Saturday, April 17, 2021

ಗೃಹವಾಸದ ಹೊತ್ತಿನಲಿ…

* ಸುನೀತ ಕುಶಾಲನಗರ

ಡೀ ವಿಶ್ವವನ್ನೇ ಕಪಿ ಮುಷ್ಠಿಯಲ್ಲಿ ಬಂಧಿಸಿ ವಿಲ ವಿಲ ಒದ್ದಾಡುವಂತೆ ಮಾಡುತ್ತಾ ತನ್ನ ವಂಶವನ್ನು ಸಮೃದ್ಧಿಗೊಳಿಸಲು ದೇಶ,ಭಾಷೆ,ಬಣ್ಣ,ಬಡವ,ಬಲ್ಲಿದ,ಧರ್ಮವೆನ್ನದೆ ಭೂಮಂಡಲವನ್ನೇ ಆವರಿಸಲು ಹೊಂಚು ಹಾಕುತಿರುವ ಕೊರೋನ ವೈರಾಣು ಮಕ್ಕಳಾದಿಯಾಗಿ ವಯೋವೃದ್ಧರವರೆಗೂ ಬೆಚ್ಚಿ ಬೀಳಿಸುತ್ತಿರುವುದಕ್ಕೆ ಸಾಕ್ಷಿಯಾಗುತಿದ್ದೇವೆ.
ಕ್ಷಣ ಕ್ಷಣವೂ ಕಣಕಣವನ್ನೂ ಭೀತಿಗೊಡ್ಡುವ ಕೊರೋನ ಸುದ್ಧಿಗಳಲ್ಲಿ ಸಲಹೆ, ಜಾಗೃತಿ ನೀಡುತ್ತಲೇ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಕೇಳಿ ಕೇಳಿ ಧೈರ್ಯ ಕಳೆದುಕೊಂಡು ಗೋಳಾಡುವ ಬದಲು ವಾರ್ತೆ ತಿಳಿಯಲು ಸಮಯದ ಗಡಿರೇಖೆ ಇಟ್ಟುಕೊಳ್ಳುವುದು ಉತ್ತಮ. ದಿನಕ್ಕೆ ಎರಡು ಬಾರಿ ಸುದ್ದಿ ಕೇಳಿ ವರ್ತಮಾನ ತಿಳಿಯುವುದು. ಉಳಿದಂತೆ ಖುಷಿಕೊಡುವ ಕೆಲಸಗಳ ಕಡೆ ತೊಡಗಿಸಿಕೊಂಡು ನಮ್ಮ ಆಸೆಗೆ ತಕ್ಕಂತೆ ಪಳಗಿಸುವುದರ ಮೂಲಕ ಸಮಯದ ಸದ್ಭಳಕೆಯಾಗಿ ಭಯದಿಂದ ಮುಕ್ತಿ ದಕ್ಕಿದಂತಾಗುತ್ತದೆ.
ಮಹಿಳೆಯರಿಗಂತೂ ಎಲ್ಲಾ ಕಾಲವೂ ಬಿಡುವಿಲ್ಲದ ಕೆಲಸಗಳೇ ಬಿಡಿ. ಮನೆಮಂದಿಯೆಲ್ಲರ ತೃಪ್ತಿಯ ಹೊಣೆಹೊತ್ತು ಕಾಯಕವೇ ಕೈಲಾಸವೆಂದು ಹೊಸ ಸಾಧ್ಯತೆಗಳತ್ತ ಹೊರಳಿಕೊಳ್ಳುತ್ತಾಳೆ. ಆಕೆ ದಿನಕ್ಕೊಂದು ಹೊಸ ರುಚಿಯ ಶೋಧ ನಡೆಸುತ್ತಾ ಕಾಡು ಅಡುಗೆಯನ್ನೂ ಮಾಡುವುದಲ್ಲದೇ ಯೂ ಟ್ಯೂಬ್ ಸಬ್ಸಕ್ರೈಬಾಗಿ ಬೇರೆ ಬೇರೆ ಖಾದ್ಯಗಳ ಪಾಠ ಕೇಳುತ್ತಲೇ ಪರೀಕ್ಷಿಸುತಿರುವುದು ಗೆಳತಿಯರ ಲವ ಲವಿಕೆಯ ಸಂಭಾಷಣೆಯಿಂದ ಹೊರಬೀಳುತ್ತವೆ.. ಪಾನಿಪೂರಿ ಮಾಡುವುದರಲ್ಲೂ ಪಳಗಿ ಮುಂದೆ ಪಾನಿ ಪೂರಿ ಅಂಗಡಿಯವನಿಗೂ ನಷ್ಟ ಸಂಭವಿಸಬಹುದೇನೋ ಎಂಬ ಕಳವಳ ಶುರು ಹಚ್ಚಿಬಿಟ್ಟಿದೆ.. ಏಕೆಂದರೆ ಎಲ್ಲವನ್ನೂ ಮನೆಯಲ್ಲೇ ಸುಲಭವಾಗಿಸುವತ್ತ ಸಮಯ ಮತ್ತು ಮೊಬೈಲ್ ದಾರಿ ತೋರಿದೆ. ಹಾಗೆಯೇ ಗೆಳತಿಯೊಬ್ಬಳು ಅಚ್ಚರಿಯಿಂದ ಹೇಳುತ್ತಾಳೆ.. “ನಮ್ಮ ಊರಿನಲ್ಲಿ ಪ್ರತಿದಿನ ತೆರೆದಿರುತಿದ್ದ ತರಕಾರಿ ಅಂಗಡಿಯಲ್ಲಿ ಒಂದು ಜನವೂ ಇರುತ್ತಿರಲಿಲ್ಲ. ಈಗ ವಾರದ ಮೂರು ದಿನ ಹನ್ನೆರಡು ಗಂಟೆಯವರೆಗೆ ಮಾತ್ರ ತೆಗೆಯುವ ಅಂಗಡಿ ತೆರೆದಾಗಿನಿಂದ ಮುಚ್ಚುವವರೆಗೂ ಜನ ಮುಗಿ ಬಿದ್ದಿರುತ್ತಾರೆ. ಅಂದರೆ ಮುಂದೆ ಸಿಗದೆ ಹೋದರೆ ಎಂಬ ಭಯದಿಂದ ಕೂಡಿಸಿಡುತ್ತಾರೋ..ಗೊತ್ತಿಲ್ಲ.” ಎನ್ನುತ್ತಾಳೆ.
ಎಲ್ಲರ ಎದೆಯೊಳಗೆ ಕೊರೋನಾ ಬಿತ್ತಿದ ಭೀತಿ ಬೆಳೆದು ಯುಗಾದಿ, ವಿಷು,ಗುಡ್ಫ್ರೈಡೆ ಹಬ್ಬಗಳು ಸದ್ದು ಮಾಡದೆ ಹಾಜರಿ ಹಾಕಿ ಸರಿದು ಹೋದವು. ರಂಜಾನ್ ಆದರೂ ನಗುಮೊಗದ ಚಂದಿರನನ್ನು ಹೊತ್ತು ತರುವುದೇ? ಹಳ್ಳಿಯಲ್ಲಿ ಕೊರೋನಾ ಅಷ್ಟೊಂದು ಸಂಚಲನ ಮೂಡಿಸದಿದ್ದರೂ ಸುದ್ದಿ ತಿಳಿಯುತ್ತಲೇ” ಕಾಲ ಕೆಟ್ಟೋಯಿತೆಂದು” ಅಜ್ಜ ಅಜ್ಜಿಯರು ಗೊಣಗುತ್ತಲೇ ಇದ್ದಾರೆ. ವಾರಕ್ಕೊಮ್ಮೆ ಪೇಟೆ ಕಾಣುವ ಮಂದಿ ಈ ವಯಸ್ಸಿನವರೆಗೂ ಕಂಡೂ ಕೇಳರಿಯದ ಪದಗಳಿಗೂ, ಬದಲಾವಣೆಗೂ ಮೂಗಿನ ಮೇಲೆ ಬೆರಳಿಟ್ಟು ದಿಗಿಲುಗೊಂಡಿದ್ದಾರೆ.
ಹಬ್ಬಗಳಲ್ಲೂ ಒಂದಾಗದಂತೆ, ಅಗಲಿದವರ ಅಂತ್ಯ ಭೇಟಿಗೂ ಸಾಧ್ಯವಾಗದಂತೆ ಮಾಡಿರುವ ಈ ಜೀವಿ ಬದುಕಿನಲ್ಲಿ ಏನೇನೆಲ್ಲಾ ಕಲಿಸಿಬಿಟ್ಟಿತು?ಮನೆಯೊಳಗೆ ಪರಸ್ಪರ ಅವಲಂಬನೆಯ ಬಗೆಯಂತೂ ಚೆನ್ನಾಗಿ ಅನುಭವಿಸುತ್ತಿದ್ದೇವೆ.
ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಕೊಡಗು ಈಗ ಅಪ್ಪಿತಪ್ಪಿ ಯಾರಾದರೂ ಮನೆಗೆ ಬರುತ್ತಾರೆಂದರೆ ಹೇಳಲಾಗದ ಸಂಕಟ. ಪ್ರೀತಿಯಿಂದ ಆತಿಥ್ಯ ಮಾಡುತ್ತಿದ್ದ ನಮಗೀಗ ಪ್ರತಿಯೊಬ್ಬರ ಮೇಲೂ ಗುಮಾನಿ. ಬಂದವರು ಒಮ್ಮೆ ಕೆಮ್ಮಿದರೂ ಸಾಕು ನಮ್ಮ ಉಸಿರು ನೆಟ್ಟಗಿರಲ್ಲ.
ನಮ್ಮಲ್ಲಿ ಬಹತೇಕರ lockdown days ಸದ್ಬಳಕೆಯಾಗಿದೆ. ಮನೆಯಾವರಣದಲ್ಲಿ ನನೆಗುದಿಗೆ ಬಿದ್ದಿದ್ದ ಕೆಲಸಗಳೆಲ್ಲಾ ರಂಗು ರಂಗಾಗಿ ಥಳುಕು ಕಾಣುತ್ತಿದೆ. ಅನೇಕರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಸಹಾಯ ಅನ್ನೋದು ಕ್ಯಾಮರಾದಿಂದ ದೂರವಿದ್ದರೆ ಮತ್ತಷ್ಟು ಆತ್ಮ ತೃಪ್ತಿ ದೊರೆಯಬಹುದೇನೋ.
ಸಾಹಿತ್ಯ ಪ್ರೇಮಿಗಳಿಗಂತೂ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಓದಲಾಗದೆ ಬದಿಗಿಟ್ಚ ಪುಸ್ತಕಗಳನ್ನು ಮನಸ್ಸೋ ಇಚ್ಛೆ ಓದುವ ಅವಕಾಶ. ಈ ಧ್ಯಾನಸ್ಥ ಸ್ಥಿತಿಯನ್ನು ಅನುಭವಿಸಿದವರು ಓದಿನ ಮಜವನ್ನು ಹಂಚಿಕೊಳ್ಳುವಾಗ ಓದಿನ ಗೀಳು ಇಲ್ಲದವರಿಗೂ ಓದಬೇಕೆನಿಸುತ್ತದೆ.
ಅಂಗೈಯೊಳಗೆ ಮೊಬೈಲ್ ಇದ್ದರಂತೂ ಬೇಜಾರೇ ಇಲ್ಲ ಬಿಡಿ. ಮೊನ್ನೆ ಮೊನ್ನೆ ಊರಿನ ಅಜ್ಜಿಗೆ ಕರೆಮಾಡಿ ಮಾತನಾಡುವಾಗ ಮಳೆಗಾಲಕ್ಕಾಗಿ ಸಂಡಿಗೆ ಮಾಡಿಡುವ ಬಗೆ ಹೇಳುತ್ತಾ ನೀನು ಮಾಡು ಎಂದು ಹೇಳಿ ವಿಧಾನವನ್ನೂ ವಿವರಿಸಿಬಿಟ್ಟರು. ಅಡುಗೆ ಮಾಡಿ, ತೊಳೆದು ಜಡ್ಡುಗಟ್ಟಿ ಹೈರಾಣಾಗಿದ್ದೇನೆಂದು ಹೇಳಿದರೆ ಅವರೇನು ಒಪ್ಪುವರೇ?
ಒಮ್ಮೆ ಹೀಗೆ ಆತ್ಮೀಯರ ವಾಟ್ಸಾಪ್ ಗ್ರೂಪೊಂದರಲ್ಲಿ ಕೊರೋನಾ ಪುರಾಣ ಚರ್ಚಿಸುತ್ತಾ ನಾಳೆ ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗಿನ ಎಲ್ಲಾ ಅಡುಗೆಯನ್ನು ಪುರುಷರೇ ನಿಭಾಯಿಸಿ ಸೆಲ್ಱಿ ತೆಗೆದು ಹಾಕಿ ಎಂದು