- ಸ್ಮಿತಾ ಅಮೃತರಾಜ್ ಸಂಪಾಜೆ
ಎಲ್ಲ ಜಂಜಡಗಳ ನಡುವೆ ಮೌನಕ್ಕೆ ಜಾರಿಕೊಂಡಾಗ,ಗಿಡ ಮರಗಳ ಬದುಕು ಅದೆಷ್ಟು ಚೆಂದ ಅಂತ ಅನ್ನಿಸತೊಡಗುತ್ತದೆ. ಪುಟ್ಟ ಬೀಜ ಮೊಳಕೆಯೊಡೆದು ಸಸಿಯಾಗಿ,ಕವಲುಗಳಾಗಿ,ರೆಂಬೆ ಕೊಂಬೆಗಳಾಗಿ ಚಾಚಿ,ಒಂದು ವಿಶಾಲವಾದ ಮರವಾಗಿ,ಸಕಲ ಜೀವ ರಾಶಿಗಳಿಗೆ ನೆಲೆಯಾಗುವ ಪ್ರಕ್ರಿಯೆಯೇ ಒಂದು ವಿಸ್ಮಯ. ಆದರೀಗ ನಮ್ಮ ಕಾಂಕ್ರೀಟ್ ಕಟ್ಟಡ ತಳವೂರಲು ಅದೆಷ್ಟು ಮರಗಿಡಗಳು ನೆಲಸಮವಾಗಿವೆಯೆಂಬುದನ್ನು ನೆನೆದರೆ ಕರುಳು ಹಿಚಕ್ ಎಂದು ಗಂಟಲುಬ್ಬಿ ಬರುತ್ತದೆ.ಮೊನ್ನೆ ಮೊನ್ನೆ ನೋಡ ನೋಡುತ್ತಿದ್ದಂತೆಯೇ, ದೈತ್ಯಾಕಾರದ ಬುಲ್ಡೋಜರ್ ಬಂದು ರಸ್ತೆ ಅಗಲೀಕರಣಕ್ಕಾಗಿ ಒಂದೊಂದೇ ಮರಗಳನ್ನು ಬುಡ ಸಮೇತ ನೆಲಕ್ಕುರುಳಿಸಿಬಿಟ್ಟಿತು. ಆ ಮರವನ್ನೇ ನಂಬಿಕೊಂಡಿದ್ದ ಅದೆಷ್ಟೋ ಪಕ್ಷಿಗಳು, ಹುಳು ಹುಪ್ಪಟೆಗಳು ಅನಾಥವಾಗಿ ಬಿಟ್ಟವು.ಅನಾದಿಯಿಂದಲೂ ನಾವು ಗಿಡಮರಗಳನ್ನು ಪೂಜಿಸುತ್ತಾ ಬಂದವರು. ಈ ಹಿಂದೆ ಅರಣ್ಯಗಳು ಯಥೇಚ್ಚವಾಗಿದ್ದಾಗಲೂ ಕೂಡ,ತೀರಾ ಅಗತ್ಯವಿಲ್ಲದಿದ್ದರೆ ಮರಕ್ಕೆ ಕೊಡಲಿ ತಾಗಿಸುತ್ತಿರಲಿಲ್ಲ.ರಾಜ ಅಶೋಕ ದಾರಿ ಹೋಕರಿಗೆ ಆಯಾಸ ಪರಿಹಾರಕ್ಕೆಂದು ದಾರಿಯುದ್ದಕ್ಕೂ ಮರಗಿಡಗಳನ್ನು ನೆಟ್ಟು ಬೆಳೆಸಿದ್ದನ್ನು, ಶಾಲೆ ಕಲಿಯದ ತಿಮ್ಮಕ್ಕ ಸಾಲುಮರಗಳ ಹುಟ್ಟಿಗೆ ಕಾರಣವಾದದ್ದು ನಮಗೆ ಗೊತ್ತೆ ಇದೆ. ತಾನೇ ಶ್ರಮವಹಿಸಿ, ಸ್ವತ: ಬೀಜ ಬಿತ್ತಿ,ಸಸಿ ನೆಟ್ಟು ದೊಡ್ಡದಾದ ಮರಗಳನ್ನು ಹಾಗೇ ಏಕಾಏಕಿ ಕಡಿದುರುಳಿಸಿದಾಗ ಆಕೆಯೆಷ್ಟು ವ್ಯಥೆ ಪಟ್ಟಿರಬೇಡ?.ಆಕೆಯ ನಿಸ್ವಾರ್ಥ ಸೇವೆಗೆ ಕಡೆಗೂ ನಾವು ಕೊಡುವ ಪ್ರತಿಫಲ ಇಷ್ಟೆಯಾ..?ಅಂತ ಅನ್ನಿಸದೇ ಇರಲಾರದು. ಈಗ ರಸ್ತೆಯುದ್ದಕ್ಕೂ ಪ್ರಯಾಣಿಕರಿಗೆ ತಂಗುದಾಣಗಳಿವೆ.ಆ ತಂಗುದಾಣಗಳನ್ನು ನಿರ್ಮಿಸಲು ಮತ್ತೊಂದಷ್ಟು ಗಿಡ ಮರಗಳು ಬಲಿಯಾಗುತ್ತಿವೆ.ಆ ತಂಗುದಾಣದ ಮೇಲೆ ಇಂತವರ ಕೊಡುಗೆ ಅಂತ ಸಿಮೇಂಟಿನ ಫಲಕ ಬೇರೆ?.ಬದುಕು ಬರಡಾಗುತ್ತಿದೆ,ಮತ್ತು ನಾವು ಎಷ್ಟು ನಿರ್ಭಾವುಕರಾಗುತ್ತಿದ್ದೇವೆ ಎನ್ನುವುದಕ್ಕೆ ಇನ್ನೆಷ್ಟು ಉದಾಹರಣೆಗಳು ಬೇಕು?.
ನಾವು ಎಳವೆಯಲ್ಲಿ ಪರೀಕ್ಷೆ ಹತ್ತಿರ ಬಂದಾಗ ಓದಲು ಪಕ್ಕದ ತೋಟದ ನಡುವಿನಲ್ಲಿ ಒಂದೊಂದು ಗಿಡಮರಗಳನ್ನು ಗೊತ್ತು ಮಾಡಿಕೊಂಡು ಓದಲು ಕುಳಿತುಕೊಳ್ಳುತ್ತಿದ್ದೆವು.ನಾನು ಪೇರಳೆ ಹಣ್ಣು ಕಚ್ಚುತ್ತಾ ಸೀಬೆ ಮರವನ್ನು ಹತ್ತಿ ಓದಲು ಕುಳಿತರೆ,ತಮ್ಮ ಮತ್ತೊಂದು ಯಾವುದೋ ಹಕ್ಕಿ ಗೂಡು ಕಟ್ಟಿದ ಗಿಡದಲ್ಲಿ.ಅವರವರು ಕುಳಿತ ಮರವೇ ಅವರಿಗೆ ಶ್ರೇಷ್ಟ ಸಿಂಹಾಸನದಂತೆ ತೋರುತ್ತಿತ್ತು.ಇಂತಹ ವಾತಾವರಣದಲ್ಲಿ ಬೆಳೆದ ನಾವುಗಳು,ನಮ್ಮ ಮಕ್ಕಳು ಸೋಫ,ಹಾಸಿಗೆ ಬಿಟ್ಟೇಳದೆ ಕುಳಿತುಕೊಳ್ಳುವಾಗಲೂ ನಾವು ಏನೂ ಅನ್ನುವುದೇ ಇಲ್ಲ. ಹೊರಗೆ ದೂಳು ಹೊಗೆ ಕುಡಿದು ನಮ್ಮ ಮಕ್ಕಳ ಆರೋಗ್ಯ ಕೆಡಬಹುದೆಂಬ ಭಯ. ಮರಗಳಿಲ್ಲ, ಮಳೆಯಿಲ್ಲ. ಮೋಡ ಬಿತ್ತನೆ ಮಾಡುತ್ತಾ ಆಕಾಶ ನೋಡುತ್ತಾ ಬೆವರಿಳಿಸಿಕೊಳ್ಳುತ್ತಿದ್ದೇವೆ. ನೆಟ್ಟು ಜೀವ ಕೊಡದವರಿಗೆ ಕೊಲ್ಲುವ ಹಕ್ಕು ಹೇಗೆ ಬರುತ್ತದೆಯೆಂಬ ಕನಿಷ್ಠ ಪರಿಜ್ಞಾನ ಕೂಡ ಇಲ್ಲದೆ ನಮ್ಮ ನೇರಕ್ಕೆ ಬದುಕುತ್ತಿದ್ದೇವೆ.
