ನನಗೆ ಎಷ್ಟೊಂದು ಬಾರಿ ವಗ್ಗರಣೆಗೆ ಎಣ್ಣೆ ಕಾಯಲು ಇಟ್ಟಾಗಲೆ ಸಾಸಿವೆ ಖಾಲಿಯಾಗಿದೆ ಅಂತ ಹೊಳೆಯುವುದು. ಈರುಳ್ಳಿ ಹೆಚ್ಚುವಾಗಲೇ ಮುಗಿದುಹೋದ ಹಸಿಮೆಣಸು ಕಣ್ಣಲ್ಲಿ ನೀರು ತರುವುದು. ರಾತ್ರಿ ಒಂಭತ್ತೂವರೆಗೆ ಸಾರಿಗೆ ವಗ್ಗರಣೆ ಹಾಕಿ, ಉಪ್ಪಿನ ಜಾಡಿಗೆ ಕೈ ಹಾಕಿದಾಗ ತೀರಿಹೋಗಿರುವ ಉಪ್ಪಿನ ಅಳತೆ ಸಿಗುವುದು…!
ಭಾವಲಹರಿ

♦ ಸಮತಾ ಆರ್.
ಶಿಕ್ಷಕರು, ಕವಯಿತ್ರಿ
newsics.com@gmail.com
ಅ ಕ್ಕ, ತಂಗಿ ಇಬ್ಬರೂ ಬೇಸಿಗೆ ರಜೆಗೆಂದು ತಮ್ಮ ಮಕ್ಕಳ ಸೈನ್ಯವನ್ನು ಹೊರಡಿಸಿಕೊಂಡು ತಮ್ಮ ತವರುಮನೆಗೆ ಬಂದು ಝಂಡಾ ಊರಿದ್ದರು. ತವರಿನಲ್ಲಿ ಗಂಡು ಮಕ್ಕಳಿಂದ ಬೇರೆಯಾಗಿ, ಆಸ್ತಿಯಲ್ಲಿ ತನ್ನ ಜೀವನ ನಿರ್ವಹಣೆಗೆ ಅಂತ ಸ್ವಲ್ಪ ಭಾಗ ತೆಗೆದುಕೊಂಡು, ಮನೆಯಲ್ಲೂ ಒಂದು ಭಾಗವನ್ನು ಬಿಡಿಸಿಕೊಂಡು ವಾಸಿಸುತ್ತಿದ್ದ ಅವ್ವನ ಜತೆಗೇ ಬೇಸಿಗೆ ರಜೆ ಕಳೆಯುವ ಸಂಭ್ರಮ.
ರಜೆ ಮಕ್ಕಳಿಗೆ ಮಾತ್ರ, ತಾಯಂದಿರಿಗೆ ಯಥಾಪ್ರಕಾರ ಇಲ್ಲೂ ಅದೇ ಬೇಯಿಸು, ತಿನ್ನಿಸು, ತೊಳಿ, ಬಳಿಯುವ ಕೆಲಸಗಳೇ. ಅದಲ್ಲದೆ ನಗರದ ತಮ್ಮ ಮನೆಯಲ್ಲಿ ಇದ್ದ ಗ್ಯಾಸ್ ಒಲೆ, ಮಿಕ್ಸಿ, ಕುಕ್ಕರ್ ಸೌಕರ್ಯಗಳ ಸುಖ ಇಲ್ಲಿ ಹಳ್ಳಿಯ ಅವ್ವನ ಮನೆಯಲ್ಲಿ ಇಲ್ಲದೆ ಸೌದೆ ಒಲೆ, ಒಳಕಲ್ಲು ಬಳಸಬೇಕಾಗಿ ಬಂದರೂ ಅದೇ ಇನ್ನೊಂದು ತರಹದ ಸುಖ.
ಅಕ್ಕ ತಂಗಿ ದಿನಾ ಅವ್ವನೊಂದಿಗೆ ಹರಟುತ್ತಾ, ಅಡುಗೆ ಮಾಡುತ್ತಾ, ಬಿಡುವು ಸಿಕ್ಕಾಗ ನೆಂಟರ ಮನೆ ಸುತ್ತುತ್ತಾ, ಮಕ್ಕಳನ್ನು ಅವರ ಪಾಡಿಗೆ ಅವರನ್ನು ತೋಟ ಗದ್ದೆ ಸುತ್ತಲು ಬಿಟ್ಟು, ತಮ್ಮದೇ ಆದ ರಜೆಯ ಸಡಗರ ಅವರಿಗೆ. ಮಾತು ಆಡಿದಷ್ಟೂ ಮುಗಿಯದು, ಬಟ್ಟೆ ಒಗೆಯುವಾಗ, ಪಾತ್ರೆ ತೊಳೆಯುವಾಗ, ತೋಟದ ಬಾವಿಯಿಂದ ಮನೆಗೆ ನೀರು ಹೊರುವಾಗ, ಯಾವಾಗ ನೋಡಿದರೂ ಮಾತೇ.
“ಮಾತಾಡಿ ಆಡಿ ಆ ಹಾಳು ಬಾಯಿಗೆ ನೋವಾದರೂ ಬರೋದಿಲ್ವ” ಅಂತ ಅವರವ್ವ ಆಡಿಕೊಂಡು ನಗಾಡಿದರೂ ಇವರ ಮಾತು ನಿಲ್ಲುತ್ತಿದ್ದದ್ದು ರಾತ್ರಿ ಉಂಡು ಮಲಗಿದಾಗಲೆ.
ಹೀಗಿದ್ದಾಗಲೇ ಒಂದು ದಿನ ಸಂಜೆ ಇಬ್ಬರೂ ಮಾರನೇ ದಿನದ ಬೆಳಗಿನ ತಿಂಡಿಗೆ ದೋಸೆಗೆ ಅಂತ ನೆನೆಸಿದ್ದ ಅಕ್ಕಿ ಉದ್ದು ರುಬ್ಬಲು ಕೂತರು. ಅಕ್ಕ ಗುಂಡುಕಲ್ಲು ಹಿಡಿದು ಆಡಿಸಿದರೆ ತಂಗಿ ಹಿಟ್ಟು ತಳ್ಳಲು ಕೂತಳು. ಗುಂಡು ತಿರುಗಿದಂತೆ ಇವರ ಮಾತೂ ತಿರುಗಿ ತಿರುಗಿ ಊರೆಲ್ಲ ಸುತ್ತು ಹೊಡೆಯುತ್ತಿತ್ತು.
ಹಾಗೇ ಮಾತನಾಡುತ್ತ ತಂಗಿಗೆ ಏನೋ ಹೊಳೆದು “ಅಲ್ಲಾ ಕಣಕ್ಕ, ನಾಳೆ ಬೆಳಗ್ಗೆ ತಿಂಡಿಗೆ ಏನ್ ಮಾಡೋದು” ಅಂತ ಕೇಳಿದ್ದಕ್ಕೆ, ಅವರಕ್ಕ “ಅಯ್ಯೋ, ಏನೋ ಒಂದು ಮಾಡಿದ್ರಾಯ್ತು ಬುಡೇ, ದಿನಾ ಏನ್ ಬೇಯಿಸೋದು ಅಂತ ಯೋಚ್ನೆ ಮಾಡ್ತಾನೆ ಕಳದೋಯ್ತದೆ,” ಅಂತ ನಿಟ್ಟುಸಿರು ಬಿಟ್ಟು ಮತ್ತೆ ಇಬ್ಬರೂ ಹಿಟ್ಟು ರುಬ್ಬೋದು ಮುಂದುವರೆಸಿದರು.
ಕೇಳುತ್ತಾ ಇದ್ದ ಅವ್ವನಿಗೆ ನಗು ತಡೆಯಲಾರದೆ “ಅಲ್ಲಾ ಕಣ್ರೋ, ಈ ಹಿಟ್ಟ ಆಡುಸ್ತ ಇರೋದು ಯಾಕೆ, ನಿಮ್ ಮೈಮೇಲೆ ಹುಯ್ಕೊಳ್ಳಕಾ” ಅಂತ ನಗಾಡಿದಾಗ ಅಕ್ಕ ತಂಗಿಯರ ಟ್ಯೂಬ್’ಲೈಟ್ ಝಗ್ ಅಂತ ಹೊತ್ತಿಕೊಂಡಿತು.
ಇದು ನಮ್ಮಮ್ಮ ಹಾಗೂ ಚಿಕ್ಕಮ್ಮ ಯಾವಾಗಲೂ ನೆನೆದು ನಗುತ್ತಿದ್ದ ವಿಷಯ. ಅಂದಿಗೂ ಇಂದಿಗೂ ಎಂದಿಗೂ ಹೆಂಗಳೆಯರ ಎಂದೂ ಬಗೆಹರಿಯದ ಯಕ್ಷಪ್ರಶ್ನೆ “ನಾಳೆ ಅಡುಗೆ ಏನು ಮಾಡೋದು?”

