-
ಕಲಾ ಚಿದಾನಂದ, ಮುಂಬೈ
response@134.209.153.225
kalabk12345@gmail.com
ನಿದ್ರೆ ಎಂಬುದು ವರವೋ ಶಾಪವೋ ಅರಿಯದು. ಎಷ್ಟೋ ಬಾರಿ ನಮಗರಿವಿಲ್ಲದೆಯೇ ಒಲಿದುಬಿಡುತ್ತದೆ. ಕೆಲವೊಮ್ಮೆ ಕಷ್ಟಪಟ್ಟು ಒಲಿಸಿಕೊಳ್ಳಬೇಕು. ಮಾತ್ರೆಗಳಿಂದ ಒಲಿಸಿಕೊಳ್ಳುವುದು ಬೇರೆಯ ವಿಷಯ.
ಆ ದಿನ ವಿಶ್ವವಿದ್ಯಾಲಯದ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದೆ. ಗೆಳತಿಯೂ ಜತೆಯಲ್ಲಿದ್ದಳು. ಪ್ಲಾಟ್ ಫಾರ್ಮ್ ನಲ್ಲಿ ನಿಂತಾಗಲೇ ಆಕಳಿಕೆ, ತೂಕಡಿಕೆ ನಿದ್ದೆಯ ಮುನ್ಸೂಚನೆ ನೀಡುತ್ತಿತ್ತು. ಮೊದಲನೇ ದಿನ ರಾತ್ರಿ ಎರಡು ತಾಸು ಮಾತ್ರ ನಿದ್ರೆಯಾಗಿತ್ತು. ಟ್ರೈನ್ ಹತ್ತಿದ ಕೂಡಲೇ ಹೇಗಾದರೂ ಕುಳಿತುಕೊಳ್ಳಲು ಜಾಗ ಮಾಡಿ ಆರಾಮಾಗಿ ನಿದ್ದೆ ಮಾಡಬೇಕು ಎಂದು ಎಣಿಸಿ ಟ್ರೈನ್ ಹತ್ತಿದೆ. ಹೇಗೋ ಪ್ರಯತ್ನಿಸಿ ಒಂದು ಜಾಗ ಮಾಡಿಕೊಂಡು ಆಸೀನಳಾದೆ. ನಮ್ಮ ಮನೆಗೆ ರೈಲಿನಲ್ಲಿ ಒಂದು ಗಂಟೆಯ ಪ್ರಯಾಣ. ಕಣ್ಣು ಮುಚ್ಚಿಕೊಂಡು ಕುಳಿತ ಕ್ಷಣದಲ್ಲಿ ಒಂದೊಂದೇ ನೆನಪುಗಳ, ವಿಚಾರಗಳ ಸುರುಳಿ ಬಿಚ್ಚಿಕೊಳ್ಳಲು ಪ್ರಾರಂಭವಾಯಿತು. ನನ್ನ ಎದುರಿಗಿರುವ ಎಲ್ಲ ಮಹಿಳೆಯರು ಧ್ಯಾನಕ್ಕೆ ಕುಳಿತವರಂತಿದ್ದರು. ಒಬ್ಬಳಂತೂ ಸೀಟಿಗೆ ಮೇಲ್ಮುಖವಾಗಿ ತಲೆ ವಾಲಿಸಿ ದೊಡ್ಡದಾಗಿ ಬಾಯಗಲಿಸಿ ನಿದ್ರಾ ಲೋಕಕ್ಕೆ ಹೋಗಿದ್ದಳು. ಜನದಟ್ಟಣೆ ಆಚೆ ಈಚೆ ಚಲಿಸುವಾಗ ಅವಳನ್ನು ಮುಟ್ಟಿ ತಟ್ಟಿ ಹೋಗುತ್ತಿತ್ತು. ಅದಾವುದೂ ಅವಳ ನೆಮ್ಮದಿಯ ನಿದ್ರೆಗೆ ಭಂಗ ತರುವಂತಿರಲಿಲ್ಲ. ಬಾಯೊಂದು