Saturday, May 21, 2022

ಸಂತೋಷವೆಂಬುದು ಬಗೆ ಬಗೆ

Follow Us

  • ಸ್ಮಿತಾ ಅಮೃತರಾಜ್, ಸಂಪಾಜೆ
    response@134.209.153.225

ಕೆಲಸ ಎಲ್ಲಾ ಬೇಗ ಮುಗಿಯಿತು ಈಗ ಹೊತ್ತೇ ಹೋಗುತ್ತಿಲ್ಲ ಅಂತಾನೋ ಅಥವಾ ನಂಗೆ ಮಾಡೋಕೆ ಬೇರೇನೂ ಕೆಲಸವಿಲ್ಲದೆ ಸಿಕ್ಕಾಪಟ್ಟೆ ಬೋರ್ ಆಗಿ ಏನು ಮಾಡಬೇಕೆಂದು ಗೊತ್ತಾಗದೆ ಒಂದಷ್ಟು ಹೊತ್ತು ನಿದ್ದೆ ತೆಗೆದೆ, ಧಾರಾವಾಹಿ ನೋಡಿದೆ, ಯಾವುದೋ ಸಿನೇಮಾ ಬರುತ್ತಿತ್ತು ಅಷ್ಟೇನೂ ಒಳ್ಳೆಯದಲ್ಲದಿದ್ದರೂ ಕುಳಿತು ನೋಡಿದೆ ಆದರೂ ಉದ್ದಕ್ಕೆ ಮುಗಿಯದಷ್ಟು ಬಿದ್ದುಕೊಂಡಿರುವ ಹಗಲು ಕಾಣುವಾಗ ಸಿಕ್ಕಾಪಟ್ಟೆ ಕಿರಿಕಿರಿ ಆಗುತ್ತದೆ ಅಂತ ಅವರಿವರು ಹೇಳುವಾಗ ನಿಜಕ್ಕೂ ಅಸೂಯೆಯಾಗುತ್ತದೆ. ಮತ್ತೊಂದು ವರ್ಗದವರಿದ್ದಾರೆ, ಅವರಿಗೆ ಹೊತ್ತೇ ಸಾಕಾಗುವುದಿಲ್ಲವಂತೆ. ಬೆಳಗ್ಗೆ ಎದ್ದದ್ದೇ ತಡ, ಲಗುಬಗೆಯಲ್ಲಿ ತಿಂಡಿ ತಯಾರಿಸಬೇಕು, ಗಂಡ ಮಕ್ಕಳನ್ನು ಸುಧಾರಿಸಬೇಕು, ಜತೆಗೆ ದುಡಿಯುವ ಹೆಣ್ಣುಮಗಳಾದರೆ ಎಲ್ಲವನ್ನೂ ನಿಭಾಯಿಸಿಕೊಳ್ಳಬೇಕು. ಇಷ್ಟೆಲ್ಲದರ ನಡುವೆ ರಾತ್ರೆ ಊಟ ಆಗುವುದೊಂದೇ ಗೊತ್ತು ಅದು ಯಾವ ಮಾಯಕದಲ್ಲಿಯೋ ತೂಕಡಿಕೆ ಬಂದು ಹಾಸಿಗೆ ಕಂಡರೆ ಸಾಕೆನ್ನಿಸುವಷ್ಟು ಸುಸ್ತಾಗಿ ಬಿಡುತ್ತದೆ ಅಂತ ಮನೆಯಲ್ಲಿಯೇ ಗೃಹ ಕೃತ್ಯದಲ್ಲಿ ತೊಡಗಿಸಿಕೊಂಡ ಮಹಿಳೆಯರನ್ನು ಮೆಚ್ಚುಗೆಯಿಂದ ನೋಡುತ್ತಾ, ನೀವು ಬಿಡಿ, ಪುಣ್ಯವಂತರು ಕಣ್ರೀ ಅಂತ ಅವರ ಅದೃಷ್ಟಕ್ಕಾಗಿ ಕರುಬುತ್ತಾರೆ. ಆದರೆ ನಮ್ಮ ಗೃಹಿಣಿಯರ ಕಡೆ ಬಂದರೆ ಅವರೋ ಕಿವಿ ತೂತಾಗುವಷ್ಟು ನೂರಾರು ಕತೆ ಕಟ್ಟುತ್ತಾರೆ. ನಮಗೆ ದಿನವಿಡೀ ಆಚೆಯಿಂದ ಈಚೆಗೆ ಹೆಣಗಾಡೋದು ಒಂದೇ ಕೆಲಸ. ಇತ್ತ ಕೆಲಸವೂ ಮುಗಿಯುವುದಿಲ್ಲ, ಅತ್ತ ಮಾಡಿದ ಕೆಲಸವೂ ಕಾಣುವುದಿಲ್ಲ. ನಮ್ಮ ಪಾಡು ಯಾರಿಗೂ ಬರಬಾರದು ಅಂತ ಅವರ ಅಳಲು. ಇನ್ನು ಕೃಷಿಕ ಮಹಿಳೆಯರ ಸಂಕಟ ಬೇರೆಯೇ ತೆರನದ್ದು. ಅವರಿಗೆ ಗೃಹ ಕೃತ್ಯ ಸಂಭಾಳಿಸಿಕೊಳ್ಳುತ್ತಲೇ ಕೃಷಿ ಕೆಲಸದಲ್ಲಿ ತೊಡಗಿಸಿ ಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ನಮ್ಮದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಜೀವನದಲ್ಲಿ ಒಂದು ಸಿನೇಮಾ ಇಲ್ಲ, ಪ್ರವಾಸ ಇಲ್ಲ, ಇದೆಂಥಾ ಬದುಕು ಅಂತ ಒಳಗೊಳಗೆ ಹಲುಬಿಕೊಂಡರೂ ಹೊರಗೆ ಹೋಗುವ ಅವಕಾಶ ಸಿಕ್ಕರೂ ನೂರೆಂಟು ಸಬೂಬು ಹೇಳಿಕೊಂಡು ಅದರಿಂದ ನುಣುಚಿಕೊಳ್ಳಲು ಯತ್ನಿಸುವುದು ಕೂಡ ಅಷ್ಟೇ ಸತ್ಯ. ಎಲ್ಲಾ ಒತ್ತಡಗಳ ನಡುವೆ ಎಲ್ಲರೂ ಬಿಡುಗಡೆಯನ್ನು ಬಯಸುವವರೇ. ಬಹುಷ; ಇಂತಹ ಒತ್ತಡಗಳಿದ್ದರೆ ಸಮಯ ಎಷ್ಟು ಅಮೂಲ್ಯ ಮತ್ತು ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉಮೆದಿಗೆ ಮನಸು ಬೀಳುವುದು. ನನ್ನ ಗೆಳತಿಯೊಬ್ಬಳು ವೃತ್ತಿಯಲ್ಲಿ ಅಧಿಕಾರಿಯಾದರೂ ಅವಳ ಪ್ರವೃತ್ತಿಗಳು ಹತ್ತು ಹಲವು. ಇದಕ್ಕೆಲ್ಲಾ ಎಲ್ಲಿಯಾ ಪುರುಸೊತ್ತು ಅಂತ ಕಣ್ಣರಳಿಸಿದರೆ, ಊಟಕ್ಕೂ, ನಿದ್ದೆಗೂ ಸಮಯ ಸಾಲುತ್ತೆ ಅಂತಾದರೆ ನಮ್ಮ ಆಸಕ್ತಿಗೆ ಸಮಯ ಸಿಕ್ಕೇ ಸಿಗುತ್ತೆ ಅನ್ನುವುದು ಆಕೆಯ ಅಂಬೋಣ.