ಈಗ ಇಷ್ಟೆಲ್ಲಾ ಬಿರು ಬಿಸಿಲ ನಡುವೆಯೂ ಕಾಂಕ್ರೀಟ್ ಕಾಂಪೌಂಡು ಗೋಡೆಯ ಎಡೆಯಿಂದ ಚೂರು ತೇವ ಸಿಕ್ಕರೂ ಸಾಕು ಸಣ್ಣ ಗಿಡವೊಂದು ತಲೆಯೆತ್ತಿ ನಿಂತುಬಿಡುತ್ತದೆ.ನೋಡು ನೋಡುತ್ತಲೇ ಏನೆಲ್ಲಾ ನೆನಪಾಗಿ ಆ ಕ್ಷಣ ಎಷ್ಟೊಂದು ಪಾಠವನ್ನು ಹೇಳಿಕೊಡುತ್ತದೆ?.ಬಿಸಿಯುಸಿರಿನ ಕಾಂಪೌಂಡನ್ನೇ ಅಪ್ಪಿಕೊಂಡು ಬಳ್ಳಿ ಸಸ್ಯವೊಂದು ತಬ್ಬಿ ಬೆಳೆದು ಹಸಿರುಸಿರ ಬಿಡುವುದನ್ನ ನಾನು ನಿಬ್ಬೆರಗಾಗಿ ನೋಡುತ್ತಿದ್ದೇನೆ. ಎಷ್ಟೇ ಭಯ ಆತಂಕಗಳ ನಡುವೆಯೂ ಬದುಕು ಕಟ್ಟಿಕೊಳ್ಳುವ ಹಪಾಹಪಿ ಕುಂಠಿತಗೊಳ್ಳುವುದಿಲ್ಲವಲ್ಲಾ ಅಂತ ಸಂತಸವೂ ಸಮಾಧಾನವೂ ಏಕಕಾಲದಲ್ಲಿ ಉಂಟಾಗುತ್ತಿದೆ.ಈ ಹೊತ್ತಲ್ಲಿ ಮನೆಯ ಪಕ್ಕದಲ್ಲಿ ಬೆಳೆದ ಹೆಸರರಿಯದ ಮರವೊಂದರಿಂದ ರಾಶಿ ರಾಶಿ ಒಣಗಿದೆಲೆಗಳು ಲಯಬದ್ದವಾಗಿ ನರ್ತಿಸುತ್ತಾ ಬೀಳುತ್ತಿವೆ. ಚಿಗುರುವ ಚಿಗುರೆಲೆಗಳ ಉತ್ಸಾಹಕ್ಕೆ ತಾವಾಗಿಯೇ ಒಣಗಿದೆಲೆಗಳು ಅವಕಾಶ ಮಾಡಿಕೊಡುತ್ತಿವೆ. ಎಷ್ಟೊಂದು ಔದಾರ್ಯ ಈ ಮರದೆಲೆಗಳಿಗೆ. ಈ ಬಸವಳಿಯುವ ಬೆವರಿನ ಸೆಖೆಯಿಂದ ತಪ್ಪಿಸಿಕೊಳ್ಳಲು, ಪಕ್ಕನೆ ನನ್ನೆದೆಯೊಳಗಿಂದ ಹಾರಿದ ಕವಿತೆ ಸಾಲೊಂದು ಹಸಿರೆಲೆಗಳ ನಡುವೆ ಕುಳಿತು ಜೀಕುತ್ತಾ ಹಾಡುತ್ತಿದೆ.