ಮುಚ್ಚಿದ್ದರೆ ಆಹಾ ಅವಳೆಷ್ಟು ಸುಖಿ! ಎನಿಸಿತ್ತು. ನನ್ನ ಪಕ್ಕಕ್ಕೆ ಕುಳಿತವಳು ನೆಟ್ಟಗೆ ಕುಳಿತು ಹಿಡಿತ ಕಾಪಾಡಿಕೊಳ್ಳಲು ಕೈಯಲ್ಲಿ ಇರುವ ಬ್ಯಾಗನ್ನು ಆಲಂಗಿಸಿ ಮಲಗಿದ್ದಳು. ಒಂದು ಬಗೆಯ ಸ್ವರ ಅವಳ ಉಸಿರಿನಲ್ಲಿ ಇತ್ತು. ಅವಳು ಇಳಿಯುವ ಸ್ಟೇಶನ್ ಬರುತ್ತಿರುವಾಗಲೇ ಅಲಾರಾಂ ಕೊಟ್ಟಂತೆ ಥಟ್ಟನೆ ಎದ್ದು ಹೊರಟೇ ಬಿಟ್ಟಳು. ಮುಂದಿನ ಹಂತದ ಮನೆಯ ಕೆಲಸಕ್ಕೆ ಅಣಿಯಾಗಿ ನಿಂತವಳಂತೆ ಕಾಣುತ್ತಿದ್ದಳು. ನಿದ್ರೆಯಲ್ಲಿರುವ ಅವಳಿಗೆ ಅವಳ ಸ್ಟೇಷನ್ ಬಂದದ್ದು ಹೇಗೆ ತಿಳಿಯಿತೋ.. ಅವರನ್ನೆಲ್ಲ ನೋಡುತ್ತಲೇ ನನ್ನನ್ನು ಆವರಿಸಿದ ಮಂಪರು ಇಳಿದುಬಿಟ್ಟಿತ್ತು. ಪುಸ್ತಕ ತೆರೆದು ಸ್ವಲ್ಪವೇ ಓದುವಷ್ಟರಲ್ಲಿ ನನ್ನ ಇಳಿಯುವ ಸ್ಟೇಷನ್ ಬಂದಿತ್ತು. ಮನೆಯ ಕೆಲಸಗಳೆಲ್ಲಾ ನೆನಪಾದವು. ಮನೆ ಸೇರಿ ದಣಿವಾರಿಸಿ ಮುಂದಿನ ಕೆಲಸಕ್ಕೆ ಅಣಿಯಾಗುವ ಮುನ್ನ ಒಂದು ಐದು ನಿಮಿಷ ದಿನಪತ್ರಿಕೆಯ ಮೇಲೆ ಕಣ್ಣಾಡಿಸಲು ಕುಳಿತೆ. ಮತ್ತದೇ ಆಕಳಿಕೆ ಬೆನ್ನು ಹತ್ತಿತು. ಎಲಾ ಇದರ! ಟ್ರೈನಿನಲ್ಲಿ ಕರೆದರೂ ಬರದೇ ಹೋದದ್ದು ಮತ್ಯಾಕೆ ಬಂತು? ಇರಲಿ ಈಗಲಾದರೂ ಒಂದರ್ಧ ಗಂಟೆ ಮಲಗುವ ಎಂದು ಹಾಸಿಗೆಯನ್ನೂ ಹಾಸದೆ ಸೋಫಾದ ಮೇಲೆ ಅಡ್ಡವಾದೆ. ಕ್ಷಣಾರ್ಧದಲ್ಲೇ ಡಿಂಗ್ ಡಾಂಗ್ ಡೋರ್ ಬೆಲ್. ಉದಾಸೀನವಾಗಿ ಬಾಗಿಲು ತೆರೆದೆ. ‘ಕ್ಷಮೆ ಇರಲಿ ಮೇಡಂ ಪಕ್ಕದ ಮನೆಗೆ ಹೋಗಬೇಕಿತ್ತು ತಪ್ಪಿ ಇಲ್ಲಿ ಬಂದುಬಿಟ್ಟೆ’ ಎಂಬ ಡೆಲಿವರಿ ಬಾಯ್ ಧ್ವನಿ. ಮತ್ತೊಮ್ಮೆ ನಿದಿರಾದೇವಿ ಮಾಯವಾದಳು.