ನನ್ನಜ್ಜಿಯ ಕಾಲಕ್ಕೆ ಕೆಲಸ ಸರಳೀಕರಣಗೊಳಿಸುವಂತಹ ಯಾವ ಯಂತ್ರೋಪಕರಣಗಳೂ ಬಂದಿರಲಿಲ್ಲ. ದೈಹಿಕ ಶ್ರಮವನ್ನಷ್ಟೇ ನೆಚ್ಚಿಕೊಂಡು ಕೆಲಸ ಪೂರೈಸ ಬೇಕಾದ ಅನಿವಾರ್ಯತೆಯಲ್ಲೂ ಯಾವುದೇ ಲೋಪವಾಗದೆ ಆಯಾಯ ಕಾಲಕ್ಕೆ ಮಾಡಬೇಕಾದ ಕೆಲಸಗಳು ಮುಗಿದೇ ತೀರುತ್ತಿದ್ದವು. ಅವೆಲ್ಲದರ ನಡುವೆಯೂ ಅವರೆಲ್ಲರೂ ಬುಟ್ಟಿ ಹೆಣೆಯುತ್ತಿದ್ದರು, ಚಾಪೆ ನೇಯುತ್ತಿದ್ದರು,ಕಸೂತಿ ಕಾಕುತ್ತಾ ಸೋಬಾನೆ ಪದ ಹಾಡುತ್ತಿದ್ದರು, ಅವರ ಕಥಾ ಕಣಜಕ್ಕೆ ಕೈ ಹಾಕಿದರೆ ಅಬ್ಭಾ! ಮೈ ನವಿರೇಳಿಸುವಷ್ಟು. ಅಚ್ಚರಿಯಾಗುತ್ತದೆ. ಬಹುಷ; ಆಸಕ್ತಿ ಮತ್ತು ನಮ್ಮನ್ನು ನಾವು ಸಂತೋಷವಾಗಿಟ್ಟುಕೊಳ್ಳಬೇಕೆಂಬ ತುಡಿತ ಇದ್ದರೆ ಖಂಡಿತಾ ಮನಸು ಇವಕ್ಕೆಲ್ಲಾ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತದೆಯೋ ಏನೋ?. ಕೆಲಸ ನಡುವೆಯೇ ಸಾಗುವ ಇಂತಹ ಚಟುವಟಿಕೆಗಳೆ ಅವರ ಆಯಾಸವನ್ನು ಪರಿಹರಿಸುವ ಸಾಧನಗಳು ಕೂಡ.
ಹೆಚ್ಚಿನವರಿಗೆ ಇಂತಹ ಸೃಜನಶೀಲ ಚಟುವಟಿಕೆಗಳೇ ಬಿಡುಗಡೆಯ ಮಾಧ್ಯಮ ಮತ್ತು ಆಯಾಸ ಪರಿಹರಿಸಿಕೊಳ್ಳುವ ಸಾಧನ. ಸಿನೇಮಾ, ಧಾರಾವಾಹಿ ನಮಗೆ ಕ್ಷಣಿಕ ಮನರಂಜನೆಯನ್ನಷ್ಟೆ ಒದಗಿಸಬಲ್ಲವೇ ಹೊರತು ನಮ್ಮನ್ನು ಒಳಗಿನಿಂದ ಸಂತೋಷವಾಗಿಡಲು ಸಾಧ್ಯವಾಗಲಾರದು. ಆದರೆ ದಿನದ ಬಹುಪಾಲು ಶಾಪಿಂಗ್, ತಿರುಗಾಟ ಅಂತ ಕಾಲ ಕಳೆಯುವ ನನ್ನ ಗೆಳತಿಯೊಬ್ಬಳು, ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವ ಮತ್ತು ಬಿಡುವು ಸಿಕ್ಕಾಗಲೆಲ್ಲಾ ಹಸುಗೂಸಿನಂತೆ ನನ್ನ ಒತ್ತಿನಲ್ಲೇ ಇರುವ ಪುಸ್ತಕಗಳನ್ನ ನೋಡಿ ಆಕೆ ಯಾವಾಗಲು ಹೇಳೋದಿದೆ- “ನಿನ್ನನ್ನು ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತೆ. ಜೀವನದಲ್ಲಿ ಸಂತೋಷವಾಗಿರುವುದು ಹೇಗೆಂದು ನಿನಗೆ ಗೊತ್ತೇ ಇಲ್ಲವೇ?”. ಅವಳ ಕಣ್ಣನ್ನೇ ನೋಡುತ್ತೇನೆ. ಕೆಲವು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಐಪಿಎಲ್: ರಾಜಸ್ಥಾನ್ ವಿರುದ್ಧ ಸೋತ ಧೋನಿ ಪಡೆ

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳಿಂದ ಸೋಲುಂಡಿದೆ. ಧೋನಿ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್...

ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ

newsics.com ಬಾಗಲಕೋಟೆ: ನಿವೃತ್ತ ನ್ಯಾಯಾಧೀಶರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಬಾಗಲಕೋಟೆಯ‌ ನವನಗರದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನವನಗರದ ಸೆಕ್ಟರ್ ನಂ 16ರ ಮನೆಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ತಾಪುರ ನ್ಯಾಯಾಲಯದಲ್ಲಿ...

ಬ್ರಿಟನ್: ಅತಿ ಶ್ರೀಮಂತರ ಪಟ್ಟಿಯಲ್ಲಿ 222 ನೇ ಸ್ಥಾನ ಪಡೆದ ರಿಷಿ ಸುನಕ್ ದಂಪತಿ

newsics.com ಲಂಡನ್: ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅಳಿಯ ಹಣಕಾಸು ಸಚಿವ ರಿಷಿ ಸುನಕ್ ಬ್ರಿಟನ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಈ ದಂಪತಿಗಳು ಸುಮಾರು 8...
- Advertisement -
error: Content is protected !!