Wednesday, July 6, 2022

ಚೆನ್ನಮ್ಮನೆಂಬ ಮಹಿಳಾ ಅಸ್ಮಿತೆ

Follow Us

♦ ಶೋಭಾ ಕಡೆಕೊಪ್ಪಲ
response@134.209.153.225
newsics.com@gmail.com
ಎಂದಿನ ಹಾಗೆ ಬಚ್ಚಲಿಗೆ ದಾಳಿ ಇಟ್ಟು ಬೆನ್ನು ತಿಕ್ಕತೀನಿ, ಬಾಣಂತಿ ನೀರು ಹಾಕಿಸ್ಕೊಬೇಕು. ನೀವೇ ಹಾಕೊಂಡ್ರೆ ಹೇಗೆ ಅಂತ ಬಾಯಿ ಮಾಡಿದ್ಲು. ಯಾವತ್ತೂ ಏನಾದರೂ ನೆಪ ಹೇಳಿ ಅವಳನ್ನು ಹೊರಗಟ್ಟುವುದರಲ್ಲಿ ಜಯ ಸಾಧಿಸುತ್ತಿದ್ದ ನನಗೆ, ಆ ದಿನ ಸಾಧ್ಯ ಆಗಲಿಲ್ಲ. ಏಕೆಂದರೆ ಅವ್ಳು ಶುರು ಮಾಡಿದ ಕತೆ ಅವಳ ಮನೆಯದೇ.

———–

ರಿಯಾಗಿ 20 ವರ್ಷಗಳ ಹಿಂದಿನ ಮಾತು. ನಾನು ಎರಡನೇ ಬಾಣಂತನಕ್ಕೆಂದು ಅಕ್ಕನ ಊರಿಗೆ ಹೋಗಿದ್ದೆ. ಅದೊಂದು ಬಯಲುಸೀಮೆಯ ತಾಲೂಕು ಕೇಂದ್ರ. ಅಕ್ಕನಿಗೊಬ್ಬಳಿಗೆ ಕಷ್ಟವಾಗುತ್ತದೆಂದು ಮಗುವಿನ ಮತ್ತು ಮನೆಯವರ ಬಟ್ಟೆ ಒಗೆದುಕೊಡಲು ಒಬ್ಬಳನ್ನು ಗೊತ್ತುಮಾಡಿದ್ದೆವು. ಸುಮಾರು 40 ವರ್ಷದ ಕಪ್ಪು ಬಣ್ಣದ ಬಿಳುಪು ಹಲ್ಲುಗಳ ಲಕ್ಷಣವಾದ ಹೆಂಗಸು. ಬಯಲುಸೀಮೆಯ ಒರಟು ಶೈಲಿಯಲ್ಲಿ ದಿನಕ್ಕೊಂದು ಸುದ್ದಿಯೋ ಯಾರದ್ದಾದರೂ ಕತೆಯೋ ಹೇಳುತ್ತಾ ಸಂತೋಷದಿಂದ ಕೆಲಸ ಮಾಡುತ್ತಿದ್ದಳು. ನಾವು ಹೂಂ… ಅಂದರೂ ಆಯಿತು, ಇಲ್ಲದಿದ್ದರೂ ಅಷ್ಟೇ. ಕೆಲಸ ಮಾಡುತ್ತಾ ಮಾತಾಡುತ್ತಾ ಇರುತ್ತಿದ್ದಳು. ಬರೀ ಬಟ್ಟೆ ಕೆಲಸ ಮಾತ್ರವಲ್ಲದೇ ಬೇಡವೆಂದರೂ ಪಾತ್ರೆ ತೊಳೆಯಲು ಇಟ್ಟಿದ್ದನ್ನು ತೊಳೆಯುವುದು, ಅಂಗಳ ಗುಡಿಸಿ, ತೊಳೆಯುವುದು ತರಕಾರಿ ಸ್ವಚ್ಛಗೊಳಿಸುವುದು