ನಿದ್ರೆ ಎಂಬುದು ಕರೆಯದೆ ಬರುವ ಅತಿಥಿ. ನಾವಂದುಕೊಂಡಾಗ ಬರುವಂತದ್ದಲ್ಲ. ಬಂದಹಾಗೆ ಸ್ವೀಕರಿಸುವಂತದ್ದಲ್ಲ. ಕೆಲವೊಬ್ಬರು ಬಹಳ ವ್ಯವಸ್ಥಿತವಾಗಿ ನಿದ್ರಿಸುತ್ತಾರೆ. ಆ ಕಲೆ ಎಲ್ಲರಿಗೂ ಇರುವುದಿಲ್ಲ. ಕೆಲವೊಬ್ಬರು ಮಲಗಿದ ಮರು ನಿಮಿಷದಲ್ಲೇ ಬೇರೆ ಬೇರೆ ಧ್ವನಿ ಹೊರಡಿಸಲು ಪ್ರಾರಂಭಿಸುತ್ತಾರೆ. ಅದರ ಧ್ವನಿ ಏರುತ್ತಾ ಪಕ್ಕದವರ ನಿದ್ದೆಯನ್ನು ಹಾಳು ಮಾಡುವ ಹಂತ ತಲುಪಿಬಿಡುತ್ತದೆ. ಯಾರೋ ಹೇಳಿದ್ದರು ಅಂಥವರನ್ನು ಒಮ್ಮೆ ಮುಟ್ಟಿ ಸ್ವಲ್ಪ ಅಲ್ಲಾಡಿಸಿದರೆ ಅವರು ನಿಲ್ಲಿಸಿಬಿಡುತ್ತಾರೆ ಎಂದು. ಬಸ್ಸಿನಲ್ಲಿ ಊರಿಗೆ ಹೋಗುವಾಗ ಮಲಗುವ ಸೀಟಿನಲ್ಲಿ ಪ್ರಯಾಣಿಸುವುದೇನೋ ಹೌದು. ಆದರೆ ಲೈಟ್ ಆರಿಸಿ ಇನ್ನೇನು ನಿಶ್ಚಿಂತೆಯಿಂದ ಮಲಗಿ ಬಿಡುವ ಅಂದುಕೊಂಡರೆ ಒಂದೊಂದು ದಿಕ್ಕಿನಿಂದ ಒಂದೊಂದು ಸ್ವರದ ಗೊರಕೆ.
ಅಕ್ಕನ ಮನೆಗೆ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಬಹಳಷ್ಟು ಜನ ನೆಂಟರು ಇದ್ದರು. ಅಕ್ಕನ ಮನೆ ಮೂರು ಅಂತಸ್ತಿನದು. ರಾತ್ರಿ ಮಲಗುವಾಗ ಅಕ್ಕ ಯಾರೆಲ್ಲಾ ಶಬ್ದ ಹೊರಡಿಸಿ ನಿದ್ದೆ ಮಾಡುವರು ಅವರನ್ನೆಲ್ಲ ಮೇಲಿನ ಅಂತಸ್ತಿನಲ್ಲಿ ಮಲಗಲು ಹೇಳಿದ್ದಳು. ಕೆಲವೊಮ್ಮೆ ಈ ತರಹದ ಉಪಾಯ ಹುಡುಕಬೇಕಾಗುತ್ತದೆ. ಬೆಳಗ್ಗೆ ಬೇಗನೆ ಎದ್ದ ಅಕ್ಕನಿಗೆ ಇವರೇನು ಗೊರಕೆಯ ಸ್ಪರ್ಧೆ ಏರ್ಪಡಿಸಿರುವರೋ ಎಂಬ ಸಂಶಯ ಬಂದಿತ್ತಂತೆ. ನಿದ್ದೆಯಿಂದೆದ್ದು ಎಲ್ಲರೂ ಕೆಳಗಿಳಿದು ಬರುವಾಗ ಸರಿಯಾಗಿ ನಿದ್ದೆ ಬರಲಿಲ್ಲವೆಂಬ ಮಾತೂ ಕೇಳಿಬರುತ್ತಿತ್ತು. ಆಂಗ್ಲ ಭಾಷೆಯಲ್ಲಿ ‘ಸೌಂಡ್ ಸ್ಲೀಪ್’ ಎನ್ನುವ ಚಂದದ ಪದವನ್ನು ಇದಕ್ಕೆ ಬಳಸಿಕೊಂಡಿದ್ದಾರೆ.
