Saturday, November 27, 2021

ಹಂಡೆ ಪುರಾಣ…

Follow Us

ಹೊಸ ವಸ್ತುಗಳ ಭರಾಟೆಯಲ್ಲಿ ಹಳೆಯವು ತಮ್ಮ ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ ನಿಮಿಷಾರ್ಧದಲ್ಲಿ ಬಿಸಿನೀರನ್ನು ಕೊಡುವ ಗೀಸರಿನಿಂದಲೂ ಶಾರದಮ್ಮನ ಹಂಡೆ ವ್ಯಾಮೋಹ ಕಮ್ಮಿ ಮಾಡಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಮನೆ ಬದಲಿಸುವ ತಯಾರಿ ನಡೆಸಿದ್ದಾರೆ. ಅದೇ ಹಂಡೆಯೊಂದಿಗೆ!
♦ ಪ್ರಭಾ ಭಟ್ ಹೊಸ್ಮನೆ
response@134.209.153.225
newsics.com@gmail.com

ಲೆನಾಡಿನಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಹಂಡೆಯಲ್ಲಿ ಕಾಯಿಸಿದ ಬಿಸಿಬಿಸಿ ನೀರಿನ ಸ್ನಾನದ ಮಜವನ್ನು ಗಂಟೆಗಟ್ಟಲೆ ಆನಂದಿಸುವುದೇ ಒಂದು ಸ್ವಾರಸ್ಯಕರ ಸಂಗತಿ. ಕರೆಂಟ್ ಗೀಸರ್, ಗ್ಯಾಸ್ ಗೀಸರ್ , ಸೋಲಾರ್ ಇನ್ನಿತರ ಬದಲಿ ವ್ಯವಸ್ಥೆಗಳು ಹಂಡೆ ನೀರಿನ ನೆನಪನ್ನೇ ಅಳಿಸಿ ಹಾಕಿದಂತಿದೆ. ಇಂದು ಪೇಟೆಗಳಲ್ಲಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಹಂಡೆನೀರಿನ ವ್ಯವಸ್ಥೆ ದಿನೇ ದಿನೇ ಮಾಯವಾಗುತ್ತಿದೆ. ಇಂದಿನ ಕೆಲವು ಮಕ್ಕಳಿಗಂತೂ ಹಂಡೆ ಎಂದರೇನು ಎಂದೇ ಗೊತ್ತಿರಲಿಕ್ಕಿಲ್ಲ! ನಮ್ಮ ಬಾಲ್ಯದ ದಿನಗಳಲ್ಲಿ ಅನಿಯಮಿತ ಬಿಸಿನೀರನ್ನು ನಮಗೆ ನೀಡುತ್ತಿದ್ದ ಹಂಡೆಗಳು ನಿಜಕ್ಕೂ ಸ್ಮರಣೀಯ. ನೀರಿನ ಅಭಾವದಿಂದಲೋ ಅಥವಾ ಗೀಸರ್ ಆನ್ ಮಾಡಿದೊಡನೆ ಗರಗರ ತಿರುಗುವ ಮೀಟರ್ ಬೋರ್ಡಿನ ಭಯಕ್ಕೋ ಬಕೆಟ್ ಲೆಕ್ಕದಲ್ಲಿ ನೀರನ್ನು ಬಳಸುವ ನಮಗೆ ಅಪರೂಪಕ್ಕೆ ಹಳ್ಳಿಮನೆಗೆ ಹೋದಾಗ ಸಿಗುವ ಹಂಡೆನೀರು ಈಗಲೂ ಬೆಲೆ ಕಟ್ಟಲಾಗದಷ್ಟು ಖುಷಿ ಕೊಡುತ್ತದೆಂದರೆ ಅತಿಶಯೋಕ್ತಿ ಎನಿಸಬಹುದು.