ಹೀಗೆ ಬೆಳಗ್ಗೆ 8 ಗಂಟೆಗೆ ಬಂದರೆ ಮಧ್ಯಾಹ್ನ ಒಂದೂವರೆಯವರೆಗೂ ಕೆಲಸ ಮಾಡಿ ಊಟ ಮಾಡಿ ಪುನಹ ಮಗುವಿನ ಬಟ್ಟೆಗಳಿದ್ದರೆ ಒಗೆದು, ಒಣಗಿಸಿ ಹೋಗುತ್ತಿದ್ದಳು. ಅದೂ ಅಕ್ಕ ಜೋರಾಗಿ ಬೈದು ಹೋಗಲು ಹೇಳಿದ ಮೇಲೆಯೇ. ಅವಳ ಹಾಗೆ ಒಂದೂ ಚೂರೂ ಹಳದಿ ಕಲೆಯ ಗುರುತೂ ಇಲ್ಲದ ಹಾಗೆ ಬಟ್ಟೆ ಒಗೆಯಲು ಖಂಡಿತಾ ನಮ್ಮಿಂದಾಗುತ್ತಿರಲಿಲ್ಲ. ಅವಳು ಬೇಡ ಬೇಡವೆಂದರೂ ನನಗೆ ಸ್ನಾನಕ್ಕೆ ಹಂಡೇ ನೀರು ಹದ ಮಾಡಿಕೊಡುವುದಲ್ಲದೆ ಸೀದಾ ಬಾಗಿಲಿಲ್ಲದ ಬಚ್ಚಲು ಮನೆಗೆ ನುಗ್ಗಿ ನೀರು ಹಾಕ್ತೀನಿ, ಬೆನ್ನು ಗಟ್ಟಿಯಾಗುತ್ತೆ… ಸೊಂಟ ಗಟ್ಟಿಯಾಗುತ್ತೆ ಅಂತ ಶುರು ಮಾಡಿಬಿಡುತ್ತಿದ್ದಳು. ಅವಳ ಈ ಉದಾರ ಉಪಕಾರ ನನಗೆ ವಿಪರೀತ ಮುಜುಗರ ತರುತ್ತಿತು. ಮೊದಲೇ ನನ್ನದಾಗಲೀ ಅಕ್ಕನದ್ದಾಗಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಸಮಯ ಅದು. ತಿಂಗಳಿಗೆ 300 ರೂಪಾಯಿ ಸಂಬಳಕ್ಕೆ ಗೊತ್ತುಮಾಡಿಕೊಂಡು ಅವಳ ಬಳಿ ಅಷ್ಟೊಂದು ಸೇವೆ ಮಾಡಿಸಿಕೊಳ್ಳಲು ಇಷ್ಟ ಆಗುತ್ತಿರಲಿಲ್ಲ. ಅಲ್ಲದೇ ಇನ್ನೂ ಹೆಚ್ಚು ಕೊಡುವ ಸಾಮರ್ಥ್ಯವೂ ಆಗ ನನಗೆ ಇರಲಿಲ್ಲ. ಮಗುವಿನ ತಿಳಿ ಬಣ್ಣದ, ಬಿಳಿಯ ಬಣ್ಣದ ಬಟ್ಟೆಗಳು ಮಲದ ಬಟ್ಟೆಗಳಾಗಿದ್ದರೂ ಬಹಳ ಖುಷಿಯಿಂದ “ಎಷ್ಟು ಬಿಳಿಯಿದ್ಯಕ್ಕಾ, ಬಟ್ಟೆ ಹಿಂಗಿದ್ರೆ ಎಷ್ಟು ಬಟ್ಟೆ ಬೇಕಾದ್ರೂ ಒಗೀತೀನಿ” ಅನ್ನೋದು ಕೇಳಿ ನಗು ಬಂದು ಹಾಗನ್ನಬೇಡವೆ ಮಗುವಿಗೆ ಬೇಧಿ ಹಿಡೀಬೇಕೆನೆ? ಅಂತ ಗದರಿದ ಹಾಗೆ ಮಾಡುತ್ತಿದ್ದೆ.