ಅಡುಗೆ ಮಾಡೋದು ಸುಲಭವೇ ಬಿಡಿ. ಆದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸುವುದು, ಮುಂಚಿತವಾಗಿ ಪ್ಲಾನ್ ಮಾಡೋದು, ಅಡುಗೆ ಮನೆಯಲ್ಲಿ ಏನಿದೆ ಏನಿಲ್ಲ ಅಂತ ನೆನಪಿನಲ್ಲಿಟ್ಟುಕೊಂಡಿರೋದು, ಇವುಗಳಿಗಿಂತ ತಲೆಬಿಸಿ ಇನ್ನೊಂದೆಲ್ಲಿ?
ಅಡುಗೆ ಪ್ಲಾನ್ ಮಾಡುವಾಗ ಏನೋ ಒಂದು ಮಾಡಿದರಾಯಿತು ಅಂತ ಅಂದುಕೊಳ್ಳಲಿಕ್ಕೆ ಸಾದ್ಯವೇ ಇಲ್ಲ. ಮನೆಯಲ್ಲಿ ಇರೋ ಅಷ್ಟೂ ಜನರ ರುಚಿ, ಅಭಿರುಚಿ ಗೊತ್ತಿರಬೇಕು, ಮನೆಯ ಆರ್ಥಿಕ ಸ್ಥಿತಿಗೆ ತಕ್ಕಂತೆ ಸಾಮಗ್ರಿ ಖರೀದಿಸುವ ಚಾ ಚಕ್ಯತೆ ಬೇಕು, ಬೇರೆ ಬೇರೆ ಸಮಯಕ್ಕೆ ಶಾಲೆ ಕಾಲೇಜು ಎಂದು, ಕೆಲಸಕ್ಕೆಂದು ಹೊರಡುವವರ ಸಮಯಕ್ಕೆ ಸರಿಯಾಗಿ ತಯಾರು ಮಾಡಲು ಸಾಧ್ಯವಾ ಎಂದು ಯೋಚಿಸಬೇಕು. ಇನ್ನು ಶುಗರ್ರು, ಬಿಪಿ, ಗ್ಯಾಸ್ಟ್ರಿಕ್ ಎಂದು ನರಳುವವರು ಮನೆಯಲ್ಲಿದ್ದರೆ ಅವರಿಗೇನು ಮೆನು ಅಂತ ಬೇರೆ ಪಾಡು ಹತ್ತಬೇಕು.
ಸರಿ ಅಡುಗೆ ಪ್ಲಾನ್ ಮಾಡಿಯೇನೋ ಆಯಿತು. ಈಗ ಕಾರ್ಯರೂಪಕ್ಕೆ ಇಳಿಸುವಾಗ ಅಚಾನಕ್ ಎಂದು ಎದುರಾಗುವ ಕಿತಾಪತಿಗಳ ಕಾಟ ಹೇಳಲಿಕ್ಕಾಗದು. ನನಗೆ ಎಷ್ಟೊಂದು ಬಾರಿ ವಗ್ಗರಣೆಗೆ ಎಣ್ಣೆ ಕಾಯಲು ಇಟ್ಟಾಗಲೆ ಸಾಸಿವೆ ಖಾಲಿಯಾಗಿದೆ ಅಂತ ಹೊಳೆಯುವುದು. ಈರುಳ್ಳಿ ಹೆಚ್ಚುವಾಗಲೇ ಮುಗಿದುಹೋದ ಹಸಿಮೆಣಸು ಕಣ್ಣಲ್ಲಿ ನೀರು ತರುವುದು. ರಾತ್ರಿ ಒಂಭತ್ತೂವರೆಗೆ ಸಾರಿಗೆ ವಗ್ಗರಣೆ ಹಾಕಿ, ಉಪ್ಪಿನ ಜಾಡಿಗೆ ಕೈ ಹಾಕಿದಾಗ ತೀರಿಹೋಗಿರುವ ಉಪ್ಪಿನ ಅಳತೆ ಸಿಗುವುದು.
ನನ್ನ ಗಂಡ ಗೊಣಗುತ್ತಲೇ “ನಿಮ್ಮವ್ವ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಜನ” ಎನ್ನುತ್ತಾ ಹೊತ್ತಲ್ಲದ ಹೊತ್ತಲ್ಲಿ ಅಂಗಡಿಗಳಿಗೆ ಹೋಗಿದ್ದೂ ಇದೆ. ಎಷ್ಟೋ ಬಾರಿ ಮಾಡಿರೋ ತಯಾರಿ ಫ್ರಿಡ್ಜ್’ನಲ್ಲೇ ಬಾಕಿಯಾಗಿ ಬೇರೆ ಇನ್ನೇನೋ ಮಾಡಿದ್ದೂ ಇದೆ. ಅಡುಗೆ ಎಲ್ಲಾ ಆದ ಬಳಿಕ ಫ್ರಿಡ್ಜ್ ತೆಗೆದಾಗ ಹೆಚ್ಚಿಟ್ಟ ತರಕಾರಿಗಳು ಅಣಕಿಸಿದಾಗಲೆ ನನ್ನ ಬುರುಡೆಗೆ ಆಗಿರುವ ಪ್ರಮಾದದ ಅರಿವಾಗುವುದು.
ಆದರೆ ಇದೇನು ನನ್ನೊಬ್ಬಳದೇ ಸಮಸ್ಯೆಯಲ್ಲ ಬಿಡಿ. ಇಡೀ ಪ್ರಪಂಚದ ಮಹಿಳೆಯರನ್ನೆಲ್ಲ ಕಾಡುತ್ತಿರುವ ಏಕೈಕ ಪ್ರಶ್ನೆ ” ನಾಳೆ ಅಡುಗೆ ಏನು ಮಾಡುವುದು!?
ಇದು ಉದ್ಭವಿಸಲು ಹೊತ್ತು ಗೊತ್ತು ಏನೂ ಬೇಡ. ಸಂಜೆ ವಾಕ್ ಮಾಡುತ್ತಿರುವ ಗೆಳತಿಯರು, ಬಸ್ನಲ್ಲಿ ಅಕ್ಕಪಕ್ಕ ಕುಳಿತು ಹರಟು ತ್ತಿರುವ ಮಹಿಳೆಯರು, ಸಿನೆಮಾ ಪಾರ್ಕ್ ಅಂತ ಸುತ್ತಲು ಹೋಗಿರುವ ಸ್ನೇಹಿತೆಯರು, ಕೆಲಸದ ಬಿಡುವಿನಲ್ಲಿ ಸ್ಟಾಫ್ ರೂಂನಲ್ಲಿ ಕಲೆ ಹಾಕಿಕೊಂಡಿರುವ ಮಹಿಳಾ ಸಹೋದ್ಯೋಗಿಗಳು, ಮಾರ್ಕೆಟ್ ಗೆ ಒಟ್ಟಿಗೆ ಹೊರಟ ಅಕ್ಕಪಕ್ಕದ ಮನೆಯ ಮಾನಿನಿಯರು, ಇತ್ಯಾದಿ ಹೆಂಗಸರ ಗುಂಪು ಕೂಡಿರುವ ಕಡೆ ಸುಮ್ಮನೆ ಕಿವಿಗೊಡಿ. “ಇವತ್ತು ನಿಮ್ಮನೇಲಿ ಏನಡಿಗೆ?” ಇಲ್ಲವೇ “ರಾತ್ರಿ ಊಟಕ್ಕೇನು ಮಾಡ್ತೀರಾ?” ಇಂಥ ಪ್ರಶ್ನೆಗಳು ಖಂಡಿತ ಕಿವಿಗೆ ಬಿದ್ದೇ ಬೀಳುತ್ತವೆ. ಇನ್ನೂ ಕೆಲವು ಬಾರಿ ಎದುರಾಗುವ ವೇಳೆ ಸರಿಯಾಗಿ ದಿನದ ರಾತ್ರಿ ಊಟ ಮುಗಿಸಿ, ಪಾತ್ರೆ ಎಲ್ಲ ಮುಚ್ಚಿಟ್ಟು, ಅಡುಗೆ ಮನೆ ಇನ್ನೇನು ದಾಟಬೇಕು ಅನ್ನುವಾಗ.