ಹಂಡೆಯ ವಿಷಯ ಬಂದಾಗಲೆಲ್ಲ ನೆನಪಿಗೆ ಬರುವುದು ಶಾರದಮ್ಮ. ಅವರಿಗೋ ‘ಹಂಡೆ’ ಎಂದರೆ ಇನ್ನಿಲ್ಲದ ಪ್ರೀತಿ. ಕೇವಲ ಪ್ರೀತಿಯಷ್ಟೇ ಅಲ್ಲದೆ ಒಂದು ಬಗೆಯ ಬಾಂಧವ್ಯ ಎನ್ನಬಹುದು. “ನನಗೆ ನಮ್ಮನೆ ಹಂಡೆ ಬರಿಯ ವಸ್ತುವಲ್ಲ, ಅದೊಂದು ಭಾವನೆ” ಎಂದು ನಾಲ್ಕು ಜನರ ಬಳಿ ಹೇಳಿದ್ದೂ ಉಂಟು. ದಿನಕ್ಕೊಮ್ಮೆ ಅದನ್ನು ತಿಕ್ಕಿ ತೊಳೆದು ಫಳಫಳಿಸುವಂತೆ ಮಾಡದಿದ್ದರೆ ಮನಸ್ಸಿಗೊಂದು ಬಗೆಯ ತಳಮಳ. ತಾವು ತವರಿಗೆ ಹೋಗುವಾಗಲೂ ಪತಿರಾಯನಿಗೆ ತಾಕೀತು ಮಾಡಿಯೇ ಹೋಗುತ್ತಿದ್ದುದು ನಮಗೆಲ್ಲ ಮಜದ ಸಂಗತಿ. “ಹೋಯ್, ನಾನು ಬರುವ ವರೆಗೆ ಹಂಡೆಯನ್ನು ಗಬ್ಬೆಬ್ಬಿಸಬೇಡಿ, ದಿನವೂ ತಿಕ್ಕಿತಿಕ್ಕಿ ತೊಳಿಯಿರಿ. ಬೂದಿಯನ್ನೋ ಅಥವಾ ಪೀತಾಂಬರಿ ಕಪಾಟಿನಲ್ಲಿರತ್ತೆ ಹಾಕಿ ತೊಳೆಯಿರಿ ಅರ್ಥವಾಯಿತೇ? ” ಎಂದು ಆವಾಜ್ ಹಾಕಿಯೇ ಹೋಗುತ್ತಿದ್ದರು. ಅವರಿಗೆ ಹಂಡೆ ಆಗಾಗ ಕನಸಿನಲ್ಲಿ ಬರುತ್ತಿತ್ತು. ಹಂಡೆಯ ಕನಸು ಬಿದ್ದಾಗಲೆಲ್ಲ ಹಂಡೆಯ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತಿತ್ತು. ಇಂತಹದೇ ಒಂದು ಬೆಳಗಿನ ಜಾವದ ಕನಸಿನಲ್ಲಿ ಕಳ್ಳನೊಬ್ಬ ಬಂದು ಅವರ ಹಂಡೆಯನ್ನು ಕದಿಯುತ್ತಿರುವ ಕನಸನ್ನು ಕಂಡು ’ಅಯ್ಯೋ! ನನ್ನ ಹಂಡೆ ಕದ್ದುಕೊಂಡು ಹೋದರು’ ಎಂದು ಗಟ್ಟಿಯಾಗಿ ಕೂಗಿ ಕೊಂಡಿದ್ದು ಅಕ್ಕಪಕ್ಕದ ಮನೆಯವರ ನಿದ್ದೆ ಕೆಡಿಸಿತ್ತು. ಅವತ್ತೇ ದೊಡ್ಡದಾಗಿ ಸದ್ದು ಮಾಡುವ, ಎತ್ತಿನ ಕೊರಳಿಗೆ ಕಟ್ಟುವ ಗಜ್ಜೆಯ ಸರವನ್ನು ತಂದು ಹಂಡೆಯ ಕುತ್ತಿಗೆಗೆ ಕಟ್ಟಿದ್ದರು. ಹಂಡೆ ಹಂದಾಡಿದರೆ ಈ ಸರ ಶಬ್ದ ಮಾಡುತ್ತಿತ್ತು.

