೂ ಪ್ರೀತಿ ಅಕ್ಕರೆಯಿಂದ ಅಪ್ಪಿಕೊಳ್ಳದ ಹೊರತು ಅದು ತೀವ್ರವಾಗಿ ವ್ಯಾಪಿಸುತ್ತದೆ..

ಎಲ್ಲದಕ್ಕೂ ಲೆಕ್ಕ ಚುಕ್ತವಾಗಬೇಕು..
ಇದು ಜಗದ ನಿಯಮ..
ಬದುಕಿ ಮತ್ತು ಬದುಕಲು ಬಿಡಿ ಎನ್ನುವುದು ಇನ್ನಾದರೂ ನಮ್ಮ ನಿತ್ಯ ಮಂತ್ರವಾಗಲಿ…

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!