Saturday, January 23, 2021

ಚಳಿಯ ಕಾವು ಎಲ್ಲರನೂ ಬೆಚ್ಚಗಿಡಲಿ!

ಚಳಿಯ ಕಾವು ಮೈಮನಗಳನ್ನು ಆವರಿಸಿರುವ ಸಮಯವಿದು. ನಗರವಿರಲಿ, ಹಳ್ಳಿಯಿರಲಿ, ಚಳಿರಾಯನ ಪ್ರವೇಶಕ್ಕೊಂದು ಸಂಭ್ರಮದ ಸ್ವಾಗತ ನಿಸ್ಸಂಶಯ. ಮೈ ನಡುಗಿಸುವ ಚಳಿ, ಮನವನ್ನು ಅರಳಿಸುವ ಚಳಿ ನಿರಂತರವಾಗಿ ನಮ್ಮ ಜತೆಗಿರಲಿ.
♦ ಸುಮನಸ
newsics.com@gmail.com


 ರದ ಎಲೆಗಳೆಲ್ಲ ವಯಸ್ಸಾದಂತೆ ಬಸವಳಿದಿವೆ. ಇನ್ನೇನು, ಉದುರುವ ಸಮಯ. ಉಳಿಯುವ ಇಷ್ಟೇ ಇಷ್ಟು ಹೊತ್ತಿನಲ್ಲೂ ಬಿಸಿಲಿಗೆ ಮೈಯೊಡ್ಡಿ ಸುಖಕ್ಕೆ ಪರಿತಪಿಸುವಂತೆ ಕಾಣುತ್ತಿವೆ. ಇಬ್ಬನಿ ಹೊದ್ದ ಹುಲ್ಲು ಹಾಸು ತನ್ನ ಮೇಲೆ ಖುಷಿಖುಷಿಯಾಗಿ ಸಾಗುವ ಎಳೆಯ ಮೃದು ಪಾದಗಳನ್ನು ಕಾಯುತ್ತ ತಣ್ಣಗಿವೆ. ನಾಲ್ಕು ಮಾರು ದೂರದ ಅಡಿಕೆ ಮರ ಕಾಣದಷ್ಟು ಕವಿದಿರುವ ಮಂಜಿನಲ್ಲೂ ಹಣ್ಣಾದ ಅಡಿಕೆ ಆಯುವ ಅಜ್ಜ ಬೆಚ್ಚಗಿನ ಸ್ವೆಟರ್ ಧರಿಸಿದ್ದಾನೆ. ಆತನ ಮೊಗದಲ್ಲೊಂದು ಅಳಿಯದ ನೆಮ್ಮದಿ. ಇನ್ನೇನು, ಕೆಲವೇ ದಿನಗಳಲ್ಲಿ ಅಡಕೆ ಕೊಯ್ಲು ಮುಗಿದೇ ಹೋಗುವ ಸಂಭ್ರಮ.
ಬೆಳಗಿನ ನೀರು ಕೈಗೆ ಸೋಕಿದರೆ ಮೈಯಲ್ಲಿನ ನರಗಳೆಲ್ಲ ಜುಮ್ ಜುಮ್. ಮಕ್ಕಳೋ ಒಲೆಯ ಎದುರಿನಿಂದ ಈಚೆ ಬಂದು ಬಿಸಿಬಿಸಿ ದೋಸೆಯನ್ನೂ ತಿನ್ನುವುದಿಲ್ಲ ಎಂದು ಅಲ್ಲೇ ಕೂರುತ್ತಾರೆ. ಮಾವಿನ ಮರಗಳಿಗೆ ಕುಡಿಯೊಡೆಯುವ, ತನ್ನಲ್ಲಿನ ರಸವನ್ನು ಉಕ್ಕಿಸುವ ತವಕ. ಮಾವಿನ ಎಳೆಕದಿರು ಅಲ್ಲಲ್ಲಿ ಕಾಣುತ್ತ ಮನೆಯೊಡತಿಯ ಸಂಭ್ರಮ ಹೆಚ್ಚಿಸುತ್ತವೆ. ‘ಈ ಬಾರಿ ಮಾವು ಹೇಗೆ ಬರುತ್ತದೆಯೋ’ ಎನ್ನುವ ನಿರೀಕ್ಷೆ ಮೂಡಿಸುತ್ತವೆ. ಒಟ್ಟಿನಲ್ಲಿ, ಚಳಿರಾಯ ಬದುಕಿಗೆ ಕಾಲಿಟ್ಟಿದ್ದಾನೆ. ಋತುಮಾನವೊಂದರ ಸವಾರಿ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ಮೈಮನಗಳಲ್ಲಿ ಖುಷಿಯ ಸೆಳಕನ್ನು ಮೂಡಿಸುವ ಚಳಿರಾಯನ ಕರಾಮತ್ತೇ ವಿಸ್ಮಯಕಾರಿ.