ನಿದ್ರೆ ಕೆಲವೊಮ್ಮೆ ನಮ್ಮನ್ನು ಸಂಕಟಕ್ಕೆ ಸಿಲುಕಿಸಿಬಿಡುತ್ತದೆ. ಮಿತ್ರರೊಬ್ಬರು ಹೇಳಿದ್ದರು ‘ಕಛೇರಿಯಲ್ಲಿ ಕೆಲವೊಮ್ಮೆ ಮೀಟಿಂಗ್ ನಡೆಯುತ್ತಿರುವಾಗ ನಾನು ಕಣ್ಣು ಬಿಟ್ಟುಕೊಂಡೇ ಮಲಗುತ್ತೇನೆ ಯಾರಿಗೂ ತಿಳಿಯುವುದಿಲ್ಲ ಆದರೆ ಇತ್ತೀಚೆಗೆ ಅಧಿಕಾರಿಗಳಿಗೆ ತಿಳಿಯಿತೋ ಏನೋ ನಡು ನಡುವೆ ಪ್ರಶ್ನೆಗಳನ್ನು ಕೇಳುತ್ತಾರೆ’ ಎಂದು. ಅರೆ ನಿದ್ರೆ ಎನ್ನುವ ಇನ್ನೊಂದು ಅವಸ್ಥೆಯ ಬಗ್ಗೆಯೂ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಕೆಲವೊಮ್ಮೆ ಅವರು ಗಣಕಯಂತ್ರದಲ್ಲಿ ತಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತಾರಂತೆ. ಆದರೆ ಯಾವುದೋ ಬಗೆಯಲ್ಲಿ ಅದೇ ಸಮಯದಲ್ಲಿ ನಿದ್ದೆಯನ್ನೂ ಮಾಡಿಕೊಳ್ಳುತ್ತಾರಂತೆ. ಈ ಸಮಯದಲ್ಲಿ ಒಮ್ಮೆ ಯಾರಿಗೋ ಕಳುಹಿಸಬೇಕಾದ ಇ-ಮೇಲ್ ಇನ್ಯಾರಿಗೋ ಹೋಗಿ ಅವಾಂತರವಾಗಿತ್ತಂತೆ. ಹಲವು ಬಾರಿ ನಾನು ಗಮನಿಸಿರುವೆ-ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿಯೇ ಜಾಗ ಹಿಡಿದು ಕುಳಿತ ಮಹನೀಯರು ಮುಖ್ಯ ಅತಿಥಿಗಳ ಭಾಷಣ ನಡೆಯುತ್ತಿರುವಾಗಲೇ ನಿದ್ದೆ ಹೋಗುತ್ತಾರೆ. ಅವರು ಮಗ್ನರಾಗಿ ಆಲಿಸುತ್ತಿರಬಹುದೆಂದೂ ತಿಳಿಯಬಹುದು. ಆದರೆ ಅವರ ತಲೆ ಪಕ್ಕದವರ ಬುಜಕ್ಕೆ ವಾಲಿದಾಗ ತಿಳಿಯಬೇಕು ಅವರ ನಿದ್ರಾವಸ್ಥೆ. ಸಭಿಕರು ಚಪ್ಪಾಳೆ ತಟ್ಟುವಾಗ ಒಮ್ಮೆ ಎಚ್ಚರವಾಗಿ ತಾವೂ ಒಂದು ಬಾರಿ ಚಪ್ಪಾಳೆ ಮಾಡಿ ಮತ್ತೆ ಮಲಗಿ ಬಿಡುತ್ತಾರೆ.
ಮಹಿಳೆಯರಿಗೆ ಕೆಲವೊಮ್ಮೆ ನಿದ್ರಾದೇವಿಯ ಶಾಪ ತಗಲಿಬಿಡುತ್ತದೆ. ಒಲೆಯ ಮೇಲೆ ಹಾಲು ಅಥವಾ ಸಾಂಬಾರನ್ನು ಕಾಯಿಸಲು ಇಟ್ಟು, ಇನ್ನೂ ಸ್ವಲ್ಪ ಸಮಯ ಬೇಕಲ್ಲ ಎಂದುಕೊಂಡು ಮಲಗಿಬಿಡುತ್ತಾರೆ. ಅದು ಕುದಿದು ಹೊತ್ತಿ, ಹೊಗೆಯ ವಾಸನೆ ಮೂಗಿಗೆ ಬಡಿದಾಗ ‘ಈ ಹಾಳು ನಿದ್ದೆ’ ಎಂದು ಮರುಗುವುದು ಉಂಟು. ನಾನೊಮ್ಮೆ ನಮ್ಮ ಕೆಳಗಿನ ಮನೆಯವರನ್ನು ಹೋಗಿ ಬೆಲ್ ಮಾಡಿ ಎಬ್ಬಿಸಿದ್ದು ನೆನಪಾಯಿತು.
ಮಂಪರು ನಿದ್ದೆ ಎಂಬುದು ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗುತ್ತದೆ. ವಾಹನ ಚಲಾಯಿಸುತ್ತಿರುವಾಗಲೇ ಚಾಲಕನನ್ನು ಆವರಿಸುವ ಇದು ಒಂದು ಸೆಕೆಂಡಿನಲ್ಲಿ ಬೇರೆ ಲೋಕಕ್ಕೇ ಕೊಂಡು ಹೋದ ಎಷ್ಟೋ ಘಟನೆಗಳಾಗಿವೆ.
