- ಗುರು ಹಿರೇಮಠ ಇಳಕಲ್ಲ
response@134.209.153.225
ಅವಳೆಂದರೆ ಭಯ ಮತ್ತು ಭಕ್ತಿ ನನ್ನೊಳಗೆ. ಹೀಗಾಗಿ ಹೇಗೆ ಬರೆಯಿಲಿ ಎಂಬ ಪ್ರಶ್ನೆ ಹಾಕಿಕೊಂಡು ಕುಳಿತಿರುವ ಈ ಮೌನ
ಸಮಯದಲ್ಲಿ ಅವಳೇ ಕೈ ಹಿಡಿದು ಬರೆಸುತ್ತಿದ್ದಾಳೆ.
ಅವಳೆಂದರೆ ಕೇವಲ ಅವಳೆಂದು ಸುಮ್ಮನೆಂದು ನಡೆದು ಬಿಡಬಹುದು ಎರಡು ಹೆಜ್ಜೆ. ಆದರೆ ಸತ್ಯ ಬೇರೆ ಇದೆ. ಆ ಎರಡು ಹೆಜ್ಜೆಗಳಲ್ಲಿ ಅವಳ ಅಂತರಂಗದ ಶ್ರೀಗಂಧದ ಬಾಗಿಲು ತೆರೆದುಕೊಳ್ಳುತ್ತದೆ. ಅವಳ ಅನುಭವಿಸಿ ಅನುಭವಿಸುವ
ಪಡಸಾಲೆಯಲ್ಲಿ ಇಣುಕಿ ನೋಡಿದಾಗ ಅವಳ ಇಡೀ ಅಂತಃಕರಣದ ವ್ಯಕ್ತಿತ್ವದ ಒಳ ಅರಿವು ತಿಳಿಯುತ್ತದೆ.
ಅವಳು ಮನೆಯ ಯಜಮಾನಿಕೆಯ ಬಿರುದು ಅನುಭವಿಸಿ ಸುಖವಾಗಿ ಬದುಕಿ ಬಿಡಬಹುದು. ಆದರೆ ಅವಳು ಹಾಗೆ ಮಾಡುವುದಿಲ್ಲ.
ಮನೆಯೊಳಗೆ ಇರುವ ಪ್ರತಿ ಕೋಣೆ ಕೋಣೆಯಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಾ, ತನ್ನ ಸ್ಪರ್ಶದಿಂದ, ಕಾಯಕದದಿಂದ, ಪ್ರೀತಿಯಿಂದ, ಪ್ರೇಮದಿಂದ ಗೌರವದಿಂದ ಎಲ್ಲವನ್ನೂ ತನ್ನ ಹತೋಟಿಗೆ ತಂದುಕೊಂಡು, ತನ್ನ ಎದೆಗೂಡಿನಲ್ಲಿ ನೂರಾರು ಆಸೆಗಳು ಇದ್ದರೂ ಸಹ ಸಮುದ್ರದಂತೆ ತನ್ನೊಳಗೆ ತಾನೇ ಎಲ್ಲವನ್ನೂ ನುಂಗಿಕೊಂಡು ಶಾಂತವಾಗಿ ಇದ್ದು, ಇಡೀ ಮನೆಯನ್ನು ,ಜಗವನ್ನ
ಬೆಳಗುವ ಬೆಳಕಿನ ಜ್ಞಾನ ಅವಳು.
ಅವನು ತನ್ನ ಅಹಂಕಾರವನ್ನು ಅವಳ ಅಂಗೈಯಲ್ಲಿ ಚೆಲ್ಲಿ ಅವನು ಅವಳಾದಾಗ ಮಾತ್ರ ಸತ್ಯ ನಮ್ಮೊಳಗೆ ಪ್ರವೇಶವಾದರೂ ಅವಳನ್ನ ಸಂಪೂರ್ಣವಾಗಿ ಅವಳನ್ನು ನಮ್ಮೊಳಗೆ ಸುಲಭವಾಗಿ ಆಹ್ವಾನಿಸಿಕೊಳ್ಳಲು ಸಾಧ್ಯವಿಲ್ಲ.ಹೀಗಾಗಿ ಕೊನೆಗೆ ಅವಳು ಅವಳಾಗಿ ಉಳಿಯುತ್ತಾಳೆ.
ಅವಳನ್ನು ಒಪ್ಪಿಕೊಂಡ ಅಪ್ಪಿಕೊಂಡು ಭಕ್ತಿಯಿಂದ ನಡೆದಾಗ ಮಾತ್ರ ಬದುಕಿನ ದಾರಿ ಸಿಗುತ್ತದೆ. ಹೌದು,ಅದು ಎಂತಹ ದಾರಿ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.
ನಿಜ ಅವಳು ಪ್ರಕೃತಿ ಗುಣದವಳು, ಅವಳು ಎಲ್ಲವನ್ನೂ ಕೊಡುತ್ತಾಳೆ ಏನನ್ನು ಬಯಸದೆ ಪಂಚಭೂತಗಳಂತೆ. ಹೀಗಾಗಿ ಏನು ಸಿಗುತ್ತದೆಂದು ಹೊರಡುವ ಬದಲು ಏನೆಲ್ಲಾ ಸಿಗಬಹುದೆಂದು ಹೊರಡುವುದು ಬಹಳ ಸೂಕ್ತ.
ಆಧ್ಯಾತ್ಮದಲ್ಲಿ ಆತ್ಮವಾಗಿ ,ಬಯಲಿನಲ್ಲಿ ಅರಿವಿನ ಮೂಲವಾಗಿ, ಭಾವದಲಿ ಅಂತಃಕರಣವಾಗಿ, ಮಮತೆಯಲಿ ತ್ಯಾಗಿಯಾಗಿ ,ಪ್ರೇಮದಲಿ ಸ್ನೇಹವಾಗಿ, ಹಣತೆಯಲ್ಲಿ ಬೆಳಕಾಗಿ ಹೀಗೆ ಹತ್ತು ಹಲವು ಬದುಕಿನ ಮಜಲುಗಳ ಸ್ವರೂಪಗಳಲಿ ತನ್ನ ಅಂತರಂಗದ ನಂಬಿಕೆಯ ಮೂಲಕ ಎಲ್ಲವನ್ನೂ ತಿಳಿಸುತ್ತಿರುತ್ತಾಳೆ ಮೌಲ್ಯದ ಆಧಾರದ ಮೇಲೆ.
ವಿಚಿತ್ರ ಅಂದರೆ ಅವಳು ತಾಯಿಯಾಗಿ, ತಂಗಿಯಾಗಿ, ಮಗಳಾಗಿ, ಗೆಳತಿಯಾಗಿ, ಪ್ರೇಯಸಿಯಾಗಿ, ಮಡದಿಯಾಗಿ, ಆಪ್ತಬಂಧುವಾಗಿ ಇಷ್ಟೆಲ್ಲಾ ಆಗಿ ಕೊನೆಗೆ ಅವಳು ಕೇವಲ ಅವಳಾಗಿ ಉಳಿದು ಬಿಡುತ್ತಾಳೆ ಜಗದ ಬಲಿಷ್ಠ ಕಣ್ಣಿನಲ್ಲಿ.
ಆದರೆ ಸತ್ಯವೇ ಬೇರೆ ಇದೆ. ಅರಿವೇ ಗುರುವಾದರೆ ಎನ್ನುವುದಾದರೆ, ತಾಯಿ ಅದರ ಮೂಲ ಬೇರೆಂದು ನಾನು ಹೇಳುತ್ತೇನೆ. ಹೀಗಾಗಿ ಅವಳು ಅರಿವಿನ ಮೂಲ.
ಎಲ್ಲವೂ ಅವಳಿಂದ ಪ್ರಾರಂಭವಾಗಿ ಕೊನೆಯಲ್ಲಿ ಬಯಲಿನಲ್ಲಿ ಏಕಾಂಗಿಯಾಗಿ ನಿಂತಾಗ ನಾವು ಮತ್ತೆ ಅವಳು ಬಂದು ಬದುಕಿನ ಸತ್ಯದ ಶೂನ್ಯ ದರ್ಶನ ಮಾಡಿಸುತ್ತಾಳೆ ಅರಿವಿನಲ್ಲಿ.
