- ವೀಚೀ
response@134.209.153.225
ನೀನು ಬಿಟ್ಟು ಹೋದ ದಿನ ದಿಕ್ಕೆಟ್ಟಂತೆ ನಡುರಸ್ತೆಯಲ್ಲೇ ಬಿಕ್ಕಳಿಸಿದ ಕ್ಷಣಕ್ಕೆ, ಈ ಕಾಲ ಎನ್ನುವುದು ಇಷ್ಟು ಸರಾಗವಾಗಿ ಹರಿದು ಹೋಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಅಂದು ಹೃದಯವೇ ಕಿತ್ತು ಹೋದಂತಾದ ನೋವಿನಿಂದ ಚಡಪಡಿಸಿದ ನನ್ನ ಸ್ಥಿತಿಗೆ ಇಂದು ನಗಬೇಕೋ, ನಾಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ.
ನೀನು ಹೋಗುವಾಗ ನನ್ನಷ್ಟೇ ಭಿಕಾರಿಯಾಗಿ ಒರಟೊರಟಾಗಿ ಬಿದ್ದಿದ್ದ ಈ ರಸ್ತೆ ಇಂದು ಗುಲ್’ಮೊಹರ್ ಹೂವಿನ ಪಕಳೆಗಳನ್ನು ಹಾಸಿಕೊಂಡು ಸಿಂಗಾರಗೊಂಡಿದೆ.
ಅಂದು ನಮ್ಮಿಬ್ಬರ ದಿವ್ಯ ಸಾನಿಧ್ಯಕ್ಕೆ ಮಾತ್ರ ಸಾಕಾಗುತ್ತಿದ್ದ ಸಂಪಿಗೆ ಮರ ಇಂದು ತನ್ನ ಮೈಗೆ ಹೊಸ ಹೊಸ ಕೊಂಬೆಗಳನ್ನು ಮೂಡಿಸಿಕೊಂಡು ಹತ್ತಾರು ಪ್ರೇಮಿಗಳನ್ನು ತನ್ನ ನೆರಳಲ್ಲಿ ಅವಚಿಕೊಂಡಿದೆ. ನಾವು ಗೀಚಿಟ್ಟ ಓರೆಕೋರೆ ಹೆಸರುಗಳು, ಬಿಡಿಸಿದ್ದ ಅರೆಬರೆ ಹೃದಯದ ಚಿತ್ರಗಳು ಯಾವ ಮೂಲೆಗೆ ಸರಿದು ನಿಂತಿವೆಯೋ ಯಾರಿಗೆ ಗೊತ್ತು? ಈಗ ಹೇಳು ಕಾಲ ಎಷ್ಟು ಬದಲಾಗಿದೆ ಅಲ್ವ? ಆದರೆ ಪ್ರೀತಿ ಎನ್ನುವುದು ಸಹ ಹಳೆಯ ನೆನಪುಗಳ ಹಂಗು ತೊರೆದು ಹೀಗೇ ಬದಲಾಗಿ ಹೋಗುತ್ತದಾ? ಬಣ್ಣದ ಕನಸುಗಳು ಸಹ ಕತ್ತಲೆಯ ಋಣವನ್ನು ಮರೆತು ಮಾಸಿ ಹೋಗುತ್ತವಾ? ಖಂಡಿತ ಇಲ್ಲ ಕಣೇ. ನಿನ್ನ ಬಿಟ್ಟು ಬದುಕುವ ಶಕ್ತಿಯನ್ನು ಇಂದು ದಕ್ಕಿಸಿಕೊಂಡಿರಬಹುದು. ಆದರೆ ನಿನ್ನ ನೆನಪುಗಳು ನನ್ನೊಳಗೆ ಸದಾ ಜೀವಂತವಾಗಿರುತ್ತವೆ.