ಅನಿಸಿಕೆ ಬರೆದು ಪೋಸ್ಚ್ ಮಾಡಿಬಿಟ್ಟೆ. ಕೆಲವು ಹಾಸ್ಯ, ಹಾರಿಕೆಯ ಉತ್ತರವನ್ನು ಬಿಟ್ಟರೆ ಸೆಲ್ಫಿಗಾಗಿ ಕಾದಿದ್ದೇ ಬಂತು. ಅಡುಗೆ ಮನೆಯೊಳಗಿನ ಮಹಾರಾಣಿ ಯಾವತ್ತೂ ಹೆಣ್ಣೆೇ. ಅವಳ ಚಾಕಚಕ್ಯತೆಗೆ, ಅಚ್ಚುಕಟ್ಟುತನಕ್ಕೆ ಇಡೀ ಮನೆಯ ವ್ಯವಸ್ಥೆಯೇ ಒಗ್ಗಿಬಿಟ್ಟಿರುತ್ತದೆ. ಇದು ಮನೆ ಹಿರಿಯರ ವಾದವೂ ಕೂಡ.
ಒಂದಂತೂ ನಿಜ, ನಮ್ಮ ಯಾವ ಹಿರಿಯರು ಕೂಡ ಬದುಕಿನಲ್ಲಿ ಎದುರಿಸದ ವಿಚಿತ್ರ ಅನುಭವ ನಮ್ಮ ಪಾಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಪಠ್ಯಪುಸ್ತಕದೊಳಗೂ ಸೇರಿ ಇತಿಹಾಸವಾಗಲಿರುವ ಕೊರೋನಾ ಕಹಾನಿ ಮಕ್ಕಳಿಗೆ ಅಗತ್ಯ ಪಾಠವಾಗುವುದಂತೂ ದಿಟ.
“ಲೋಕದಲ್ಲಿ ನಾಗರಿಕತೆ ಹೆಚ್ಚಿದಂತೆ ರೋಗಗಳು ಹೆಚ್ಚುತ್ತವೆ. ನಾಗರೀಕತೆಯೇ ಒಂದು ರೋಗ…” ಅ ನ ಕೃ ಅವರ ವಾಕ್ಯ ಇಲ್ಲೇ ಎಲ್ಲೋ ಗಿರಕಿ ಹೊಡೆದಂತೆ…

ಮತ್ತಷ್ಟು ಸುದ್ದಿಗಳು

Latest News

ಪ್ರಧಾನಿ ಮೋದಿ ಮನವಿ: ಕುಂಭಮೇಳ ಅಂತ್ಯ

newsics.com ಹರಿದ್ವಾರ: ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹರಿದ್ವಾರದ ಕುಂಭಮೇಳವನ್ನು ಮೊಟಕುಗೊಳಿಸಲಾಗಿದೆ. ಈ ಕುರಿತು ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಅವರು ಶನಿವಾರ (ಏ.17)...

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  11,41,998  ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಹೊಸದಾಗಿ 11,...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...
- Advertisement -
error: Content is protected !!