ಅವಳನ್ನು ಪದಗಳನ್ನು ಇಲ್ಲಾ ಇನ್ನಾವುದೋ ಅಲಂಕಾರ, ಉಪಮೇಯ ಮೂಲಕ ಹೇಳಲು ಹೊರಟಾಗ ಎಲ್ಲವೂ ಕ್ಲೀಷೆ ಅನ್ನಿಸಿಬಿಡುತ್ತದೆ. ಆದರೆ ಅವಳನ್ನು ಪ್ರೀತಿಯಿಂದ ಪ್ರೇಮದಿಂದ ಗೌರವದಿಂದ ಕಾಣುತ್ತಾ ಅವಳ ನಗುವಿನಲ್ಲಿ ನಾವು
ನಗುವಾಗಿ ಮಗುವಾಗಿ ಇದ್ದು ಬದುಕುವುದನ್ನ ಕಲಿಯುತ್ತಾ ನಡೆಯಬೇಕು.
ಸಾತ್ವಿಕ ರೂಪದಲ್ಲಿ ನಮ್ಮ ದೇಹ ಮತ್ತು ಮನಸ್ಸು ಹಾಗೂ ಇಡೀ ಬದುಕನ್ನು ಅವಳಲ್ಲಿ ಒಂದಾಗಿಸಿ ತಿಳಿದುಕೊಳ್ಳುವುದರ ಮೂಲಕ ಜೀವನದ ಸಾಕ್ಷಾತ್ಕಾರ ಕಂಡುಕೊಂಡು, ಇರುವಾಗಲೇ ಅವಳು ಮಡಿಲಲ್ಲಿ
ಮತ್ತೆ ಮತ್ತೆ ಮಗುವಾಗಿ ಜನಿಸುತ್ತಲೆ ಇರಬೇಕು.
ಅವಳೆಂದರೆ ಏನೆಂದು ಅರ್ಥ ಮಾಡಿಕೊಂಡು ಅದನ್ನು ತಿಳಿದುಕೊಳ್ಳುತ್ತಾ, ತಿಳಿದುಕೊಂಡಿದ್ದನ್ನು ಹಂಚಿಕೊಳ್ಳುವ ಮೂಲಕ ಜೀವನವನ್ನು ಸಾಗಿಸುವ ಮೂಲಕ ಸಾರ್ಥಕತೆಯ ಭಾವದ ಧನ್ಯತೆಯನ್ನ ಅನುಭವಿಸಬೇಕು. ಇದೇ ಬದುಕು.
ಹೀಗೆ…
ಅವಳೆಂದರೆ ಎದೆಯಾಳದಲಿ ಕೊನೆಯಿಲ್ಲದ ಪ್ರೀತಿ ಪ್ರೇಮ, ಮೋಹದಲಿ. ಮನದ ಮೌನದಲ್ಲಿ ಮಾತಾಗಿ,
ನೋಟದಲ್ಲಿ ಕಾವ್ಯವಾಗಿ, ಅಪ್ಪುಗೆಯಲ್ಲಿ ದಾಂಪತ್ಯದ ಸುಖವ ಕೊಟ್ಟು ಹೊಸ ಸೃಷ್ಟಿಗೆ ಜೀವಕೊಡುವಾಗ ಪುನರ್ಜನ್ಮಕ್ಕೂ ಜೀವ ಕೊಟ್ಟು ತಾಳ್ಮೆಯಲ್ಲಿ ಎಲ್ಲವನ್ನೂ ನುಂಗಿಕೊಂಡು ಇರವವಳು ಏನನ್ನು ಹೇಳದೆ. ಹೀಗೆ ಅವಳು ಸಕಲ ಜೀವರಾಶಿಗಳ ನೆಮ್ಮದಿಯ ಮೂಲ ಸೆಲೆಯಾಗಿ ತಾಳ್ಮೆಯ ಹೃದಯದಲ್ಲಿ ನೆಲೆಯಾಗಿರುವವಳು.