“ಬಿಡು ಬೆಳಗ್ಗೆಗೆ ಉಪ್ಪಿಟ್ಟು ಮಾಡಿದರಾಯಿತು” ಅನ್ನಿಸಿದ ಕ್ಷಣವೇ ಆ ಇಡೀ ವಾರ ಮಾಡಿರುವ ವಗ್ಗರಣೆ ತಿಂಡಿಗಳು ಕಣ್ಣೆದುರು ನಿಲ್ಲುತ್ತವೆ. ಮತ್ತೆ ಮಾರನೇ ದಿನವೂ ಅದೇ ಆದರೆ ಮಕ್ಕಳು ಮುಷ್ಕರ ಹೂಡುವ ಭಯ.
ದೋಸೆ ಇಡ್ಲಿಗೆ ಪ್ಲಾನ್ ಮಾಡೋಕೆ ಅಕ್ಕಿ ನೆನೆಸಲು ಆಗಲೇ ಲೇಟಾಗಿದೆ. ಇನ್ನು ಮನೆ ಜನಕ್ಕೆಲ್ಲ ಚಪಾತಿ, ರೊಟ್ಟಿ, ಪೂರಿ ಅಂತ ಲಟ್ಟಿಸುತ್ತ ಕೂರಲು ಸಮಯ ಕೆಲಸದ ದಿನಗಳಲ್ಲಿ ಇಲ್ಲವೇ ಇಲ್ಲ. ಅಂಥ ಸಮಯದಲ್ಲಿ ರಾತ್ರಿಯಿಡೀ ನಿದ್ದೆ ಬಂದರೆ ಹೇಳಿ.
ಭಾನುವಾರದ ಬಾಡೂಟ, ಹಬ್ಬ ಹರಿದಿನಗಳಲ್ಲಿ ಆಯಾ ಹಬ್ಬಕ್ಕೆ ತಕ್ಕ ಅಡುಗೆ ಮಾಡುವುದಕ್ಕಾಗಿ ಹೊಂದಿಸಬೇಕಾದ ಸಾಮಗ್ರಿ, ಸಮಯ ಎಲ್ಲಾ ಯೋಚಿಸಿ, ಎಲ್ಲವನ್ನೂ ನಮ್ಮ ಹೆಂಗಸರು ಹೇಗೋ ನಿಭಾಯಿಸಿ ಸೈ ಅನ್ನಿಸಿಕೊಂಡು ಬಿಡುತ್ತಾರೆ. ಇಷ್ಟೆಲ್ಲಾ ಶೇಕಡಾ ನೂರಕ್ಕೆ ನೂರರಷ್ಟು ದಕ್ಷತೆ, ಕ್ಷಮತೆಯಿಂದ ಕೆಲಸ ಮಾಡುವ ನಮ್ಮ ಸ್ತ್ರೀಯರು ಯಾವ ಬಹುರಾಷ್ಟ್ರೀಯ ಕಂಪನಿಯ ಸಿಇಓಗಿಂತಲೂ ಕಮ್ಮಿ ಇಲ್ಲ ಬಿಡಿ.
ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರವರೆಗೆ, ಹಳ್ಳಿಯಿಂದ ದಿಲ್ಲಿಯವರೆಗಿನ ಹೆಂಗಳೆಯರಿಗೆ, ಅತ್ತೆ ಸೊಸೆ, ತಾಯಿ ಮಗಳು, ಅಕ್ಕ ತಂಗಿ, ಅತ್ತಿಗೆ ನಾದಿನಿ ಓರಗಿತ್ತಿ, ದೊಡ್ಡಮ್ಮ ಚಿಕ್ಕಮ್ಮ ಯಾರನ್ನೂ ಇದು ಬಿಡದೆ ಕಾಡಿದೆ.
ಈಗೀಗ ಝೋಮ್ಯಾಟೊ, ಸ್ವಿಗ್ಗಿ, ಪಿಜ್ಜಾ ಡೆಲಿವರಿ ಅಂತೆಲ್ಲ ಇರುವಾಗ ಸ್ವಲ್ಪ ಕೆಲಸ ಸುಲಭವೇ.
ಆದರೆ “ಏನು ಆರ್ಡರ್ ಮಾಡುವುದು” ಅನ್ನುವುದು ಮುಂದಿನ ಯಕ್ಷಪ್ರಶ್ನೆ. ಒಟ್ಟಾರೆ, ಈ ಅಟ್ಟುವ ಉಣ್ಣುವ ಪ್ಲಾನ್’ನ ತಲೆಹರಟೆ ಈ ಯುಗದಲ್ಲಂತೂ ಬಗೆಹರಿಯುವುದಿಲ್ಲ ಬಿಡಿ.