ಕೊನೆಗೊಂದು ದಿನ ಶಾರದಮ್ಮನಿಂದ ಅವರ ಹಂಡೆ ದೂರವಾಗುವಂತಹ ದುರ್ವಿಧಿ ಸಂಭವಿಸಿತೆಂದೇ ಅಂದುಕೊಳ್ಳಬೇಕು. ಅವರು ತಮ್ಮ ಹಳ್ಳಿಯ ಮನೆಯನ್ನು ಬಿಟ್ಟು ಮಗನೊಂದಿಗೆ ಪೇಟೆಯಲ್ಲಿ ನೆಲೆಸಬೇಕಾದಂತಹ ಸ್ಥಿತಿಯೊದಗಿತು. ವಯಸ್ಸಾಗುತ್ತಿದೆ ನೀವಿನ್ನು ಈ ಹಳ್ಳಿಯಲ್ಲಿ ಒಂಟಿ ಮನೆಯಲ್ಲಿರುವುದು ಬೇಡ, ನನ್ನೊಂದಿಗೆ ಸುಮ್ಮನೆ ಹೊರಡಿ ಎಂದು ಮಗ ತಾಕೀತು ಮಾಡಿದ್ದ. ಮಗನ ತಾಕೀತಿಗೆ ಮಣಿಯದೇ ವಿಧಿಯಿಲ್ಲದಾಯಿತು. ಮಗ ನಮ್ಮನ್ನು ಕಡೆಗಾಲದಲ್ಲಿ ತನ್ನೊಂದಿಗೆ ಇರಲು ಒತ್ತಾಯಿಸಿದ ಎಂಬ ಖುಷಿ – ಹೆಮ್ಮೆ ಒಂದೆಡೆಯಾದರೆ, ನನ್ನದೆಂದುಕೊಂಡ ಆಸ್ತಿ (ಒಂದಿಷ್ಟು ಸ್ಟೀಲ್ ಪಾತ್ರೆಗಳು, ಒಂದಿಷ್ಟು ಹಳೆಯದಾದ ಹರಗಣ)ಯನ್ನು ಬಿಟ್ಟು ಹೋಗುವುದಾದರೂ ಹೇಗೆ? ಎಂಬ ತಳಮಳ ಇನ್ನೊಂದೆಡೆ. ಎಲ್ಲವನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಂಡವರಿಗೆ ಕಡೆಯದಾಗಿ ಬಿಡದೆ ಕಾಡಿದ ಪ್ರಶ್ನೆ ‘ಹಂಡೆಯನ್ನೇನು ಮಾಡುವುದು?’ ಇನ್ನಿಲ್ಲದ ಧೈರ್ಯವನ್ನು ತಂದುಕೊಂಡು ಮಗನಲ್ಲಿ ಕೇಳಿಯೇಬಿಟ್ಟರು. ಮಗನಿಂದ ಕ್ಷಣಾರ್ಧದಲ್ಲಿ ಬೈಗುಳದ ಸುರಿಮಳೆಯೂ ಬಂದಾಗಿತ್ತು. “ಪೇಟೆ ಮನೆಯಲ್ಲಿ ಗೀಸರ್ ಇರ್ತದೆ, ಇದನ್ನೇನು ಮಂಡೆಯ ಮೇಲೆ ಇಟ್ಟುಕೊಳ್ಳೋದಾ? ” ಎಂದು ಬೈಸಿಕೊಂಡೂ ಆಯಿತು. ಶಾರದಮ್ಮ ಸಾಮಾನ್ಯಕ್ಕೆ ಬಗ್ಗುವವರಲ್ಲ. “ನಿನ್ನನ್ನು ಮಗುವಿದ್ದಾಗಿಂದ ನೋಡಿದ ಹಂಡೆಯಿದು. ನಾವು ಕಂಡ ಕಷ್ಟಗಳಿಗೆಲ್ಲಾ ಸಾಕ್ಷಿಯಂತಿದ್ದ ಇದನ್ನು ಬಿಟ್ಟಾದರೂ ಹೇಗೆ ಬರಲಿ, ಈಗಲೂ ಗಟ್ಟಿ ಮುಟ್ಟಾಗಿದೆ ಹಂಡೆ, ಬೇಡದಿದ್ದರೆ ಮಾರಬಹುದು” ಎಂಬ ಬಿಟ್ಟಿ ಸಲಹೆಯನ್ನೂ ಕೊಟ್ಟು ಇಮೋಶನಲ್ ಬ್ಲ್ಯಾಕ್ ಮೇಲ್ ಮಾಡಿ ಬ್ಲ್ಯಾಕ್ (ಕಪ್ಪುಗಟ್ಟಿದ) ಹಂಡೆಯನ್ನು ತಮ್ಮೊಂದಿಗೆ ಕೊಂಡೊಯ್ಯುವಲ್ಲಿ ಸಫಲರಾದರು. ಮಣ್ಣಲ್ಲಿ ಹುಗಿದಿದ್ದ ಹಂಡೆಯನ್ನು ಹೊರತೆಗೆದು ಸ್ವಚ್ಛಗೊಳಿಸಿಯೂ ಆಯಿತು. ಒಂದು ಲಾರಿ ಸಾಮಾನಿನೊಂದಿಗೆ ಹಂಡೆಯೂ ಪೇಟೆ ಮನೆಯನ್ನು ಸೇರಿಕೊಂಡಿತು. ನಾನೂ ಇವರೊಂದಿಗೆ ಪೇಟೆ ಸೇರಿದೆನೆಂಬ ಅಹಂನಲ್ಲಿ ಬೆಚ್ಚಗೆ ಅಟ್ಟ ಹತ್ತಿ ಕುಳಿತುಬಿಟ್ಟಿತು ಶಾರದಮ್ಮನ ಹಂಡೆ. ಅಪ್ಪಿ ತಪ್ಪಿ ಕಣ್ಣಿಗೆ ಬಿದ್ದ ಹಂಡೆಯನ್ನು ನೋಡಿ ಕೆಲವರು ಲೇವಡಿ ಮಾಡಿದ್ದೂ ಉಂಟು. ಅದ್ಯಾವುದಕ್ಕೂ ಅಂಜದ ಶಾರದಮ್ಮ ಹಂಡೆಯೊಂದಿಗೆ ಎರಡು ಮನೆಯನ್ನು ಬದಲಿಸಿದರು!

