Friday, March 31, 2023

ರೇಗಿಸುವ ಹರೆಯ

Follow Us

* ಸುನೀತ ಕುಶಾಲನಗರ
response@134.209.153.225

ರೆಯ ಹದಿನಾರು ಆಯಿತೆಂದರೆ ಚುಡಾಯಿಸುವುದು, ಲೈನ್ ಹೊಡೆಸಿಕೊಳ್ಳುವುದು ಎಂದು ವಯಸ್ಸಿನ ಆಟ ಆರಂಭ. ಕಾಲಕ್ಕೆ ತಕ್ಕಂತೆ ಈ ಕೀಟಲೆ ಮಾಡುವ ಕ್ರಮದಲ್ಲೂ ದೊಡ್ಡ ಕ್ರಾಂತಿಯಾಗುತ್ತಿರುವುದನ್ನು ಗಮನಿಸಬಹುದು. ಯಾವುದೇ ವಿಚಾರಕ್ಕೆ ಬಂದಾಗ ನಾವು ಪಟ್ಟನೆ ಬಾಲ್ಯಕ್ಕೆ ಹೊರಳಿಕೊಳ್ಳುತ್ತೇವೆ ಅಥವಾ ತಾರುಣ್ಯದೆಡೆ ಮಗ್ಗಲು ಬದಲಿಸುತ್ತೇವೆ. ಏಕೆಂದರೆ ನಮ್ಮ ಬಾಲ್ಯ, ತಾರುಣ್ಯ, ಯೌವ್ವನ ಎಲ್ಲವೂ ನಮ್ಮ ಪಾಲಿಗೆ ಮಾನಸ ಸರೋವರ.
ಈ ಹಿಂದೆ ಚುಡಾಯಿಸುವಿಕೆ ಎಂಬುದು ಬಹಳ ಪ್ರಚಲಿತದಲ್ಲಿತ್ತು. ಅದು ಬಾಯಿ ಮಾತಿನ ಕೀಟಲೆಗಳಿಂದ ಆರೋಗ್ಯಕರವೂ ಆಗಿರುತ್ತಿತ್ತು. ಆದರೂ ಮನೆಯಿಂದ ಹೊರಗೆ ಹೋಗುವಾಗಲೆಲ್ಲಾ ಹೆಣ್ಣು ಮಕ್ಕಳು ತಲೆ ತಗ್ಗಿಸಿಯೇ ನಡೆಯುವುದನ್ನು ರೂಢಿಸಿಕೊಂಡಿದ್ದರು. ಏಕೆಂದರೆ ಹುಡುಗರ ಗುಂಪು ಏನಾದರೊಂದು ಕೀಟಲೆ ಮಾತು ಹೇಳಿ ರೇಗಿಸುವುದು ಮಾಮೂಲಿಯಾಗಿತ್ತು. ಹುಡುಗಿಯರು ಒಬ್ಬೊಬ್ಬರೆ ಹೋದರಂತೂ ಮುಗಿಯಿತು ಬಿಡಿ, ನೋಟದ ಪರಿಯೇನು, ಕಣ್ಣು ಹೊಡೆಯುವುದೇನು? ಆಗ ಕಣ್ಣು ಹೊಡೆಯುವುದೇ ಚುಡಾಯಿಸುವಿಕೆಯಲ್ಲಿ ಕ್ಯಾಪ್ಟನ್. ಹುಡುಗಿಯರಿಗೆ ಬಹಳ ಮುಜುಗರ, ಅವಮಾನ, ನಾಚಿಕೆ ತರಿಸುತ್ತಿದ್ದ ಸಂಗತಿಯದು. ಹೀಗಾಗಿ ಒಮ್ಮೆ ತಲೆಯೆತ್ತಿದರೆ ಸಾಕು ಅಚಾನಕ್ಕಾಗಿ ಆ ಘಟನೆ ಘಟಿಸಿದಾಗ ಸಿಟ್ಟಿನಿಂದ ದುರುಗುಟ್ಟಿ ನೋಡಿ ಅಷ್ಟೇ ವೇಗದಲ್ಲಿ ಅಲ್ಲಿಂದ ಪರಾರಿ. ಧೈರ್ಯದಿಂದ ತಲೆ ಎತ್ತಿ ನಡೆದು ಪ್ರತಿಕ್ರಿಯಿಸುವ ಗೆಳತಿಯರು ಗಂಡುಬೀರಿ ಎಂಬ ಬಿರುದಿಗೆ ಗುರಿಯಾಗಿಬಿಡುತ್ತಿದ್ದರು.
ಒಮ್ಮೆ ನನ್ನ ತಾರುಣ್ಯದಲ್ಲಿ ಬಸ್ಸಿಗೆ ಕಾಯುತ್ತಾ ನಮ್ಮ ಹಳ್ಳಿ ನಿಲ್ದಾಣದಲ್ಲಿ ಒಬ್ಬಳೇ ಕೂರುವ ಪ್ರಸಂಗ ಬಂದಿತು. ಕೈಯಲ್ಲಿದ್ದ ಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಬಸ್ಸಿಗಾಗಿ ಕಾಯುತ್ತಿದ್ದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ವಾಹನದಿಂದ ಐದಾರು ಹುಡುಗರು ಇಳಿದು ಕೊಳವೆ ಬಾವಿಯಿಂದ ನೀರು ಕುಡಿದು ಜೋರಾಗಿ ಮಾತನಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಅವರ ದೃಷ್ಟಿ ನನ್ನ ಕಡೆಗೆ ಬಿದ್ದು ತೋಚಿದ ಹಾಗೆ ರೇಗಿಸಲಾರಂಭಿಸಿದರು. ಪತ್ರಿಕೆಯನ್ನು ಮುಖಕ್ಕೆ ಅಡ್ಡಲಾಗಿ ಹಿಡಿದು ತೆಪ್ಪಗೆ ಕುಳಿತುಬಿಟ್ಟೆ. ಅವರಲ್ಲೊಬ್ಬ ಇದು ‘ಕಪ್ಪು ಸುಂದರಿ ಕಣೋ’ ಎಂದು ಹೇಳಿದ್ದು ನನ್ನಲ್ಲಿ ಪುಳಕ ತರಿಸಿ ಆ ದಿನ ಕಡಿಮೆಯೆಂದರೂ ಹತ್ತು ಬಾರಿ ಕನ್ನಡಿ ನೋಡಿದ್ದೆ.
ಚುಡಾಯಿಸುವುದರಲ್ಲಿ ಹುಡುಗಿಯರೂ ಹಿಂದೆ ಬೀಳುತ್ತಿರಲಿಲ್ಲ. ನಮ್ಮ ಕಾಲೇಜು ರಸ್ತೆಯಲ್ಲಿ ಹುಡುಗರು ಯಾರಾದರೂ ಒಂಟಿಯಾಗಿ ಸಿಕ್ಕಿಬಿಟ್ಟರೆ ಮುಗಿಯಿತು. ಹಿಂದಿನಿಂದ ಹುಡುಗಿಯರ ಹಿಂಡು ‘ಅವನ ಕೆಂಪು ಶರ್ಟು ನೋಡಿರೋ… ಪ್ಯಾಂಟ್ ನೋಡಿರೋ…’ ಎಂದು ಗೇಲಿ ಮಾಡುತ್ತಿರುವಷ್ಟರಲ್ಲಿ ಅವನ ನಡಿಗೆ ಓಟವಾಗಿ ಅಲ್ಲಿಂದ ಕಾಲು ಕಿತ್ತು ಬಿಡುತ್ತಿದ್ದನು.
ಅದೊಂದು ದಿನ ನಾವು ಗೆಳೆತಿಯರು ಮೂವರು ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ಯುವಕರ ದಂಡೊಂದು ‘ಒಂದೂ… ಎರಡೂ.. ಮೂರೂ… ಇನ್ನೂ ಬೇಕೆ?’ ಎಂದು ಜೋರಾಗಿ ಹಾಡುತ್ತಾ ಚುಡಾಯಿಸಿದ ರೀತಿ ಈಗಲೂ ನೆನಪಾಗುತ್ತದೆ.
ನನ್ನನ್ನು ಅದೆಷ್ಟೋ ದಿನ ತಲೆಕೆಡಿಸಿ ತತ್ತರಿಸಿ ಹೋಗುವಂತೆ ಮಾಡಿದ್ದ ಘಟನೆಯದು. ಆಗ ಲಂಗ ರವಿಕೆ ತೊಡುತ್ತಿದ್ದ ನಾನು ಎರಡು ಜಡೆ ಕಟ್ಟಿ ಮುಂದಕ್ಕೆ ಇಳಿಬಿಟ್ಟು ಎದೆಗವಚಿದ ಪುಸ್ತಕದೊಂದಿಗೆ ನಡೆಯುವಾಗ ಹುಡುಗರ ಗುಂಪೊಂದು ‘ಬೆಕ್ಕು ಹಾಲು ಕುಡಿಯುತ್ತಿದೆ’ ಎಂದು ಹೇಳಿ ರೇಗಿಸುತ್ತಿದ್ದರು. ಪ್ರತಿದಿನ ಹೇಳಿದ್ದನ್ನೇ ಹೇಳಿ, ಕೇಳಿ ಕೇಳಿ ನನ್ನ ತಲೆಯೊಳಗೆ ಹುಳ ಬಿಟ್ಟಂತಾಗಿ ಅರ್ಥವೇ ಆಗಿರಲಿಲ್ಲ. ಕೊನೆಗೆ ಅರ್ಥವಾಗದೆ ಅಳುತ್ತಾ ಪಿಳಿ ಪಿಳಿ ಕಣ್ಣುಬಿಟ್ಟು ದುಃಖ ತಡೆಯಲಾರದೆ ಸೀನಿಯರ್ ಅಕ್ಕನ ಮೊರೆ ಹೋಗಿದ್ದೆ. ನಾಳೆಯಿಂದ ಎರಡು ಜಡೆಯನ್ನು ಹಿಂದಕ್ಕೆ ಹಾಕು ಎಂದು ಸಲಹೆ ಕೊಟ್ಟಿದ್ದು ಏಕೆಂದು ಇತ್ತೀಚೆಗಷ್ಟೇ ನನಗೆ ಅರ್ಥವಾಯಿತೆಂಬುದು ಹಾಸ್ಯಾಸ್ಪದ.