ಹಾಂ! ದಿನಕ್ಕೊಂದು ಕತೆ ಹೇಳೋ ಚೆನ್ನಮ್ಮನಿಗೆ… ಅಕ್ಕ ಅವಳಿಗೆ ನಿಮ್ಮ ಕೇರಿ ಕತೆ ಎಲ್ಲಾ ಹೇಳಬೇಡ, ಎಲ್ಲ ಬರೆದು ಇಡ್ತಾಳೆ ಅವ್ಳು ಅಂದ್ರೂ ನಿಲ್ಲಿಸ್ತಿರಲಿಲ್ಲ. ಒಂದು ದಿನ ಅವಳು ಹೇಳಿದ ಕತೆ ಆ ದಿನ ಮಾತ್ರವಲ್ಲ, ಈಗಲೂ ನೆನಪಾದ್ರೆ ನನ್ನನ್ನು ವಿಚಾರಕ್ಕೆ ದೂಡುವಂತದ್ದು
ಎಂದಿನ ಹಾಗೆ ಬಚ್ಚಲಿಗೆ ದಾಳಿ ಇಟ್ಟು ಬೆನ್ನು ತಿಕ್ಕತೀನಿ, ಬಾಣಂತಿ ನೀರು ಹಾಕಿಸ್ಕೊಬೇಕು. ನೀವೇ ಹಾಕೊಂಡ್ರೆ ಹೇಗೆ ಅಂತ ಬಾಯಿ ಮಾಡಿದ್ಲು. ಯಾವತ್ತೂ ಏನಾದರೂ ನೆಪ ಹೇಳಿ ಅವಳನ್ನು ಹೊರಗಟ್ಟುವುದರಲ್ಲಿ ಜಯ ಸಾಧಿಸುತ್ತಿದ್ದ ನನಗೆ, ಆ ದಿನ ಸಾಧ್ಯ ಆಗಲಿಲ್ಲ. ಏಕೆಂದರೆ ಅವ್ಳು ಶುರು ಮಾಡಿದ ಕತೆ ಅವಳ ಮನೆಯದೇ. ಎರಡು ಸಣ್ಣ ಮಕ್ಕಳಿದ್ದ ತನ್ನ ನಾದಿನಿಯನ್ನು ಆ ಊರಿನ ಫ್ಯಾಮಿಲಿ ಪ್ಲಾನಿಂಗ್ ಕ್ಯಾಂಪ್ ಗೆ ಆಪರೇಶನ್ ಗೆ ಕರೆದುಕೊಡು ಹೋದ್ರೆ ಡಾಕ್ಟರ್ 5000 ರೂಪಾಯಿ ಕೊಡಬೇಕು ಆಂದ್ರಕ್ಕ. ಅವ್ನ ಬಾಯಿಗೆ ಮಣ್ಣಾಕ ಅಂದ್ಲು. ನಾನು ಸರ್ಕಾರಿ ಆಸ್ಪತ್ರೆ.. ಅದು ದುಡ್ಡು ಏನೂ ಕೇಳಲ್ಲ ಕಣೆ. ಅವ್ರೇ 100ರೂಪಾಯಿ ಕೊಟ್ಟು ಆಪರೇಷನ್ ಮಾಡ್ತಾರೆ. ನೀನಿಲ್ಲೋ ತಪ್ಪು ತಿಳ್ಕೊಂಡಿದೀಯ ಕಣೆ ಅಂದೆ. ಇಲ್ಲಕ್ಕ ಆ ಡಾಕ್ಟರ್ ಕಡಿಮೆ ಮಾಡ್ಕೊಳೀಂತ ಅಂದ್ರೆ ಒಪ್ಪಿಲ್ಲ. ಅದಕ್ಕೆ ಪಕ್ಕದೂರಿನಲ್ಲಿ 2000 ರೂಪಾಯಿ ಕೊಟ್ಟು ಮಾಡಿಸಿದೆ ಅಂದ್ಲು. ಯಾಕೆ ದುಡ್ಡು ಕೊಡೋಕೆ ಹೋದೆ, ಹಳ್ಳಿ ಜನ ಅಂತ ಏಮಾರ್ಸಿದಾರೆ ಅಂದೆ. ಇಲ್ಲಕ್ಕ ಪೇಪರ್ ಮೇಲೆ ಅವಳ ಗಂಡನ ಸೈನ್ ಕೇಳ್ತಾರಲ್ಲಕ್ಕಾ ಅವ್ರು… ಅದಿಲ್ದೆ ಮಾಡಬೇಕಲ್ಲ ಅವ್ರು. ಅದಕ್ಕೆ ದುಡ್ಡು ಕೊಡ್ಬೇಕಾಯ್ತು ಅಂತ ವಿವರಣೆ ಕೊಟ್ಟಳು… ಯಾಕೆ ಅವಳ ಗಂಡ ಒಪ್ಪಿರಲಿಲ್ವಾ. ಆಪರೇಷನ್ ಬೇಡ ಅಂತಿದಾನ? ಇನ್ನೂ ಮಕ್ಕಳು ಬೇಕಂತಾ? ಅಂತೆಲ್ಲಾ ಬಹಳ ಆಸಕ್ತಿಯಿಂದ ಕೇಳಿದೆ. ಇಲ್ಲಕ್ಕ ಆಕಿಗೆ ಗಂಡ ಇಲ್ಲ ಸತ್ತು ವರ್ಷ ಆಯ್ತು ಅಂದ್ಲು. ಕೂಡಲೇ ನನ್ನ ಬಾಯಿಂದ ಅಯ್ಯೋ! ಹಾಗಾದ್ರೆ ಆಪರೇಷನ್ ಯಾಕೆ ಬೇಕಿತ್ತು? ಮಕ್ಕಳಾಗೋ ತಾಪತ್ರಯವೇ ಇಲ್ವಲ್ಲ ಅನ್ನೋ ಉದ್ಗಾರ ಬಂದೇಬಿಟ್ಟಿತು. ಚೆನ್ನಮ್ಮ ಈಗ ದ್ವನಿ ತಗ್ಗಿಸಿ… ಇಲ್ಲಕ್ಕ ನಾದಿನಿಗೆ ಇನ್ನೂ 30 ವರ್ಷದ ಹತ್ತಿರ ಅಷ್ಟೇ. ಉಪ್ಪು ಹುಳಿ ತಿನ್ನೋ ದೇಹ. ಹಸಿವಾಗಿ ಏನಾದ್ರೂ ಮಾಡಿಕೊಂಡರೆ ವ್ಯತ್ಯಾಸ ಆಗಬಾರದಲ್ಲಕ್ಕ ಅದಕ್ಕೇ ಮಾಡಿಸ್ಬಿಟ್ಟೆ ಅಂದ್ಲು. ಸುಮಾರು ಹೊತ್ತು ನನ್ನ ಬಾಯಿಂದ ಮುಂದಿನ ಮಾತು ಹೊರಡಲಿಲ್ಲ. ಮುಂದಿನ ಸ್ವರ ಅಕ್ಕನದ್ದು ಕೇಳಿಸಿತು. ಅವಳ ಮುಂದೆ ಏನಾದ್ರೂ ಮಾತಾಡ್ಬೇಡವೆ ಅದನ್ನೇ ತಲೆಗೆ ತೊಗೋತಾಳೆ. ಅಷ್ಟರಲ್ಲಿ ಸುಧಾರಿಸಿಕೊಂಡು ನೀರು ಹಾಕಿಕೊಳ್ಳಲು ಶುರು ಮಾಡಿದೆ. ತಲೆಗೆ ಕೆಲಸ ಕೊಟ್ಟೆ ವಿದ್ಯಾಭ್ಯಾಸ ಇರುವವರು, ಮಹಿಳಾ ಹಕ್ಕು, ಸ್ತ್ರೀಪರ ವಾದಿಗಳು, ಕೂಡ ಇವಳಷ್ಟು ಉದಾತ್ತವಾಗಿ ವಿಚಾರ ಖಂಡಿತಾ ಮಾಡಲಾರರು. ಇವಳು ಅನಕ್ಷರಸ್ತೆ ಯಾಗಿದ್ದರೂ ದೇಹದ ಹಸಿವು ಯಾರನ್ನು ಬಿಟ್ಟಿದ್ದಕ್ಕ ? ಎಷ್ಟು ದಿನ ಅಂತ ಮುಚ್ಚಿಡಕ್ಕಾಯ್ತದೆ? ಅದಕ್ಕೆ ದುಡ್ಡು ಹೊಂದಿಸಿ ಆಪರೇಷನ್ ಮಾಡಿಸ್ಬಿಟ್ಟೆ ಅಕ್ಕಾ… ಅಂದ ಅವಳ ಮಾತು ಕಿವಿಯಲ್ಲಿ ಮತ್ತೆ ಮತ್ತೆ… ಕೇಳುತ್ತಿತ್ತು.
ಮಹಿಳಾ ಪರ ಭಾಷಣ ಇತ್ಯಾದಿ ಓದುತ್ತಿರುವಾಗ ನಾನು ಈಗಲೂ ಚೆನ್ನಮ್ಮನನ್ನೇ ನೆನಪಿಸಿಕೊಳ್ಳುತ್ತೇನೆ. ಮನಸ್ಸಿನಲ್ಲೇ ಅವಳಿಗೆ ಹಾರ ಹಾಕಿ, ಸನ್ಮಾನಿಸಬಯಸುತ್ತೇನೆ. ಅವಳಿಗೆ ಅರಿವಿಲ್ಲದೆ ಎಷ್ಟು ಮಹಿಳಾ ಪರ, ಮಹಿಳಾ ಸಂವೇದನೆಗಳನ್ನು ರೂಢಿಗತ ಮಾಡಿಕೊಂಡಿದ್ದಳು ಆಕೆ. ಅದೂ ಗಂಡನ ತಂಗಿಯ ಬಗ್ಗೆ ಎಂತಹ ಉದಾರ ಮನೋಭಾವ ವ್ಯಕ್ತಪಡಿಸಿದ್ದಳು ಅಂತ ನನಗೆ ಅವಳೊಂದು ವಿಸ್ಮಯ ಮಹಿಳಾ ಹಕ್ಕು ಹೋರಾಟಗಾರ್ತಿಯಂತೆಯೇ ಕಂಡುಬರ್ತಾಳೆ.

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ಸಚಿವ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮುಖ್ತಾರ್​ ಅಬ್ಬಾಸ್ ನಖ್ವಿ ಹಾಗೂ ಆರ್​​ಸಿಪಿ ಸಿಂಗ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ...

ಬೆಂಗಳೂರಿನಲ್ಲಿ 1,053 ಸೇರಿ ರಾಜ್ಯದಲ್ಲಿ 1,127 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,127 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,75,000ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ, ಹೀಗಾಗಿ ಸಂಖ್ಯೆ 40080 ಇದೆ. ಬೆಂಗಳೂರು...

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರ ಫೋಟೋ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ...
- Advertisement -
error: Content is protected !!