ವರುಷಗಳು ಕಳೆದಂತೆ ಮನುಷ್ಯನ ಅವಶ್ಯಕತೆಗಳೂ ಹೆಚ್ಚುತ್ತಿರುತ್ತವೆ. ಅನೇಕ ಹೊಸ ವಸ್ತಗಳ ಒಡನಾಟಕ್ಕೂ ಬರುತ್ತಿರುತ್ತವೆ. ಹೊಸ ವಸ್ತುಗಳ ಭರಾಟೆಯಲ್ಲಿ ಹಳೆಯವು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಆದರೆ ನಿಮಿಷಾರ್ಧದಲ್ಲಿ ಬಿಸಿನೀರನ್ನು ಕೊಡುವ ಗೀಸರಿನಿಂದಲೂ ಶಾರದಮ್ಮನ ಹಂಡೆ ವ್ಯಾಮೋಹವನ್ನು ಕಮ್ಮಿ ಮಾಡಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಮನೆ ಬದಲಿಸುವ ತಯಾರಿ ನಡೆಸಿದ್ದಾರೆ. ಅದೇ ಹಂಡೆಯೊಂದಿಗೆ!
ಕೆಲವೊಮ್ಮೆ ಕೆಲವು ವಸ್ತುಗಳು ಕೇವಲ ವಸ್ತುಗಳಾಗಿರದೆ ಭಾವನೆಯಾಗಿ ಬಿಡುತ್ತದೆ. ಅವುಗಳೊಂದಿಗೆ ನಮಗೇ ತಿಳಿಯದಂತೆ ಬೆಸೆದುಕೊಂಡಿರುತ್ತೇವೆ. ಎಂದೋ ಕಳೆದುಕೊಂಡ, ಅಥವಾ ಮರೆತೇಬಿಟ್ಟಿದ್ದ ಮೊದಮೊದಲು ಬಳಸಿದ ಸ್ಲೇಟು, ಪೆನ್ನು, ಬ್ಯಾಗ್, ಡ್ರೆಸ್ ಮೊದಲಾದ ವಸ್ತುಗಳನ್ನು ಕಂಡಾಗ ಒಂದು ಆಪ್ತಭಾವ ಹುಟ್ಟಿ ಮನಸ್ಸು ಮುದಗೊಳ್ಳುತ್ತದೆ.

ಮತ್ತಷ್ಟು ಸುದ್ದಿಗಳು

Latest News

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...
- Advertisement -
error: Content is protected !!