ಅವಳೆಂದರೆ ಜೀವ, ನಿರ್ಜೀವಗಳಿಗೆ ಉಸಿರು, ಹೆಸರು ಕೊಟ್ಟು ಮೌನಿಯಾಗಿ ಇರುವವಳು ಹೊಸ್ತಿನಲ್ಲಿ. ಎಲ್ಲವನ್ನೂ ಬರಮಾಡಿಕೊಳ್ಳುತ್ತಾ ಮತ್ತೆ ಮತ್ತೆ ಲೋಕದ ವಿಸ್ಮಯಗಳಿಗೆ ಚಿತ್ರರೂಪವ ಕೊಟ್ಟು ಕಲಾದೇವಿಯಾಗಿ ಕಾಮನಬಿಲ್ಲನಲಿ ಉಳಿಯುತ್ತಾ ಮತ್ತೆ ಮಳೆಯಾಗಿ ಧರೆಯ ಒಡಲಿನಲ್ಲಿ ಎಲ್ಲವನ್ನೂ ಸಹಿಸಿಕೊಂಡು ಹರಿಯುತ್ತಾ ತನ್ನಲ್ಲಿ ತಾನಾಗಿ ಉಳಿದು,
ಕೊನೆಯಲ್ಲಿ ನಗುವವಳು ಕಡಲಿನ ಅಲೆಗಳಲಿ.
ಏನೆಲ್ಲಾ ಅವಳು ಅಬ್ಬಾ, ಹೃದಯದಲ್ಲಿ ಸಾಕಷ್ಟು ಸಂಕಟಗಳು ಅವಮಾನ ನೋವು ಅತೃಪ್ತಿ ಇದ್ದರೂ ಸಹ ನಗುನಗುತ್ತಾ ಲಾಲಿ ಹಾಡು ಹಾಡುತ್ತಾ ಮನೆಯ ಮನದ ಒಡಲಿನ ಮಡಿಲನ್ನು ಜತೆಗೆ ಜಗದ ಜೋಳಿಗೆಯನ್ನು ತೂಗುವವಳು ತಾಳ್ಮೆಯಿಂದ. ಯಾವ ಸುಖವಿಲ್ಲದೇಯೋ ಬದುಕುವ ಅವಳು ಕೇವಲ ನಮ್ಮ ಸಲುವಾಗಿ, ನಮ್ಮ ಸುಖಕ್ಕಾಗಿ ಇರುವವಳು.
ಅವಳನ್ನು ಕೇವಲ ಒಂದೇ ದೃಷ್ಟಿಯಿಂದ ನೋಡಿದಾಗ ಅವಳ ಎತ್ತರ ಮತ್ತು ಆಳ ನಮಗೆ ಅರಿವಿಗೆ ಬರುವುದಿಲ್ಲ.ಅವಳನ್ನು ಕಂಡುಕೊಳ್ಳುವ ಕ್ರಮ ಬದಲಾದಾಗ ಮಾತ್ರ ಅವಳ ದರ್ಶನ ನಮ್ಮಲ್ಲಿರುವ ಅಪೂರ್ಣ ಭಾವ ಬದಲಾಗಿ ನಮ್ಮಲ್ಲಿ ಪೂರ್ಣತೆ ಕಂಡುಕೊಂಡ ಸಂಪೂರ್ಣತೆಯಲ್ಲಿ ಬದುಕುತ್ತಿರುವ ಅವಳನ್ನು ,ಜಗದ ಹಸಿವಿಗೆ ಕೈತುತ್ತು ನೀಡಿ ಅನ್ನಪೂರ್ಣೆಯಾಗಿ ಕಾಣುವವಳು.ಅವಳು ಇಲ್ಲದೇ ಜಗವಿಲ್ಲ. ಹೀಗಾಗಿ ಅವಳೆಂದರೆ ಅವಳು ಮಾತ್ರ.