ಮೈಯೆಲ್ಲಾ ಹೂ ಬಿಟ್ಟು ನಗುತ್ತಿರುವ ಸಂಪಿಗೆಯ ಮರದಡಿಯಲ್ಲಿ ನಿನ್ನ ಮುಖವನ್ನು ಬೊಗಸೆಯಲ್ಲಿಡಿದು ಅದ್ಯಾಕೆ ಪಾರಿಜಾತ ಎಂದು ಕರೆಯಬೇಕು ಅನ್ನಿಸಿತೋ ಗೊತ್ತಿಲ್ಲ ಕಣೇ.. ಅಂದಿನಿಂದ ನಿನ್ನ ನಿಜವಾದ ಹೆಸರನ್ನೇ ಮರೆತು ಬಿಟ್ಟೆ. ಆದರೆ ನೀನು ಮಾತ್ರ “ಪಾರಿಜಾತ ಅಂತ ಹೆಸರಿಟ್ಟು ಈ ಸಂಪಿಗೆ ಮರಕ್ಕೆ ಅವಮಾನ ಮಾಡ್ತಿಯಲ್ಲೋ ಮರಾಯ” ಎಂದು ಮನಸಾರೆ ನಕ್ಕುಬಿಟ್ಟಿದ್ದೆ. ನೀನೆಷ್ಟು ಆಡಿಕೊಂಡು ನಕ್ಕರೂ ನಿನ್ನ ಹಾಗೆ ಕರೆದ ಆ ಕ್ಷಣ ಅದೆಂತಹ ದಿವ್ಯ ಘಳಿಗೆಯಾಗಿತ್ತೋ ಗೊತ್ತಿಲ್ಲ. ನಾನೊಂದು ಹೃದಯವನ್ನು ಪ್ರೀತಿಸುತ್ತಿದ್ದೀನಿ ಎಂಬ ಭಾವದಿಂದಲೇ ಅಂದಿಡೀ ದಿನ ನವಿರೆದ್ದಿದ್ದೆ.
ತಿಳಿ ನೀಲಿ ಬಣ್ಣದ ಚೂಡಿದಾರ್ ತೊಟ್ಟ ಹಂಸದಂತೆ ದುಪ್ಪಟ್ಟದ ಚುಂಗನ್ನು ಗಾಳಿಯಲ್ಲಿ ಹಾರಾಡಿಸಿಕೊಂಡು ಕಾಲೇಜಿನ ಆವರಣದಲ್ಲಿ ನೀನು ತಿರುಗಾಡುತ್ತಿದ್ದರೆ ನನ್ನೆದೆಯ ಖಾಲಿ ಕೊಳದಲ್ಲಿ ಪುಟ್ಟ ಮೀನೊಂದು ಜೀವ ತಳೆದು ಪುಟಿದೇಳುತ್ತಿರುವ ಸಂಚಲನವಿರುತ್ತಿತ್ತು.
ನಿನ್ನ ಬಟ್ಟಲುಗಣ್ಣ ನೋಟದ ಇರಿತದಲ್ಲಿ ನನ್ನ ಜೀವವನ್ನು ಕೆದಕುವ ನವಿರಾದ ಯಾತನೆ ಇರುತಿತ್ತು. ಸಕ್ಕರೆಗೆ ಮತ್ತೊಂದಿಷ್ಟು ಜೇನು ಸೇರಿಸಿದಂತ ನಿನ್ನ ಸಿಹಿಯಾದ ಮಾತಿನಲ್ಲಿ ಮನಸನ್ನು ಕದಿಯುವ ಚಂದದ ಮಾದಕತೆಯಿತ್ತು. ಅಂದು ನನ್ನೆದೆಯಲ್ಲಿ ಅಚ್ಚೊತ್ತಿದ ನಿನ್ನ ಚಿತ್ರಗಳು ಒಂದಿಷ್ಟು ಕದಲದೇ ಉಳಿದಿವೆ.
ಹೀಗೆ ನಡುರಾತ್ರಿಯ ಮೌನದಲ್ಲಿ ಕೂತು ಬರೆಯುತ್ತಿರುವ ಈ ಪತ್ರಕ್ಕೆ ನನ್ನೆಲ್ಲಾ ಭಾವುಕತೆಯನ್ನು ಭರಿಸಿ ವ್ಯಕ್ತಪಡಿಸುವ ಶಕ್ತಿ ಎಷ್ಟೂ ಇಲ್ಲ ಕಣೇ. ಈಗ ಮರಳಿ ಬಂದು ಗುಲ್’ಮೊಹರ್ ಚೆಲ್ಲಿದ ನನ್ನೂರ ಹಾದಿಯ ಮೇಲೆ ಪಾದವೂರಿ ಮುಂದೆ ಹೋಗುವಾಗ ತಿರುಗಿ ನೋಡಿದ್ದಾದರೆ ನನ್ನ ಕಣ್ಣುಗಳು ನಿನ್ನದೇ ನೂರಾರು ಕಥೆಗಳನ್ನು ತೆರೆದಿಟ್ಟುಕೊಂಡು ಕಾಯುತ್ತಿರುವುದು ಗೊತ್ತಾಗುತ್ತದೆ. ಒಮ್ಮೆ ನೋಡುತ್ತೀಯಲ್ಲ?