ಮಲೆನಾಡಿನ ಹಳ್ಳಿಗಳಲ್ಲೀಗ ಅಡಕೆ ಕೊಯ್ಲಿನ ಸಂಭ್ರಮ. ಅದೆಷ್ಟೇ ತ್ರಾಸದಾಯಕವಾಗಿದ್ದರೂ ವರ್ಷದ ಅಡಕೆ ಮನೆಗೆ ಬರಬೇಕು, ಆಳುಕಾಳುಗಳ ಗಲಾಟೆಯೊಂದಿಗೆ ಅಡಕೆ ಬೆಳೆಯ ದೀರ್ಘಾವಧಿ ಸಂಸ್ಕರಣಾ ಪ್ರಕ್ರಿಯೆ ಆರಂಭವಾಗಬೇಕು. ಈ ಎಲ್ಲ ಕೆಲಸಗಳೊಂದಿಗೆ ಜತೆಗಿದ್ದು ಮನಕ್ಕೆ ಮುದ ನೀಡುವುದು ಚಳಿಯಲ್ಲದೆ ಬೇರೆ ಯಾವುದೂ ಅಲ್ಲ. ರಾತ್ರಿ ಹನ್ನೆರಡಾದರೂ ಅಡಕೆ ಬೇಯಿಸುವ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಅಡಕೆ ಬೇಯಿಸುವ ಒಲೆಯ ಮುಂದೆಯೇ ಮಕ್ಕಳ ಪ್ರತಿಷ್ಠಾಪನೆ. ಸಂಜೆಯ ಬಾಯಿಪಾಠವೂ ಅಲ್ಲೇ ಸಾಗುತ್ತದೆ.
ಚಳಿಯೇ ಹಾಗೆ, ದೇಹಕ್ಕೆ ಕಿರಿಕಿರಿ ನೀಡಿ ಮನಕ್ಕೆ ಬೆಚ್ಚಗಿನ ಕಾವು ನೀಡುತ್ತದೆ. ಏನಾದರೂ ಓದುವ, ಬರೆಯುವ, ಸಂಜೆಯ ಹೊತ್ತು ರೊಮ್ಯಾಂಟಿಕ್ ಹಾಡುಗಳನ್ನು ಕೇಳುವ ಉಮೇದಿ ಮೂಡಿಸುತ್ತದೆ. ಗಝಲ್ ಮೋಡಿ ಕವಿಯುತ್ತದೆ. ಇಬ್ಬನಿಯ ಪಟ ಪಟ ಸದ್ದಿಗೆ ಬೆಳಗ್ಗೆ ಬೇಗ ಎಚ್ಚರವಾಗಿ ಕವಿತೆಯ ಸಾಲೊಂದು ಅರಿಯದೆ ಮನದಲ್ಲಿ ನಿಲ್ಲುತ್ತದೆ. ಸಿಹಿ ನಿದ್ದೆ ಕಡಿಮೆಯಾದರೂ ದೇಹ ಸೋಲುವುದಿಲ್ಲ. ಈ ಪರಿ ಮನಸ್ಸಿನ ಮೇಲೆ ಪರಿಣಾಮ ಬೀರುವ ಋತುಮಾನ ಬೇರೊಂದಿಲ್ಲ.
ಈ ಚಳಿಗಾಲ ಯಾವತ್ತೂ ಹೀಗೆಯೇ ಇರಲಿ. ಹಿಂದಿನ ಚಳಿಯ ಸೊಬಗು ಇಂದಿಲ್ಲ ಎನ್ನುವ ವಾಸ್ತವವನ್ನು ಕಂಡಿದ್ದೇವಾದರೂ ಇವತ್ತಿನ ಚಳಿಯಾದರೂ ಮುಂದೆಯೂ ಇರಲಿ ಎನ್ನುವ ಬಯಕೆ ಒಡಮೂಡುತ್ತದೆ. ಹವಾಮಾನ ಬದಲಾವಣೆ ನಮ್ಮ ಬದುಕನ್ನು ಕಂಗೆಡಿಸಿರುವಾಗ ಹಿಂದಿನ ಚಳಿಗಾಲದ ವೈಭವ ಮರಳುವುದಿಲ್ಲ ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ, ಚಳಿರಾಯ ವರ್ಷಕ್ಕೊಮ್ಮೆ ಅದ್ದೂರಿ ಪ್ರವೇಶ ಕೊಡಲೇಬೇಕು. ಮೂರು ತಿಂಗಳ ಕಾಲ ಎಲ್ಲರನ್ನೂ ಇನ್ನಿಲ್ಲದೆ ಕಾಡಿಸಬೇಕು, ಮೈಗೆ ಕಾಟ ಕೊಟ್ಟು ಮನಸ್ಸುಗಳನ್ನು ಅರಳಿಸುವ ಕೆಲಸ ಅವನಿಂದ ನಿರಂತರವಾಗಿ ಸಾಗುತ್ತಲೇ ಇರಬೇಕು.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!