ಸ್ನೇಹಿತೆಯೊಬ್ಬಳಿಗೆ ಜೋರಾಗಿ ದೂರದರ್ಶನದ ಕಾರ್ಯಕ್ರಮಗಳ ಶಬ್ದ ಕೇಳುತ್ತಿದ್ದರಷ್ಟೇ ನಿದ್ದೆ ಹತ್ತುವುದು. ಅವಳು ನಿದ್ದೆ ಹೋದ ಮೇಲೆ ಅವಳ ಗಂಡ ಟಿ.ವಿ ಆರಿಸಿ ಮಲಗಬೇಕು. ಹೀಗೂ ಉಂಟೆ? ಈಗೀಗ ಮೊಬೈಲಿನಲ್ಲಿ ಒಂದರ್ಧ ಗಂಟೆ ಕೆಲಸ ಮಾಡಿ ಮಲಗುವಳು. ಮೊಬೈಲ್ ಎನ್ನುವುದು ಇತ್ತೀಚೆಗೆ ಕೆಲವರಿಗೆ ನಿದ್ದೆ ಬರಿಸಿದರೆ, ಇನ್ನು ಕೆಲವರಿಗೆ ನಿದ್ದೆಯನ್ನು ಓಡಿಸುವ ಸಾಧನ ಎಂದು ಗೊತ್ತಾಯಿತು. ಪುಸ್ತಕಗಳನ್ನು ಓದುತ್ತ ನಿದ್ದೆ ಹೋಗುವವರು ಈಗ ತೀರಾ ವಿರಳ.
ನಿದ್ರಾವಸ್ಥೆಯಲ್ಲಿ ಕೆಲವೊಮ್ಮೆ ಅಪಸ್ವರಗಳಲ್ಲಿ ಕೂಗುವವರನ್ನೂ, ಎದ್ದು ತಿರುಗಾಡಿ ಮತ್ತೆ ಅದೇ ಸ್ಥಿತಿ ತಲುಪುವವರನ್ನೂ ಕಂಡಿದ್ದೇನೆ. ಕೆಲವರಿಗೆ ಹಗಲಿನಲ್ಲಿ ನಡೆದ ಘಟನೆಗಳು ಕನಸಿನಲ್ಲೂ ಬಂದು ಆನಂದವನ್ನೋ, ದುಃಖವನ್ನೋ ಕೊಡುತ್ತದೆ. ಮಲಗಿದಾಗ, ಮುಗುಳು ನಗುವ ಪುಟ್ಟ ಕಂದನನ್ನು ಬಿಟ್ಟರೆ, ನಗುವವರನ್ನು ನಾನಂತೂ ನೋಡಲಿಲ್ಲ. ಸುಪ್ತ ಸ್ಥಿತಿಯಲ್ಲಿ ಎಷ್ಟೋ ಜನರು ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವುದನ್ನು ಕೇಳಿದ್ದೇನೆ. ಅವರು ಆ ಸ್ಥಿತಿಯಲ್ಲಿ ಎಚ್ಚರವಾಗಿ, ಆ ವಿಷಯವನ್ನು ಬರೆದಿಟ್ಟುಕೊಂಡು ಮತ್ತೆ ಮಲಗುವರಂತೆ. ಯಾಕೆಂದರೆ ಬೆಳಗ್ಗೆ ಆಗುವಾಗ ಅದು ಮರೆತು ಹೋಗುವುದೆಂದು.
ಏನೇ ಹೇಳಿ.. ರಾತ್ರಿ ವ್ಯವಸ್ಥಿತ ರೀತಿಯಲ್ಲಿ ಎಲ್ಲೂ ಭಂಗ ಬರದ ರೀತಿಯಲ್ಲಿ ನಿದ್ರಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ಬೇಗ ಮಲಗಿ ಬೇಗನೇ ಏಳುವ ಕ್ರಮದಿಂದ ನಮ್ಮ ದಿನನಿತ್ಯದ ಎಲ್ಲ ಕೆಲಸಗಳೂ ಸರಾಗವಾಗಿ ನಡೆಯುವುದರಲ್ಲಿ ಸಂದೇಹವೇ ಇಲ್ಲ. ನಿದ್ರೆಯ ಗಮ್ಮತ್ತು ಇರುವುದು ಅಲ್ಲಿಯೇ.