ಹಾಗೆ ನೋಡಿದರೆ ಇಂದು ಚುಡಾಯಿಸುವ ಪ್ರಸಂಗಗಳು ಇಳಿಮುಖವಾಗಿವೆ. ಸಮಾನತೆಯ ಕೂಗು, ಶಿಕ್ಷೆ, ಹೆಣ್ಣಿನ ಧೈರ್ಯ, ಮುಖ್ಯವಾಹಿನಿಗಳ ಪ್ರವೇಶ ಈ ಎಲ್ಲದರಿಂದ ಚುಡಾಯಿಸುವಿಕೆಗೆ ಕಡಿವಾಣ ಬಿದ್ದಿದೆ. ಆದರೆ ಎಲ್ಲವೂ ಕಾಲದಿಂದ ಕಾಲಕ್ಕೆ ಬದಲಾವಣೆ ಎಂಬುದಕ್ಕೆ ಬಾಯಿ ಮಾತಿನ ಕೀಟಲೆಯ ಬದಲು ಅತ್ಯಾಚಾರಗಳು ಅದರಲ್ಲೂ ಗುಂಪು ಅತ್ಯಾಚಾರವೆಂಬ ಹೇಯ ಕೃತ್ಯ ವ್ಯಾಪಕವಾಗಿ ಬೆಳೆಯುತ್ತಿದೆ ಎಂಬುದು ಅತ್ಯಂತ ಖೇದಕರ ವಿಚಾರ. ಅಂದು ಕೂಡಾ ವಿಕೃತ ಕಾಮಿಗಳ ಬಗ್ಗೆ ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಷ್ಟು ನಿರ್ಭೀಡತೆ ಇರಲಿಲ್ಲವೇನೋ ?
ವಾಟ್ಸ್ಯಾಪ್, ಫೇಸ್‌ಬುಕ್ ಮುಂತಾದ ಅಂತರ್ಜಾಲಗಳ ಮೂಲಕ ನಡೆಯುತ್ತಿರುವ ಕೆಲವೇ ಕೆಲವು ದುರ್ಘಟನೆಗಳು ಮಾತ್ರ ಬೆಳಕಿಗೆ ಬಂದು ನಮಗೆ ಗೋಚರಿಸುತ್ತವೆ. ಇದು ಸೇಡಿಗೆ ತಿರುಗಿ ಮತ್ತೆರಡು ಅದೇ ರೀತಿಯ ಪ್ರಸಂಗಗಳು ಪುನರಾವರ್ತಿಸುವುದನ್ನು ಕಾಣುತ್ತೇವೆ.
ಅಂದು ಚುಡಾಯಿಸುವಿಕೆಯನ್ನು ಬೇಸರ ಪಡದೆ ಆರೋಗ್ಯಕರ ತಮಾಷೆಯಾಗಿ ಸ್ವೀಕರಿಸುತ್ತಿದ್ದೆವು. ಫ್ಲಾಷ್ ಬ್ಯಾಕ್ ಹಾಗೂ ಜೂಮ್ ಮಾಡಿ ಮಜಾ ತಂದುಕೊಳ್ಳುತ್ತಿದ್ದೆವು ಎಂಬುದು ಖಂಡಿತವಾಗಿಯೂ ನಿಜ! ಇಂದು ಹೆಣ್ಣು ತಲೆಯೆತ್ತಿ ನಡೆಯುತ್ತಾಳೆ. ಪ್ರತಿರೋಧಿಸುವ ಧೈರ್ಯವನ್ನು ಮೈಗೂಡಿಸುತ್ತಾಳೆ. ಆದರೂ ಗ್ಯಾಂಗ್ ರೇಪ್‌ನಂತಹ ವಿಕೃತ ಕೃತ್ಯಗಳು ಮಾತ್ರ ಹೆಚ್ಚುತ್ತಲೇ ಇವೆ. ಆ ಕಾರಣಕ್ಕಾಗಿಯೇ ನಾವು ನಮ್ಮ ಬಾಲ್ಯ ಹಾಗೂ ಗತ ಕ್ಷಣಗಳ ಮೆಲುಕು ಮಾಡಿಕೊಳ್ಳಬೇಕು ಅನಿಸುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ  ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...

ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ

newsics.com ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...
- Advertisement -
error: Content is protected !!